ಮಂಡ್ಯಕ್ಕಾಗಿ ಸುಮಲತಾ ಜೊತೆ ಕುಮಾರಣ್ಣನ ಸಂಧಾನ?- ಸ್ನೇಹದ ನಿರೀಕ್ಷೆಯಲ್ಲಿದ್ದಾರಾ ಹೆಚ್‌ಡಿಕೆ?
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಬಿಡಿ. ನಿನ್ನೆ, ಮೊನ್ನೆವರೆಗೂ ಹಾವು ಮುಂಗುಸಿಯಂತೆ ಕಚ್ಚಾಡ್ತಿದ್ದೋರು ಇಂದು ಹಾಲು ಜೇನಿನಂತೆ ಒಂದಾಗಿ ಬಿಡ್ತಾರೆ. ಇದೀಗ ಜೆಡಿಎಸ್ ಬಿಜೆಪಿ ಕಥೆಯೂ ಹಂಗೇ ಆಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕುಸ್ತಿಗೆ ಬಿದ್ದವ್ರು ಈಗ ಲೋಕಸಭಾ ಚುನಾವಣೆಗೆ ದೋಸ್ತಿಗಳಾಗಿದ್ದಾರೆ. ಅದರ ಮುಂದುವರಿದ ಭಾಗ ಎನ್ನುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ಪರಮವೈರಿ ಅಂತಾನೇ ಕರೆಯುತ್ತಿದ್ದ ಸಂಸದೆ ಸುಮಲತಾ ಜೊತೆ ಸ್ನೇಹದ ನಿರೀಕ್ಷೆಯಲ್ಲಿದ್ದಾರೆ. ಮುನಿಸು ಮರೆತು ಮಾತಾಡೋಕೂ ಸಿದ್ಧ ಎನ್ನುತ್ತಾ ಹೊಸ ದಾಳ ಉರುಳಿಸಿದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರ ಯಾರ ಪಾಲಾಗುತ್ತೋ ಗೊತ್ತಿಲ್ಲ. ಆದ್ರೆ ಹೈವೋಲ್ಟೇಜ್ ಕಣವಾಗೋದ್ರಲ್ಲಿ ಯಾವ್ದೇ ಡೌಟ್ ಇಲ್ಲ. ಯಾವ ಪಕ್ಷದಿಂದ ಯಾರೇ ಅಖಾಡಕ್ಕೆ ಇಳಿದ್ರೂ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡೋದು ಪಕ್ಕಾ. ಆದ್ರೆ ಈಗಿನ ರಾಜಕೀಯ ಬೆಳವಣಿಗೆ ನೋಡ್ತಿದ್ರೆ ತಂತ್ರಗಾರಿಕೆ ಜೋರಾಗಿಯೇ ನಡೆಯುತ್ತಿದೆ. ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಕುತೂಹಲ ಒಂದು ಕಡೆಯಾದ್ರೆ ಕಾಂಗ್ರೆಸ್ನಿಂದ ಯಾರು ಸ್ಪರ್ಧೆ ಮಾಡಬಹುದು ಎಂಬ ಚರ್ಚೆ ಜೋರಾಗಿದೆ. ಇದರ ನಡುವೆ ತಮ್ಮ ಪ್ರಬಲ ವೈರಿ ಸುಮಲತಾ ಜೊತೆ ಸಂಧಾನದ ಅಸ್ತ್ರ ಹೂಡಿದ್ದಾರೆ.
ಮಂಡ್ಯ ಕ್ಷೇತ್ರವನ್ನ ಮರಳಿ ಪಡೆಯುವ ನಿಟ್ಟಿನಲ್ಲಿ ಜೆಡಿಎಸ್ ನಾಯಕರು ಮಾಸ್ಟರ್ ಪ್ಲಾನ್ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಖುದ್ದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವ್ರೇ ಸ್ಪರ್ಧಿಸ್ತಾರೆ ಎನ್ನಲಾಗುತ್ತಿದೆ. ಈಗಾಗಲೇ ಮಂಡ್ಯ ಸಂಸದೆ ಸುಮಲತಾ ಅವರ ಬೆಂಬಲಿಗ ಸಚ್ಚಿದಾನಂದ ಅವರು, ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಯಲ್ಲಿ ಕುಮಾರಣ್ಣನನ್ನ ಭೇಟಿಯಾಗಿದ್ದಾರೆ. ಈ ವೇಳೆ ಮಂಡ್ಯ ರಾಜಕೀಯದ ಕುರಿತು ಚರ್ಚಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಹೆಚ್‌ಡಿಕೆ, ಭೇಟಿ ಮಾಡುವ ಅವಶ್ಯಕತೆ ಬಂದರೆ ಸುಮಲತಾ ಅವರನ್ನು ಕೂಡಾ ಭೇಟಿ ಆಗುತ್ತೇನೆ. ತಪ್ಪೇನಿದೆ?. ಸುಮಲತಾ ಅವರು ಬಿಜೆಪಿಯಲ್ಲಿ ಮುಂದುವರಿಯುವುದಾದರೆ ಮಿತ್ರಪಕ್ಷ ಬಿಜೆಪಿ ಪರವಾಗಿ ಅವರನ್ನು ಭೇಟಿ ಮಾಡುತ್ತೇನೆ. ನಾವೇನು ಇಂತಹ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಿದ್ದೀವಾ? ಇಂತಹವರಿಗೆ ತೊಂದ್ರೆ ಕೊಟ್ಟು ನಿಲ್ಲಬೇಕು ಎಂದಿ ಖಂಡಿತಾ ಇಲ್ಲ. ಈ ಬಗ್ಗೆ ಇನ್ನು ಚರ್ಚೆಯೇ ಆಗಿಲ್ಲ. ಇವೆಲ್ಲಾ ಪ್ರಾರಂಭಿಕ ಹಂತದಲ್ಲಿ ಇದೆ. ಬಿಜೆಪಿ- ಜೆಡಿಎಸ್ ನಾಯಕರೆಲ್ಲ ಕೂತು ಸೌಹಾರ್ದಯುತವಾಗಿ ಕೆಲಸ ಮಾಡೋಕೆ ಎಲ್ಲರ ಜೊತೆಗೂ ಚರ್ಚೆ ನಡೆಸುತ್ತೇವೆ ಎಂದಿದ್ದಾರೆ.
