ಮೊಘಲರನ್ನೂ ಸೋಲಿಸಿದ್ದ ನಾಗಾ ಸಾಧುಗಳು!- ಕುಂಭ ಮೇಳಕ್ಕೆ ಇವರು ಬರೋದೆಲ್ಲಿಂದ?
ಮಹಿಳೆಯರಿಗೆ ನಾಗಾ ದೀಕ್ಷೆ ಹೇಗಿರುತ್ತೆ?

ಮೊಘಲರನ್ನೂ ಸೋಲಿಸಿದ್ದ ನಾಗಾ ಸಾಧುಗಳು!- ಕುಂಭ ಮೇಳಕ್ಕೆ ಇವರು ಬರೋದೆಲ್ಲಿಂದ?ಮಹಿಳೆಯರಿಗೆ ನಾಗಾ ದೀಕ್ಷೆ ಹೇಗಿರುತ್ತೆ?

ಮಹಾ ಕುಂಭಮೇಳದ ಕಲರವ ಶುರುವಾಗಿದೆ. ಕುಂಭಮೇಳವೆಂದ್ರೆ ಇಡೀ ವಿಶ್ವದಲ್ಲೇ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ. ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಭಕ್ತರು ಕುಂಭಮೇಳಕ್ಕೆ ಬರುತ್ತಾರೆ. ಈ ವರ್ಷ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಕುಂಭಮೇಳದಲ್ಲಿ ಸಾಧು, ಸಂತರು ಕೂಡಾ ಸೇರಿದ್ದಾರೆ.  ಆದ್ರೆ ಇಡೀ ಕುಂಭ ಮೇಳ ಪ್ರಮುಖ ಆಕರ್ಷಣೆ ಅಂದ್ರೆ ಅದು ನಾಗಾ ಸಾಧುಗಳು.. ಲೌಕಿಕ ಬದುಕಿನ ಕಡೆಗೆ ಕಿರುಗಣ್ಣು ಎತ್ತಿಯೂ ನೋಡದೆ, ಅಲೌಕಿಕ ಸಾಧನೆಯಲ್ಲಿ ಮುಳುಗೇಳುವ ಈ ನಾಗಸಾಧುಗಳು ಯಾರು?, ಯಾಕೆ ನಾಗಸಾಧುಗಳು ಬೇರೆ ಸಾಧು ಸನ್ಯಾಸಿಗಳಿಗಿಂತ ಹೇಗೆ ಭಿನ್ನವಾಗಿರ್ತಾರೆ? ಅತ್ಯಂತ ಕಠಿಣ ಸಾಧನೆಗಳಲ್ಲಿ ಜೀವನ ಸಾಗಿಸುವ ನಾಗಾಸಾಧುಗಳು ಕುಂಭಮೇಳದ ವೇಳೆಗೆ ಮಾತ್ರ ಅದೆಲ್ಲಿಂದ ಪ್ರತ್ಯಕ್ಷರಾಗುತ್ತಾರೆ?  ಅನ್ನೋದನ್ನ ನೋಡೋಣ ಬನ್ನಿ.

ಮೊಘಲರನ್ನೂ ಸೋಲಿಸಿದ್ದ ನಾಗಾ ಸಾಧುಗಳು!

