ಕೋಗಿಲು ನಿವಾಸಿಗಳು ಲಕ್ಷ, ಲಕ್ಷ ಕೊಟ್ಟು ಮನೆ ಖರೀದಿಸಿದ್ರಾ? – ಆರೋಪಿಗಳ ಖಾತೆಯಲ್ಲಿ ಕೋಟಿ-ಕೋಟಿ ವ್ಯವಹಾರ!

ಕೋಗಿಲು ನಿವಾಸಿಗಳು ಲಕ್ಷ, ಲಕ್ಷ ಕೊಟ್ಟು ಮನೆ ಖರೀದಿಸಿದ್ರಾ? – ಆರೋಪಿಗಳ ಖಾತೆಯಲ್ಲಿ ಕೋಟಿ-ಕೋಟಿ ವ್ಯವಹಾರ!

ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಲೇಔಟ್ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳು, ಶೆಡ್​ಗಳನ್ನು ತೆರವು ಕಾರ್ಯಾಚರಣೆ ಮಾಡಿದ ವಿಚಾರ ಈಗ ಭಾರಿ ಚರ್ಚೆಯಲ್ಲಿದೆ. ಇದೀಗ ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ. ಇದೀಗ ಶಾಕಿಂಗ್‌ ವಿಚಾರವೊಂದು ಬಯಲಾಗಿದೆ. ಕೋಗಿಲು ನಿವಾಸಿಗಳು ನಿರಾಶ್ರಿತರಲ್ಲ, ಲಕ್ಷಾಧಿಪತಿಗಳು ಅನ್ನೋದು ರಿವೀಲ್‌ ಆಗಿದೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಎಟಿಎಂ ವಾಹನ ದರೋಡೆ – ಏಜೆನ್ಸಿ ಸಿಬ್ಬಂದಿಯಿಂದಲೇ ಕೋಟಿ, ಕೋಟಿ ಲೂಟಿ!

ಕೋಗಿಲು ಲೇಔಟ್​ನಲ್ಲಿರುವ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಕೇರಳದ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರವನ್ನು ಬುಲ್ಡೋಜರ್ ರಾಜ್  ಎಂದು ಟೀಕೆ ಮಾಡಿದ್ದರು. ಅಷ್ಟೇ ಯಾಕೆ, ಶತ್ರು ರಾಷ್ಟ್ರ ಪಾಕಿಸ್ತಾನ ಕೂಡಾ ಕೋಗಿಲು ಲೇಔಟ್ ಒತ್ತುವರಿ ಬಗ್ಗೆ ಟೀಕೆ ಮಾಡಿತ್ತು. ಆದ್ರೀಗ ಈ ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಶಾಕಿಂಗ್‌ ವಿಚಾರ ಗೊತ್ತಾಗಿದೆ. ಕೋಗಿಲು ಲೇಔಟ್​ನ ಫಕೀರ್ ಕಾಲೋನಿ ಹಾಗೂ ವಸೀಂ ಲೇಔಟ್​ನಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದವರಿಂದ ಲಕ್ಷ ಲಕ್ಷ ಹಣ ಪಡೆಯಲಾಗಿತ್ತು. ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಹಣದ ವ್ಯವಹಾರ ನಡೆದಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೋಗಿಲು ಲೇಔಟ್​​ನ ಫಕೀರ್ ಲೇಔಟ್ ಹಾಗೂ ವಸೀಂ ಲೇಔಟ್​​ನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಆರೋಪಿಗಳಾದ ವಸೀಂ ಹಾಗೂ ವಿಜಯ್ ಮತ್ತು ರಾಬಿನ್ ಎಂಬುವವರು ಲಕ್ಷ ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ. ಮೂವರ ಬ್ಯಾಂಕ್ ಖಾತೆಗಳ ಜಾಲಾಡಿದಾಗ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿರುವುದು ಗೊತ್ತಾಗಿದೆ. ಪೊಲೀಸರ ತನಿಖೆಯಲ್ಲಿ ಈ ಸತ್ಯ ಬಯಲಾಗುತ್ತಿದ್ದಂತೆಯೇ, ಒತ್ತುವರಿದಾರರಿಗೆ ಪುನರ್ವಸತಿ ನೀಡದೇ ಇರುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೋಗಿಲು ನಿವಾಸಿಗಳು, ಎಲ್ಲರೂ ಮನೆ ಕಟ್ಟಿಕೊಂಡರು. ನಾವು ಕೂಡ ಮನೆ ಕಟ್ಟಿಕೊಂಡಿದ್ದೇವೆ. ಎರಡ್ಮೂರು ವರ್ಷದ ಹಿಂದೆ ಇಲ್ಲಿ ನಾವು ಮನೆ ನಿರ್ಮಾಣ ಮಾಡಿದ್ದೇವೆ ಎಂದಿದ್ದಾರೆ.

ಲಕ್ಷಾಂತರ ರೂಪಾಯಿ ಕೊಟ್ಟು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಯಾಕೆ ಪುನರ್ವಸತಿ ನೀಡಬೇಕೆಂಬ ಚರ್ಚೆ ಶುರುವಾಗಿದೆ. ಆರಂಭದಲ್ಲಿ ಅಲ್ಲಿದವರು ಬಡವರು ಎಂಬ ಮಾನವೀಯತೆ ಇತ್ತು. ಆದರೆ ಕೋಟ್ಯಂತರ ರೂಪಾಯಿ ವ್ಯವಹಾರದ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಇದೀಗ 26 ಜನರಿಗೆ ಪುನರ್ವಸತಿ ನೀಡಬೇಕು ಎಂದಿಕೊಂಡಿದ್ದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಒತ್ತುವರಿದಾರರಿಗೆ ಪುನರ್ವಸತಿ ಅನುಮಾನ ಎನ್ನಲಾಗುತ್ತಿದೆ.

Shwetha M