RCBಗೆ 2025ಕ್ಕೆ ಕೊಹ್ಲಿ ಕ್ಯಾಪ್ಟನ್? – ಫಾಫ್, ಪಾಂಡ್ಯ, ಶಿಖರ್ FAIL!
3 ಟೀಂ ನಾಯಕರ ಬದಲಾವಣೆ ಫಿಕ್ಸ್!
ಹಿಂದಿನ ಎಲ್ಲಾ ಸೀಸನ್ಗಳಿಗಿಂತ ಈ ಬಾರಿಯ ಐಪಿಎಲ್ ಸೀಸನ್ ತುಂಬಾನೇ ಸ್ಪೆಷಲ್ ಆಗಿದೆ. ದಶಕಗಳ ದಾಖಲೆಗಳು ಬ್ರೇಕ್ ಆಗಿವೆ. ಹೈಯೆಸ್ಟ್ ಸ್ಕೋರ್, ಹೈಯೆಸ್ಟ್ ಸಿಕ್ಸಸ್, ಹೈಯೆಸ್ಟ್ ಚೇಸಸ್ ಹೀಗೆ ಹಲವು ರೆಕಾರ್ಡ್ಗಳನ್ನ ಮುರಿಯಲಾಗಿದೆ. ಭರಪೂರ ಮನರಂಜನೆ ನೀಡ್ತಿರುವ ಐಪಿಎಲ್ನ ಪ್ರತೀ ಪಂದ್ಯವೂ ಜಿದ್ದಾಜಿದ್ದಿನಿಂದ ಕೂಡಿದೆ. ಆದ್ರೆ ಪ್ರತೀ ಪಂದ್ಯದ ಸೋಲು ಗೆಲುವಿನಲ್ಲಿ ಆಯಾ ತಂಡಗಳ ಕ್ಯಾಪ್ಟನ್ಸ್ ತೆಗೆದುಕೊಳ್ಳುವ ನಿರ್ಧಾರಗಳೇ ಮಹತ್ವದ್ದಾಗಿರುತ್ತದೆ. ತಂಡದ ಯಶಸ್ಸು ಮತ್ತು ವೈಫಲ್ಯದ ಹೊಣೆ ಸಂಪೂರ್ಣ ಕ್ಯಾಪ್ಟನ್ ಮೇಲೆ ಡಿಪೆಂಡ್ ಆಗಿರುತ್ತೆ. ಹೀಗಾಗಿ ಈ ಸಲ ಕಳಪೆ ಪ್ರದರ್ಶನ ನೀಡಿದ ತಂಡಗಳು ನಾಯಕರು ನಾಯಕತ್ವ ಕಳೆದುಕೊಳ್ಳೋ ಚಾನ್ಸಸ್ ಇದೆ. ಅದ್ರಲ್ಲೂ ಮುಂದಿನ ವರ್ಷ 3 ತಂಡಗಳ ನಾಯಕತ್ವ ಬದಲಾವಣೆ ಬಹುತೇಕ ಪಕ್ಕಾ ಆಗಿದೆ. ಹಾಗಾದ್ರೆ ಯಾವ್ಯಾವ ತಂಡದ ಕ್ಯಾಪ್ಟನ್ಗಳು ಚೇಂಜ್ ಆಗ್ತಾರೆ..? ರೀಸನ್ ಏನು..? ಈ ಬಾರಿ ಅವ್ರ ಪರ್ಫಾಮೆನ್ಸ್ ಹೇಗಿತ್ತುಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: SKY ವರ್ಲ್ಡ್ ಕಪ್ ಆಟ! -ಆರೆಂಜ್ ಆರ್ಮಿ ಔಟ್? -ಆರ್‌ಸಿಬಿಗೆ ಕುದುರಿತಾ ಲಕ್?
