ಕೊಲ್ಲೂರು – ಕೊಡಚಾದ್ರಿಗೆ ಕೇಬಲ್ ಕಾರು -ಕೇಂದ್ರ ಸಾರಿಗೆ ಸಚಿವಾಲಯ ಗ್ರೀನ್ ಸಿಗ್ನಲ್

ಕೊಲ್ಲೂರು – ಕೊಡಚಾದ್ರಿಗೆ ಕೇಬಲ್ ಕಾರು -ಕೇಂದ್ರ ಸಾರಿಗೆ ಸಚಿವಾಲಯ ಗ್ರೀನ್ ಸಿಗ್ನಲ್

ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಿಶ್ವವಿಖ್ಯಾತ ಕೊಡಚಾದ್ರಿ ಬೆಟ್ಟದಿಂದ ಸುಕ್ಷೇತ್ರ ಕೊಲ್ಲೂರಿಗೆ ಕೇಬಲ್ ಕಾರು ಸಂಪರ್ಕ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಕೇಂದ್ರ ಭೂ ಸಾರಿಗೆ ಸಚಿವಾಲಯ ಅಸ್ತು ಅಂದಿದೆ.

ಇದನ್ನೂ ಓದಿ:   ಎವರೆಸ್ಟ್ ಬೇಸ್ ಕ್ಯಾಂಪ್ ಪೂರ್ಣಗೊಳಿಸಿದ 6 ವರ್ಷದ ಬಾಲಕ

ಕೊಡಚಾದ್ರಿಯು ಸೌಪರ್ಣಿಕ ನದಿಯ ತೀರದಲ್ಲಿರುವ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಸ್ಥಳ. ಇಲ್ಲಿರುವ ಸರ್ವಜ್ಞಪೀಠ ದರ್ಶನ ಮಾಡಲು ಅತೀ ಕ್ಲಿಷ್ಟಕರವಾದ ರಸ್ತೆಯಲ್ಲಿ ಸಂಚರಿಸಬೇಕು. ಸುಮಾರು 40 ಕಿಮೀ ಉದ್ದದ ರಸ್ತೆಯ ಪೈಕಿ ಸುಮಾರು 11 ಕಿಮೀ ಉದ್ದದ ಕಡಿದಾದ ರಸ್ತೆಯು ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಗೆ ಒಳಪಡುತ್ತದೆ. ಈ ಪ್ರದೇಶದಲ್ಲಿ ಸಂಚರಿಸುವುದು ಅತೀ ಕ್ಲಿಷ್ಟಕರ, ಅಪಾಯಕಾರಿಯಾಗಿದೆ. ಅಲ್ಲದೇ ಈ ರಸ್ತೆ ಕ್ರಮಿಸಲು 2 ಗಂಟೆ ವ್ಯಯವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಕೊಲ್ಲೂರು ದೇವಾಲಯದಿಂದ ಕೊಡಚಾದ್ರಿಯವರೆಗೆ ಕೇಬಲ್ ಕಾರ್ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಲ್ಲೂರಿನಿಂದ ಕೊಡಚಾದ್ರಿಗೆ ಬರೀ 20 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದೆ.

ಕೊಡಚಾದ್ರಿ ಸಮುದ್ರಮಟ್ಟದಿಂದ ಸುಮಾರು 1,343 ಮೀಟರ್ ಎತ್ತರದಲ್ಲಿದೆ. ಭೂಸಾರಿಗೆ ಸಚಿವಾಲಯದ ಪರ್ವತಮಾಲಾ ಯೋಜನೆಯಡಿ ಕೇಬಲ್ ಕಾರ್ ನಿರ್ಮಾಣವಾಗಲಿದ್ದು, ಡಿಪಿಆರ್ ತಯಾರಿಸಲು ನ್ಯಾಷನಲ್ ಹೈವೇ ಲಾಜಿಸ್ಟಿಕ್ಸ್ ಮ್ಯಾನೇಜ್ ಮೆಂಟ್ ಲಿ. ಸಂಸ್ಥೆ ಜವಾಬ್ದಾರಿ ಹೊತ್ತಿದೆ. ನವದೆಹಲಿಯ ಕೆ ಆ್ಯಂಡ್ ಜೆ ಕನ್ಸಲ್ಟೆನ್ಸಿ ಡಿಪಿಆರ್ ತಯಾರಿಸಲು ಮುಂದಾಗಿದೆ. ಅಲ್ಲದೇ 1 ತಿಂಗಳೊಳಗೆ ಡಿಪಿಆರ್ ತಯಾರಿಸಿ ಮಂಜೂರಾತಿ ಪಡೆದು ಯೋಜನೆಯ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗುವುದು ಎಂದು ಸಚಿವಾಲಯ ಕಾರ್ಯಾದೇಶ ನೀಡಿದೆ.

ಹೇಗೆ ಕಾರ್ಯನಿರ್ವಹಿಸಲಿದೆ ಕೇಬಲ್ ಕಾರ್

ರೋಪ್‌ವೇ ಯೋಜನೆ ಕೇಬಲ್ ಕಾರ್‌ಗಳ ಮೂಲಕ ಗಂಟೆಗೆ ಸುಮಾರು 6,000-8,000 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಗುಡ್ಡಗಾಡು ಪ್ರದೇಶದಲ್ಲಿಯೂ ನೇರ ರೇಖೆಯಲ್ಲಿ ನಿರ್ಮಿಸಬಹುದಾಗಿದೆ. ಇವು ಗಂಟೆಗೆ 15-30 ಕಿ.ಮೀ ವೇಗದಲ್ಲಿ ಸಾಗಬಲ್ಲದು. ರೋಪ್‌ವೇಗಳು ಪ್ರವಾಸೋದ್ಯಮಕ್ಕೆ, ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಕ್ಕೆ ಉತ್ತಮವಾಗಿರುವುದು ಮಾತ್ರವಲ್ಲದೇ ಆಕರ್ಷಕ ಸಾರಿಗೆ ವಿಧಾನವೂ ಆಗಿದೆ.

suddiyaana