ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಹಣ 3 ರಿಂದ 10 ಲಕ್ಷ ರೂ.ಗೆ ಹೆಚ್ಚಳ!

ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಹಣ 3 ರಿಂದ 10 ಲಕ್ಷ ರೂ.ಗೆ ಹೆಚ್ಚಳ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್‌ ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಣೆ ಮಾಡಿದೆ. ಸರ್ಕಾರಿ ಬಸ್‌ನಲ್ಲಿ ಅಪಘಾತವಾಗಿ ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ ನೀಡುವ ಆರ್ಥಿಕ ಪರಿಹಾರದ ಮೊತ್ತವನ್ನು 10 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಆರ್ಭಟ – ಇಂಧನದ ಬೆಲೆ ಏರಿಕೆಯಾಗುವ ಆತಂಕ

ಇಲ್ಲಿವರೆಗೆ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಪಘಾತವಾಗಿ ಮೃತಪಟ್ಟ ಪ್ರಯಾಣಿಕರು ಕುಟುಂಬಸ್ಥರಿಗೆ 3 ಲಕ್ಷ ರೂಪಾಯಿ ಪರಿಹಾರ ಮೊತ್ತ ನೀಡಲಾಗುತ್ತಿತ್ತು. ಇದೀಗ ಕೆಎಸ್‌ಆರ್‌ಟಿಸಿ ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ಅದನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಈ ಕುರಿತು ಕರಾರಸಾ ನಿಗಮ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ಸುತ್ತೋಲೆ ಹೊರಡಿಸಿದ್ದು, 2024 ರ ಜನವರಿ 1ರಿಂದ ಅನ್ವಯವಾಗುವಂತೆ ಈ ಹೊಸ ನಿಯಮ ಜಾರಿಗೆ ಬರಲಿದೆ.

2017ರಿಂದ ಮೃತ ಪ್ರಯಾಣಿಕರ ಕುಟುಂಬಕ್ಕೆ ಅಪಘಾತ ಪರಿಹಾರ ಮೊತ್ತವಾಗಿ 3 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಅಕ್ಟೋಬರ್ 31ರಂದು ನಡೆದ ಅಪಘಾತ ಪರಿಹಾರ ನಿಧಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಪರಿಹಾರದ ಮೊತ್ತವನ್ನು 3 ಲಕ್ಷದಿಂದ 10 ಲಕ್ಷ ರೂ.ಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿತ್ತು. ಅದರಂತೆ ಇದೀಗ ಪರಿಹಾರ ಮೊತ್ತವನ್ನು ಹೆಚ್ಚಿಸಿ ಸುತ್ತೋಲೆ ಹೊರಡಿಸಲಾಗಿದೆ.

ಇನ್ನು ಅಪಘಾತ ಪರಿಹಾರ ಮೊತ್ತ ಹೆಚ್ಚಿಸಿದ ಹಿನ್ನೆಲೆ ಪ್ರಯಾಣಿಕರಿಂದ ವಂತಿಕೆ ಸಂಗ್ರಹಣೆಯನ್ನೂ ಹೆಚ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪಡೆದುಕೊಳ್ಳುವ 50 ರೂ. ರಿಂದ 99 ರೂ. ವರೆಗಿನ ಟಿಕೆಟ್ ದರದಲ್ಲಿ ಪ್ರತಿ ಪ್ರಯಾಣಿಕರಿಂದ 1 ರೂಪಾಯಿ ವಂತಿಗೆ ಪಡೆಯಲಾಗುತ್ತದೆ. 100 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಟಿಕೆಟ್ ದರಕ್ಕೆ 2 ರೂ. ವಂತಿಕೆ ಮೊತ್ತ ಪಡೆಯಲು ತೀರ್ಮಾನಿಸಲಾಗಿದೆ. 1 ರಿಂದ 50 ರೂಪಾಯಿವರೆಗಿನ ಟಿಕೆಟ್ ದರದಲ್ಲಿ ಯಾವುದೇ ವಂತಿಗೆ ಹಣವನ್ನು ಪ್ರಯಾಣಿಕರಿಂದ ಪಡೆಯಲಾಗುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Shwetha M