ಕೋಚಿಂಗ್ ಸೆಂಟರ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 23ಕ್ಕೆ ಏರಿಕೆ – 2 ತಿಂಗಳವರೆಗೆ ಪರೀಕ್ಷೆ ಮುಂದೂಡಿಕೆ!

ಕೋಚಿಂಗ್ ಸೆಂಟರ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 23ಕ್ಕೆ ಏರಿಕೆ – 2 ತಿಂಗಳವರೆಗೆ ಪರೀಕ್ಷೆ ಮುಂದೂಡಿಕೆ!

ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಅಲ್ಲಿನ ಜಿಲ್ಲಾಡಳಿತ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಇದೀಗ ಮತ್ತೊಂದು ಕ್ರಮ ಕೈಗೊಂಡಿದ್ದು, ಕೋಚಿಂಗ್ ಸೆಂಟರ್‌ಗಳಲ್ಲಿ ಎರಡು ತಿಂಗಳ ಕಾಲ ಪರೀಕ್ಷೆಗಳನ್ನು ಮುಂದೂಡಲು ನಿರ್ದೇಶನ ನೀಡಿದೆ.

ಕೋಟಾದ ಕೋಚಿಂಗ್‌ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಗಟ್ಟಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಕೋಟಾದ ಪಿಜಿ, ಹಾಸ್ಟೆಲ್‌ಗಳ ಫ್ಯಾನ್‌ಗಳಿಗೆ ಸ್ಪ್ರಿಂಗ್‌ ಅಳವಡಿಸಲು ನಿರ್ದೇಶನ ನೀಡಿತ್ತು. ಇದೀಗ ಜಿಲ್ಲಾಡಳಿತ ಮಾನಸಿಕ ಬೆಂಬಲದ ಅಗತ್ಯವನ್ನು ಉಲ್ಲೇಖಿಸಿ ಎರಡು ತಿಂಗಳ ಕಾಲ ಪರೀಕ್ಷೆಗಳನ್ನು ತಡೆಹಿಡಿದಿದೆ.

ಇದನ್ನೂ ಓದಿ: ಕಾಲೇಜು ಬಳಿಯೇ ಚಾಕು ಇರಿದು ವಿದ್ಯಾರ್ಥಿನಿ ಕಿಡ್ನ್ಯಾಪ್ – ಆಸ್ಪತ್ರೆಗೆ ದಾಖಲಿಸಿದ್ದ ಆರೋಪಿ ಅರೆಸ್ಟ್

“ಅಧ್ಯಯನ/ವಸತಿ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಭದ್ರತೆಯನ್ನು ಒದಗಿಸುವ ಸಲುವಾಗಿ, ಕೋಟಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೋಚಿಂಗ್ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ನಡೆಸಲಾಗುವ ಪರೀಕ್ಷೆಗಳನ್ನು ಮುಂದಿನ ಎರಡು ತಿಂಗಳುಗಳ ಕಾಲ ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

NEET (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಆಕಾಂಕ್ಷಿಯೊಬ್ಬರು ಭಾನುವಾರ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಆದೇಶವು ಹೊರಬಂದಿದ್ದು, ಇದು 23ನೇ ಆತ್ಮಹತ್ಯೆ ಪ್ರಕರಣವಾಗಿದೆ. ಪೊಲೀಸರ ಪ್ರಕಾರ, ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗೆ ಪ್ರವೇಶಕ್ಕಾಗಿ ನೀಟ್‌ಗೆ ತಯಾರಿ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿ ಭಾನುವಾರ ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಆವಿಷ್ಕರ್ ಎಂಬ ವಿದ್ಯಾರ್ಥಿ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾನೆ.

ಈ ತಿಂಗಳ ಆರಂಭದಲ್ಲಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ತನಿಖೆಗಾಗಿ ಸಮಿತಿಯನ್ನು ರಚಿಸಿದ್ದರು, ಅದರ ವರದಿಯನ್ನು ಶೀಘ್ರವಾಗಿ ಸಲ್ಲಿಸುವಂತೆ ಕೇಳಿದ್ದರು.

suddiyaana