ಮುಂಬೈ ವಿರುದ್ಧ RCBಗೆ ರಣರೋಚಕ ಗೆಲುವು- 10 ವರ್ಷದ ಬಳಿಕ ವಾಂಖೆಡೆ ಕೋಟೆ ಛಿದ್ರ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. 10 ವರ್ಷಗಳ ಬಳಿಕ ಆರ್ ಸಿಬಿ ಮುಂಬೈನ ವಾಂಖೆಡೆ ಕೋಟೆಯನ್ನು ಛಿದ್ರಗೊಳಿಸಿದ್ದು, ಟಫ್ ಫೈಟ್ ಮೂಲಕವೇ ಗೆದ್ದಿದೆ. ಆರ್ ಸಿಬಿ ಅತ್ಯುತ್ತಮ ಬೌಲಿಂಗ್ ದಾಳಿಯ ಮೂಲಕ ಈ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು, ಅಭಿಮಾನಿಗಳಿಗೆ ಈ ಪಂದ್ಯ ಸಖತ್ ಕಿಕ್ ಕೊಟ್ಟಿದೆ.
ಟಾಸ್ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿತು. ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಅವರ ಅರ್ಧಶತಕ ಜಿತೇಶ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 221 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಒಂದು ಹಂತದಲ್ಲಿ ಗೆಲ್ಲುವ ಅವಕಾಶವಿದ್ದರೂ ಆರ್ ಸಿಬಿ ಉತ್ತಮ ಬೌಲಿಂಗ್ ಮಾಡಿದ್ದರಿಂದ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ಮೇಲೆ ಒತ್ತಡ ಹೇರಿದರೆ, ಕೊನೆಯ ಓವರ್ ನಲ್ಲಿ ಮೂರು ವಿಕೆಟ್ ಪಡೆದ ಕೃನಾಲ್ ಪಾಂಡ್ಯ ಆರ್ ಸಿಬಿಗೆ ಗೆಲುವು ತಂದುಕೊಟ್ಟರು.
RCB ಫ್ಯಾನ್ಸ್.. CSK ಫುಲ್ ರೋಸ್ಟ್ – KGF ಕೋಟೆಗೆ ಕೊಹ್ಲಿಯೇ BOSS
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಆರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಮೊದಲ ಎಸೆತದಲ್ಲೇ ಬೌಂಡರಿ ಗಳಿಸಿದ ಸಾಲ್ಟ್ ಎರಡನೇ ಎಸೆತದಲ್ಲೇ ಬೌಲ್ಡ್ ಆದರು. ಬಳಿಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಆರ್ ಸಿಬಿಗೆ ಆಸರೆಯಾದರು. ಎರಡನೇ ವಿಕೆಟ್‌ಗೆ 91 ರನ್ ಕಲೆಹಾಕಿದರು. ದೇವದತ್ ಪಡಿಕ್ಕಲ್ 22 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಸಹಿತ 37 ರನ್ ಗಳಿಸಿದರು. ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಗಳಿಸಿದರು, 42 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ 67 ರನ್ ಗಳಿಸಿದರು.
ಈ ಬೃಹತ್ ಗೆಲುವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ರಿಯಾನ್ ರಿಕಾಲ್ಟನ್ ಅವರ ವಿಕೆಟ್ ಕಳೆದುಕೊಂಡಿತು. ಇಬ್ಬರೂ ತಲಾ 17 ರನ್ ಗಳಿಸಿ ಔಟಾದರು. ವಿಲ್ ಜ್ಯಾಕ್ಸ್ 22 ರನ್ ಗಳಿಸಿ ಔಟಾದರೆ, ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಆದರೆ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಮೂಲಕ ಮುಂಬೈಗೆ ಗೆಲುವಿನ ಆಸೆ ಚಿಗುರಿಸಿದರು. ತಿಲಕ್ ವರ್ಮಾ 29 ಎಸೆತಗಳಲ್ಲಿ 56 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ 42 ರನ್ ಗಳಿಸಿದರು. ಭುವನೇಶ್ವರ್ ಕುಮಾರ್ ತಿಲಕ್ ವರ್ಮಾರನ್ನು ಔಟ್ ಮಾಡಿದರೆ, ಜೊಶ್ ಹೇಜಲ್‌ವುಡ್ 19ನೇ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯರನ್ನು ಔಟ್ ಮಾಡುವ ಮೂಲಕ ಆರ್ ಸಿಬಿ ಮೇಲುಗೈ ಸಾಧಿಸಲು ಕಾರಣವಾದರು. ಕೊನೆಯ ಓವರ್ ನಲ್ಲಿ ಕೃನಾಲ್ ಪಾಂಡ್ಯ 6 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಆರ್ ಸಿಬಿಗೆ 12 ರನ್‌ಗಳ ಗೆಲುವು ತಂದುಕೊಟ್ಟರು.