ತೀರ್ಥರೂಪಿಣಿಯಾಗಿ ಮಧ್ಯರಾತ್ರಿ 1.27ಕ್ಕೆ ಕಾವೇರಿಯ ದರ್ಶನ – ದರ್ಶನ ಪಡೆದ ಸಾವಿರಾರು ಭಕ್ತರು

ತೀರ್ಥರೂಪಿಣಿಯಾಗಿ ಮಧ್ಯರಾತ್ರಿ 1.27ಕ್ಕೆ ಕಾವೇರಿಯ ದರ್ಶನ – ದರ್ಶನ ಪಡೆದ ಸಾವಿರಾರು ಭಕ್ತರು

ಮಡಿಕೇರಿ: ಕಾವೇರಿಯ ಉಗಮಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದಾಳೆ. ಮಂಗಳವಾರ ಮಧ್ಯರಾತ್ರಿ 1.27ರ ಸುಮಾರಿಗೆ ಕಾವೇರಿ ತೀರ್ಥೋದ್ಭವ ಆಗಿದೆ. ತೀರ್ಥೊದ್ಭವದ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡು ಪುನೀತರಾದರು.

ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ರಾತ್ರಿ 11 ಗಂಟೆಯಿಂದಲೇ ತಲಕಾವೇರಿಯ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ನಡೆಯಿತು. ತೀರ್ಥೋದ್ಭವಾಗುತ್ತಿದ್ದಂತೆ ತೀರ್ಥರೂಪಿಣಿಯಾದ ಕಾವೇರಿ ಮಾತೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸ್ಥಳದಲ್ಲಿದ್ದ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥವನ್ನು ಪ್ರೋಕ್ಷಣೆ ಮಾಡಿದರು.

ಇದನ್ನೂ ಓದಿ:  ಖಾಸಗಿ ಬಸ್‌ ಪ್ರಯಾಣಿಕರಿಗೆ ಬಂಪರ್‌ ಆಫರ್‌! – ಈ ಬಸ್‌ನಲ್ಲಿ ಪ್ರಯಾಣಿಸಿದ್ರೆ ಟಿಕೆಟ್‌ ದರ ಕೇವಲ 1 ರೂಪಾಯಿ!

ಮಂಗಳವಾರ ಮುಂಜಾನೆಯಿಂದಲೇ ತಲಕಾವೇರಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಮಂಡಲದಿಂದ 8 ಕಿ.ಮೀ ದೂರದ ತಲಕಾವೇರಿವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಕೊಡಗು ಅಷ್ಟೇ ಅಲ್ಲದೇ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು.

ಕೊಡಗು ಉಸ್ತುವಾರಿ ಸಚಿವ ಬೋಸರಾಜ್, ಮಡಿಕೇರಿ ಶಾಸಕ ಮಂಥರ್ ಗೌಡ, ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ, ಸಂಸದ ಪ್ರತಾಪ್ ಸಿಂಹ ಈ ವೇಳೆ ಭಾಗಿಯಾಗಿ ತೀರ್ಥ ಕುಂಡಿಕೆಯ ಬಳಿ ನಿಂತು ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವ ಬೋಸರಾಜ್, ‌ ಕಾವೇರಿ ಮಾತೆ ಕೊಡಗು ಕರ್ನಾಟಕಕ್ಕೆ ಅಷ್ಟೇ ಅಲ್ಲ. ತಮಿಳುನಾಡಿಗೂ ಅನ್ನ ನೀರು ಒದಗಿಸುತ್ತಿದ್ದಾಳೆ. ಈ ಬಾರಿ ರಾಜ್ಯಕ್ಕೆ ಸಮೃದ್ಧಿ ನೀಡಲೆಂದು ಪ್ರಾರ್ಥಿಸಲಾಗಿದೆ ಎಂದರು.

ಪ್ರತಾಪ್ ಸಿಂಹ ಮಾತಾನಾಡಿ, ಕಾವೇರಿ ಮಾತೆ ನಿಗದಿತ ಸಮಯದಲ್ಲಿ ತೀರ್ಥ ರೂಪಿಣಿಯಾಗಿ ಹರಿದ್ದಾಳೆ. ಕಾವೇರಿ ಮಾತೆ ಮತ್ತೊಂದು ಬಾರಿ ಉಕ್ಕಿ ಹರಿಯಬೇಕು. ಆಗ ಮಾತ್ರ ರಾಜ್ಯ ಸಮೃದ್ಧಿಯಾಗಿ ಇರುತ್ತದೆ ಎಂದು ತಿಳಿಸಿದರು.

ಚಿತ್ರನಟಿ ಹರ್ಷಿಕಾ ಪೂಣಚ್ಚ, ಭುವನ್ ಪೋನ್ನಣ್ಣ ,ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ ಭಾಗಮಂಡಲದಿಂದ ಕಾಲ್ನಡಿಗೆಯಲ್ಲಿ ತಲಕಾವೇರಿ ಗೆ ಅಗಮಿಸಿ ಕಾವೇರಿ ಮಾತೆಯ ದರ್ಶನ ಪಡೆದರು.

Shwetha M