ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ – ಮ್ಯಾಚ್ ಕ್ಯಾನ್ಸಲ್ ಆದ್ರೆ ಯಾರಿಗೆ ಲಾಭ?

ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ – ಮ್ಯಾಚ್ ಕ್ಯಾನ್ಸಲ್ ಆದ್ರೆ ಯಾರಿಗೆ ಲಾಭ?

18ನೇ ಸೀಸನ್​ನ ಮೊದಲ ಪಂದ್ಯಕ್ಕೆ ಬೆಂಗಳೂರು ಮತ್ತು ಕೊಲ್ಕತ್ತಾ ಟೀಮ್​ಗಳು ರೆಡಿಯಾಗಿವೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಕಲ ಸಿದ್ಧತೆಗಳೂ ನಡೆದಿದ್ದು ಉದ್ಘಾಟನಾ ಪಂದ್ಯದಲ್ಲಿ ಬಾಲಿವುಡ್​​ನ ಸ್ಟಾರ್ಸ್ ದಂಡೇ ಇರಲಿದೆ. ಮೊದಲ ಪಂದ್ಯದಲ್ಲೇ ಗೆದ್ದು ಟೂರ್ನಿ ಶುಭಾರಂಭಕ್ಕೆ ಎರಡೂ ತಂಡಗಳೂ ಕಾಯ್ತಿವೆ. ಬಟ್ ಮಳೆ ಕಣ್ಣಾಮುಚ್ಚಾಲೆ ನೋಡಿದ್ರೆ ಮ್ಯಾಚ್ ನಡೆಯೋದೇ ಡೌಟಿದೆ.

ಇದನ್ನೂ ಓದಿ : RCB ಟಿಕೆಟ್ ಇಷ್ಟೊಂದು ಕಾಸ್ಟ್ಲಿ – ಫ್ಯಾನ್ಸ್ ನಿಷ್ಠೆಯೇ ಬಂಡವಾಳವಾಯ್ತಾ?

ಐಪಿಎಲ್ ಉದ್ಘಾಟನಾ ಪಂದ್ಯದ ಆರಂಭಕ್ಕೂ ಮುನ್ನವೇ ಮಳೆ ಭೀತಿ ಕಾಡ್ತಿದೆ. ಶನಿವಾರ ಕೋಲ್ಕತ್ತಾದಲ್ಲಿ  ಮಳೆಯಾಗುವ ಸೂಚನೆಗಳಿವೆ. ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಸರಣದಿಂದಾಗಿ ಮಾರ್ಚ್ 22 ರವರೆಗೆ ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಒಂದು ವೇಳೆ ಮೊದಲ ಪಂದ್ಯದಲ್ಲಿ ಮಳೆಯಾದರೆ ಕ್ರಿಕೆಟ್‌ ಪ್ರೇಮಿಗಳಿಗೆ ಭಾರೀ ನಿರಾಸೆಯಾಗಲಿದೆ. ಅಲ್ದೇ ಕಳೆದ ಎರಡು ದಿನಗಳಿಂದ ಮಳೆಯಿಂದಾಗಿ ಕೋಲ್ಕತ್ತಾ ಮತ್ತು ಬೆಂಗಳೂರು ಆಟಗಾರರ ಅಭ್ಯಾಸಕ್ಕೂ ಅಡ್ಡಿಯಾಗಿದೆ. ಹೀಗಾಗಿ ಮೈದಾನವನ್ನು ಪ್ಲಾಸ್ಟಿಕ್​ ಕವರ್​ಗಳಿಂದ ಕವರ್​ ಮಾಡಲಾಗಿದೆ. ಹಾಗೇನಾದ್ರೂ ಮೊದಲ ಪಂದ್ಯವು ಮಳೆಯಿಂದ ರದ್ದಾದರೆ ಎರಡೂ ತಂಡಗಳಿಗೆ ಒಂದು ಪಾಯಿಂಟ್ ಸಿಗುವ ಸಾಧ್ಯತೆ ಇದೆ.

ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನ್ನಿಂಗ್ಸ್ ಆರಂಭಿಸಿದರೆ, ನಾಯಕ ರಜತ್ ಪಾಟಿದಾರ್ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟ್ ಬೀಸಲಿದ್ದು, ಐದನೇ ಕ್ರಮಾಂಕದಲ್ಲಿ ಬರುವ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಹಾಗೂ ಫಿನಿಷರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆರನೇ ಕ್ರಮಾಂಕಕ್ಕೆ ಪೈಪೋಟಿ ಇದ್ದು, ಜಾಕೋಬ್ ಬೆಥೆಲ್ ಅಥವಾ ಟಿಮ್ ಡೇವಿಡ್ ಅವರಲ್ಲಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಪ್ರಶ್ನೆಯಾಗಿದೆ. ಇನ್ನು ಸ್ಪಿನ್ ವಿಭಾಗದಲ್ಲಿ ಆರ್​ಸಿಬಿ ಸ್ವಲ್ಪ ವೀಕ್ ಅನ್ನಿಸಿದ್ರೂ ಸ್ಪಿನ್ ಆಲ್‌ರೌಂಡರ್ ಆಗಿ ಕೃನಲ್ ಪಾಂಡ್ಯರನ್ನು ಆಡಿಸುವುದು ಖಚಿತ. ಅವರೊಂದಿಗೆ ಸುಯಾಶ್ ಶರ್ಮಾ ಅಥವಾ ಸ್ವಪ್ನಿಲ್ ಸಿಂಗ್ ಇರಲಿದ್ದಾರೆ. ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್, ಆಸ್ಟ್ರೇಲಿಯಾದ ಅನುಭವಿ ಜೋಶ್ ಹ್ಯಾಜಲ್‌ವುಡ್ ಹಾಗೂ ಯಶ್ ದಯಾಳ್ ಮುನ್ನಡೆಸುವುದು ಖಚಿತ. ರಸಿಕ್ ಸಲಾಂ ದಾರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಳ್ಳಬಹುದು.  ಇವರ ಜೊತೆಗೆ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಕೂಡ ಇದ್ದಾರೆ. ಆದ್ರೆ ಅವ್ರಿಗೆ ಎಷ್ಟು ಅವಕಾಶಗಳು ಸಿಗುತ್ತವೆ ಎಂದು ಹೇಳುವುದು ಕಷ್ಟ.

ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಸುನಿಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಕೆಕೆಆರ್ ಪರ ಆರಂಭಿಕರಾಗಿ ಆಡಬಹುದು. ಕಳೆದ ಕೆಲವು ವರ್ಷಗಳಿಂದ ಕೆಕೆಆರ್ ಪರ ಆರಂಭಿಕ ಆಟಗಾರನಾಗಿ ನರೈನ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಕ್ವಿಂಟನ್ ಡಿ ಕಾಕ್ ಈ ವರ್ಷವಷ್ಟೇ ಕೆಕೆಆರ್ ಸೇರಿದ್ದಾರೆ. ಈ ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳು ಈ ವರ್ಷ ಕೆಕೆಆರ್ ಪರ ಆರಂಭಿಕರಾಗಿ ಆಡಲಿದ್ದಾರೆ. ನಾಯಕ ಅಜಿಂಕ್ಯ ರಹಾನೆ ಮೂರನೇ ಕ್ರಮಾಂಕದಲ್ಲಿ ಆಡಬಹುದು. ವೆಂಕಟೇಶ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದು, ಕೆಳ ಮಧ್ಯಮ ಕ್ರಮಾಂಕದಲ್ಲಿ ಅಂಗ್‌ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್ ಮತ್ತು ರಮಣದೀಪ್ ಸಿಂಗ್ ಬ್ಯಾಟ್ ಬೀಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಆಡುವುದು ಖಚಿತ. ವೇಗದ ಬೌಲರ್​ಗಳಾಗಿ ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾಗೆ ಅವಕಾಶ ಸಿಗುವ ನಿರೀಕ್ಷೆಯಿದೆ.

2008 ಬಳಿಕ ಇದೇ ಮೊದಲ ಬಾರಿಗೆ ಕೆಕೆಆರ್ ಮತ್ತು ಆರ್ ಸಿಬಿ ತಂಡಗಳು ಮತ್ತೊಮ್ಮೆ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗ್ತಿವೆ. ಎರಡೂ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 35 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಕೋಲ್ಕತ್ತಾ 21 ಪಂದ್ಯಗಳಲ್ಲಿ ಗೆದ್ದಿದ್ದರೆ, ಬೆಂಗಳೂರು 14 ಪಂದ್ಯಗಳಲ್ಲಿ ಗೆದ್ದಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಆಡಿದ 4 ಪಂದ್ಯಗಳಲ್ಲೂ ಕೋಲ್ಕತ್ತಾ ತಂಡ, ಆರ್​ಸಿಬಿ ತಂಡವನ್ನು ಸೋಲಿಸಿದೆ. ಐಪಿಎಲ್​ ಇತಿಹಾಸದ ಮುಖಾಮುಖಿಯಲ್ಲಿ ಕೆಕೆಆರ್​ ಮೇಲುಗೈ ಸಾಧಿಸಿದ್ರೆ ಆರ್​​ಸಿಬಿ ಹಿನ್ನಡೆ ಅನುಭವಿಸಿರೋದೆ ಹೆಚ್ಚು. ಇದೇ ಕಾರಣಕ್ಕೆ ಕೆಕೆಆರ್​ ವಿರುದ್ಧ ಪಂದ್ಯ ಆರ್​​ಸಿಬಿ ಪಾಲಿಗೆ ಪ್ರತಿಷ್ಟೆಯ ಸಮರವಾಗಿ ಮಾರ್ಪಟ್ಟಿದೆ. ರಜತ್ ಪಾಟಿದರ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಆರ್​ಸಿಬಿ, ರಹಾನೆ ನಾಯಕತ್ವದ ಕೆಕೆಆರ್ ವಿರುದ್ಧದ ಸೋಲಿನ ಸರಣಿಗೆ ಬ್ರೇಕ್ ಹಾಕಬೇಕಿದೆ.

Shantha Kumari

Leave a Reply

Your email address will not be published. Required fields are marked *