ನಾಗಾ ಸಾಧುಗಳು.. ಉದ್ದ ಕೂದಲು.. ಎಷ್ಟರಮಟ್ಟಿಗೆ ಅಂದ್ರೆ.. ದೇಹದುದ್ದಕ್ಕೂ ಕಾಣುವ ಜಟೆ.. ಕೈಲಾಸ ಪರ್ವತದಿಂದಲೇ ಇಳಿದುಬಂದ ಪರಶಿವನ ಜೋಗಿ ರೂಪದಂತೆ ಕಾಣುವ ವರ್ಚಸ್ಸು, ಉಗುರನ್ನೂ ಕತ್ತರಿಸಲ್ಲ, ಬಟ್ಟೆ ಮೈಮೇಲೆ ಹಾಕುವುದಿಲ್ಲ. ದಿನಕ್ಕೊಂದು ಹೊತ್ತು ಮುಷ್ಟಿಯೂಟ.. ನೀರು ಮತ್ತು  ಉಸಿರು ಅಷ್ಟೇ ಆಹಾರ.. ದಿನದ ಬಹುಪಾಲು ಒಂಟಿಕಾಲಿನಲ್ಲೋ.. ಇನ್ಯಾವುದೋ ಭಂಗಿಯಲ್ಲೋ ಸಾಧನೆ ಮಾಡುತ್ತಾ ಪರಶಿವನ ಧ್ಯಾನದಲ್ಲಿ ನಿರತರಾಗುವ ನಾಗಾಸಾಧುಗಳ ಸಾಧನೆಯನ್ನು ವಿವರಿಸುವ ಪ್ರಯತ್ನ ಮಾಡ್ತೇನೆ..  ಈಗ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಕುಂಭಮೇಳದ ಸಂಭ್ರಮ ಶುರುವಾಗಿದೆ. ಕುಂಭಮೇಳದಲ್ಲಿ ಎಲ್ಲರ ಆಕರ್ಷಣೆಯ ಪ್ರಧಾನ ಬಿಂದುವೇ ನಾಗಸಾಧುಗಳು. ಮೈ ಪೂರ್ತಿ ನಗ್ನವಾಗಿರುವ ನಾಗಾ ಸಾಧುಗಳೇ ಇಲ್ಲಿ ಹೆಚ್ಚು ಕಂಡುಬರುತ್ತಾರೆ. ಅದೆಷ್ಟೋ ಎಷ್ಟೋ ವರ್ಷಗಳಿಂದ ವಿಭೂತಿಯನ್ನೇ ಮೆತ್ತಿದ ಮೈಯಲ್ಲಿ ಕಾಣಿಸಿಕೊಳ್ಳುವ ಇವರನ್ನು ಧರ್ಮ ರಕ್ಷಣೆಯ ಕೈಂಕರ್ಯಕ್ಕೆ ತಮ್ಮ ಜೀವನನ್ನೇ ಅರ್ಪಿಸಿಕೊಂಡಿರುವ ಸೇನಾನಿಗಳು ಅಂತಲೇ ಪರಿಗಣಿಸಲಾಗುತ್ತದೆ.. ತಮ್ಮ ಆಧ್ಯಾತ್ಮಿಕ ಜೀವನವನ್ನು ಪೂರ್ಣಗೊಳಿಸಲು ಭೌತಿಕ ಸುಖಗಳನ್ನು ತ್ಯಜಿಸಿ, ತಮ್ಮ ಉಳಿದ ಜೀವನವನ್ನು ಮೋಕ್ಷದ ಹುಡುಕಾಟಕ್ಕಾಗಿ ಹಂಬಲಿಸುವ ಈ ನಾಗಸಾಧುಗಳು ಆಧ್ಯಾತ್ಮಿಕ ಮತ್ತು ಸನಾತನ ಧರ್ಮ ರಕ್ಷಣೆಯನ್ನೇ ಜೀವನದ ಪರಮಗುರಿಯಾಗಿ ಇಟ್ಟುಕೊಂಡಿರುತ್ತಾರೆ..

 ನಾಗಾಸಾಧುಗಳು ಎಂದು ಕರೆಯೋದು ಯಾಕೆ?

