ಬ್ಯಾಂಕಾಕ್​ಗೆ ಹೋಗಲು ಇನ್ಮುಂದೆ ವಿಮಾನ ಏರಬೇಕಿಲ್ಲ – ಸಂಚಾರಕ್ಕೆಂದೇ ಸಿದ್ಧವಾಗುತ್ತಿದೆ ಹೆದ್ದಾರಿ!

ಬ್ಯಾಂಕಾಕ್​ಗೆ  ಹೋಗಲು ಇನ್ಮುಂದೆ ವಿಮಾನ ಏರಬೇಕಿಲ್ಲ – ಸಂಚಾರಕ್ಕೆಂದೇ ಸಿದ್ಧವಾಗುತ್ತಿದೆ ಹೆದ್ದಾರಿ!

ಬ್ಯಾಂಕಾಕ್ ಅತ್ಯದ್ಭುತವಾದ ನಗರ. ನಮ್ಮಲ್ಲಿ ಬಹುತೇಕರು ವಿದೇಶಕ್ಕೆ ಹಾರಲು ಟ್ರಿಪ್ ಪ್ಲ್ಯಾನ್ ಮಾಡಿದ್ದರೆ ಬ್ಯಾಂಕಾಕ್​ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕಂದರೆ ಅಲ್ಲಿನ ಸೌಂದರ್ಯ ರಾಶಿಯೇ ಹಾಗಿದೆ. ರೋಮಾಂಚಕಾರಿ ಅನುಭವ ಉಂಟು ಮಾಡುತ್ತದೆ. ಜೊತೆಗೆ ಯುವಕರಿಗಂತೂ ಫೇವರಿಟ್ ಸ್ಪಾಟ್! ಥೈಲ್ಯಾಂಡ್ ದೇಶದ ರಾಜಧಾನಿ ಬ್ಯಾಂಕಾಕ್‌ಗೆ ಹೋಗಬೇಕು ಎಂದರೆ ವಿಮಾನ ಏರಲೇ ಬೇಕು. ಆದ್ರೆ, ಇನ್ನು ಕೆಲವೇ ವರ್ಷಗಳಲ್ಲಿ ಭಾರತದಿಂದ ಬ್ಯಾಂಕಾಕ್ ದೇಶಕ್ಕೆ ಹೆದ್ದಾರಿ ಸಿದ್ದವಾಗಲಿದೆ. ರಸ್ತೆ ಮಾರ್ಗದಲ್ಲೇ ಬ್ಯಾಂಕಾಕ್‌ಗೆ ಹೋಗುವ ಅವಕಾಶ ಸಿಗಲಿದೆ.

ಇದನ್ನೂ ಓದಿ : ವಿಶ್ವದ ಮೊಟ್ಟ ಮೊದಲ ನೀರು, ಚಹಾ, ಕಾಫಿ, ಬಿಸ್ಕೆಟ್ ಎಟಿಎಂ – ಗ್ರಾಹಕ ಸ್ನೇಹಿ ಮಶೀನ್ ಹೈದರಾಬಾದ್‌ನಲ್ಲಿ ಆರಂಭ

ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ ಕೋಲ್ಕತ್ತಾದಿಂದ ಬ್ಯಾಂಕಾಕ್‌ ನಗರಕ್ಕೆ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಬಂಗಾಳ ಕೊಲ್ಲಿ ಭಾಗದಲ್ಲಿ ಬಹು ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದ ಭಾಗವಾಗಿ ಈ ಹೆದ್ದಾರಿಯ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳ ಒಳಗೆ ಈ ಹೆದ್ದಾರಿ ಸಿದ್ಧವಾಗಲಿದೆ. ಬಂಗಾಳ ಕೊಲ್ಲಿ ಭಾಗದ ಹಲವು ದೇಶಗಳ ಹಣಕಾಸು ಸಚಿವರು, ಉದ್ಯಮಿಗಳು ಹಾಗೂ ವಿದೇಶಾಂಗ ಸಚಿವಾಲಯಗಳ ಜಂಟಿ ಸಹಯೋಗದೊಂದಿಗೆ ಈ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ. ಹೆದ್ದಾರಿ ನಿರ್ಮಾಣದ ಪ್ರಸ್ತಾಪದ ಅನ್ವಯ ಈ ಹೆದ್ದಾರಿ ನಿರ್ಮಾಣ ಕಾರ್ಯ ಮೊದಲಿಗೆ ಬ್ಯಾಂಕಾಕ್ ನಗರದಿಂದ ಆರಂಭ ಆಗಲಿದೆ. ಥೈಲ್ಯಾಂಡ್‌ನ ಸುಖೋತಾಯ್, ಮಯಿಸೊಟ್ ನಗರಗಳನ್ನು ದಾಟಿ ಮಯನ್ಮಾರ್ ದೇಶಕ್ಕೆ ಎಂಟ್ರಿ ಕೊಡಲಿದೆ. ಮಯನ್ಮಾರ್ ದೇಶದ ಯಾಂಗೋನ್, ಮಂಡಾಲಯ್ ನಗರಗಳನ್ನು ಹಾದು ಭಾರತ ದೇಶಕ್ಕೆ ಹೆದ್ದಾರಿ ಪ್ರವೇಶ ಪಡೆಯಲಿದೆ. ಭಾರತದಲ್ಲಿ ಈಶಾನ್ಯ ರಾಜ್ಯಗಳ ಪ್ರಮುಖ ನಗರಗಳಾದ ಗುವಾಹಟಿ, ಕೋಹಿಮಾಗಳನ್ನು ದಾಟಿದ ಬಳಿಕ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ಮಾರ್ಗವಾಗಿ ಕೋಲ್ಕತ್ತಾ ಮಹಾ ನಗರದಲ್ಲಿ ಈ ಹೆದ್ದಾರಿ ಅಂತ್ಯಗೊಳ್ಳಲಿದೆ.

