ಅತ್ತೆ ಸೊಸೆ ಇದ್ದರೆ ಹೀಗೇ ಇರಬೇಕು – ಭಾಗ್ಯಾಳನ್ನು ಓದಿಸುವುದಾಗಿ ಮಗನಿಗೆ ಕುಸುಮಾ ಸವಾಲ್
ಸೀರಿಯಲ್ ಅಂದರೆ ಅತ್ತೆ ಸೊಸೆ ಜಗಳ ಎಂದು ಮೂಗು ಮುರಿಯುವವರ ಮಧ್ಯೆ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಧಾರವಾಹಿ ಬೇರೆ ಸಾಲಿನಲ್ಲೇ ನಿಲ್ಲುತ್ತಿದೆ. ದಿನದಿಂದ ದಿನಕ್ಕೆ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆ ವೀಕ್ಷಕರಿಗೆ ಹತ್ತಿರವಾಗುತ್ತಿದೆ. ಅದರಲ್ಲೂ ಪ್ರತಿಹಂತದಲ್ಲೂ ಸೊಸೆಯ ಪರವಾಗಿಯೇ ನಿಲ್ಲುವ ಅತ್ತೆ ಕುಸುಮಾ ಪಾತ್ರವಂತೂ ಮಹಿಳೆಯರ ಮನಮುಟ್ಟಿದೆ. ಅತ್ತೆ ಸೊಸೆ ಇದ್ದರೆ ಹೀಗಿರಬೇಕು ಎನ್ನುತ್ತಿದ್ದಾರೆ ವೀಕ್ಷಕರು. ಇಷ್ಟು ದಿನ ಸೊಸೆಯ ಕಷ್ಟ ಸುಖದಲ್ಲೂ ಪ್ರತಿ ಹಂತದಲ್ಲೂ ಧೈರ್ಯ ನೀಡುತ್ತಾ ಸಲಹೆ ಕೊಡುತ್ತಾ ಇದ್ದ ಕುಸುಮಾ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಇದು ವೀಕ್ಷಕರ ಖುಷಿಗೂ ಕಾರಣವಾಗಿದೆ.
ಮಗ ತಾಂಡವ್ ಸೊಸೆ ಭಾಗ್ಯನ ಬಗ್ಗೆ ಯಾವಾಗಲೂ ಸಿಟ್ಟಿನ ತಾಂಡವ ರೂಪ ತೋರಿಸುವುದು ಕುಸುಮಾಗೆ ಸರಿ ಕಾಣುತ್ತಿಲ್ಲ. ಸೊಸೆಗೆ ಏನೆ ಕಷ್ಟ ಬಂದರೂ ಅವಳ ಬೆನ್ನೆಲುಬಾಗಿ ನಿಲ್ಲುವ ಕುಸುಮಾ ಸೊಸೆಗೆ ಯಾರು ಏನೇ ಹೇಳಿದರೂ ಸಹಿಸುವುದಿಲ್ಲ. ಇದರ ಮಧ್ಯೆ, ಭಾಗ್ಯಾಳ ಮಗಳು ತನ್ವಿ ಸ್ಕೂಲ್ ನಲ್ಲಿ ಪ್ರಾಜೆಕ್ಟ್ ಗಾಗಿ ತಾಯಿಯನ್ನು ಕರೆದುಕೊಂಡು ಹೋಗಬೇಕಿತ್ತು. ಅಮ್ಮನ ಬಗ್ಗೆ ಅಸಡ್ಡೆಯಿಂದ ಮಾತನಾಡುವ ತನ್ವಿ, ಸ್ಕೂಲ್ ಗೆ ಶ್ರೇಷ್ಠಾಳನ್ನು ಬರುವಂತೆ ಹೇಳಿ, ಅವಳೆದುರು ಅಮ್ಮನಿಗೆ ಅವಮಾನ ಮಾಡುತ್ತಾಳೆ. ಇದರಿಂದ ನೊಂದ ಭಾಗ್ಯ ಮನೆಗೆ ಬಂದ ನಂತರ ಮಗಳನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಇಷ್ಟು ಸಮಯ ನಿಂಗೆ ಬೇಕು ಬೇಡದ್ದನ್ನೆಲ್ಲಾ ನೋಡಿಕೊಂಡು ಕೊಡ್ತಿದ್ದಿದಕ್ಕೆ ಇವತ್ತು ನೀನು ಅಮ್ಮಾನೆ ಬೇಡ ಅನ್ನೋವಷ್ಟರ ಮಟ್ಟಿಗೆ ಬಂದೆ ಎಂದು ತನ್ವಿ ಮೇಲೆ ಕೈ ಮಾಡ್ತಾಳೆ. ಮಗಳ ಮೇಲೆ ಕೈಮಾಡ್ತಿರೋ ಭಾಗ್ಯನನ್ನು ತಡೆಯುವ ತಾಂಡವ್, ಭಾಗ್ಯಳಿಗೆ ಹೊಡೆಯಲು ಕೈ ಎತ್ತುತ್ತಾನೆ. ಇದನ್ನ ತಡೆಯುವ ಕುಸುಮಾ, ನನ್ನ ಸೊಸೆ ಮೇಲೆ ಕೈ ಎತ್ತುವಷ್ಟು ಬೆಳೆದುಬಿಟ್ಟಿದ್ದೀಯಾ ನೀನು, ಅವಳು ಅವಳ ಮಗಳಿಗೆ ಹೊಡೆತಾಳೆ. ಅದ್ರಲ್ಲಿ ತಪ್ಪೇನಿಲ್ಲ ಎಂದು ಸೊಸೆ ಪರವಾಗಿ ನಿಲ್ಲುತ್ತಾಳೆ. ಭಾಗ್ಯ ಓದಿಲ್ಲ ಅನ್ನೋದ್ರ ಬಗ್ಗೆ ನಿಂಗೆ ಸಮಸ್ಯೆ ಇದೆಯಾ ಅನ್ನೋದನ್ನು ಕುಸುಮಾ ಕೇಳಿದಾಗ ತಾಂಡವ್ ಹೌದು ಎನ್ನುತ್ತಾನೆ. ಇದರಿಂದ ಕೋಪಗೊಳ್ಳುವ ಕುಸುಮಾ, ನಾನು ನನ್ನ ಸೊಸೆ ಭಾಗ್ಯಳನ್ನು ಓದಿಸ್ತೇನೆ, ನೀನು ಎಷ್ಟು ಓದಿದ್ಯಾ, ಅದಕ್ಕಿಂತ ಹೆಚ್ಚು ಅವಳನ್ನು ಓದಿಸ್ತೇನೆ ಎಂದು ತನ್ನ ಮಗನಿಗೆ ಸವಾಲು ಹಾಕ್ತಾಳೆ.
ಅತ್ತೆ – ಸೊಸೆ ಜಗಳ ನೋಡಿಯೇ ಸಾಕಾಗಿದ್ದೆ ಜನರಿಗೆ ಸೀರಿಯಲ್ ನಲ್ಲಿ ಕುಸುಮಾ ನಟನೆ ಮತ್ತು ಸೊಸೆಗೆ ಬೆಂಬಲವಾಗಿ ನಿಲ್ಲುವ ಅವರ ನಡೆ ಎಲ್ಲರಿಗೂ ಇಷ್ಟವಾಗಿದೆ. ಜೊತೆಗೆ ಕುಸಮಾ ಭಾಗ್ಯಳನ್ನು ಚೆನ್ನಾಗಿ ಓದಿಸಲಿ, ಭಾಗ್ಯ ಚೆನ್ನಾಗಿ ಕಲಿಸು ಮಾದರಿ ಹೆಣ್ಣಾಗಲಿ ಎಂದು ಆಶಿಸುತ್ತಿದ್ದಾರೆ.