“ನರಹಂತಕ”ನ ಬೇಟೆಯಾಡಿದ “ಅಭಿಮನ್ಯು” ಟೀಮ್ – ಹೇಗಿತ್ತು ಗೊತ್ತಾ ಆಪರೇಷನ್?

“ನರಹಂತಕ”ನ ಬೇಟೆಯಾಡಿದ “ಅಭಿಮನ್ಯು” ಟೀಮ್ – ಹೇಗಿತ್ತು ಗೊತ್ತಾ ಆಪರೇಷನ್?

ಕೊಡಗು: ಕಳೆದ ಮೂರು ದಿನಗಳಿಂದ ಹುಲಿಯ ಉಪಟಳ ಹೆಚ್ಚಾಗಿತ್ತು. ಕೆ.ಬಾಡಗ ಗ್ರಾಮದ ಪಲ್ಲೇರಿ ಎಂಬಲ್ಲಿ ಒಂದೇ ಕುಟುಂಬದ ಮೊಮ್ಮಗ ಮತ್ತು ತಾತನನ್ನು ಬಲಿ ಪಡೆದುಕೊಂಡಿದ್ದ ನರ ಭಕ್ಷಕ ಹುಲಿಯನ್ನು ಪೊನ್ನಂಪೇಟೆ ತಾಲ್ಲೂಕಿನ ನಾಣಚ್ಚಿಯ ಬಳಿ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಕೇವಲ 24  ಗಂಟೆ ಅವಧಿಯಲ್ಲಿ ಒಂದೇ ಕುಟುಂಬದ ಇಬ್ಬರನ್ನು ಈ ಹುಲಿ ಕೊಂದಿತ್ತು. ಭಾನುವಾರ ಸಂಜೆ ವೇಳೆ 12 ವರ್ಷದ ಬಾಲಕನನ್ನು ಹೊತ್ತೊಯ್ದಾಗ ಬಾಲಕನ ಕಾಲು ಸೇರಿ ಅರ್ಧ ಭಾಗವನ್ನು ತಿಂದು ಹಾಕಿತ್ತು. ಇದರಿಂದ ಗ್ರಾಮದ ಜನರಲ್ಲಿ ಆತಂಕ ಉಂಟಾಗಿತ್ತು. ನರಭಕ್ಷಕ ಹುಲಿಯನ್ನು ಕೊಂದು ಹಾಕುವಂತೆ ಸರ್ಕಾರದ ವಿರುದ್ಧ ಸ್ಥಳೀಯರು ಎರಡು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು. ಇಂದು ಮಧ್ಯಾಹ್ನದ ವೇಳೆಗೆ ನರಹಂತಕ ಹುಲಿ‌ಯನ್ನು ಪೊನ್ನಂಪೇಟೆ ತಾಲೂಕಿನ ನಾಣಚ್ಚಿ ಗೇಟ್‌ ಬಳಿ ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: ಲೀಟರ್ ಹಾಲಿಗೆ ₹200, ಕೆಜಿ ಕೋಳಿ ಮಾಂಸಕ್ಕೆ ₹1,100 – ಪಾಪಿ ಪಾಕಿಸ್ತಾನದ ಸ್ಥಿತಿ ಅಧೋಗತಿ..!

ಬೆಳಗ್ಗೆಯಿಂದ ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ 3 ಸಾಕಾನೆ ಬಳಸಿ ಕಾರ್ಯಾಚರಣೆ ನಡೆಸಲಾಗಿದ್ದು, ಅರಿವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಜೀವಂತವಾಗಿಯೇ ಸೆರೆ ಹಿಡಿಯಲಾಗಿದೆ. ಹುಲಿಗೆ ಅಂದಾಜು 8 ರಿಂದ 9 ವರ್ಷ ಪ್ರಾಯ ಇರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಇನ್ನು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಗಡಿಯಲ್ಲಿರುವ ಕೆ.ಬಾಡಗ ಗ್ರಾಮದಲ್ಲಿ ಹುಲಿ ದಾಳಿಗೆ ಇಬ್ಬರು ಬಲಿಯಾದ ಪ್ರಕರಣ ಸಂಬಂಧ ನರಭಕ್ಷಕ ಹುಲಿ ಕೊಲ್ಲುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಹುಲಿ ಸೆರೆಗೆ ಸರ್ಕಾರ ಆದೇಶಿಸುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದರು. ಇದೇ ವೇಳೆ ಮೃತ ರಾಜು ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರದ ಚೆಕ್‌ ಕೂಡ ವಿತರಣೆ ಮಾಡಲಾಗಿತ್ತು. ಇದೀಗ ಹುಲಿಯನ್ನ ಸೆರೆ ಹಿಡಿದಿದ್ದು, ಗ್ರಾಮದ ಜನರು ನಿಟ್ಟುಸಿರು ಬಿಡುವಂತಾಗಿದೆ.

suddiyaana