ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೇರಿಸಲಿ! – ಸಂಸತ್‌ ಮೇಲೆ ದಾಳಿ ನಡೆಸಿದ ಮನೋರಂಜನ್ ತಂದೆ ಹೀಗೆ ಹೇಳಿದ್ಧೇಕೆ?

ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೇರಿಸಲಿ! – ಸಂಸತ್‌ ಮೇಲೆ ದಾಳಿ ನಡೆಸಿದ ಮನೋರಂಜನ್ ತಂದೆ ಹೀಗೆ ಹೇಳಿದ್ಧೇಕೆ?

ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ವೇಳೆ ಸಂಸತ್‌ನಲ್ಲಿ ಬುಧವಾರ ಭದ್ರತಾ ಲೋಪ ಸಂಭವಿಸಿದೆ. ಇಬ್ಬರು ಸಂಸತ್‌ ಒಳಗೆ ಟಿಯರ್‌ ಗ್ಯಾಸ್‌ ದಾಳಿ ನಡೆಸಿ ಆತಂಕದ ವಾತಾವರಣ ಸೃಷ್ಟಿಸಿದ್ದರು. ಇದೀಗ ಟಿಯರ್‌ ಗ್ಯಾಸ್‌ ದಾಳಿ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಲೋಕಸಭೆಯಲ್ಲಿ ದಾಳಿ ನಡೆಸಿದವರ ಗುರುತು ಪತ್ತೆಯಾಗಿದೆ. ಸಾಗರ್ ಶರ್ಮಾ ಮತ್ತು ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋರಂಜನ್ ಎಂದು ಗುರುತಿಸಲಾಗಿದೆ. ಸಂಸತ್‌ನಲ್ಲಿ ನಡೆದ ದಾಳಿಯ ದೃಶ್ಯಗಳು ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದನ್ನು ನೋಡಿದ ಮನೋರಂಜನ್ ತಂದೆ, ಈತ ತಮ್ಮ ಮಗನೇ ಎಂದು ಗುರುತಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ‌ ಅಟ್ಯಾಕ್! – ಸಂಸತ್ ಮೇಲೆ ದಾಳಿ ಮಾಡಿದ ಇಬ್ಬರು ಅರೆಸ್ಟ್

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮನೋರಂಜನ್ ತಂದೆ ದೇವರಾಜೇ ಗೌಡ, ಮನೋರಂಜನ್ ತಮ್ಮ ಮಗನೇ, ಆತ ಬೆಂಗಳೂರಿನಲ್ಲಿ‌ ಬಿಇ ಓದಿದ್ದ. ದೆಹಲಿ, ಬೆಂಗಳೂರು ಅಂತ ಓಡಾಡುತ್ತಿದ್ದ, ಆದರೆ ಆತ ಎಲ್ಲಿಗೆ ಹೋಗಿದ್ದಾನೆ ಅಂತ ಗೊತ್ತಿಲ್ಲ. 2014 ರಲ್ಲಿ ಬಿಇ ಮುಗಿಸಿದ್ದ, ನಾನು ರೈತ. ಆತ ತುಂಬಾ ಚೆನ್ನಾಗಿ ಓದುತ್ತಿದ್ದ. ಜಮೀನಿಗೆ ಬಂದು ಆಳುಗಳ ಜತೆಯಲ್ಲಿ ಕೆಲಸ ಮಾಡುತ್ತಿದ್ದ. ಮಗ ಎಲ್ಲಿಗೆ, ಯಾಕೆ‌ ಹೋಗುತ್ತೀವಿ ಅಂತ ಹೇಳುತ್ತಿಲಿಲ್ಲ ಎಂದು ತಿಳಿಸಿದ್ದಾರೆ.

ನನ್ನ ಮಗ ಈ ರೀತಿ ಮಾಡಿದ್ದರೆ ಅದು ಅಕ್ಷಮ್ಯ. ಸದನ ದೇಗುಲ ಇದ್ದಂತೆ, ನಾನು ಕೂಡ ಇದನ್ನು ಖಂಡಿಸುತ್ತೇನೆ. ಯಾಕಾಗಿ ಈ ರೀತಿ ಮಾಡಿದ್ದಾನೆ ಅಂತ ಗೊತ್ತಿಲ್ಲ. ಪ್ರಕರಣದಲ್ಲಿರುವ ಇತರರ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಆದರೆ ಮಗ ಮಾತ್ರ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅಷ್ಟು ಬಿಟ್ಟು ನನಗೆ ಏನೂ ಗೊತ್ತಿಲ್ಲ. ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೇರಿಸಲಿ ಎಂದು ದೇವರಾಜು ವಿವರಿಸಿದ್ದಾರೆ.

ಮೂರು ದಿನಗಳ ಹಿಂದೆ ಮನೋರಂಜನ್ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದ. ಆದರೆ ತಮ್ಮ ಮಗನಿಗೆ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅಲ್ಲದೇ ಮನೋರಂಜನ್ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂದು ಬಯಸಿದ್ದ, 35 ವರ್ಷದ ಮನೋರಂಜನ್ ಬೆಂಗಳೂರಿನ ವಿವೇಕಾನಂದ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಮುಗಿಸಿದ್ದು, ನಿರುದ್ಯೋಗಿಯಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.

Shwetha M