ಪಕ್ಷೇತರರಾಗಿ ಕೆಎಸ್ ಈಶ್ವರಪ್ಪ ಕಣಕ್ಕೆ! – ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್!
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಬಿಜೆಪಿ ಹಲವು ಲೋಕಸಭೆ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಟಿಕೆಟ್ ಕೈತಪ್ಪಿದಕ್ಕೆ ಕೆಲವು ನಾಯಕರು ಬಂಡಾಯವೆದ್ದಿದ್ದಾರೆ. ಇದೀಗ ಕೆಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಗೂ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದೆ. ಇದರಿಂದಾಗಿ ಸಿಡಿದೆದ್ದಿರುವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಅಸಮಾಧಾನಗೊಂಡಿರುವ ಈಶ್ವರಪ್ಪ ಅವರನ್ನು ಬಿಜೆಪಿ ನಾಯಕರು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಸಹ ಈಶ್ವರಪ್ಪ ಯಾವುದೇ ಮಾತಿಗೂ ಜಗ್ಗದೇ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಸಹ ನಿಗದಿ ಮಾಡಿದ್ದಾರೆ.
ಈ ಬಗ್ಗೆ ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಹರಿ ಹರ ಬ್ರಹ್ಮ ಬಂದರೂ ನಾನು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ. ಏಪ್ರಿಲ್ 12 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. 25 ಸಾವಿರ ಜನರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಮೊದಲ ಗೆಲುವಿನ ಉತ್ಸಾಹದಲ್ಲಿ ಸಿಎಸ್ಕೆ, ಜಿಟಿ – ಯುವನಾಯಕರ ಜೋಶ್, ವಿನ್ನರ್ ಯಾರು?
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಸೋಲಿನ ಭಯ ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿವೈ ವಿಜಯೇಂದ್ರ ಗೆಲುವಿಗಾಗಿ ಶಿಕಾರಿಪುರದ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ನಿಂದ ಡಮ್ಮಿ ಅಭ್ಯರ್ಥಿ ಹಾಕಿದ್ದರು. ಅದರಂತೆ ಹೊಂದಾಣಿಕೆ ಯಶಸ್ವಿಯಾಗಿದೆ. ಲೋಕಸಭೆ ಚುನಾವಣೆಗೂ ಸಚಿವ ಮಧು ಬಂಗಾರಪ್ಪ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಆ ಪಕ್ಷದಿಂದ ಡಮ್ಮಿ ಅಭ್ಯರ್ಥಿ ಹಾಕಲಾಗಿದೆ. ಆದರೆ, ಈ ಬಾರಿ ಹೊಂದಾಣಿಕೆ ರಾಜಕಾರಣ ಯಶ್ವಿಯಾಗುವುದಿಲ್ಲ. ನಾನು 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.
ನಾನು ಜೀವನದಲ್ಲಿ ಪಕ್ಷಾಂತರ ಮಾಡಿಲ್ಲ. ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿ ಬಿಜೆಪಿಗೆ ಅನ್ಯಾಯ ಮಾಡಿದ್ದರು. ಪಕ್ಷಕ್ಕೆ ಚಾಕು ಹಾಕಿ ಹೋಗಿದ್ದರು. ಪಕ್ಷ ಕಟ್ಟಿ ಕೇಲವ ಆರು ಕ್ಷೇತ್ರಗಳನ್ನಷ್ಟೇ ಗೆದ್ದಿದ್ದರು. ಅಂದು ನಾವು (ಬಿಜೆಪಿ) 46 ಸ್ಥಾನ ಗೆದ್ದಿದ್ದೆವು. ದುಡ್ಡು ಜಾತಿಯ ಆಟ ಚುನಾವಣೆಯಲ್ಲಿ ನಡೆಯುವುದಿಲ್ಲ. 60 ಸಾವಿರ ಲೀಡ್ ಕೊಡುತ್ತಿದ್ದ ಶಿಕಾರಿಪುರ ಕ್ಷೇತ್ರ ಈಗ 11 ಸಾವಿರಕ್ಕೆ ಕುಸಿದಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ತಿಣುಕಾಡಿ ಗೆದ್ದರು. ಶಿಕಾರಿಪುರ ಕ್ಷೇತ್ರದಲ್ಲಿ ಅಪ್ಪ ಮಕ್ಕಳದ್ದು ವಿಚಿತ್ರ ರಾಜಕಾರಣ. ಯಡಿಯೂರಪ್ಪ, ಮಕ್ಕಳು ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ ಎಂದು ಶಿಕಾರಿಪುರ ಕ್ಷೇತ್ರದ ಜನರು ನನಗೆ ಕರೆ ಮಾಡಿ ಹೇಳುತ್ತಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಅಸಮಾಧಾನ ಇದೆ ಎಂದರು.
ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಅಸಮಾಧಾನ ಇದೆ. ಬೈಂದೂರಿನ ಮುಖಂಡರು ನನಗೆ ಬೆಂಬಲ ನೀಡಲಿದ್ದಾರೆ. ಹಿಂದೂಗಳಿಗೆ ಸಂಸದರು ಸೂಕ್ತ ರೀತಿಯಲ್ಲಿ ಸ್ಪಂಧಿಸಿಲ್ಲ ಎಂದು ಆರೋಪಿಸಿದ ಈಶ್ವರಪ್ಪ ಅವರು, ಯಾರು ಕೂಡಾ ಹೆದರಬೇಡಿ. ಈಗ ತಾನೇ ನನಗೆ ದೆಹಲಿಯಿಂದ ಕರೆ ಬಂದಿದೆ. ಸ್ಪರ್ಧೆ ಮಾಡಬೇಡಿ ಅಂತಾ ಹೇಳಿದ್ದಾರೆ. ಯಾರು ಎನ್ನುವುದನ್ನು ನಂತರ ಹೇಳುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.