ಕೊಹ್ಲಿ Vs ಧೋನಿ.. ಯಾರು ಬೆಸ್ಟ್? –  CSK ಗಿಂತ RCB ಅಬ್ಬರವೇ ದಾಖಲೆ
ಕಿಂಗ್ & ತಲಾ ಫ್ಯಾನ್ಸ್ ವಾರ್ ಹೇಗಿದೆ?

ಕೊಹ್ಲಿ Vs ಧೋನಿ.. ಯಾರು ಬೆಸ್ಟ್? –  CSK ಗಿಂತ RCB ಅಬ್ಬರವೇ ದಾಖಲೆಕಿಂಗ್ & ತಲಾ ಫ್ಯಾನ್ಸ್ ವಾರ್ ಹೇಗಿದೆ?

ಐಪಿಎಲ್​ನಲ್ಲಿ ಈಗ ಎಲ್ಲರ ಚಿತ್ತ ಮೇ 18ರ ಮ್ಯಾಚ್​​ನತ್ತ ನೆಟ್ಟಿದೆ. ಆರ್​​ಸಿಬಿ ವರ್ಸಸ್ ಸಿಎಸ್​​ಕೆ ನಡುವೆ ನಡೆಯಲಿರೋ ಹೈವೋಲ್ಟೇಜ್ ಪಂದ್ಯ ಎರಡೂ ತಂಡಗಳ ಪ್ಲೇ ಆಫ್ ಭವಿಷ್ಯವನ್ನ ನಿರ್ಧರಿಸಲಿದೆ. ಆದ್ರೆ ಈ ಪಂದ್ಯ ಬೆಂಗಳೂರು ವರ್ಸಸ್ ಚೆನ್ನೈ ಮ್ಯಾಚ್ ಅನ್ನೋದಕ್ಕಿಂತ ಕೊಹ್ಲಿ ವರ್ಸಸ್ ಧೋನಿ ನಡುವಿನ ಫೈಟ್​ ಆಗಿ ಮಾರ್ಪಟ್ಟಿದೆ. ಆರ್​ಸಿಬಿಯಲ್ಲಿ ಕಿಂಗ್ ಅಂತಾನೇ ಕರೆಸಿಕೊಳ್ಳೋ ಕೊಹ್ಲಿಯನ್ನ ಅಭಿಮಾನಿಗಳು ದೇವರಂತೆ ಪೂಜಿಸ್ತಾರೆ. ಮತ್ತೊಂದ್ಕಡೆ ಸಿಎಸ್​ಕೆಯಲ್ಲಿ ತಲಾ ಅಂತಾ ಕರೆಸಿಕೊಳ್ಳೋ ಧೋನಿ ಇಡೀ ತಂಡಕ್ಕೆ ಎಲ್ಲವೂ ಆಗಿದ್ದಾರೆ. ಹೀಗಾಗಿ ಎರಡೂ ಕಡೆಯ ಫ್ಯಾನ್ಸ್ ವಾರ್ ಜೋರಾಗೇ ಇದೆ. ಕ್ರಿಕೆಟ್ ಲೋಕದ ಇಬ್ಬರು ಮದಗಜಗಳ ಮುಖಾಮುಖಿಯನ್ನ ನೋಡಲು ಇಡೀ ಕ್ರಿಕೆಟ್ ಲೋಕವೇ ಕಾದು ಕುಳಿತಿದೆ. ಅಷ್ಟಕ್ಕೂ ಇಬ್ಬರ ಜಟಾಪಟಿ ಇಷ್ಟೊಂದು ಹೈವೋಲ್ಟೇಜ್ ಯಾಕೆ? ಫ್ಯಾನ್ಸ್ ವಾರ್ ಹೇಗಿರುತ್ತೆ? ಹಿಂದಿನ ಸೀಸನ್​ಗಳಲ್ಲಿ ಯಾರು ಮೇಲು ಗೈ ಸಾಧಿಸಿದ್ದಾರೆ ಅನ್ನೋ ವಿವರ ಇಲ್ಲಿದೆ.

ಇದನ್ನೂ ಓದಿ:   ಟೆಸ್ಟ್ ಮ್ಯಾಚ್.. ರಾಹುಲ್ಲಾ ರನ್ಸ್ ಎಲ್ಲಪ್ಪಾ – 4 ಪಂದ್ಯಗಳಿಂದ ಬಾಲ್ ತಿಂದಿದ್ದೇ ಸಾಧನೆ?

ಮೇ 18ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು VS ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಕದನದ ಮೇಲೆ ಕ್ರಿಕೆಟ್​ ಲೋಕ ಹದ್ದಿನ ಕಣ್ಣಿಟ್ಟಿದೆ. ಎರಡೂ ತಂಡಗಳಿಗೆ ಇದು ಲೀಗ್​ ಹಂತದ ಕೊನೆಯ ಪಂದ್ಯವೇ.. ಆದ್ರೆ, ಪ್ಲೇ ಆಫ್​​ ಲೆಕ್ಕಾಚಾರದಲ್ಲಿ ಇದು ಎಲಿಮಿನೇಟರ್​ ಸ್ವರೂಪ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಯಾರು ಸೋಲ್ತಾರೋ ಅವ್ರು ಟೂರ್ನಿಯಿಂದ ಹೊರ ಬಿದ್ದಂತೆಯೇ ಲೆಕ್ಕ. ಆದ್ರೆ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯೋ ಪಂದ್ಯದಲ್ಲಿ ಯಾರು ಗೆಲ್ತಾರೆ ಅನ್ನೋದಕ್ಕಿಂತ ಸೆಂಟರ್​ ಆಫ್​ ಅಟ್ರಾಕ್ಷನ್​ ಇವ್ರಿಬ್ಬರೇ.  ಎರಡೂ ತಂಡಗಳ ಪೈಕಿ 22 ಆಟಗಾರರು ಕಣಕ್ಕಿಳಿಯುತ್ತಾರಾದ್ರೂ ಎಲ್ಲರ ದೃಷ್ಟಿ ನೆಟ್ಟಿರೋದು ಕಿಂಗ್​ ಕೊಹ್ಲಿ ಹಾಗೂ ಲೆಜೆಂಡ್​ ಧೋನಿ ಮೇಲೆಯೇ. ರಣಕಣದಲ್ಲಿ ಈ ಇಬ್ಬರು ರಣಕಲಿಗಳ ಜಿದ್ದಾಜಿದ್ದಿನ ಹೋರಾಟವನ್ನ ನೋಡಲು ಇಡೀ ಕ್ರಿಕೆಟ್ ಲೋಕ ತುದಿಗಾಲಲ್ಲಿ ನಿಂತಿದೆ. ಈ ಸೀಸನ್​ನ ಸ್ಟಾರ್ಟಿಂಗ್ ಮ್ಯಾಚ್​ಗಳಲ್ಲಿ ಸೈಲೆಂಟಾಗಿದ್ದ ವಿರಾಟ್​ ಕೊಹ್ಲಿ ಇದೀಗ ವಿರಾಟ ರೂಪ ತಾಳಿದ್ದಾರೆ. ಡೆಲ್ಲಿ ಎದುರಿನ ಪಂದ್ಯದಲ್ಲಂತೂ ಕೊಹ್ಲಿ ಫುಲ್​​ ಅಗ್ರೆಸ್ಸಿವ್​ ಮೂಡ್​ನಲ್ಲಿದ್ರು. ಇದೇ ಅಗ್ರೆಸ್ಸಿವ್​ ಅವತಾರವೇ ಕೊಹ್ಲಿಯ ಮೇನ್ ಸ್ಟ್ರೆಂಥ್​​. ಇನ್​ಫ್ಯಾಕ್ಟ್,​ ಇದು ಇಡೀ ತಂಡದ ಎನರ್ಜಿಯನ್ನ ಬೂಸ್ಟ್​ ಮಾಡುತ್ತೆ. ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ ಕೂಡ. ಆರ್​ಸಿಬಿಯಲ್ಲಿ ಒಂದು ಫೋರ್ ಹೋದ್ರು, ಸಿಕ್ಸ್ ಹೋದ್ರೂ ವಿಕೆಟ್ ಉರುಳಿದ್ರೂ ಕ್ಯಾಮರಾ ಫೋಕಸ್ ಆಗೋದು ಕೂಡ ಕೊಹ್ಲಿ ಮೇಲೆಯೇ. ಅವ್ರ ರಿಯಾಕ್ಷನ್ ಹೇಗಿದೆ ಅನ್ನೋದನ್ನ ನೋಡೋಕಂತ್ಲೇ ಕೋಟ್ಯಂತರ ಫ್ಯಾನ್ಸ್ ಕಾಯ್ತಿರ್ತಾರೆ. ಅದ್ರಲ್ಲೂ ಈ ಮ್ಯಾಚ್ ಹೋಮ್​​ಗ್ರೌಂಡ್​​ ಚಿನ್ನಸ್ವಾಮಿಯಲ್ಲಿ ಬೇರೆ ಆಡ್ತಿರೋದ್ರಿಂದ ಕೊಹ್ಲಿಯ ಆರ್ಭಟವೇ ಮೇನ್ ಹೈಲೆಟ್. ಹೀಗೆ ಕೊಹ್ಲಿ ಕ್ರೀಡಾಂಗಣದ ತುಂಬೆಲ್ಲಾ ಸಿಂಹದಂತೆ ಗರ್ಜಿಸುತ್ತಾ ಎದುರಾಳಿಗಳನ್ನ ಬೇಟೆಯಾಡಿದ್ರೆ ಮಹೇಂದ್ರ ಸಿಂಗ್ ಧೋನಿ ಮಾತ್ರ ಇದಕ್ಕೆ ಡೆಡ್ ಆಪೋಸಿಟ್. ಮೈದಾನದಲ್ಲಿ ಗಜಗಾಂಭೀರ್ಯದಿಂದಲೇ ಆಡುವ ಧೋನಿ ಕೂಲ್ ಆಗೇ ಇಡೀ ತಂಡವನ್ನ ಕಂಟ್ರೋಲ್ ಮಾಡ್ತಾರೆ. ಅಲ್ದೇ ಈ ಪಂದ್ಯ ಎರಡೂ ತಂಡಗಳಿಗೆ ಡು ಆರ್​ ಡೈ ಬ್ಯಾಟಲ್​​ ಆಗಿರೋದ್ರಿಂದ ಪ್ರೆಶರ್ ಅಂತೂ ಇದ್ದೇ ಇರುತ್ತೆ. ಆದ್ರೂ ಧೋನಿ ಮಾತ್ರ ಕೂಲ್ ಆಗೇ ಇರ್ತಾರೆ. ಪಂದ್ಯದ ಸಿಚ್ಯುವೇಶನ್​ ಏನೇ ಇರಲಿ. ಎಷ್ಟೇ ಒತ್ತಡ ಇರಲಿ.. ಕೂಲ್​ & ಕಾಮ್​ ಆಗೇ ಎಲ್ಲವನ್ನೂ ಎದುರಿಸ್ತಾರೆ. ವಿಕೆಟ್​ ಹಿಂದೆ ನಿಂತು ಸೈಲೆಂಟಾಗೆ ರಣತಂತ್ರ ರೂಪಿಸೋ ಮಾಹಿ, ಎದುರಾಳಿಗೆ ಶಾಕ್​ ಕೊಡೋದ್ರಲ್ಲಿ ಎತ್ತಿದ ಕೈ. ಡೆತ್​ ಓವರ್​​ಗಳಲ್ಲಿ ಬ್ಯಾಟಿಂಗ್​ಗಿಳಿದ್ರೆ, ಫೋರ್, ಸಿಕ್ಸ್​ಗಳ ಮೂಲಕವೇ ಅಬ್ಬರಿಸಿ ಬಿಡ್ತಾರೆ. ಮಿಸ್ಟರ್​ ಕೂಲ್ ಕ್ರೀಸ್​ನಲ್ಲಿ​​ ಇದ್ದಷ್ಟು ಹೊತ್ತು, ಆರ್​​ಸಿಬಿಗೆ ಕಂಟಕ ತಪ್ಪಿದ್ದಲ್ಲ. ಹೀಗೆ ಒಂದ್ಕಡೆ ಮ್ಯಾಚ್ ಫೀವರ್ ಇದ್ರೆ ಮತ್ತೊಂದ್ಕಡೆ ಫ್ಯಾನ್ಸ್ ವಾರ್ ಕೂಡ ಜೋರಾಗೇ ಇದೆ. ಯಾಕಂದ್ರೆ ಚಿತ್ರರಂಗದಲ್ಲಿ ನಟರ ಅಭಿಮಾನಿಗಳ ನಡುವೆ ಯಾರು ಬೆಸ್ಟ್ ಅನ್ನೋ ಫೈಟ್ ಇರೋ ಹಾಗೇಯೇ ಧೋನಿ VS ಕೊಹ್ಲಿ.. ಈ ಇಬ್ಬರಲ್ಲಿ ಯಾರು ಬೆಸ್ಟ್​ ಎಂಬ ಪ್ರಶ್ನೆ ಹಿಂದಿನಿಂದ್ಲೂ ಇದೆ. ಈಗಲೂ ಕೂಡ ಚರ್ಚೆ ನಡೆಯುತ್ತಲೇ ಇದೆ. ಇದೀಗ ಬೆಂಗಳೂರು ವರ್ಸಸ್ ಚೆನ್ನೈ ನಡುವೆ ಮಾಡು ಇಲ್ಲವೇ ಮಡಿ ಕದನ ಫಿಕ್ಸ್​ ಆಗ್ತಿದ್ದಂತೆ ಮತ್ತೆ ಇದೇ ಡಿಬೇಟ್ ನಡೀತಿದೆ. ಕೆಲವ್ರು ಧೋನಿ ಪರ ಬ್ಯಾಟ್ ಬೀಸಿದ್ರೆ ಇನ್ನೂ ಕೆಲವ್ರು ಕಿಂಗ್ ಕೊಹ್ಲಿಯನ್ನ ಕೊಂಡಾಡುತ್ತಿದ್ದಾರೆ.

ಅಸಲಿಗೆ ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ಕೊಹ್ಲಿ ಆರ್​​ಸಿಬಿ ಕ್ಯಾಪ್ಟನ್​​ ಅಲ್ಲ.. ಧೋನಿ ಕೂಡ ಚೆನ್ನೈನ ಸಾರಥಿಯಲ್ಲ. ಹಾಗಿದ್ರೂ, ಶನಿವಾರದ ಮಾಡು ಇಲ್ಲವೇ ಮಡಿ ಕದನದಲ್ಲಿ ಇವರಿಬ್ಬರೇ ಡಿಸೈಡರ್ಸ್​​. ಎರಡೂ ತಂಡಗಳ ಪಾಲಿಗೆ ಇವ್ರ ಆಟವೇ ನಿರ್ಣಾಯಕವಾಗಿದೆ. ಇವರಿಬ್ಬರ ಗೇಮ್​ಪ್ಲಾನ್​, ಸ್ಟ್ರಾಟಜಿ ಮೇಲೆ ಇಡೀ ಪಂದ್ಯ ನಿಂತಿದೆ. ಮೇ 18ರಂದು ನಡೆಯೋ ಮಹಾಕಾಳಗದಲ್ಲಿ ರಿಯಲ್ ಚಾಣಾಕ್ಷ ಯಾರು ಅಂತಾ ನಿರ್ಧಾರವಾಗಲಿದೆ. 