2023 ರ ಡಿಸೆಂಬರ್ ನಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆ  ಪ್ರಾರಂಭ!

2023 ರ ಡಿಸೆಂಬರ್ ನಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆ  ಪ್ರಾರಂಭ!

ಕೋಲ್ಕತ್ತಾ: ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆ, ಪೂರ್ವ-ಪಶ್ಚಿಮ ಕಾರಿಡಾರ್ ಯೋಜನೆಯು ಡಿಸೆಂಬರ್ 2023ರ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕೋಲ್ಕತ್ತಾ ಮೆಟ್ರೋ ರೈಲು ನಿಗಮವು ತಿಳಿಸಿದೆ.

ಹೂಗ್ಲಿ ನದಿಯ ಮೂಲಕ ಹಾದು ಹೋಗುವ ನೀರೊಳಗಿನ ಮೆಟ್ರೋ ಸೇವೆಯು ಕೋಲ್ಕತ್ತಾ ಮತ್ತು ಹೌರಾ ನಗರಗಳನ್ನು ಸಂಪರ್ಕಿಸುತ್ತದೆ. ಈ ಯೋಜನೆಯ ಮೂಲಕ ದೇಶದ ಮೊದಲ ಮೆಟ್ರೋ ರೈಲು ಸೇವೆ ಪಡೆದುಕೊಂಡ ಕೋಲ್ಕತ್ತಾ ನಗರಕ್ಕೆ ಈಗ ದೇಶದಲ್ಲಿಯೇ ಮೊದಲ ನೀರೋಳಗಿನ ಮೆಟ್ರೋ ಸೇವೆ ಪಡೆದ ನಗರ ಎಂಬ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದೆ.

ಈ ಕುರಿತು ಕೆಎಂಆರ್‌ಸಿ ಜನರಲ್ ಮ್ಯಾನೇಜರ್ ಶೈಲೇಶ್ ಕುಮಾರ್ ಮಾಹಿತಿ ನೀಡಿದ್ದು, ಭಾರತದಲ್ಲಿ ಮೊದಲ ಬಾರಿಗೆ 1984ರಲ್ಲಿ ಕೊಲ್ಕತ್ತಾ ನಗರದಲ್ಲಿ ಮೆಟ್ರೋ ಸೇವೆ ಆರಂಭಿಸಲಾಗಿತ್ತು. ಈಗ ನೀರೊಳಗಿನ ಮೆಟ್ರೋ ಸೇವೆಯ ಕಾಮಗಾರಿಯ ಮುಕ್ತಾಯವಾಗುವ ಮೂಲಕ ಎರಡು ವಿಶಿಷ್ಟ ಮೂಲಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸಲಿದೆ. ಅತಿ ಕಷ್ಟಕರವಾದ ಈ ಯೋಜನೆಯಲ್ಲಿ ಜರ್ಮನ್ ಮೂಲದ ಯಂತ್ರಗಳೊಂದಿಗೆ ನುರಿತ ವಿದೇಶಿ ತಜ್ಞರ ಸಹಾಯ ಪಡೆಯುವ ಮೂಲಕ ಕಾಮಗಾರಿಗೆ ವೇಗ ನೀಡಲಾಗುತ್ತಿದೆ ಎಂದು ಕೆಎಂಆರ್‌ಸಿ ಅಧಿಕಾರಿ ತಿಳಿಸಿದರು.

ಇದನ್ನೂ ಓದಿ: ಜಗತ್ತಿನಾದ್ಯಂತ ವರ್ಷಕ್ಕೆ 100 ಕೋಟಿ ಟನ್ ಆಹಾರ ವ್ಯರ್ಥ!