ಈ ಹೆದ್ದಾರಿಯ ಒಟ್ಟು ಉದ್ದ 2,800 ಕಿ. ಮೀ. ಇರಲಿದೆ. ಈ ಹೆದ್ದಾರಿಯ ಅತಿ ಹೆಚ್ಚು ದೂರ ಭಾರತದಲ್ಲೇ ಕ್ರಮಿಸಿದರೆ, ಥೈಲ್ಯಾಂಡ್ ಹಾಗೂ ಮಯನ್ಮಾರ್ ದೇಶಗಳಲ್ಲಿ ಕಡಿಮೆ ದೂರ ಇರಲಿದೆ. ಈಗಾಗಲೇ ಥೈಲ್ಯಾಂಡ್ ದೇಶದ ಭಾಗಕ್ಕೆ ಬರುವ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಥೈಲ್ಯಾಂಡ್‌ನ ವಿದೇಶಾಂಗ ಸಚಿವಾಲಯ ಸಹಾಯಕ ಸಚಿವ ವಿಜ್ವತ್ ಇಸ್ರಬಕ್ಡಿ ತಿಳಿಸಿದ್ದಾರೆ. ಇನ್ನು ಮಯನ್ಮಾರ್ ದೇಶದಲ್ಲಿ ಮುಂದಿನ ಮೂರು ವರ್ಷಗಳ ಒಳಗೆ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಆ ದೇಶದ ಹಣಕಾಸು ಸಚಿವ ಔಂಗ್ ನೈಂಗ್ ತಿಳಿಸಿದ್ದಾರೆ.

ಮೂರು ದೇಶಗಳಲ್ಲಿ ಹಾದು ಹೋಗುವ ಈ ಹೆದ್ದಾರಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಬ್ಯಾಂಕಾಕ್‌ನಲ್ಲಿ ಅರಂಭವಾಗಿ ಕೋಲ್ಕತ್ತಾದಲ್ಲಿ ಅಂತ್ಯಗೊಳ್ಳಲಿದೆ ಎಂದು ಥೈಲ್ಯಾಂಡ್‌ನ ಸಚಿವರು ಮಾಹಿತಿ ನೀಡಿದ್ದಾರೆ. ಥೈಲ್ಯಾಂಡ್‌ ದೇಶದಲ್ಲಿ ಹಾದು ಹೋಗುವ ಹೆದ್ದಾರಿ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಭಾರತ ಹಾಗೂ ಮಯನ್ಮಾರ್ ದೇಶದ ಹೆದ್ದಾರಿ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಲಿ ಎಂದು ಥೈಲ್ಯಾಂಡ್ ಸರ್ಕಾರ ಕಾಯುತ್ತಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಭಾರತದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಶಶಿ ಪಂಜಾ, ಆದಷ್ಟು ಬೇಗ ಭಾರತದಲ್ಲೂ ಹೆದ್ದಾರಿ ಕಾಮಗಾರಿ ಪೂರ್ಣವಾಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಿಂದ ಕೋಲ್ಕತ್ತಾ 1,900 ಕಿ. ಮೀ. ದೂರದಲ್ಲಿ ಇದ್ದು, ರಸ್ತೆ ಮಾರ್ಗವಾಗಿ ತಲುಪಲು ಕನಿಷ್ಟ 35 ಗಂಟೆಗಳಾದರೂ ಬೇಕು. ಇನ್ನು ಕೋಲ್ಕತ್ತಾದಿಂದ ಬ್ಯಾಂಕಾಕ್‌ಗೆ 2800 ಕಿ. ಮೀ. ಇರುವ ಕಾರಣ 48 ಗಂಟೆಗಳ ಕಾಲ ಬೇಕಾಗುತ್ತದೆ. ಒಟ್ಟಾರೆ ಹೇಳೋದಾದ್ರೆ, ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸಿದರೆ ಗುರಿ ತಲುಪಲು ಕನಿಷ್ಟ 4 ದಿನಗಳಾದರೂ ಬೇಕಾಗುತ್ತದೆ! ಆದರೆ ವಿಮಾನದಲ್ಲಿ ಪ್ರಯಾಣಿಸಿದರೆ ಕೇವಲ 4 ಗಂಟೆಗಳ ಅವಧಿಯಲ್ಲೇ ಬ್ಯಾಂಕಾಕ್‌ ತಲುಪಬಹುದು. ಇಷ್ಟಾದರೂ ಕೂಡಾ ಲಾಂಗ್ ರೈಡ್ ಬೈಕ್ ಪ್ರಿಯರು ಹಾಗೂ ದೂರದ ಊರುಗಳಿಗೆ ಕಾರ್ ಓಡಿಸುವ ಆಸೆ ಇರುವ ಯುವಕರು ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುವ ಸಾಹಸಕ್ಕೆ ಕೈ ಹಾಕಬಹುದು.

suddiyaana