2008 ರಿಂದ ಐಪಿಎಲ್ ಆಡ್ತಿರುವ ಧೋನಿ ನಾಯಕನಾಗಿ ಐದು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಟ್ರೋಫಿ ಗೆದ್ದು ಕೊಟ್ಟಿದ್ದಾರೆ. ಹಾಗೆ 263 ಐಪಿಎಲ್ ಪಂದ್ಯಗಳನ್ನು ಆಡಿ 5218 ರನ್ ಗಳಿಸಿದ್ದಾರೆ. 2024ರ ಸೀಸನ್​ನಲ್ಲಿ 13 ಮ್ಯಾಚ್​ಗಳಿಂದ 136 ರನ್ ಕಲೆ ಹಾಕಿದ್ದಾರೆ. ಅದೂ ಕೂಡ 226.67ರ ಸ್ಟ್ರೈಕ್ ರೇಟ್​ ಅನ್ನೋದೇ ವಿಶೇಷ. ಇನ್ನು ವಿರಾಟ್ ಕೊಹ್ಲಿ 2008ರಿಂದಲೂ ಐಪಿಎಲ್ ಆಡ್ತಿದ್ದು ಈವರೆಗೂ 250 ಪಂದ್ಯಗಳನ್ನ ಆಡಿದ್ದಾರೆ. 8 ಸಲ ಶತಕ ಸೇರಿದಂತೆ ಬರೋಬ್ಬರಿ 7,924 ರನ್ ಚಚ್ಚಿದ್ದಾರೆ. ಈ ವರ್ಷ ಕೂಡ ರನ್ ಮಷಿನ್​ನಂತೆ ಅಬ್ಬರಿಸ್ತಿರೋ ಕೊಹ್ಲಿ 13 ಇನ್ನಿಂಗ್ಸ್​ಗಳಿಂದ 661 ರನ್ ಚಚ್ಚಿದ್ದಾರೆ. ಆರೆಂಜ್ ಕ್ಯಾಪ್ ಕೂಡ ಅವ್ರ ಬಳಿಯೇ ಇದೆ. ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸ್ಕೋರ್ ಗಳಿಸಿರೋ ಕಿಂಗ್ ಕೊಹ್ಲಿ ಐಪಿಎಲ್ ಹಿಸ್ಟರಿಯಲ್ಲಿ ಒಂದೇ ತಂಡಕ್ಕಾಗಿ ಆಡ್ತಿರೋ ಏಕೈಕ ಆಟಗಾರ ಕೂಡ ಇವ್ರೊಬ್ಬರೇ.  ಇದೀಗ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯೋ ಮೆಗಾ ಬ್ಯಾಟಲ್​ ಇಬ್ಬರು ದಿಗ್ಗಜರ ಪಾಲಿಗೆ ಪ್ರತಿಷ್ಠೆಯ ಪಂದ್ಯ. ಯಾಕಂದ್ರೆ ಮಹೇಂದ್ರ ಸಿಂಗ್ ಧೋನಿಗೆ ಐಪಿಎಲ್​ನಲ್ಲಿ ಈ ಸೀಸನ್ನೇ ಲಾಸ್ಟ್ ಅಂತಾ ಹೇಳಲಾಗ್ತಿದೆ. ಜುಲೈನಲ್ಲಿ 42ನೇ ವರ್ಷಕ್ಕೆ ಕಾಲಿಡಲಿರುವ ಧೋನಿ, 2024ರ ಐಪಿಎಲ್ ಆರಂಭಕ್ಕೂ ಮುನ್ನ ತನ್ನ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್​ಗೆ ಹಸ್ತಾಂತರಿಸುವ ಮೂಲಕ ನಿವೃತ್ತಿಯ ಸುಳಿವು ಕೊಟ್ಟಿದ್ರು. ಒಂದು ವೇಳೆ ಮೇ 18ರಂದು ಆರ್​ಸಿಬಿ ವಿರುದ್ಧ ಚೆನ್ನೈ ಸೋತು ಪ್ಲೇಆಫ್​ನಿಂದ ಹೊರಬಿದ್ದರೆ, ಎಂಎಸ್ ಪಾಲಿಗೆ ಅದೇ ಕೊನೆಯ ಪಂದ್ಯವಾಗಲಿದೆ. ಹೀಗಾಗೇ ಸಿಎಸ್​ಕೆ ಮ್ಯಾಚ್ ಸೋತ್ರೆ ಇನ್ಮುಂದೆ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಮತ್ತೆ ಅವಕಾಶ ಸಿಗುವುದಿಲ್ಲ ಎಂಬ ಉದ್ದೇಶದಿಂದ ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆರ್​ಸಿಬಿ ಅಧಿಕೃತ ವೆಬ್​ಸೈಟ್​​ನಲ್ಲಿ ಈಗಾಗಲೇ ಎಲ್ಲಾ ಟಿಕೆಟ್​ಗಳು ಮಾರಾಟವಾಗಿವೆ. ಆದರೆ ಜಿದ್ದಾಜಿದ್ದಿನ ಕಾದಾಟದ ಟಿಕೆಟ್​ಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಎಕ್ಸ್​ ಖಾತೆಯಲ್ಲೂ #RCBvsCSKtickets ಹ್ಯಾಶ್​ಟ್ಯಾಗ್​ನಲ್ಲಿ ಟ್ರೆಂಡ್ ಆಗ್ತಿದೆ. ಮತ್ತೊಂದೆಡೆ ಆರ್​ಸಿಬಿ ಫ್ಯಾನ್ಸ್ ಕೂಡ ಆರ್​ಸಿಬಿ ಒಳ್ಳೇ ಫಾರ್ಮ್​ನಲ್ಲಿದ್ದು ಪ್ಲೇಆಫ್​ಗೆ ಅವಕಾಶ ಇರೋದ್ರಿಂದ ಈ ಮ್ಯಾಚ್ ಕಣ್ತುಂಬಿಕೊಳ್ಳಲು ಟಿಕೆಟ್​ಗಾಗಿ ಮುಗಿಬೀಳುತ್ತಿದ್ದಾರೆ.

ಸ್ನೇಹಿತರೇ. ಆರ್​ಸಿಬಿ ವರ್ಸಸ್ ಸಿಎಸ್​ಕೆ ಮ್ಯಾಚ್ ಆಗಿರೋದ್ರಿಂದ ಗ್ರೌಂಡ್​ನಲ್ಲಿ ಕೂಗಾಟ ಚೀರಾಟ ಕೂಡ ಜೋರಾಗೇ ಇರುತ್ತೆ. ಅದ್ರಲ್ಲೂ ಈ ಸೀಸನ್​ನಲ್ಲಿ ಚೆನ್ನೈ ಬ್ಯಾಟರ್ಸ್ ಔಟ್ ಆದ್ರೂ ತಲೆಕೆಡಿಸಿಕೊಳ್ಳದ ಫ್ಯಾನ್ಸ್  ಧೋನಿ ಬ್ಯಾಟಿಂಗ್​ಗೆ ಬರ್ಲಪ್ಪ ಅಂತಾ ಬೇಡಿಕೊಳ್ತಿದ್ರು. ಧೋನಿ ಮೈದಾನಕ್ಕೆ ಬರುವಾಗ್ಲೇ ಫ್ಯಾನ್ಸ್ ಘೋಷಣೆ ಮುಗಿಲು ಮುಟ್ಟಿದೆ. ಅಭಿಮಾನಿಗಳ ಕೇಕೆ, ಶಿಳ್ಳೆ, ಚಪ್ಪಾಳೆಗಳು ಇಡೀ ಸ್ಟೇಡಿಯಂನೇ ನಡುಗಿಸುತ್ತೆ. ಈ ಬಾರಿಯ ಐಪಿಎಲ್​ನಲ್ಲೂ ಧೋನಿ ಬ್ಯಾಟಿಂಗ್​ಗೆ ಬರುವಾಗ ಫ್ಯಾನ್ಸ್ ಮಾಡುವ ಸೌಂಡ್ ನೀವೆಲ್ಲಾ ಕೇಳೇ ಇರ್ತೀರಿ. ಆದ್ರೆ ಇಲ್ಲಿ ಇನ್ನೊಂದು ಅಚ್ಚರಿಯ ವಿಷ್ಯ ಇದೆ. ಧೋನಿ ಬ್ಯಾಟಿಂಗ್ ಎಂಟ್ರಿಗಿಂತ ಆರ್‌ಸಿಬಿ ಫೀಲ್ಡಿಂಗ್​​​​​​​​​​​ ವೇಳೆ ಹೆಚ್ಚು ಸೌಂಡ್ ಆಗ್ತಿದೆ. ಸ್ವತಃ ಡೆಸಿಬಲ್ ಮೀಟರ್ ಈ ಸತ್ಯವನ್ನು ಬಹಿರಂಗಪಡಿಸಿದೆ. ಧೋನಿ ಬ್ಯಾಟಿಂಗ್ ಪ್ರವೇಶಕ್ಕಿಂತ ಆರ್‌ಸಿಬಿಯ ಫೀಲ್ಡಿಂಗ್ ಹೆಚ್ಚು ಸದ್ದು ಮಾಡಿದೆ. ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಧೋನಿಯ ಎಂಟ್ರಿ ವೇಳೆ ಡೆಸಿಬಲ್ ಮೀಟರ್ ರೀಡಿಂಗ್ 123dB ಆಗಿತ್ತು. ಆದರೆ RCB ಫೀಲ್ಡಿಂಗ್‌ ವೇಳೆ ಈ ದಾಖಲೆ ಬ್ರೇಕ್ ಆಗಿದೆ. ಇತ್ತೀಚೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಇದು ಪ್ರೂವ್ ಆಗಿದೆ. ಈ ವೇಳೆ ಡೆಸಿಬಲ್ ಮೀಟರ್ ಅಂಕಿ-ಅಂಶ 125ಕ್ಕೆ ತಲುಪಿದೆ. ಕ್ಯಾಮರೂನ್ ಗ್ರೀನ್ ಅವರು ಡೆಲ್ಲಿಯ ಸ್ಟಬ್ಸ್​​ರನ್ನು ರನೌಟ್ ಮಾಡಿದ್ರು. ರನೌಟ್ ಆಗ್ತಿದ್ದಂತೆಯೇ ಅಭಿಮಾನಿಗಳು ಜೋರಾಗಿ ಕೂಗಿದ್ದಾರೆ. ಅದರ ಡೆಸಿಬಲ್ ಮೀಟರ್‌ ಮೌಲ್ಯವು 125dB ತಲುಪಿದೆ. ಈ ಅಂಕಿ ಅಂಶವನ್ನು ನೋಡಿದ ನವಜೋತ್ ಸಿಂಗ್ ಸಿಧು.. ಧೋನಿ ಬಂದಾಗ ಸೌಂಡ್ 123ಡಿಬಿ ಇತ್ತು. ಆ ದಾಖಲೆ ಈಗ ಮುರಿದು ಬಿದ್ದಿದೆ ಎಂದು ಬಣ್ಣಿಸಿದ್ದರು. ಹೀಗಾಗಿ ಚೆನ್ನೈ ವರ್ಸಸ್ ಬೆಂಗಳೂರು ಪಂದ್ಯದಲ್ಲಿ ಇನ್ನೆಷ್ಟು ಸೌಂಡ್ ಬರ್ಬೋದು ಊಹೆ ಮಾಡ್ಕೊಳ್ಳಿ.

