ಬಸ್‌ ಟಿಕೆಟ್ ದರ ಏರಿಕೆ? – KSRTC ನಿಗಮ ಪ್ರಕಟಣೆಯಲ್ಲಿ ಏನಿದೆ?

ಬಸ್‌ ಟಿಕೆಟ್ ದರ ಏರಿಕೆ? – KSRTC ನಿಗಮ ಪ್ರಕಟಣೆಯಲ್ಲಿ ಏನಿದೆ?

ಮೆಟ್ರೋ ದರ ಏರಿಕೆ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಬಸ್‌ ದರ ಕೂಡ ಏರಿಕೆಯಾಗುತ್ತಿದೆ ಎಂಬ ಸುದ್ದಿ ಭಾರಿ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಪ್ರಯಾಣಿಕರು ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ಬಗ್ಗೆ ಕೆಎಸ್ಆರ್​​ಟಿಸಿ ನಿಗಮ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಬಸ್‌ ದುರಂತ – 40 ಪ್ರಯಾಣಿಕರಿದ್ದ ಖಾಸಗಿ ಬಸ್‌ ಬೆಂಕಿಗಾಹುತಿ!  

ಸರ್ಕಾರಿ ಬಸ್​​ಗಳ ಟಿಕೆಟ್ ದರ ಏರಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಸದ್ಯ ಈ ವಿಚಾರವಾಗಿ ಯಾವುದೇ ಟಿಕೆಟ್ ದರ ಏರಿಕೆ ಆಗಿಲ್ಲ ಎಂದು ಕೆಎಸ್ಆರ್​​ಟಿಸಿ ನಿಗಮ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಪ್ರಕಟನೆ ಹೊರಡಿಸಿದ್ದು, ಯಾವುದೇ ದರ ಏರಿಕೆ ಆಗಿರುವುದಿಲ್ಲ ಎಂದು ಕೆಎಸ್ಆರ್​​ಟಿಸಿ ನಿಗಮ ತಿಳಿಸಿದೆ.

ಪ್ರಕಟಣೆಯಲ್ಲಿ ಏನಿದೆ?

ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣ ವ್ಯತ್ಯಾಸದ ಬಗ್ಗೆ ವರದಿಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕೆಎಸ್ಆರ್​​ಟಿಸಿ ನಿಗಮ, ಮೈಸೂರು ಮತ್ತು ಬೆಂಗಳೂರು ನಡುವಿನ ಐರಾವತ ಕ್ಲಬ್ ಕ್ಲಾಸ್ ದರ 430 ರೂ. ಆಗಿರುತ್ತದೆ ಎಂದು ತಿಳಿಸಿದೆ.

ಪ್ರಯಾಣದ ಸಮಯದಲ್ಲಿ ವಿತರಣೆಯಾಗಿರುವ 431 ರೂ. ಮೌಲ್ಯದ ಟಿಕೆಟ್ ನಿರ್ವಾಹಕರು ಮಾರ್ಗಕ್ಕೆ ತೆರಳಿ ಕಾರ್ಯಾಚರಣೆ ಮಾಡುವಾಗ ಸದರಿ ಮಾರ್ಗಕ್ಕೆ ಇಟಿಎಂ ಯಂತ್ರದಲ್ಲಿ ಆಯ್ಕೆ ಮಾಡಬೇಕಾದ ರೂಟ್ ನಂಬರ್ 94ರ ಬದಲು ಇಟಿಎಂ ಯಂತ್ರದ ರೂಟ್ ನಂಬರ್ 908ನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡು ಕಾರ್ಯಾಚರಣೆ ಮಾಡಿರುವುದರಿಂದ ಈ ರೀತಿ ಆಗಿದ್ದು, ಇದನ್ನು ಸರಿಪಡಿಸಲಾಗಿದೆ. ಯಾವುದೇ ದರ ಏರಿಕೆ ಆಗಿರುವುದಿಲ್ಲ ಎಂದು ಕೆಎಸ್ಆರ್​​ಟಿಸಿ ನಿಗಮ ಸ್ಪಷ್ಟನೆ ನೀಡಿದೆ.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಇತ್ತೀಚೆಗೆ ಸಿಡಿದೆದ್ದಿದ್ದರು. ಆ ಮೂಲಕ ‘ಬೆಂಗಳೂರು ಚಲೋ’ಗೆ ಕರೆ ನೀಡಿದ್ದರು. ಕರ್ನಾಟಕ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್​​ನಲ್ಲಿ ನಾಲ್ಕೂ ನಿಗಮಗಳಿಂದ ಪ್ರತಿಭಟನೆ ನಡೆಯಬೇಕಿತ್ತು. ಆದರೆ ಅನಂತ್ ಸುಬ್ಬರಾವ್​ ಅವರ ನಿಧನ ಹಿನ್ನೆಲೆ ಬೆಂಗಳೂರು ಚಲೋ ಅನ್ನು ಮುಂದೂಡಲಾಗಿದೆ.

Shwetha M