ಕುಮಾರಣ್ಣ ಈಗೇನೋ ಕೂಲಾಗಿ ಸುಮಲತಾರನ್ನ ಭೇಟಿಯಾಗಿ ಮಾತನಾಡ್ತೀನಿ ಅಂತಿದ್ದಾರೆ. ಆದ್ರೆ 2019 ರ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಹಾಗೂ ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜಕೀಯ ಎದುರಾಳಿಗಳಾಗಿದ್ದರು. ಪರಸ್ಪರ ನಾಯಕರ ನಡುವೆ ಮಾತಿನ ಸಮರವೇ ನಡೆದಿತ್ತು. ಆದ್ರೀಗ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಸುಮಲತಾ ಹಾಗೂ ಕುಮಾರಸ್ವಾಮಿ ಮುನಿಸಿ ಮರೆತಂತೆ ಕಾಣುತ್ತಿದೆ. ಯಾಕಂದ್ರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗೋದು ಪಕ್ಕಾ ಆದಂತಿದೆ. ಹೀಗಾಗಿ ಸುಮಲತಾ ಅವರಿಗೆ ಈ ಬಾರೀ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಅನುಮಾನ. ಕೊನೆಗೆ ಬಿಜೆಪಿ ಸಿಗದೆ ಸುಮಲತಾ ಪಕ್ಷೇತರವಾಗಿ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಇದೇ ಕಾರಣಕ್ಕೆ ಕುಮಾರಣ್ಣ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹಲವಾರು ರಾಜಕೀಯ ಲೆಕ್ಕಾಚಾರಗಳಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಸುಮಲತಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪರಿಣಾಮವಾಗಿ ಈ ಕ್ಷೇತ್ರ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿಯೇ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವನ್ನು ನೀಡಿದ್ದಾರೆ. ಈ ಮೂಲಕ ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ. ಅಲ್ಲದೆ, ಜಿಲ್ಲೆಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಸುಮಲತಾ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಚರ್ಚೆಯೂ ನಡೆಯುತ್ತಿದೆ. ಇದ್ರ ನಡುವೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಸುಮಲತಾ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕರೆದೊಯ್ಯುವ ಚಿಂತನೆಯೂ ಬಿಜೆಪಿಯಲ್ಲಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಂಡ್ಯ ಕ್ಷೇತ್ರವನ್ನ ತಮ್ಮ ಕಂಟ್ರೋಲ್ ಗೆ ತೆಗೆದುಕೊಂಡು ಸುಮಲತಾರ ಮನವೊಲಿಸೋಕೆ ಹೆಚ್.ಡಿ ಕುಮಾರಸ್ವಾಮಿ ಹಳೆದ ಮುನಿಸು ಮರೆತು ಸಂಧಾನದ ಅಸ್ತ್ರ ಹೂಡೋಕೆ ಪ್ಲ್ಯಾನ್ ಮಾಡಿದ್ದಾರೆ.
ಜೆಡಿಎಸ್ ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಮಂಡ್ಯ ಕ್ಷೇತ್ರ ಪ್ರತಿಷ್ಠೆಯ ಕಣ. ಅದ್ರಲ್ಲೂ ಜೆಡಿಎಸ್ ಪಾಲಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ. ಮೈತ್ರಿಯಿಂದಾಗಿ ತಮ್ಮ ಪಾಲಾಗುವ ಮೂರು ಅಥವಾ ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ದಳಪತಿಗಳಿಗಿದೆ. ಹೀಗಾಗೇ ಜೆಡಿಎಸ್ ಜೊತೆಗೆ ವಿರೋಧ ಕಟ್ಟಿಕೊಂಡ ಎಲ್ಲಾ ನಾಯಕರನ್ನ ಸಂಪರ್ಕಿಸುವ ಮೂಲಕ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕಿಳಿದರೇ, ಅಲ್ಲಿ ಸುಮಲತಾ ಬೆಂಬಲವೂ ಸಹ ಬೇಕಾಗುತ್ತದೆ. ಹೀಗಾಗಿ ಹಿಂದೆ ಸುಮಲತಾ ಹಾಗೂ ಕುಮಾರಸ್ವಾಮಿ ನಡುವೆ ನಡೆದ ಮುನಿಸುಗಳು ಮರೆಯಾಗಿ, ಚರ್ಚೆಗೆ ಮುಂದಾಗಿದ್ದಾರಾ ಎನ್ನುವ ಮಾತುಗಳು ಕೇಳಿ ಬಂದಿವೆ. ಆದ್ರೆ ಈ ಸಂಧಾನ ವರ್ಕೌಟ್ ಆಗುತ್ತಾ ಅನ್ನೋದೇ ಪ್ರಶ್ನೆ.