ಎಡ ಮತ್ತು ಬಲಗೈ ನಾಯಕರ ಟಿಕೆಟ್ ಫೈಟ್ ಗೆ ಕೋಲಾರ ಕಾಂಗ್ರೆಸ್ ಇಬ್ಭಾಗವಾಗುತ್ತಾ?

ಎಡ ಮತ್ತು ಬಲಗೈ ನಾಯಕರ ಟಿಕೆಟ್ ಫೈಟ್ ಗೆ ಕೋಲಾರ ಕಾಂಗ್ರೆಸ್ ಇಬ್ಭಾಗವಾಗುತ್ತಾ?

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ 20 ಸೀಟ್​ಗಳನ್ನ ಗೆಲ್ಲಲೇಬೇಕು ಅಂತಾ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದೆ ಕಾಂಗ್ರೆಸ್. ಅದರ ಮೊದಲ ಅಸ್ತ್ರವಾಗಿ ಫ್ಯಾಮಿಲಿ ಪಾಲಿಟಿಕ್ಸ್​ಗೆ ಮಣೆ ಹಾಕಿದೆ. ಅವ್ರಿಗೆ ಕೊಟ್ರೆ ಇವ್ರಿಗೆ ಸಿಟ್ಟು ಇವ್ರಿಗೆ ಕೊಟ್ರೆ ಅವ್ರಿಗೆ ಸಿಟ್ಟು ಅಂತಾ ಸಚಿವರ ಮಕ್ಕಳು, ಸೊಸೆ, ಪತ್ನಿ ಹೀಗೆ ಬಹುತೇಕ ಕಡೆ ಕುಟುಂಬಸ್ಥರನ್ನೇ ಕಣಕ್ಕಿಳಿಸಿದೆ. ಅಲ್ಲಿಗೆ ಫ್ಯಾಮಿಲಿ ಪಾಲಿಟಿಕ್ಸ್ ಮೂಲಕವೇ ಮತದಾರರ ಮನಗೆಲ್ಲೋಕೆ ಸ್ಟ್ರಾಟರ್ಜಿ ಮಾಡಿದೆ. ಆದ್ರೀಗ ಅದೇ ತಂತ್ರಗಾರಿಕೆ ಕಾಂಗ್ರೆಸ್​ಗೆ ತಿರುಗು ಬಾಣವಾಗಿದೆ. ಸಚಿವ ಕೆ.ಹೆಚ್​ ​ಮುನಿಯಪ್ಪ ಅವರ ಅಳಿಯ ಕೆ.ಜಿ.ಚಿಕ್ಕ ಪೆದ್ದಣ್ಣ ಅವರಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ಕಾಂಗ್ರೆಸ್​ನಲ್ಲಿ ನಿರ್ಧಾರವಾಗಿದೆ. ಆದ್ರೆ ಇದು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಯಾವುದೇ ಕಾರಣಕ್ಕೂ ಸಚಿವರ ಅಳಿಯನಿಗೆ ಟಿಕೆಟ್ ನೀಡದಂತೆ ಕೋಲಾರದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ರೊಚ್ಚಿಗೆದ್ದಿದ್ದಾರೆ. ರಾಜೀನಾಮೆ ಪತ್ರ ಹಿಡಿದು ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಕೋಲಾರದಲ್ಲಿ ಕಾಂಗ್ರೆಸ್​ಗೆ ಟಿಕೆಟ್ ಹಂಚಿಕೆ ಕಗ್ಗಂಟಾಗಿದ್ದೇಕೆ..? ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡ್ತಿರೋದ್ರ ಹಿಂದಿನ ಲೆಕ್ಕಾಚಾರ ಏನು..? ಜಿಲ್ಲೆಯ ಮುಖಂಡರು ವಿರೋಧ ಮಾಡ್ತಿರೋದೇಕೆ..? ಈ ಬಗೆಗಿನ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. – ಇನ್ನುಮುಂದೆ ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಬೀಳುತ್ತೆ ದಂಡ!