ಆರ್​​ಸಿಬಿ ಪ್ಲೇಆಫ್​ ಪ್ರವೇಶಿಸಲು ಈ ಪಂದ್ಯದ ಗೆಲುವು ಅತ್ಯಗತ್ಯ. ಅಲ್ಲದೆ, ನೆಟ್​ರನ್​ರೇಟ್​ನಲ್ಲೂ ಚೆನ್ನೈ ತಂಡವನ್ನು ಮೀರಿಸಬೇಕು.  ಸಿಎಸ್​ಕೆ +0.528, ಆರ್​ಸಿಬಿ +0.387 ರನ್ ರೇಟ್ ಹೊಂದಿದೆ. ಆದರೆ ಆರ್​ಸಿಬಿ ಪ್ಲೇಆಫ್​ಗೇರಲು ಚೆನ್ನೈ ವಿರುದ್ಧ ಗೆಲ್ಲೋದ್ರ ಜೊತೆಗೆ ರನ್ ರೇಟ್​ನಲ್ಲೂ ಮುಂದೆ ಬರಬೇಕು. ಒಂದು ವೇಳೆ  ಆರ್​ಸಿಬಿ ಗೆದ್ರೂ ಸಿಎಸ್​ಕೆಗಿಂತ ಕಡಿಮೆ ನೆಟ್ ರನ್ ರೇಟ್ ಪಡೆದರೆ, ಲೀಗ್​ನಿಂದಲೇ ಹೊರಬೀಳಿದೆ. ಬೆಂಗಳೂರು ತಂಡ 18.1 ಓವರ್​​ಗಳೊಳಗೆ ಚೇಸಿಂಗ್ ಮಾಡಬೇಕು, ಇಲ್ಲವಾದಲ್ಲಿ 18 ರನ್​ಗಳಿಂದ ಗೆಲ್ಲಬೇಕು. ಹಾಗಿದ್ರೆ ಮಾತ್ರ ಆರ್​ಸಿಬಿ ಟಾಪ್ ಫೋರ್​ಗೆ ಹೋಗಲಿದೆ.  ಪ್ರಸಕ್ತ ಐಪಿಎಲ್​ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ಭರ್ಜರಿ ಗೆಲುವು ಸಾಧಿಸಿತ್ತು. ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಫಾಫ್ ಪಡೆ, 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು. ಸಿಎಸ್​ಕೆ, 18.4 ಓವರ್​​ಗಳಲ್ಲಿ ರನ್ ಚೇಸ್ ಮಾಡಿ ಗೆದ್ದು ಬೀಗಿತ್ತು. ಈಗ ಆರ್​ಸಿಬಿ ತನ್ನ ತವರಿನ ಅಭಿಮಾನಿಗಳ ಮುಂದೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಆದ್ರೆ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಚೆನ್ನೈ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಒಟ್ಟು 32 ಬಾರಿಗೆ ಪರಸ್ಫರ ಮುಖಾಮುಖಿಯಾಗಿವೆ. ಈ ಪೈಕಿ ಸಿಎಸ್​ಕೆ ಗೆದ್ದಿರುವುದು 21 ಬಾರಿ. ಬೆಂಗಳೂರು ಟೀಂ ಗೆದ್ದಿರೋದು 10 ಸಲ. ಇನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಚೆನ್ನೈ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಬೆಂಗಳೂರಲ್ಲಿ ಉಭಯ ತಂಡಗಳು 10 ಸಲ ಮುಖಾಮುಖಿಯಾಗಿವೆ. ಸಿಎಸ್​ಕೆ 5 ಸಲ ಗೆದ್ದಿದ್ರೆ ಆರ್​ಸಿಬಿ 4 ಸಲ ಜಯ ಸಾಧಿಸಿದೆ. ಒಂದು ಪಂದ್ಯದ ಫಲಿತಾಂಶ ರದ್ದಾಗಿದೆ.

ಒಟ್ಟಾರೆ 2024ರ ಟೂರ್ನಿಯಲ್ಲಿ ಸಿಎಸ್​ಕೆ 14 ಅಂಕ ಪಡೆದಿದ್ದರೆ, ಆರ್​​ಸಿಬಿ 12 ಅಂಕ ಪಡೆದಿದೆ. ನೆಟ್​ರನ್​ರೇಟ್​ನಲ್ಲೂ ಸಿಎಸ್​ಕೆ ಕೊಂಚ ಮುಂದಿದೆ. ಪ್ಲೇ ಆಫ್ ಗೆ ಕ್ವಾಲಿಫೈ ಆಗಲು ಯಲ್ಲೋ ಆರ್ಮಿ ಮತ್ತು ರೆಡ್​ ಆರ್ಮಿಗೆ ಫೈನಲ್ ಮ್ಯಾಚ್ ಆಗಿದೆ. ಫಾಫ್ ಪಡೆಯು ಋತುರಾಜ್ ಪಡೆಯನ್ನು ಸೋಲಿಸಿದರೆ 14 ಅಂಕ ಪಡೆಯುತ್ತದೆ. ಆಗ ನೆಟ್ ರನ್ ರೇಟ್ ಮುಂದಿರುವ ತಂಡ ಪ್ಲೇಆಫ್​ಗೆ ಹೋಗಲಿದೆ.

Shwetha M