ಐಪಿಎಲ್‌ ನಲ್ಲಿ 3ನೇ ಬಾರಿಗೆ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!

ಐಪಿಎಲ್‌ ನಲ್ಲಿ 3ನೇ ಬಾರಿಗೆ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!

ಸನ್​ರೈಸರ್ಸ್​ ಹೈದ್ರಾಬಾದ್ ಹಾಗೂ ಕೆಕೆಆರ್​ ನಡುವೆ ನಡೆದ ಫೈನಲ್​ ಫೈಟ್​ನಲ್ಲಿ ನಲ್ಲಿ ಕೋಲ್ಕತ್ತಾ ಅಮೋಘ ಗೆಲುವು ಸಾಧಿಸಿದ್ದು,​ ಐಪಿಎಲ್​​ ಕಿರೀಟಕ್ಕೆ ಮುತ್ತಿಕ್ಕಿದೆ. 3ನೇ ಬಾರಿ ಐಪಿಎಲ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

ಇದನ್ನೂ ಓದಿ: ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರಿಗೆ ನಿರ್ಬಂಧ – ಕಾರಣವೇನು ಗೊತ್ತಾ?

ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತ್ತು. ಅಲ್ಪ ಮೊತ್ತ ಗುರಿ ಪಡೆದ ಕೆಕೆಆರ್‌ ಕೇವಲ 10.3 ಓವರ್‌ಗಳಲ್ಲೇ 114 ರನ್‌ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಚೇಸಿಂಗ್‌ ಆರಂಭಿಸಿದ ಕೋಲ್ಕತ್ತಾ ನೈಟ್‌ಡೈಡರ್ಸ್‌ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 11 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರೂ ಹೈದರಾಬಾದ್‌ ಬೌಲರ್‌ಗಳನ್ನ ಹಿಗ್ಗಾಮುಗ್ಗ ದಂಡಿಸಿದರು. ವೆಂಕಟೇಶ್‌ ಅಯ್ಯರ್‌ 26 ಎಸೆತಗಳಲ್ಲಿ ಅಜೇಯ 52 ರನ್‌ (3 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ರೆಹಮಾನುಲ್ಲಾ ಗುರ್ಬಾಝ್‌ 32 ಎಸೆತಗಳಲ್ಲಿ 39 ರನ್‌ ಚಚ್ಚಿದರು. ಸುನೀಲ್‌ ನರೇನ್‌ 6 ರನ್‌ ಗಳಿಸಿ ಔಟಾದ್ರೆ, ಶ್ರೇಯಸ್‌ ಅಯ್ಯರ್‌ 6 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ 18.3 ಓವರ್‌ಗಳಲ್ಲೇ 113 ರನ್‌ಗಳಿಗೆ ಆಲೌಟ್‌ ಆಗಿತ್ತು. ಕ್ವಾಲಿಫೈಯರ್‌ 1ನಲ್ಲಿ ಕೋಲ್ಕತ್ತಾ ವಿರುದ್ಧ ಹೀನಾಯ ಸೋಲು ಕಂಡಿದ್ದ ಹೈದರಾಬಾದ್‌ ತಂಡವಿಂದು ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿತ್ತು. ಆದ್ರೆ ಮೊದಲ ಓವರ್‌ನಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು.

ಸ್ಫೋಟಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ 2 ರನ್‌ಗಳಿಗೆ ಔಟಾದರೆ ಟ್ರಾವಿಸ್‌ ಹೆಡ್‌ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ರಾಹುಲ್‌ ತ್ರಿಪಾಠಿ, ಏಡನ್‌ ಮಾರ್ಕ್ರಮ್‌, ನಿತೀಶ್‌ ಕುಮಾರ್‌ ಸೇರಿದಂತೆ ಇತರ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು.

ಅಭಿಷೇಕ್‌ ಕೇವಲ 2 ರನ್‌ ಗಳಿಸಿದ್ರೆ, ತ್ರಿಪಾಠಿ 9 ರನ್‌, ಮಾರ್ಕ್ರಮ್‌ 20 ರನ್‌, ನಿತೀಶ್‌ ಕುಮಾರ್‌ ರೆಡ್ಡಿ 13 ರನ್‌, ಹೆನ್ರಿಚ್‌ ಕ್ಲಾಸೆನ್‌ 16 ರನ್‌, ಶಹಬಾಜ್‌ ಅಹ್ಮದ್‌ 8 ರನ್‌, ಅಬ್ದುಲ್‌ ಸಮದ್‌, ಜಯದೇವ್‌ ಉನದ್ಕಟ್‌ ತಲಾ 4 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರೆ ಪ್ಯಾಟ್‌ ಕಮ್ಮಿನ್ಸ್‌ 19 ಎಸೆತಗಳಲ್ಲಿ 24 ರನ್‌ಗಳಿಸಿ ಔಟಾದರು. ಅಂತಿಮವಾಗಿ ಹೈದರಾಬಾದ್‌ ತಂಡ 113 ರನ್‌ಗಳಿಗೆ ಆಲೌಟ್‌ ಆಯಿತು.

ಕೆಕೆಆರ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆಂಡ್ರೆ ರಸ್ಸೆಲ್‌ 3 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌, ಹರ್ಷಿತ್‌ ರಾಣಾ, ತಲಾ 2 ವಿಕೆಟ್‌, ವರುಣ್‌ ಚಕ್ರವರ್ತಿ, ವೈಭವ್‌ ಅರೋರಾ, ಸುನೀಲ್‌ ನರೇನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್‌ ಗಂಭೀರ್‌ ಈ ಬಾರಿ ತಂಡದ ಕೋಚ್‌ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ.

 

Shwetha M