ಸುರಂಗವನ್ನು ನಿರ್ಮಿಸಲು ಪ್ರತಿ ಕಿಲೋಮೀಟರ್‌ಗೆ ಸುಮಾರು ₹ 120 ಕೋಟಿ ವೆಚ್ಚವಾಗುತ್ತದೆ. ಹೂಗ್ಲಿ ನದಿಯಲ್ಲಿನ ನೀರಿನ ಆಳದ ಮೇಲೆ ಸುರಂಗ ನಿರ್ಮಿಸಲಾಗುತ್ತಿದ್ದು, ವೆಚ್ಚವು ಪ್ರತಿ ಕಿಲೋಮೀಟರ್‌ಗೆ ಸುಮಾರು 157 ಕೋಟಿಗಳಷ್ಟು ಹೆಚ್ಚಾಗಲಿದೆ. ಈ ಯೋಜನೆಯಿಂದ ಹೌರಾ ಮತ್ತು ಸೀಲ್ದಾ ನಡುವಿನ ಈ ಮೆಟ್ರೋ ಮಾರ್ಗವು ರಸ್ತೆಯ ಮೂಲಕ 1.5 ಗಂಟೆಗಳ ಪ್ರಯಾಣದ ಸಮಯವನ್ನು 40 ನಿಮಿಷಗಳಿಗೆ ಕಡಿತಗೊಳಿಸುವುದರೊಂದಿಗೆ ಜನದಟ್ಟಣೆಯನ್ನು ಕಡಿಮೆಗೊಳಿಸಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೆಲವು ಪುನರ್ವಸತಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಸುರಂಗ ನಿರ್ಮಾಣ ವಿಳಂಬವಾಗಿದೆ ಎಂದು ಮೆಟ್ರೋ ಅಧಿಕಾರಿ ತಿಳಿಸಿದ್ದಾರೆ. ಕೋಲ್ಕತ್ತಾ ಮೆಟ್ರೋ ರೈಲು ನಿಗಮವು ಜರ್ಮನ್ ದೇಶದ ಉಪಕರಣಗಳು ಮತ್ತು ತಜ್ಞರ ಸಹಾಯದಿಂದ ನೀರೊಳಗಿನ ಮೆಟ್ರೋ ಸುರಂಗವನ್ನು ನಿರ್ಮಿಸುವ ಸಾಹಸಮಯ ಕೆಲಸವನ್ನು ಕೈಗೆತ್ತಿಕೊಂಡಿತು. ಪ್ರೇರಣಾ ಮತ್ತು ರಚನಾ ಎಂಬ ಹೆಸರಿನ ಎರಡು ಜರ್ಮನ್ ನಿರ್ಮಿತ ಸುರಂಗ ಕೊರೆಯುವ ಯಂತ್ರಗಳನ್ನು ಕಾಮಗಾರಿಯಲ್ಲಿ ಬಳಕೆ ಮಾಡಲಾಗುತ್ತಿದೆ. ರಾಷ್ಟ್ರೀಯ ಅಗ್ನಿಶಾಮಕ ಸಂರಕ್ಷಣಾ ಸಂಘ ಮಾರ್ಗಸೂಚಿಗಳಿಗೆ ಅನುಸಾರವಾಗಿ ಸುರಂಗದೊಳಗೆ 760 ಮೀಟರ್ ಉದ್ದದ ತುರ್ತು ನಿರ್ಗಮನದ ವ್ಯವಸ್ಥೆ ಮಾಡಲಾಗುತ್ತಿದೆ.

ನೀರಿನ ಒಳಹರಿವು ಮತ್ತು ಸುರಂಗದಲ್ಲಿ ಸೋರಿಕೆಯನ್ನು ತಡೆಗಟ್ಟಲು ಹಲವಾರು ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾರುಬೂದಿ ಮತ್ತು ಮೈಕ್ರೋ ಸಿಲಿಕಾದಿಂದ ಕೂಡಿದ ಕಾಂಕ್ರೀಟ್ ಮಿಶ್ರಣಗಳನ್ನು ನೀರಿನ ಪ್ರವೇಶ ಸಾಧ್ಯತೆಯನ್ನು ಕಡಿಮೆ ಮಾಡಲು ಬಳಸಲಾಗಿದೆ. ವಿಭಾಗಗಳು ಮತ್ತು ಸುರಂಗ ಕೊರೆಯುವ ಯಂತ್ರದ ಶೀಲ್ಡ್ ನಡುವಿನ ಜಾಗವನ್ನು ತುಂಬುವ ಸಂಕೀರ್ಣವಾದ ಗ್ರೌಟಿಂಗ್ ಪ್ರಕ್ರಿಯೆಯನ್ನು ಬಳಸಿಕೊಂಡು ಭಾಗಗಳನ್ನು ಮುಚ್ಚಲಾಗುತ್ತದೆ. ನೀರು, ಸಿಮೆಂಟ್ ಮತ್ತು ಬೆಂಟೋನೈಟ್ ಮತ್ತು ಸೋಡಿಯಂ ಸಿಲಿಕೇಟ್‌ನಿಂದ ಮಾಡಿದ ಸ್ಲರಿ ಸೇರಿದಂತೆ ಎರಡು-ಘಟಕ ಗ್ರೌಟ್ ಮಿಶ್ರಣವನ್ನು ಅಂತರವನ್ನು ತುಂಬಲು ಬಳಸಲಾಗುತ್ತಿದೆ. ಲೈನರ್ ವಿಭಾಗಗಳನ್ನು ಜರ್ಮನ್ ನಿರ್ಮಿತ ನಿಯೋಪ್ರೆನ್ ಮತ್ತು ಹೈಡ್ರೋಫಿಲಿಕ್ ಸಹಾಯಕ ಗ್ಯಾಸ್ಕೆಟ್‌ಗಳೊಂದಿಗೆ ಅಳವಡಿಸಲಾಗಿದೆ, ಇದು ಸೆಗ್ಮೆಂಟಲ್ ಕೀಲುಗಳ ಮೂಲಕ ಒಳಹರಿವು ತಡೆಯಲು ನೀರಿನೊಂದಿಗೆ ಸಂಪರ್ಕದಲ್ಲಿರುವಾಗ ವಿಸ್ತರಿಸುತ್ತದೆ.

suddiyaana