2024ರ ಐಪಿಎಲ್ ಸೀಸನ್ ಅಂತಿಮ ಘಟ್ಟದತ್ತ ಸಾಗುತ್ತಿದೆ. ಈಗಾಗ್ಲೇ ಕೆಕೆಆರ್ ಮತ್ತು ರಾಜಸ್ಥಾನ್ ರಾಯಲ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ನಲ್ಲಿದ್ದು ಪ್ಲೇಆಫ್ಗೇರೋದು ಕನ್ಫರ್ಮ್ ಆಗಿದೆ. ಸದ್ಯ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಮುಂದುವರಿದಿದ್ದು ನಾಕೌಟ್ನ ಕೊನೇ ಪಂದ್ಯಗಳವರೆಗೂ ಯಾರು ಸೆಲೆಕ್ಟ್ ಆಗ್ತಾರೆ ಅನ್ನೋ ಕುತೂಹಲ ಇದೆ. ಇನ್ನೂ ಕೆಲ ತಂಡಗಳು ಸ್ಟ್ರಾಂಗ್ ಆಗಿದ್ರೂ ಪ್ರದರ್ಶನ ನೀಡುವಲ್ಲಿ ಫೇಲ್ಯೂರ್ ಆಗ್ತಿವೆ. ಇದೇ ಫೇಲ್ಯೂರ್ ಮುಂಬರುವ ಸೀಸನ್ನಲ್ಲಿ ಅವ್ರ ಕ್ಯಾಪ್ಟನ್ಸಿಗೇ ಕುತ್ತು ತರಲಿದೆ. ಈ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿರೋದು ನಮ್ಮ ಆರ್‌ಸಿಬಿ ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಡೀ ಐಪಿಎಲ್ ಫ್ರಾಂಚೈಸಿಗಳಲ್ಲೇ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರೋ ತಂಡ. ಒಂದು ಸಲವೂ ಕಪ್ ಗೆಲ್ಲದಿದ್ರೂ ಬೆಂಗಳೂರು ತಂಡಕ್ಕಿರೋ ಫ್ಯಾನ್ ಬೇಸ್ ಬೇರೆ ಯಾವ ಟೀಮ್ಗೂ ಇಲ್ಲ. ಜಗಮೆಚ್ಚಿದ ಕ್ರಿಕೆಟಿಗ ವಿರಾಟ್ ಕೊಹ್ಲಿಯಂಥ ಆಟಗಾರನಿದ್ರೂ ಕಪ್ ಗೆಲ್ಲೋಕೆ ಆಗಿಲ್ಲ. ಅದ್ರಲ್ಲೂ ಈ ಸಲ ಇದು ಆರ್ಸಿಬಿಯ ಹೊಸ ಅಧ್ಯಾಯ ಅಂತಾ ಟೂರ್ನಿ ಆರಂಭಿಸಿದ್ದ ತಂಡ ಹಿಂದೆಂದಿಗಿಂತಲೂ ಕಳಪೆ ಪ್ರದರ್ಶನ ನೀಡಿದೆ. ಇದೇ ಕಾರಣಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ 2025ರ ಟೂರ್ನಿಗೆ ಕ್ಯಾಪ್ಟನ್ಸಿ ಕಳೆದುಕೊಳ್ಳೋ ಬಗ್ಗೆ ಚರ್ಚೆ ನಡೀತಿದೆ. ದಕ್ಷಿಣ ಆಫ್ರಿಕಾದ ದಿಗ್ಗಜ ಫಾಫ್ ಡು ಪ್ಲೆಸಿಸ್ 2022ರಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ತಂಡಕ್ಕೆ ಟ್ರೋಫಿ ಗೆದ್ದುಕೊಡಲು ಸಾಧ್ಯವಾಗಿಲ್ಲ. 2022ರಲ್ಲಿ ಪ್ಲೇ ಆಫ್ಸ್‌ಗೆ ಮುನ್ನಡೆಸಿದ್ದಷ್ಟೇ ಫಾಫ್ ಕ್ಯಾಪ್ಟನ್ಸಿಯಲ್ಲಿ ಸಿಕ್ಕ ಯಶಸ್ಸು. ಐಪಿಎಲ್ 2024 ಟೂರ್ನಿಯಲ್ಲೂ ಆರ್‌ಸಿಬಿ ಅಸ್ಥಿರ ಪ್ರದರ್ಶನ ನೀಡ್ತಿದೆ. ಆಡಿರುವ ಹನ್ನೊಂದು ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನ ಗೆದ್ದು ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನದಲ್ಲಿದೆ. ಮುಂದೆ ಇನ್ನು ಮೂರು ಮ್ಯಾಚ್ಗಳಷ್ಟೇ ಉಳಿದಿದ್ದು ಎಲ್ಲಾ ಪಂದ್ಯಗಳನ್ನ ಗೆದ್ರೂ ಪ್ಲೇಆಫ್ಗೆ ಹೋಗೋ ಅವಕಾಶ ಕಡಿಮೆ ಇದೆ. ನಾಯಕನಾಗಿ ಫೇಲ್ಯೂರ್ ಆಗಿರುವ ಡುಪ್ಲೆಸಿ ಆಟದಲ್ಲೂ ಹೇಳಿಕೊಳ್ಳುವಂಥ ಪ್ರದರ್ಶನವನ್ನೇನೂ ನೀಡಿಲ್ಲ. ಕಳೆದ ಶನಿವಾರ ನಡೆದಿದ್ದ ಗುಜರಾತ್ ವಿರುದ್ಧದ ಪಂದ್ಯದಲ್ಲಿ 23 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 64 ರನ್ ಸಿಡಿಸಿದ್ದರು. ಈ ಸೀಸನ್ನಲ್ಲಿ ಇದೇ ಅವ್ರ ಬೆಸ್ಟ್ ಪರ್ಫಾಮೆನ್ಸ್. ಸೀಸನ್ 17ನಲ್ಲಿ 11 ಪಂದ್ಯಗಳನ್ನ ಆಡಿರುವ ಡುಪ್ಲೆಸಿ 172.54ರ ಸ್ಟ್ರೈಕ್ ರೇಟ್ನಲ್ಲಿ 352 ರನ್ಗಳನ್ನ ಗಳಿಸಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡದಲ್ಲಿ ಫಾಫ್ ಕ್ಯಾಪ್ಟನ್ಸಿಗೆ ಇದೇ ಕಡೇ ಆವೃತ್ತಿ ಆಗುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್ಸಿ ಕೈಗೆತ್ತಿಕೊಂಡ್ರೂ ಅಚ್ಚರಿಯೇನಿಲ್ಲ. ಯಾಕಂದ್ರೆ ಕೊಹ್ಲಿ ಈ ಹಿಂದೆಯೂ ಕ್ಯಾಪ್ಟನ್ ಆಗಿ ಆರ್ಸಿಬಿಯನ್ನ ಫೈನಲ್ಗೆ ಕೊಂಡೊಯ್ದಿದ್ದಾರೆ. ಹಾಗೇ ಈ ಬಾರಿಯೂ ಅತ್ಯುತ್ತುಮ ಪ್ರದರ್ಶನ ನೀಡ್ತಿದ್ದಾರೆ. 11 ಇನ್ನಿಂಗ್ಸ್ಗಳಿಂದ 542 ರನ್ ಸಿಡಿಸಿದ್ದಾರೆ. ಕೊಹ್ಲಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇರೋದ್ರಿಂದ ಮತ್ತೆ ಆರ್‌ಸಿಬಿ ನಾಯಕನ ಪಟ್ಟ ಕಟ್ಟುವ ನಿರೀಕ್ಷೆ ಇದೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಕಾಂಟ್ರವರ್ಸಿಯಲ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಮೇಲೂ ತೂಗುಗತ್ತಿ ನೇತಾಡುತ್ತಿದೆ. ಹಿಟ್ಮ್ಯಾನ್ ಅಂತಾನೇ ಕರೆಸಿಕೊಳ್ಳೋ ರೋಹಿತ್ ಶರ್ಮಾ ಅಂತಹ ಯಶಸ್ವಿ ನಾಯಕನನ್ನು ಹಠಾತ್ತನೆ ಕೆಳಗಿಳಿಸಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ಸಿ ಕಟ್ಟಿದ್ದೇ ತಡ ಮುಂಬೈ ಇಂಡಿಯನ್ಸ್ ತಂಡದ ಅದಃಪತನ ಶುರುವಾಗಿತ್ತು. 5 ಬಾರಿ ಚಾಂಪಿಯನ್ ಆಗಿದ್ದ ಮುಂಬೈ ತಂಡ ಈ ಬಾರಿ ಪ್ಲೇಆಫ್ನಿಂದ ಹೊರಬಿದ್ದ ಫಸ್ಟ್ ಟೀಂ ಆಗಿದೆ. ಸೀಸನ್ 17ನಲ್ಲಿ ಆಡಿದ 12 ಪಂದ್ಯಗಳಲ್ಲಿ ಕೇವಲ 4 ಜಯದೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮುಂಬೈನ ಈ ಕಳಪೆ ಪ್ರದರ್ಶನದಿಂದ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನದ ಅಲೆ ಎದ್ದಿದೆ. ಪಾಂಡ್ಯ ತೆಗೆದುಕೊಂಡ ಹಲವು ನಿರ್ಧಾರಗಳಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಪಾಂಡ್ಯ ಪರ್ಫಾಮೆನ್ಸ್ ಕೂಡ ಅಷ್ಟಕ್ಕಷ್ಟೇ. 