ನಾಗಾ ಸಾಧುಗಳಲ್ಲಿ ನಾಗಾ ಎನ್ನುವ ಪದಕ್ಕೆ ಸಂಸ್ಕೃತದಲ್ಲಿ ಪರ್ವತ ಎಂದು ಅರ್ಥ.. ಹೀಗಾಗಿ ಪರ್ವತವಾಸಿಗಳಾಗಿರುವ ಈ ಸನ್ಯಾಸಿಗಳನ್ನು ನಾಗಾ ಸಾಧುಗಳೆಂದು ಕರೆಯುತ್ತಾರೆ.  ಇವರು ಬಟ್ಟೆ, ಕೌಟುಂಬಿಕ ಬಂಧನವನ್ನು ಸಂಪೂರ್ಣವಾಗಿ ತ್ಯಜಿಸಿರುತ್ತಾರೆ… ತಪಸ್ಸು, ಧ್ಯಾನ ಮತ್ತು ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಲೇ ಸಾಧನೆಯಲ್ಲಿ ಜೀವನ ಕಳೆಯುತ್ತಿರುತ್ತಾರೆ…

 

ಜನವಸತಿಯಿಂದ ಸದಾ ದೂರ ಇರುವ ಈ ಸಾಧು ಸಂತರು ಕುಂಭಮೇಳದಂತಹ ವಿಶೇಷ ಸಮಯಗಳಲ್ಲಿ ಮಾತ್ರ ಹೊರಬರುತ್ತಾರೆ. ನಾಗಾ ಸಾಧುಗಳು ನಿರಂತರವಾಗಿ ಧ್ಯಾನ ಮಾಡುತ್ತ ಸಮಾಜದಿಂದ ದೂರವಿರುವುದಾಗಿ ದೇವರ ಮುಂದೆ ಪ್ರಮಾಣ ಮಾಡಿರುತ್ತಾರೆ. ಹಿಮಾಲಯದತ್ತ ತೆರಳಿದವರು ಅಲ್ಲಿನ ಜನರ ಸುಳಿದಾಟವೇ ಇಲ್ಲದ ಕಾಡು, ಗುಹೆಗಳಲ್ಲಿ ಚಳಿಗೂ ಲೆಕ್ಕಿಸದೇ ಬದುಕು ಸಾಧಿಸುತ್ತಾರೆ.. ಅವದ್ದೇನಿದ್ದರೂ ಶಿವನೆಡೆಗೆ ಧ್ಯಾನ.. ಆಧ್ಯಾತ್ಮಿಕ ಸಾಧನೆಯ ಕಡೆಗೆ ಮಾತ್ರ ಗಮನ.. ಹೀಗೆ ಕಠಿಣ ವ್ರತ ಆಚರಿಸಿದವರೆಲ್ಲಾ ಒಟ್ಟಾಗುವ ಸ್ಥಳವೇ ಕುಂಭಮೇಳ.

 

ಮೊಘಲ್‌ ಸೇನೆಯನ್ನು ಸೋಲಿಸಿದ್ದ ನಾಗಾ ಸಾಧುಗಳ ಸೇನೆ!

ನಾಗಾ ಸಾಧುಗಳ ಉಲ್ಲೇಖ ಇತಿಹಾಸದ ದಾಖಲೆಗಳನ್ನು ಹಿಡಿಯುತ್ತಾ ಹೋದರೆ, ಹರಪ್ಪಾ ಮೊಹೆಂಜದಾರೋ ನಾಗರಿಕತೆಯನ್ನು ತಲುಪುತ್ತದೆ.. ಆ ಕಾಲದ ನಾಣ್ಯಗಳಲ್ಲಿ  ಹರಪ್ಪಾ ಜನರ ಆರಾಧ್ಯ ದೈವವಾಗಿದ್ದ ಶಿವನ ರೂಪವೆಂದು ಪ್ರತಿಪಾದಿಸುವ ಪಶುಪತಿನಾಥನ ಆರಾಧನೆಯಲ್ಲಿ ತೊಡಗಿರುವ ನಾಗಸಾಧುಗಳ ಚಿತ್ರಗಳು ದೊರೆತಿವೆ.. ಆ ಕಾಲದಿಂದಲೂ ಶಿವನ ಧ್ಯಾನದಲ್ಲಿ ತೊಡಗಿದ್ದ ಪರಂಪರೆ ನಾಗಾ ಸಾಧುಗಳದ್ದು.. ಜೊತೆಗೆ ಧರ್ಮ ರಕ್ಷಣೆ ವಿಶೇಷವಾಗಿ ಶಿವ ದೇಗುಲಗಳ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ಉಲ್ಲೇಖಗಳು ಇತಿಹಾಸದಲ್ಲಿ ಸಿಗುತ್ತದೆ.. ಮೊಘಲ್‌ ಚಕ್ರವರ್ತಿ ಔರಂಗಜೇಬನ ಕಾಲದಲ್ಲಿ ಉತ್ತರ ಭಾರತದ ಶಿವ ದೇಗುಲಗಳ ಮೇಲೆ ದಾಳಿಗಳು ನಡೆದಾಗ ನೂರಾರು ದೇವಸ್ಥಾನಗಳನ್ನು ಮೊಘಲ್‌ ದಾಳಿಯಿಂದ ರಕ್ಷಿಸಿದ್ದು ಕೂಡ ಇದೇ ನಾಗಾ ಸಾಧುಗಳು ಸೇನೆ ಎಂಬ ಉಲ್ಲೇಖವಿದೆ..

