ದಾರಿ ತಪ್ಪಿ ಅಳುತ್ತಾ ನಿಂತಿದ್ದ ವಿದ್ಯಾರ್ಥಿನಿ – ಝೀರೋ ಟ್ರಾಫಿಕ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದ ಪೊಲೀಸ್!

ದಾರಿ ತಪ್ಪಿ ಅಳುತ್ತಾ ನಿಂತಿದ್ದ ವಿದ್ಯಾರ್ಥಿನಿ – ಝೀರೋ ಟ್ರಾಫಿಕ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದ ಪೊಲೀಸ್!

ಸಾಮಾನ್ಯವಾಗಿ ಕೇವಲ ವಿಐಪಿಗಳಿಗೆ, ರಾಜಕಾರಣಿಗಳಿಗೆ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಗ್ರೀನ್​ ಕಾರಿಡಾರ್​ ಅಥವಾ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಕೊಲ್ಕತ್ತಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯನ್ನು ಝೀರೋ ಟ್ರಾಫಿಕ್ ಮುಖಾಂತರ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಹೌದು, ಹತ್ತನೇ ತರಗತಿ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿ ದಾರಿ ತಪ್ಪಿದ್ದಾಳೆ. ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾಧ್ಯವಾಗದೆ ಅಳುತ್ತಾ ನಿಂತಿದ್ದಳು. ಇದನ್ನು ಕಂಡ ಪೊಲೀಸ್​ ಇನ್ಸ್‌ಪೆಕ್ಟರ್ ವಿದ್ಯಾರ್ಥಿನಿಯನ್ನು ತಮ್ಮ ವಾಹನದಲ್ಲಿ ಝೀರೋ ಟ್ರಾಫಿಕ್ ಮುಖಾಂತರ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದಾರೆ. ಪೊಲೀಸ್ ಅಧಿಕಾರಿಯ ಹೃದಯಸ್ಪರ್ಶಿ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಟ್ವಿಟ್ವರ್ ದೊರೆ – ಎಲಾನ್ ಮಸ್ಕ್ ಮತ್ತೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿ

ಕೊಲ್ಕತ್ತಾ ಪೊಲೀಸರು ಅಧಿಕೃತ ಫೇಸ್‌ಬುಕ್ ಪೇಜ್​ನಲ್ಲಿ ಈ ಘಟನೆ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದೆ. ಹೌರಾ ಬ್ರಿಡ್ಜ್ ಟ್ರಾಫಿಕ್ ಇನ್ಸ್‌ಪೆಕ್ಟರ್ ಸೌವಿಕ್ ಚಕ್ರವರ್ತಿ ರಾಜಾ ಕತ್ರಾ ಬಳಿಯ ಸ್ಟ್ರಾಂಡ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಬಾಲಕಿಯೊಬ್ಬಳು ಶಾಲಾ ಸಮವಸ್ತ್ರದಲ್ಲಿ ಅಳುತ್ತಾ ಸಹಾಯ ಕೇಳುತ್ತಿದ್ದಳು. ಇದನ್ನು ಕಂಡ  ಚಕ್ರವರ್ತಿ ಬಾಲಕಿ ಬಳಿ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ತನ್ನ ಮನೆಯವರು ಹತ್ತಿರದ ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ಹೋಗಿದ್ದಾರೆ. ಹಾಗಾಗಿ ತಾನು ಒಬ್ಬಳೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದೇನೆ. ಆದರೆ ದಾರಿ ತಪ್ಪಿ ಬೇರೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದೇನೆ. ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗದಿದ್ದರೆ ಒಳಗೆ ಸೇರಿಸುವುದಿಲ್ಲ. ಇದರಿಂದ ತನ್ನ ಒಂದು ವರ್ಷದ ಓದು ವ್ಯರ್ಥವಾಗುತ್ತದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ವಿದ್ಯಾರ್ಥಿನಿಯ ಮಾತು ಕೇಳಿ ಮರುಗಿದ ಚಕ್ರವರ್ತಿ​ ಆಕೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೂಡಲೇ ಆಕೆಯನ್ನು ತಮ್ಮ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡಿದ್ದಾರೆ. ಅಲ್ಲದೆ ಸಂಚಾರ ಪೊಲೀಸ್ ಕಂಟ್ರೋಲ್​ ರೂಮ್​ ಸಂಪರ್ಕಿಸಿ ಗ್ರೀನ್ ಕಾರಿಡಾರ್ ಅಥವಾ ಸಿಗ್ನಲ್ ರಹಿತ ವ್ಯವಸ್ಥೆ ಮಾಡಿಕೊಂಡು 11.30ಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ವಾಹನ ಪರೀಕ್ಷಾ ಕೇಂದ್ರಕ್ಕೆ ಬರುವ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ತೆರೆಯುತ್ತಿದ್ದರಿಂದ ಬಾಲಕಿ ಖುಷಿಯಿಂದ ಪೊಲೀಸ್​ಗೆ ಧನ್ಯವಾದ ತಿಳಿಸಿ ಹೋಗಿದ್ದಾಳೆ.

ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಭವಿಷ್ಯಕ್ಕೆ ತೊಂದರೆಯಾಗುವ ಭೀತಿಯಲ್ಲಿದ್ದ ವಿದ್ಯಾರ್ಥಿನಿಗಾಗಿ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ಮಾಡುವ ಮೂಲಕ ಸ್ಪಂದಿಸಿದ ಪೊಲೀಸ್​ ಅಧಿಕಾರಿಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

suddiyaana