ಕೋಳಿ ಕಾಳಗದ ಅಡ್ಡೆ ಮೇಲೆ ರೇಡ್ – ಜೂಜುಕೋರರು ಎಸ್ಕೇಪ್, ಕೋಳಿಗಳನ್ನ ಬಂಧಿಸಿದ ಪೊಲೀಸ್!

ಕೋಳಿ ಕಾಳಗದ ಅಡ್ಡೆ ಮೇಲೆ ರೇಡ್ – ಜೂಜುಕೋರರು ಎಸ್ಕೇಪ್, ಕೋಳಿಗಳನ್ನ ಬಂಧಿಸಿದ ಪೊಲೀಸ್!

ಕೊಪ್ಪಳ : ಕೋಳಿಗಳ ಕಾಳಗ ರಂಗೇರಿತ್ತು. ಮಾಲೀಕರು, ನೋಡುಗರೆಲ್ಲ ನಿಂತು ಶಿಳ್ಳೆ, ಕೇಕೆ ಹಾಕುತ್ತಿದ್ರು. ಯಾವ ಹುಂಜ ಗೆಲ್ಲುತ್ತೆ ಅಂತಾ ಲೆಕ್ಕಾಚಾರ ಹಾಕುವಾಗಲೇ ಪೊಲೀಸರು ಎಂಟ್ರಿ ಕೊಟ್ಟಿದ್ರು. ನೆಗೆದು ನೆಗೆದು ಕಾದಾಡುತ್ತಿದ್ದ ಕೋಳಿಗಳನ್ನ ಬಂಧಿಸಿ ಠಾಣೆಗೆ ಕರೆತಂದಿದ್ರು. ಸಾಲದು ಎಂಬಂತೆ ಸೀದಾ ಸೆಲ್​ಗೇ ಹಾಕಿದ್ರು.

ಪೊಲೀಸರ ಕಣ್ತಪ್ಪಿಸಿ ಜೂಜಾಟ ಆಡುವರರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಜೂಜಾಡುತ್ತಿದ್ದ ಅಡ್ಡೆಗಳ ರೇಡ್ ಮಾಡಿರೋ ಪೊಲೀಸರು ಅಲ್ಲಿದ್ದ ಹುಂಜಗಳನ್ನೇ ಬಂಧಿಸಿರೋ ಅಚ್ಚರಿಯ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಕಾರಟಗಿ ತಾಲೂಕಿನ ಪನ್ನಾಪುರ ಬಳಿಯ ಬಸವಣ್ಣ ಕ್ಯಾಂಪ್‍ನಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಕೋಳಿ ಕಾಳಗ ನಡೆಸಲಾಗುತ್ತಿತ್ತು. ಪಕ್ಕಾ ಮಾಹಿತಿ ಪಡೆದು ಮಂಗಳವಾರ ಸಂಜೆ ಜೂಜು ಅಡ್ಡೆ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ರು. ದಾಳಿ ವೇಳೆ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಬದಲಾಗಿ ಹುಂಜಗಳು ಸಿಕ್ಕಿದ್ದು ಬೈಕ್​ಗಳನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಜಾಲಿ ರೈಡ್ ಹೊರಟ ಮುದ್ದಾದ ಬೆಕ್ಕುಗಳು! – ಬ್ಯಾಗ್ ಮೇಲೆ ಬೆಕ್ಕಿನ ಬ್ಯಾಲೆನ್ಸ್

ದಾಳಿ ವೇಳೆ ಜೂಜುಕೋರರು ತಪ್ಪಿಸಿಕೊಂಡಿದ್ದಾರೆ ಎಂದಿರುವ ಪೊಲೀಸರು ಅಲ್ಲಿದ್ದ ಹುಂಜಗಳನ್ನು ಕರೆತಂದು ಠಾಣೆಯ ಸೆಲ್‌ನಲ್ಲಿ ಇಟ್ಟಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹಬ್ಬಗಳ ಸಂದರ್ಭಗಳಲ್ಲಿ ಹಲವೆಡೆ ಕೋಳಿ ಕಾಳಗ ಆಯೋಜನೆ ಮಾಡಲಾಗುತ್ತೆ. ಕಾದಾಟಕ್ಕೆ ನಿಲ್ಲುವ ಹುಂಜಗಳ ಮೇಲೆ ಲಕ್ಷಾಂತರ ರೂಪಾಯಿ ಜೂಜು ವಹಿವಾಟು ನಡೆಯುತ್ತೆ. ಜೂಜು ವಹಿವಾಟು ನಡೆಯೋದರಿಂದ ಕೋಳಿ ಕಾಳಗವನ್ನ ನಿಷೇಧಿಸಲಾಗಿದೆ. ಆದರೂ ಕೆಲವೊಮ್ಮೆ ರಾಜಕೀಯ ನಾಯಕರೇ ಈ ಕೋಳಿ ಕಾಳಗ ಆಯೋಜನೆ ಮಾಡುತ್ತಾರೆ. ಇದೇ ಕಾರಣಕ್ಕೆ ಪೊಲೀಸರು ಜೂಜುಕೋರರನ್ನ ಬಂಧಿಸದೆ ಹುಂಜ ಮತ್ತು ಬೈಕ್​​ಗಳನ್ನ ಮಾತ್ರ ಜಪ್ತಿ ಮಾಡಿರೋ ಆರೋಪ ಕೇಳಿ ಬಂದಿದೆ. ಅದೇನೇ ಇದ್ದರೂ ಯಾರದ್ದೋ ಕಳ್ಳಾಟಕ್ಕೆ ಕೋಳಿಗಳೂ ಕೂಡ ಠಾಣೆಗೆ ಬರುವಂತಾಗಿದ್ದು ಅಚ್ಚರಿಯೇ ಸರಿ.

suddiyaana