ನಾಗಾ ಸಾಧುಗಳು ಅಂದರೆ ಗಂಡಸರು ಮಾತ್ರನಾ? ಹೆಂಗಸರು ಇಲ್ವಾ?

ನಾಗಾ ಸಾಧುಗಳೆಂದರೆ ಕೇವಲ ಗಂಡಸರು ಮಾತ್ರವಲ್ಲ.. ಹೆಣ್ಣು ಮಕ್ಕಳು ಕೂಡ ನಾಗ ಸಾಧುಗಳಾಗಿ ದೀಕ್ಷೆ ಪಡೆದವರು ಇರುತ್ತಾರೆ.. ಹಾಗೆ ದೀಕ್ಷೆ ಪಡೆಯೋದಿಕ್ಕೂ ಮೊದಲು ಹೇಗಿದ್ದರೂ ಎಲ್ಲಾ ನಾಗಾ ಸಾಧುಗಳಂತೆಯೇ ಅವರು ಕುಟುಂಬದ ಜೊತೆಗಿನ ಸಂಬಂಧಗಳನ್ನು ಕಡಿದುಕೊಂಡಿರುತ್ತಾರೆ.. ಆರರಿಂದ 12 ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯ ಆಚರಿಸಿದ ಮೇಲೆಯೇ ನಾಗಾ ಸಾಧುವಾಗಲು ಇಚ್ಛಿಸುವ ಹೆಣ್ಣಿಗೆ ದೀಕ್ಷೆ ನೀಡಲಾಗುತ್ತದೆ.. ಅಲ್ಲದೆ ದೀಕ್ಷೆಗೂ ಮುಂಚಿತವಾಗಿ ತಮಗೆ ತಾವೇ ಪಿಂಡ ಪ್ರಧಾನ ಮಾಡಿಕೊಳ್ಳುತ್ತಾರೆ.. ಈ ಮೂಲಕ ತಮ್ಮ ಹಿಂದಿನ ಬದುಕಿನ ಜೊತೆಗಿನ ಸಂಪೂರ್ಣ ಬಂಧನವನ್ನು ಕಡಿದುಕೊಳ್ಳುತ್ತಾರೆ.. ಇನ್ನು ನಾಗಾ ಸಾಧ್ವಿಗಳು, ಪುರುಷ ಸಾಧುಗಳಂತೆ ಸಂಪೂರ್ಣ ಬೆತ್ತಲಾಗಿರುವುದಿಲ್ಲ.. ಬದಲಿಗೆ, ತಮ್ಮ ಮೈಮುಚ್ಚುವಂತೆ  ಗಂಟಿ ಎಂದು ಕರೆಯುವ ಖಾವಿ ಬಣ್ಣದ ಬಟ್ಟೆಯನ್ನು ಹೊದ್ದುಕೊಂಡಿರುತ್ತಾರೆ. ಇನ್ನು ನಾಗಾ ಸಾಧ್ವಿಯರನ್ನು ನಾಗಾ ಮಾತಾ ಎಂದೂ ಕರೆಯುತ್ತಾರೆ.. ಸಾಧನೆಯ ಸಮಯದಲ್ಲಿ ನಾಗ ಮಾತೆಯರು ನಾಗಾ ಸಾಧುಗಳಂತೆ, ಒಬ್ಬೊಬ್ಬರಾಗಿ ಗುಹೆಗಳಲ್ಲಿ ಪರ್ವತ ಶಿಖರಗಳಲ್ಲಿ ವಾಸಿಸುತ್ತಾರೆ.. ಉಳಿದಂತೆ ತಮ್ಮ ಗುಂಪುಗಳಲ್ಲಿದ್ದಾಗ ಅಕಾರಾಗಳಲ್ಲಿ ಯಜ್ಞ ಯಾಗಾದಿಗಳನ್ನು ನಡೆಸುತ್ತಾ ಕಠಿಣ ವ್ರತ ಮುಂದುವರೆಸುತ್ತಾರೆ..