12 ಇನ್ನಿಂಗ್ಸ್ಗಳಿಂದ 198 ರನ್ ಕಲೆ ಹಾಕಿದ್ದಾರೆ. 46 ರನ್ಗಳೇ ಅವ್ರ ಹೈಯೆಸ್ಟ್ ಸ್ಕೋರ್. ಇನ್ನು ಬೌಲಿಂಗ್ನಲ್ಲಿ ಈವರೆಗೂ 11 ವಿಕೆಟ್ಗಳನ್ನ ತೆಗೆದಿದ್ದಾರೆ. ಮಂಗಳವಾರ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ತೆಗೆದಿದ್ದೇ ಅವ್ರ ಅತ್ಯುತ್ತಮ ಸಾಧನೆ. ಮತ್ತೊಂದೆಡೆ ಈ ಸಲ ನಾಯಕತ್ವ ಕಳೆದುಕೊಂಡ ಅಸಮಾಧಾನದಲ್ಲಿರೋ ರೋಹಿತ್ ಐಪಿಎಲ್ 2025 ಟೂರ್ನಿಗೆ ಮುಂಬೈ ಇಂಡಿಯನ್ಸ್ ತೊರೆಯುವ ಬಹುತೇಕ ಸಾಧ್ಯತೆ ಇದೆ. ಫ್ಯಾನ್ಸ್, ಎಂಐ ಆಟಗಾರರಲ್ಲೂ ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಒಳ್ಳೆಯ ಒಪೀನಿಯನ್ ಇಲ್ಲದೆ ಇರೋ ಕಾರಣ ಮುಂದಿನ ಸಲ ನೀತಾ ಅಂಬಾನಿ ಒಡೆತನದ ಮುಂಬೈ ಫ್ರಾಂಚೈಸಿ ಪಾಂಡ್ಯ ನಾಯಕತ್ವಕ್ಕೆ ಅಂತ್ಯ ಹಾಡುವ ಚಾನ್ಸಸ್ ಇದೆ.
ಇನ್ನು ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಕೂಡ ನಾಯಕತ್ವ ಪಟ್ಟದಿಂದ ಕೆಳಗಿಳಿಯೋದು ಬಹುತೇಕ ಕನ್ಫರ್ಮ್ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರಾದ ಶಿಖರ್ ಧವನ್ ಈ ಸೀಸನ್ನಲ್ಲಿ ಬೆರಳೆಣಿಕೆಯ ಪಂದ್ಯಗಳಲ್ಲಿ ಮಾತ್ರ ಪಂಜಾಬ್ ತಂಡವನ್ನು ಮುನ್ನಡೆಸಿದ್ದಾರೆ. 38 ವರ್ಷದ ಎಡಗೈ ಬ್ಯಾಟರ್ ತಂಡದಿಂದ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. ಶಿಖರ್ ಅನುಪಸ್ಥಿತಿಯಲ್ಲಿ ಆಲ್‌ರೌಂಡರ್ ಸ್ಯಾಮ್ ಕರ್ರನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ 5 ಪಂದ್ಯಗಳಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದ ಧವನ್ 2 ಜಯ ಮಾತ್ರ ತಂದಿದ್ದರು. ಬಳಿಕ ಗಾಯದ ಸಮಸ್ಯೆ ಕಾರಣ ಅವರು ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿಲ್ಲ. ಪ್ರಸಕ್ತ ಟೂರ್ನಿಯಲ್ಲಿ ಪಂಜಾಬ್ ಆಡಿದ 11 ಪಂದ್ಯಗಳಲ್ಲಿ 4 ಜಯ ಮಾತ್ರವೇ ದಾಖಲಿಸಿದೆ. ಪಾಯಿಂಟ್ಸ್ ಟೇಬಲ್ನಲ್ಲಿ 8ನೇ ಸ್ಥಾನದಲ್ಲಿದ್ದು, ಪ್ಲೇಆಫ್ ಗೇರುವ ಅವಕಾಶ ತೀರಾ ಕಡಿಮೆ ಇದೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಪಂಜಾಬ್ ಹೊಸ ನಾಯಕನ ನೇತೃತ್ವದಲ್ಲಿ ಕಣಕ್ಕಿಳಿಯೋ ಸಾಧ್ಯತೆ ಹೆಚ್ಚಿದೆ.