ಕೃಷ್ಣ ಜನ್ಮಭೂಮಿ ವಿವಾದ – ಮಥುರಾದ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ
ಶ್ರೀ ಕೃಷ್ಣನ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಯಾಗಿದೆ. ಅಲಹಾಬಾದ್ ಹೈಕೋರ್ಟ್ ಶಾಹಿ ಈದ್ಗಾ ಸಂಕೀರ್ಣದ ಸಮೀಕ್ಷೆಗೆ ಅನುಮತಿ ನೀಡಿದೆ. ಜ್ಞಾನವಾಪಿ ರೀತಿಯಲ್ಲೇ ಇದೀಗ ಮಥುರಾ ಜನ್ಮಭೂಮಿ ಸರ್ವೇಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಮಥುರಾದ ಕೃಷ್ಣಜನ್ಮಭೂಮಿ ಮಂದಿರದ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಭಾರಿ ಭದ್ರತಾ ಲೋಪ – ಕಲಾಪದ ವೇಳೆ ಪ್ರತಿಭಟಿಸಿದ ಐವರು ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಅಮಾನತು
ಹೌದು, ಶ್ರೀ ಕೃಷ್ಣನ ಜನ್ಮಸ್ಥಳವು ಮಸೀದಿಯ ಕೆಳಗೆ ಇದೆ ಮತ್ತು ಮಸೀದಿಯು ಹಿಂದೂ ದೇವಾಲಯವಾಗಿದೆ ಎಂದು ತೋರಿಸುವ ಹಲವು ಚಿಹ್ನೆಗಳು ಇವೆ. ಹಿಂದೂ ದೇವಾಲಯಗಳ ವಿಶಿಷ್ಟ ಲಕ್ಷಣವಾಗಿರುವ ಕಮಲದ ಆಕಾರದ ಸ್ತಂಭವು ಅಸ್ತಿತ್ವದಲ್ಲಿದೆ. ಕೃಷ್ಣ ಜನಿಸಿದ ರಾತ್ರಿ ಆತನನ್ನು ರಕ್ಷಿಸಿದ ಹಿಂದೂ ದೇವತೆಗಳಲ್ಲಿ ಒಬ್ಬನಾದ ಶೇಷನಾಗನ ಚಿತ್ರವೂ ಇದೆ. ಮಸೀದಿಯ ಕಂಬದ ತಳದಲ್ಲಿ ಹಿಂದೂ ಧಾರ್ಮಿಕ ಚಿಹ್ನೆಗಳು ಮತ್ತು ಕೆತ್ತನೆಗಳು ಸಹ ಗೋಚರಿಸುತ್ತವೆ. ಹೀಗಾಗಿ ಮಸೀದಿಯನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಮನವಿಯನ್ನು ಪುರಸ್ಕರಿಸಿದ ನ್ಯಾ. ಮಯಾಂಕ್ ಕುಮಾರ್ ಜೈನ್ ಅವರಿದ್ದ ಪೀಠ ಮೂವರು ಅಧಿಕಾರಿಗಳಿರುವ ಆಯೋಗ ರಚಿಸುವಂತೆ ಸೂಚಿಸಿದೆ.
ಏನಿದು ಪ್ರಕರಣ?
ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ. 13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ನೀಡಬೇಕು. ಹೀಗಾಗಿ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.