 

ಇನ್ನು ಈ ನಾಗಾಸಾಧುಗಳು ಪರಶಿವನ ಪರಮಭಕ್ತರು. ಹಿಮಾಲಯದ ಪರ್ವತದ ಶ್ರೇಣಿಗಳಲ್ಲಿ ವಾಸಿಸುವ ಇವರು ಜನರ ಕಣ್ಣಿಗೆ ಬೀಳೋದು ಕುಂಭಮೇಳದಲ್ಲಿ ಮಾತ್ರ. ತ್ರಿಶೂಲಗಳನ್ನು ಕೈಯಲ್ಲಿ ಹಿಡಿದಿರುವ ಇವರು ದೇಹವನ್ನು ಬೂದಿಯಿಂದ ಮುಚ್ಚಿಕೊಂಡಿರುತ್ತಾರೆ. ಮಹಾ ಕುಂಭಮೇಳದಲ್ಲಿ ಇವರದ್ದು ಅತ್ಯಂತ ಪ್ರಮುಖ ಪಾತ್ರವಿದೆ.. ವಿಶೇಷವಾಗಿ ಮಕರ ಸಂಕ್ರಾಂತಿಗೆ ನಡೆಯುವ ಶಾಹಿ ಸ್ನಾನದ ಸಮಯದಲ್ಲಿ ಈ ನಾಗಾಸಾಧುಗಳು ಸೂರ್ಯೋದಯದ ಸಮಯದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಈ ವೇಳೆ ಭವ್ಯವಾದ ಧಾರ್ಮಿಕ ಮೆರವಣಿಗೆ, ಮಂತ್ರಘೋಷಗಳು ಭಕ್ತಿಯ ಪರಾಕಾಷ್ಠೆಯನ್ನ ಹೆಚ್ಚಿಸುತ್ತದೆ. ಈ ಧಾರ್ಮಿಕ ಸ್ನಾನವು ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಪುನರ್ಜನ್ಮದ ಚಕ್ರದಿಂದ ಮುಕ್ತವಾಗಿಸುತ್ತದೆ ಎಂದು ನಂಬಲಾಗಿದೆ. ಜೊತೆಗೆ ಮಹಾ ಕುಂಭಮೇಳದಲ್ಲಿ ನಾಗಾ ಸಾಧುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮಹಾ ಕುಂಭಮೇಳದಲ್ಲಿ ಅವರಿಗೆ ಮೊದಲ ಸ್ನಾನದ ಹಕ್ಕನ್ನು ನೀಡಲಾಗಿದೆ. ಆ ನಂತರ ಇತರ ಭಕ್ತರಿಗೆ ಪವಿತ್ರ ಸ್ನಾನ ಮಾಡಲು ಅವಕಾಶ ನೀಡಲಾಗುತ್ತದೆ. ಕುಂಭಮೇಳದಲ್ಲಿ ನಾಗಾಸಾಧುಗಳ ಆಗಮನ ಭಕ್ತರಿಗೆ ಆಶೀರ್ವಾದವಿದ್ದಂತೆ.

