ಮಾರ್ಚ್ 16ರಿಂದ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕೆಲಸ ಸ್ಥಗಿತ – ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ನಿಶ್ಚಿತ

ಮಾರ್ಚ್ 16ರಿಂದ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕೆಲಸ ಸ್ಥಗಿತ – ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ನಿಶ್ಚಿತ

ಮಾರ್ಚ್ 16ರಿಂದ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕೆಲಸ ಸ್ಥಗಿತವಾಗುವ ಸಾಧ್ಯತೆ ದಟ್ಟವಾಗಿದೆ. ಕೆಪಿಟಿಸಿಎಲ್‌ ಮತ್ತು ವಿದ್ಯುತ್‌ ಸರಬರಾಜು ಕಂಪನಿಗಳ(ಎಸ್ಕಾಂ) ಅಧಿಕಾರಿಗಳು, ನೌಕರರ ಬೇಡಿಕೆಗೆ ರಾಜ್ಯ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ. ಆದರೆ, ಮಾರ್ಚ್‌ 15ರಂದು ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ವಿದ್ಯುತ್‌ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಮುಂದಾಗದಿದ್ದರೆ ಮಾರ್ಚ್‌ 16 ರಂದು ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕೆಲಸ ಸ್ಥಗಿತ ಮಾಡಿ ಮುಷ್ಕರ ನಡೆಸಲು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) ನೌಕರರು ನಿರ್ಧರಿಸಿದ್ದಾರೆ.

ಇದನ್ನೂ ಓದಿ:  ಟೋಲ್ ಸಂಗ್ರಹ ಶುರುವಾದ ಮರುದಿನವೇ ಕಿತ್ತೋಯ್ತು ರಸ್ತೆ – ಬೆಂಗಳೂರು ಮೈಸೂರು ಹೆದ್ದಾರಿ ಬಣ್ಣ ಬಯಲು..! 

ಲೈನ್‌ಮ್ಯಾನ್‌ಗಳಿಂದ ಹಿಡಿದು ಇಂಜಿನಿಯರ್‌ಗಳವರೆಗೆ ಸುಮಾರು 60 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಅಡಚಣೆ ಎದುರಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ. ಶೇ. 40% ವೇತನ ಹೆಚ್ಚಳ ಆಗಬೇಕು. 2022ರ ಏಪ್ರಿಲ್‌ 1 ರಿಂದ ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕು. ತಕ್ಷಣವೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿದ್ಯುತ್‌ ಕಂಪನಿಗಳ ಖಾಸಗೀಕರಣ ಉದ್ದೇಶದ ಪ್ರಸ್ತಾವಿತ ಮಸೂದೆಯನ್ನು ಹಿಂಪಡೆಯಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳಲ್ಲಿ ಸುಮಾರು 62 ಸಾವಿರಕ್ಕೂ ಹೆಚ್ಚು ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ನೌಕರರು ಗ್ರಾಹಕರ ದೂರವಾಣಿ ಸಂಪರ್ಕಕ್ಕೆ ಲಭ್ಯವಿರುವುದಿಲ್ಲ. ಏಪ್ರಿಲ್‌ 2022ರಿಂದ ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಹಿಂದಿನ ನಿರ್ಧಾರದ ಪ್ರಕಾರ ನಮ್ಮ ಸಂಬಳವನ್ನು ಶೇ.22ರಷ್ಟುಹೆಚ್ಚಿಸಬೇಕಿತ್ತು. ಈ ಪ್ರಸ್ತಾವನೆಯನ್ನು ಕೆಪಿಟಿಸಿಎಲ್‌ ಮಂಡಳಿಯು ಅನುಮೋದಿಸಿದೆ. ಆದರೆ, ಸರ್ಕಾರ ಅದಕ್ಕೆ ಒಪ್ಪಿಗೆ ನೀಡದೆ ಪ್ರಸ್ತಾವನೆಯನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಯೂನಿಯನ್‌ ಮತ್ತು ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಕೆ.ಬಲರಾಮ್‌ ಹೇಳಿದ್ದಾರೆ.

ಒಂದು ದಿನ ಕೆಪಿಟಿಸಿಎಲ್ ನೌಕರರು ಕೆಲಸ ನಿಲ್ಲಿಸಿದರೆ 1 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗುವ ಸಾಧ್ಯತೆಯಿದೆ. ಒಂದು ದಿನ ವಿದ್ಯುತ್ ಉತ್ಪಾದನೆ ಸ್ಥಗಿತವಾದರೆ ಒಂದು ವಾರ ರಾಜ್ಯಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಈ ಅವ್ಯವಸ್ಥೆ ಸರಿಪಡಿಸಲು 10 ರಿಂದ 15 ದಿನಗಳು ಬೇಕಾಗುತ್ತದೆ.

ಕೆಇಬಿ ಇಂಜಿನಿಯರ್‌ಗಳ ಸಂಘ, ಕೆಇವಿ ಎಸ್ಸಿ, ಎಸ್ಟಿ ನೌಕರರ ಕಲ್ಯಾಣ ಸಂಸ್ಥೆ, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ(ಕವಿಪ್ರನಿನಿ) ಲೆಕ್ಕಾಧಿಕಾರಿಗಳ ಸಂಘ, ಕವಿಪ್ರನಿನಿ ಡಿಪ್ಲೋಮೋ ಇಂಜಿನಿಯರ್‌ಗಳ ಸಂಘ, ಕೆಪಿಟಿಸಿಎಲ್‌ ಮಾಜಿ ನೌಕರರ ಸಂಘ ಸೇರಿದಂತೆ ಕೆಪಿಟಿಸಿಎಲ್‌ನ ನೌಕರರ ಎಲ್ಲಾ ಸಂಘಟನೆಗಳು ಈ ಹೋರಾಟದಲ್ಲಿ ಭಾಗಿಯಾಗುವುದಾಗಿ ಈಗಾಗಲೇ ಪ್ರಕಟಿಸಿವೆ.

suddiyaana