ಮತ್ತೆ ಒತ್ತುವರಿ ಮಾಡಿದ್ರೆ ಡಬಲ್ ದಂಡ – ಕೃಷ್ಣ ಬೈರೇಗೌಡರಿಂದ ಖಡಕ್ ಎಚ್ಚರಿಕೆ

ಮತ್ತೆ ಒತ್ತುವರಿ ಮಾಡಿದ್ರೆ ಡಬಲ್ ದಂಡ – ಕೃಷ್ಣ ಬೈರೇಗೌಡರಿಂದ ಖಡಕ್ ಎಚ್ಚರಿಕೆ

ತೆರವು ಮಾಡಿದ್ರು ಮತ್ತೆ ಒತ್ತುವಾರಿ ಮಾಡಿದವರಿಗೆ ಕೃಷ್ಣ ಬೈರೇಗೌಡರು ಮತ್ತೆ ಶಾಕ್ ನೀಡಿದ್ದಾರೆ.  ಜಿಬಿಎ ವ್ಯಾಪ್ತಿಯಲ್ಲಿ ‘ಪಾದಚಾರಿ ಮಾರ್ಗಗಳ ಒತ್ತುವರಿ ತೆರವು’, ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಹಾಗೂ ‘ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ’ ಕುರಿತು ನಡೆದ ವರ್ಚುವಲ್ ಸಭೆಯನ್ನ ಉದ್ದೇಶಿಸಿ ಇಂದು ಅವರು ಮಾತನಾಡಿದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ  ವ್ಯಾಪ್ತಿಯಲ್ಲಿ ಈವರೆಗೆ 964 ಕಿ.ಮೀ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗಿದ್ದು, ಬಾಕಿ ಇರುವ ಒತ್ತುವರಿಯನ್ನ ಆಗಸ್ಟ್ ತಿಂಗಳೊಳಗಾಗಿ ತೆರವುಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ  ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: ರೋಗಿಗಳಿಗೆ ಸಿಗುವ ಔಷಧಿಯೂ ಸೇಫ್ ಅಲ್ಲ..! – 5 ಕೋಟಿ ನಕಲಿ ಮೆಡಿಸಿನ್ ಜಪ್ತಿ, ಸಚಿವ ಖಾದರ್ ವಾರ್ನಿಂಗ್ ಏನು?

ನಗರದಲ್ಲಿ ಸುಮಾರು 1,500 ಕಿ.ಮೀ. ಉದ್ದದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ (Encroachment) ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಪೈಕಿ ಈವರೆಗೆ 964 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಗಳನ್ನ ತೆರವುಗೊಳಿಸಲಾಗಿದೆ. ಬಾಕಿ ಇರುವ ಪಾದಚಾರಿ ಮಾರ್ಗಗಳ ಒತ್ತುವರಿಯನ್ನ ಇದೇ ತಿಂಗಳೊಳಗಾಗಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಪರಿಣಾಮಕಾರಿಯಾಗಿ ನಡೆಯಬೇಕು. ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು. ಈ ನಿಟ್ಟಿನಲ್ಲಿ ಸದ್ಯದಲ್ಲಿಯೇ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿಯೇ ಬೀದಿ ಬದಿ ವ್ಯಾಪಾರಿಗಳು ಪುನಃ ಬಂದು ವ್ಯಾಪಾರ ಮುಂದುವರಿಸುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಪುನಃ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುವವರ ಸಾಮಗ್ರಿಗಳನ್ನ ಜಪ್ತಿ ಮಾಡಿ, ಅವರಿಗೆ ದುಪ್ಪಟ್ಟು ದಂಡ ವಿಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Kishor KV