 

ಇಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಒಂದು ಪ್ರಶ್ನೆ ಕಾಡುತ್ತದೆ.. ನಾಗಾ ಸಾಧುಗಳ ಜೀವನ ಸಾಮಾನ್ಯ ಜನರಿಂದ ವಿಭಿನ್ನವಾಗಿರುತ್ತೆ. ಹಿಮಾಲಯ, ದಟ್ಟ ಅರಣ್ಯ, ಬೆಟ್ಟ-ಗುಡ್ಡಗಳಲ್ಲಿನ ಗುಹೆಗಳಲ್ಲಿ ವಾಸಿಸುವ, ಸದಾ ಧ್ಯಾನದಲ್ಲಿ ಮುಳುಗಿರುವ, ಹೊರ ಜಗತ್ತಿನಿಂದ ದೂರವಿರುವ ಈ ಸಾಧುಗಳಿಗೆ ಕುಂಭದ ಸಮಯ ಹೇಗೆ ಗೊತ್ತಾಗುತ್ತದೆ ಅನ್ನೋದು. ನಾಗಾ ಸಾಧುಗಳು ಹಠ ಸಾಧನೆಗಳಲ್ಲಿ ಬರುವ ರಾಜಯೋಗದ ಅತ್ಯುನ್ನತ ರೂಪವನ್ನು ಅಭ್ಯಾಸ ಮಾಡಿರುತ್ತಾರೆ. ಸೂರ್ಯನ ಪಥದಿಂದಲೇ ಅವರು ದಿನಾಂಕ ತಿಥಿಗಳನ್ನು ನಿರ್ಧರಿಸಬಲ್ಲರು.. ನಕ್ಷತ್ರಗಳ ಚಲನೆಯಿಂದಲೇ ಅವರು ಪಂಚಾಂಗವನ್ನು ತಿಳಿದುಕೊಳ್ಳಬಲ್ಲವರು.. ಜ್ಯೋತಿಷ್ಯ ಶಾಸ್ತ್ರದಲ್ಲೂ ಎಲ್ಲರಿಗಿಂತಲೂ ಹೆಚ್ಚು ಪರಿಣಿತರು. ಹೀಗಾಗಿಯೇ ನಾಗಸಾಧುಗಳು ಕುಂಭ ಮೇಳ ನಡೆಯುವ ಸರಿಯಾದ ಸಮಯವನ್ನು ಅರಿತಿರುತ್ತಾರೆ. ಹೀಗಾಗಿಯೇ ಕುಂಭ ಮೇಳದ ಸರಿಯಾದ ಸಮಯಕ್ಕೆ ಆಗಮಿಸುತ್ತಾರೆ. ಗಡಿಯಾರ ನೋಡುವುದಿಲ್ಲ. ಮೊಬೈಲ್ ಇಲ್ಲವೇ ಇಲ್ಲ, ಪಂಚಾಂಗ ಇಟ್ಟುಕೊಳ್ಳುವುದಿಲ್ಲ, ಆದರೂ ಕೂಡಾ ನಾಗಾಸಾಧುಗಳು ಸರಿಯಾದ ಸಮಯಕ್ಕೆ ಕುಂಭಮೇಳಕ್ಕೆ ಬಂದೇ ಬರುತ್ತಾರೆ… ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೂ ಕಾರಣರಾಗುತ್ತಾರೆ. ಭಕ್ತರಿಗೆ ಆಶೀರ್ವಾದ ನೀಡುತ್ತಾರೆ.

Kishor KV

Leave a Reply

Your email address will not be published. Required fields are marked *