ಕಾಂಗ್ರೆಸ್‌ಗೆ ಕೋಲಾರ ಲೋಕಸಭಾ ಟಿಕೆಟ್‌ ಭಿನ್ನಮತದ ಬಿಸಿ ಜೋರಾಗಿಯೇ ತಟ್ಟಿದೆ. ಸಚಿವ ಕೆ.ಹೆಚ್‌ ಮುನಿಯಪ್ಪ ಅವರ ಅಳಿಯ ಪೆದ್ದಚಿಕ್ಕಣ್ಣಗೆ ಟಿಕೆಟ್‌ ಬಹುತೇಕ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಹೈಡ್ರಾಮಾ ನಡೆದಿದೆ. ಕೆ.ಹೆಚ್‌ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ನೀಡಿದ್ರೆ ರಾಜೀನಾಮೆ ನೀಡುವುದಾಗಿ ನಾಲ್ವರು ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ನೇರವಾಗಿಯೇ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ದೇ ವಿಧಾನ ಪರಿಷತ್‌ ಸದಸ್ಯರಾದ ನಜೀರ್‌ ಅಹ್ಮದ್‌ ಹಾಗೂ ಅನಿಲ್‌ ಕುಮಾರ್‌, ಪರಿಷತ್‌ ಸ್ಪೀಕರ್‌ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ್ದರು. ರಾಜೀನಾಮೆ ಪತ್ರವನ್ನು ಮಾಧ್ಯಮಗಳಿಗೂ ತೋರಿಸಿದ್ರು. ಆದ್ರೆ ಅಂತಿಮವಾಗಿ ರಾಜೀನಾಮೆ ನೀಡದೆ ಯಾವಾಗ ಬೇಕಾದರೂ ರಾಜೀನಾಮೆ ಕೊಡಬಹುದು ಎಂದಿದ್ದಾರೆ. ಈ ಮೂಲಕ ಹೈಕಮಾಂಡ್​ಗೆ ಸಂದೇಶ ರವಾನಿಸಿದ್ದಾರೆ.

‘ಕೈ’ ಶಾಸಕರ ‘ಹೈ’ ಶಾಕ್! 

ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌, ಸಚಿವ ಎಂಸಿ ಸುಧಾಕರ್‌, ಮಾಲೂರು ಶಾಸಕ ಕೆ.ವೈ ನಂಜೇಗೌಡ ಹಾಗೂ ಬಂಗಾರಪೇಟೆ ಶಾಸಕ ಎಸ್‌.ಎನ್‌ ನಾರಾಯಣಸ್ವಾಮಿ ರಾಜೀನಾಮೆಗೆ ನಿರ್ಧರಿಸಿದ್ದರು. ಅಲ್ದೇ ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್‌ ಅವರ ಸಮಯವನ್ನು ಕೂಡ ಕೇಳಿ ರಾಜೀನಾಮೆ ಸಲ್ಲಿಕೆಗೂ ಮುಂದಾಗಿದ್ರು. ಕಾಂಗ್ರೆಸ್ ನಾಯಕರ ವರಸೆ ಬೆನ್ನಲ್ಲೇ ಡ್ಯಾಮೇಜ್‌ ಕಂಟ್ರೋಲ್‌ಗೆ ಕಾಂಗ್ರೆಸ್‌ ನಾಯಕರು ಪ್ರಯತ್ನಿಸುತ್ತಿದ್ದು, ಅಸಮಾಧಾನಿತರ ಮನವೊಲಿಕೆಗೆ ಮುಂದಾಗಿದ್ದಾರೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಫೀಲ್ಡ್‌ಗಿಳಿದಿದ್ದು, ಶಾಸಕರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಅಲ್ದೇ ಖುದ್ದು ಸಿಎಂ ಸಿದ್ದರಾಮಯ್ಯ ಕೂಡ ಅಸಮಾಧಾನಿತರಿಗೆ ಕರೆ ಮಾಡಿ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸೂಚನೆ ನೀಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್ ಸಿಂಗ್ ಸುರ್ಜೆವಾಲಾ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಿಸದೆ ತಡೆಹಿಡಿಯಲು ನಿರ್ಧರಿಸಿದ್ದಾರೆ.

ಕೋಲಾರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಗಗನಕ್ಕೇರಿದೆ. ಹೀಗಾಗಿ ಯಾರಿಗೆ ಸಮಾಧಾನ ಮಾಡಬೇಕು ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಬಗೆಹರಿಸಲು ಸ್ವತ: ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಮುಂದಾದರೂ ಭಿನ್ನಮತ ಶಮನಗೊಳಿಸುವುದು ಕಷ್ಟವಾಗಿದೆ.  ಹೀಗೆ ಕೋಲಾರ ಜಿಲ್ಲೆಯ ಕಾಂಗ್ರೆಸ್​ನ ಘಟಾನುಘಟಿ ನಾಯಕರೇ ಪಕ್ಷದ ವಿರುದ್ಧ ತಿರುಗಿ ಬಿದ್ದಿರೋದು ಹೈಕಮಾಂಡ್​​ಗೆ ನುಂಗಲಾರದ ತತ್ತಾಗಿದೆ. ಅಷ್ಟಕ್ಕೂ ಇಲ್ಲಿ ಟಿಕೆಟ್ ಕಗ್ಗಂಟಿನ ಹಿಂದೆ ಬಣ ರಾಜಕೀಯವಿದೆ.

ಬಣ ಬಡಿದಾಟ!

ಸಚಿವ ಕೆ.ಹೆಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಬಣಗಳ ನಡುವೆ ಗುದ್ದಾಟ ನಡೆಯುತ್ತಿದೆ. ಕೆ.ಹೆಚ್ ಮುನಿಯಪ್ಪ ಎಡಗೈ ಸಮುದಾಯ ಸೇರಿದ್ದು, ತಮ್ಮ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ, ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಅವರು ಬಲಗೈ ಸಮುದಾಯಕ್ಕೆ ಸೇರಿದ್ದು ಟಿಕೆಟ್ ನೀಡುವಂತೆ‌ ಒತ್ತಾಯಿಸುತ್ತಿದ್ದಾರೆ.     ಅಲ್ದೇ ಮುನಿಯಪ್ಪ ಅವರು ದೇವನಹಳ್ಳಿಯ ಶಾಸಕರಾಗಿ ಸಚಿವರಾಗಿದ್ದಾರೆ. ಅವರ ಪುತ್ರಿ ರೂಪಕಲಾ ಕೆಜಿಎಫ್ ನ ಶಾಸಕಿಯಾಗಿದ್ದು ಈಗ ಅಳಿಯನಿಗೂ ಟಿಕೆಟ್ ಕೇಳುತ್ತಿರುವುದು ಕುಟುಂಬ ರಾಜಕೀಯವನ್ನು ತೋರಿಸುತ್ತದೆ. ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದರೆ ಜಿಲ್ಲೆಯ ಬೇರೆ ನಾಯಕರಿಗೆ ಅನ್ಯಾಯವಾಗುತ್ತದೆ, ಪಕ್ಷಕ್ಕಾಗಿ ಬೇರೆ ಶಾಸಕರು, ನಾಯಕರು ಕೆಲಸ ಮಾಡಿದ್ದಾರೆ. ಹೀಗಾಗಿ ಟಿಕೆಟ್ ನೀಡುವುದು ಬೇಡ ಅನ್ನೋದು ರೆಬೆಲ್ ನಾಯಕರ ವಾದ.

ಸದ್ಯ  ಕೋಲಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ನಡೆಸಿದ ಸಮೀಕ್ಷೆಯಲ್ಲಿ ಕೆ.ಹೆಚ್‌ ಮುನಿಯಪ್ಪ ಅಥವಾ ಅವರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬ ಅಂಶ ಇದೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ಹೈಕಮಾಂಡ್‌ ಮುನಿಯಪ್ಪರನ್ನು ನಿರ್ಲಕ್ಷಿಸಿಲು ಹಿಂದೇಟು ಹಾಕುತ್ತಿದೆ. ಹೀಗಾಗಿ  ಅಸಮಾಧಾನ ತಾರಕ್ಕೇರಿದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಇದಕ್ಕೆ ಒಂದು ಅಂತ್ಯ ಹಾಡಬೇಕೆಂದು ಹೈ ವೋಲ್ಟೇಜ್ ಮೀಟಿಂಗ್ ಕರೆದಿದ್ದಾರೆ. ರಾತ್ರಿ 10 ಗಂಟೆಗೆ ಸಿಎಂ ನಿವಾಸದಲ್ಲಿ ಕೋಲಾರ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತೆ.

Shwetha M