ಕೆಎಸ್ಆರ್ಟಿಸಿಯಿಂದ ಸಿಬ್ಬಂದಿಗೆ 1 ಕೋಟಿ ಮೊತ್ತದ ಅಪಘಾತ ವಿಮೆ ಜಾರಿ
ಬೆಂಗಳೂರು: ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ತನ್ನ ಸಿಬ್ಬಂದಿಗಳಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯವನ್ನು ಜಾರಿ ಮಾಡಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ‘ವಿವೇಕ ಕೊಠಡಿ’- ಗೋಡೆಗೆ ಕೇಸರಿ ಬಣ್ಣ ಬಳಿಯುತ್ತಾ ಸರ್ಕಾರ?
ಈ ಹಿಂದೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ 50 ಲಕ್ಷ ರೂ ವಿಮೆ ನೀಡುವುದಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತ್ತು. ಇದೀಗ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ನೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ 50 ಲಕ್ಷ ರೂ. ಸೇರಿ ಒಟ್ಟು ರೂ.1 ಕೋಟಿ ಅಪಘಾತ ವಿಮೆ ನೀಡುವುದಾಗಿ ಘೋಷಿಸಿದೆ.
ನಿಗಮದ ಸಿಬ್ಬಂದಿಗಳು ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗ ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ / ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ರೂ. 50 ಲಕ್ಷಗಳ ಪರಿಹಾರ ನೀಡುವ ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತಂದಿದೆ. ಇದರ ಮುಂದುವರಿದ ಭಾಗವಾಗಿ, ಸೋಮವಾರ ನಿಗಮವು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ರವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ ಸಿಬ್ಬಂದಿಗಳಿಗೆ ರೂ.50 ಲಕ್ಷದವರೆಗೆ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದ್ದು, ವಿಮಾ ಯೋಜನೆಗೆ ಸಿಬ್ಬಂದಿಗಳು ಮಾಹೆಯಾನ ರೂ.62.50 + ಜಿ.ಎಸ್.ಟಿ ಸೇರಿದಂತೆ (ವಾರ್ಷಿಕ ರೂ.885/- ಪ್ರೀಮಿಯಂ) ಪಾವತಿಸಬೇಕಾಗುತ್ತದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ವಿಮಾ ಪಡೆಯಲು ನಿಯಮಗಳು
ಈ ಯೋಜನೆಯಲ್ಲಿ ಸಿಬ್ಬಂದಿಗಳು ಪ್ರತಿ ಮಾಹೆ ರೂ.62.50 + ಜಿ ಎಸ್ ಟಿ ಸೇರಿ ಪ್ರೀಮಿಯಂ (ವಾರ್ಷಿಕ ರೂ.750+ ಜಿ.ಎಸ್.ಟಿ ಸೇರಿದಂತೆ ಒಟ್ಟು ರೂ.885/-) ಪಾವತಿಸಬೇಕಾಗುತ್ತದೆ.
ಈ ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ. 50 ಲಕ್ಷಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ.
ಅಪಘಾತದಲ್ಲಿ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗ ವೈಕಲ್ಯಕ್ಕೆ ತುತ್ತಾದಲ್ಲಿ ಸಹ ರೂ. 50 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ.
ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.
ಒಂದು ವೇಳೆ ಸಿಬ್ಬಂದಿಯು ಅಪಘಾತಕ್ಕೆ ಒಳಗಾಗಿ ತಾತ್ಕಾಲಿಕ ಅಂಗವೈಕಲ್ಯ ಉಂಟಾಗಿ, ತನ್ನ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅಸಮರ್ಥನಾದ ಪಕ್ಷದಲ್ಲಿ, ಆತನು ಚೇತರಿಸಿಕೊಳ್ಳುವವರೆಗೆ, ಅವನಿಗೆ ವಿಮಾ ಮಾಡಲಾದ ರೂ.50 ಲಕ್ಷ ಮೊತ್ತದ ಶೇಕಡಾ ಒಂದರಷ್ಟು ಮೊತ್ತವನ್ನು ಪ್ರತಿವಾರ ರೂ.5000 ಕ್ಕೆ ಹೆಚ್ಚದಂತೆ ಅಥವಾ ಅವರ ಮಾಸಿಕ ಸಂಬಳದ ಶೇಕಡಾ 25ರಷ್ಟನ್ನು, ಯಾವುದು ಕಡಿಮೆಯೋ ಅದನ್ನು ಸಿಬ್ಬಂದಿಗೆ ವಿಮಾ ಸಂಸ್ಥೆಯು ನೀಡುವುದು.
ಈ ಎರಡು ವಿಮಾ ಯೋಜನೆಗಳಿಂದ ನಿಗಮವು ತನ್ನ ಸಿಬ್ಬಂದಿಗಳಿಗೆ ರೂ.1 ಕೋಟಿ ಮೊತ್ತದ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ತಂದಂತಾಗಿದೆ. ಇಲ್ಲಿಯವರೆಗೂ ನಿಗಮದ ಸಿಬ್ಬಂದಿಗಳಿಗೆ ಯಾವುದೇ ಅಪಘಾತ ವಿಮಾ ಯೋಜನೆಯ ಸೌಲಭ್ಯವಿರಲಿಲ್ಲ.