ಅತಿಯಾದರೆ ‘ಔಷಧ’ವೂ ಅಪಾಯ..! – ಕೆಮ್ಮಿನ ಸಿರಪ್ ಸೇವಿಸುವ ಮುನ್ನ ಈ ವಿಚಾರ ಗೊತ್ತಿರಲಿ..!

ಅತಿಯಾದರೆ ‘ಔಷಧ’ವೂ ಅಪಾಯ..! – ಕೆಮ್ಮಿನ ಸಿರಪ್ ಸೇವಿಸುವ ಮುನ್ನ ಈ ವಿಚಾರ ಗೊತ್ತಿರಲಿ..!

ಭಾರತೀಯ ಫಾರ್ಮ ಕಂಪನಿಯೊಂದು ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಮೃತ ಪಟ್ಟಿರುವುದು ಅನೇಕರಿಗೆ ತಿಳಿದ ವಿಚಾರವೇ. ಈ ಪ್ರಕರಣದಿಂದಾಗಿ ಸಿರಪ್ ನ ಗುಣಮಟ್ಟದ ಬಗ್ಗೆ ಪ್ರತಿಯೊಬ್ಬರಿಗೂ ಪ್ರಶ್ನೆ ಮೂಡುವಂತಿದೆ. ಇನ್ನೂ ಉಜ್ಬೇಕಿಸ್ತಾನ ಆರೋಗ್ಯ ಸಚಿವಾಲಯದ ಹೇಳಿಕೆಯಂತೆ ಮಕ್ಕಳಿಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮು ಸಿರಪ್ ಅನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿತ್ತು. ಇದನ್ಯಾಕೆ ಹೇಳ್ತಿದ್ದೀವಿ ಅಂದರೆ, ಹೆಚ್ಚಿನ ಜನರು ತಪ್ಪು ಮಾಡುವುದೇನಂದರೆ ಕೆಮ್ಮು ಸಿರಪ್ ಗಳನ್ನ ಸಾಮಾನ್ಯವೆಂಬಂತೆ ಪರಿಗಣಿಸುವುದು. ಹಾಗಾಗಿ ಹೆಚ್ಚಾಗಿ ಕೆಮ್ಮು ಸಿರಪ್ ಗಳು ಓವರ್ ದಿ ಕೌಂಟರ್ ಔಷಧಿ. ಅಂದರೆ ವೈದ್ಯರ ಸಲಹೆ ತೆಗೆದುಕೊಳ್ಳದೇ ನಾವೇ ಮೆಡಿಕಲ್ ಶಾಪ್ ನಿಂದ ಖರೀದಿಸುವುದು. ಇದನ್ನು ಆರೋಗ್ಯ ತಜ್ಞರೂ ಕೂಡಾ ವಿರೋಧಿಸುತ್ತಾರೆ. ಕೆಮ್ಮು ಸಿರಪ್ ಗಳು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಮತ್ತು ಇದು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಜೊತೆಗೆ ಕೆಮ್ಮು ಸಿರಪ್ ಗಳನ್ನ ಯಾಕೆ ಓವರ್ ದಿ ಕೌಂಟರ್ ಡ್ರಗ್ ಆಗಿ ಖರೀದಿಸಬಾರದು ಎನ್ನುವ ಬಗ್ಗೆ ಕೆಲವು ಆರೋಗ್ಯ ತಜ್ಞರು ಉತ್ತರಿಸಿದ್ದಾರೆ.

ಇದನ್ನೂ ಓದಿ: ನಾನು ಬದುಕಲ್ಲವೆಂದು ಅಪ್ಪ-ಅಮ್ಮನಿಗೆ ಹೇಳಬೇಡಿ..- ಆ ಪುಟಾಣಿ ಮಾತು ಕೇಳಿ ಡಾಕ್ಟರ್‌ ಮಾಡಿದ್ದೇನು?

ಇಂಡಿಯಾ ಟುಡೇ ಯಲ್ಲಿ ವರದಿಯಾದ ಪ್ರಕಾರ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯ ಡಾಕ್ಟರ್ ಮೊನಾಲಿಸಾ ಸಾಹು ಅವರು ಕೆಮ್ಮು ಸಿರಪ್ ಗಳು, ಕೆಮ್ಮಿನ ಲಕ್ಷಣಗಳನ್ನ ಸುಧಾರಿಸುತ್ತವೆಯೇ ಹೊರತು ಸೋಂಕನ್ನು ಅಲ್ಲ ಎಂದೂ ಹೇಳುತ್ತಾರೆ. ಎರಡು ವಿಧದ ಕೆಮ್ಮು ಸಿರಪ್ ಗಳಿವೆ. ಒಂದು ಒಣ ಕೆಮ್ಮಿಗೆ ಮತ್ತು ಇನ್ನೊಂದು ಉತ್ಪಾದಕ ಕೆಮ್ಮಿಗೆ. ಒಣ ಕೆಮ್ಮಿನಲ್ಲಿ ಸಿರಪ್ ಗಳು ಸಾಮಾನ್ಯವಾಗಿ ಉಂಟಾಗುವ ಅಲರ್ಜಿಯನ್ನ ಹೊರಹಾಕುತ್ತವೆ ಆದರೆ ಸಿರಪ್ ಸೇವಿಸುವ ಮೊದಲು ನಾವು ಕೆಮ್ಮಿನ ನಿಜವಾದ ಕಾರಣವನ್ನ ಗುರುತಿಸಿಕೊಳ್ಳಬೇಕು. ಉತ್ಪಾದಕ ಕೆಮ್ಮಿನಲ್ಲಿ ನಾವು ಕಫವನ್ನ ಹೊರತೆಗೆಯಬೇಕು ಆದರೆ ಇದೂ ನಿರ್ದಿಷ್ಟ ಕೆಮ್ಮಿನ ಸಿರಪ್ ನಿಂದ ಮಾತ್ರ ಸಾಧ್ಯವಾಗುವುದು ಅನ್ನೋದು ಡಾಕ್ಟರ್ ಸಾಹು ಅವರ ಅಭಿಪ್ರಾಯ.

ದೆಹಲಿಯ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಡಾ. ಶರದ್ ಅಗರ್ವಾಲ್ ಪ್ರಕಾರ, ಕೆಮ್ಮು ಸಿರಪ್‌ಗಳ ಅತಿಯಾದ ಸೇವನೆಯು ಮತಿವಿಕಲ್ಪ, ಗೊಂದಲ, ಬೆವರುವಿಕೆ, ವಾಕರಿಕೆ, ವಾಂತಿ, ಚಡಪಡಿಕೆ, ಮುಖದ ಕೆಂಪಾಗುವಿಕೆಯೊಂದಿಗೆ  ತುರಿಕೆ ಸೇರಿದಂತೆ ವಿವಿಧ ಅಡ್ಡಪರಿಣಾಮಗಳನ್ನು ಹೊಂದಿದೆ. ಕೆಮ್ಮು ಸಿರಪ್‌ಗಳನ್ನು ತಯಾರಿಸಲು ಹಲವಾರು ಪದಾರ್ಥಗಳನ್ನು ಬಳಸಲಾಗುತ್ತದೆ, ಇವುಗಳನ್ನು ಸಾಮಾನ್ಯವಾಗಿ ಬಳಸಲಾಗುವ ಎಕ್ಸ್‌ಪೆಕ್ಟರಂಟ್‌ಗಳು( Expectorants) ಡಿಕೊಂಜೆಸ್ಟೆಂಟ್‌ಗಳು (decongestants), ಆಂಟಿಹಿಸ್ಟಾಮೈನ್‌ಗಳು (antihistamines )ಮತ್ತು ಡೆಕ್ಸ್‌ಟ್ರೋಮೆಥೋರ್ಫಾನ್‌ (dextromethorphan) ನಂತಹ ಆಂಟಿಟಸ್ಸಿವ್ ಔಷಧಿಗಳು. ಇವೆಲ್ಲವೂ ಕೆಮ್ಮನ್ನು ನಿಗ್ರಹಿಸಲು ಅಥವಾ ನಿಲ್ಲಿಸಲು ಒಂದು ಹಂತದ ಮಟ್ಟಿಗೆ ಸಹಾಯ ಮಾಡುತ್ತವೆ. ಈ ಪದಾರ್ಥಗಳು ತಾತ್ಕಾಲಿಕ ಚಿಕಿತ್ಸೆಯನ್ನು ಒದಗಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ಅದು ನಮ್ಮ ದೇಹದಲ್ಲಿ ಅಡಗಿರುವ ರೋಗ (underlying disease )ವನ್ನ ಗುಣಪಡಿಸುವುದಿಲ್ಲ.

ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇ ಮಾರಾಟವಾಗುವ ಸಿರಪ್ ಔಷದಿಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಬಂಧನೆಗಳ ಕುರಿತು ಮಾತನಾಡಿರುವ ಡಾ ಪ್ರಸಾದ್, ಓವರ್ ದಿ ಕೌಂಟರ್ ಕೆಮ್ಮು ಸಿರಪ್ ಔಷಧಿಗಳ ಮಾರಾಟದ  ಬಗ್ಗೆ ಯಾವುದೇ ಕಾನೂನು ಮತ್ತು ನಿಬಂಧನೆಗಳಿಲ್ಲ. ಏಕೆಂದರೆ ಅವುಗಳನ್ನ ನಿಗದಿತ ಪ್ರಮಾಣದಲ್ಲಿ ತೆಗೆದುಕೊಂಡರೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳದಿದ್ದರೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

suddiyaana