ಗಂಡಸರು ಅಳುವುದೇ ತಪ್ಪಾ? – ಅಳುವಿಗೂ ಆರೋಗ್ಯಕ್ಕೂ ಇರುವ ನಂಟೇನು?
ನಗು, ಅಳು, ಖುಷಿ ಇವೆಲ್ಲವೂ ಜೀವನದ ಒಂದು ಭಾಗ. ಮನಸಿನ ಭಾವನೆಗಳನ್ನು ವ್ಯಕ್ತಪಡಿಸಿದಾಗಲೇ ಅದಕ್ಕೊಂದು ಅರ್ಥ ಸಿಗುವುದು. ಹಸಿವಾದಾಗ ಹೇಗೆ ಊಟ ಮಾಡುತ್ತೇವೋ, ಅದೇ ರೀತಿ ನಗಬೇಕು ಅನಿಸಿದಾಗ ನಕ್ಕು ಬಿಡಬೇಕು. ಅಳಬೇಕು ಎನಿಸಿದಾಗ ಅತ್ತುಬಿಡಬೇಕು. ಆದರೆ ಅನೇಕರು ತಾವು ಎಷ್ಟು ನೋವಿನಲ್ಲಿದ್ದರೂ, ಅಳುವುದಿಲ್ಲ. ಎಂತಹ ಕೆಟ್ಟ ಪರಿಸ್ಥಿತಿಯಲ್ಲಿದ್ರೂ ಅಳುವುದಿಲ್ಲ. ಹೀಗೆ ಮಾಡೋದ್ರಿಂದ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ.
ಅನೇಕರು ಅಳುಹೆಣ್ಣು ಮಕ್ಕಳಿಗೆ ಮಾತ್ರ ಎಂದು ಸಾಮಾನ್ಯವಾಗಿ ಹೇಳುವುದುಂಟು. ಹೆಚ್ಚಿನ ಪುರುಷರು ಅಳು ಬಂದರೂ, ಅದನ್ನು ತೋರಿಸಿಕೊಳ್ಳುವುದಿಲ್ಲ. ಇನ್ನೂ ಕೆಲವೊಬ್ಬರು ಅವರ ಪರಿಸ್ಥಿತಿಯಿಂದಾಗಿ ಅಳುವನ್ನು ನುಂಗುವ ಗುಣವನ್ನು ಅಳವಡಿಸಿಕೊಂಡಿರುತ್ತಾರೆ. ಅಳುವುದು ತಪ್ಪಲ್ಲ. ನೀವು ಅಳು ಬಂದಾಗ ಅಂದನ್ನು ಕಂಟ್ರೋಲ್ ಮಾಡಿ ಸಹಿಸಿಕೊಂಡಿರಿ ಎಂದಾದರೆ, ನಿಮಗೆ ಆರೋಗ್ಯ ಸಮಸ್ಯೆ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ರಾತ್ರಿ ಲೈಟ್ ಆನ್ ಮಾಡಿ ಮಲಗೋ ಮುನ್ನ ಎಚ್ಚರ! – ಸಣ್ಣ ತಪ್ಪಿನಿಂದ ಆರೋಗ್ಯಕ್ಕೆ ಕುತ್ತು!
ನೀವು ಮನಃಪೂರ್ವಕವಾಗಿ ಅಳುತ್ತಿದ್ದರೆ, ದೇಹದ ಕೆಲವು ಅಂಗಗಳು ಕೂಡಾ ಆರೋಗ್ಯಕರವಾಗಿರುತ್ತವೆ. ವಿಶೇಷವಾಗಿ ಮಾನಸಿಕ ನೆಮ್ಮದಿ ನಿಮ್ಮದಾಗುತ್ತದೆ. ಮನಸು ಹಗುರವಾಗುತ್ತದೆ. ಇದರಿಂದ ದೇಹಕ್ಕೆ ಒಳ್ಳೆಯದೇ. ಕೆಲವೊಬ್ಬರು ಚಿಕ್ಕ ಚಿಕ್ಕ ವಿಷಯಗಳಿಗೂ ಆಗಾಗ ಕಣ್ಣೀರು ಹಾಕುತ್ತಾರೆ. ಇದಕ್ಕಾಗಿ ಅಳುಮೂತಿ ಎಂದೇ ಅಡ್ಡಹೆಸರುಗಳನ್ನು ಇಟ್ಟಿರುತ್ತಾರೆ. ವಾಸ್ತವವಾಗಿ ಅವರು ಮಾನಸಿಕವಾಗಿ ತುಂಬಾ ಸಂತೋಷವಾಗಿರುತ್ತಾರೆ. ಅಲ್ಲದೆ ಶಾಂತವಾಗಿಯೂ ಇರುತ್ತಾರೆ. ಅಳುವುದು ನರಮಂಡಲದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದು ದೇಹ ಮತ್ತು ಮನಸ್ಸನ್ನು ವಿಶ್ರಾಂತ ಸ್ಥಿತಿಯಲ್ಲಿ ಇಡುತ್ತದೆ.
ಕಣ್ಣು ರೆಪ್ಪೆಗಳನ್ನು ಮಿಟುಕಿಸುವುದು ಎಷ್ಟು ಮುಖ್ಯವೋ, ಕಣ್ಣೀರು ಹೊರಹೋಗುವುದು ಕೂಡಾ ಅಷ್ಟೇ ಮುಖ್ಯ. ಅಳುವಾಗ ಕಣ್ಣೀರು ಹೊರಹೋಗುತ್ತದೆ. ಇಂತಹ ಸಂದರ್ಭದಲ್ಲಿ ಕಣ್ಣುಗಳಲ್ಲಿನ ಧೂಳು ಮತ್ತು ಕಣಗಳು ಕೂಡಾ ನಿಮಗೆ ತಿಳಿಯದಂತೆ ಹೊರಹೋಗುತ್ತದೆ. ಹೀಗಾಗಿಯೇ ಕಣ್ಣುಗಳನ್ನು ತೇವವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಅಳುವುದು ನಮ್ಮ ಭಾವನೆಗಳ ಒಂದು ಭಾಗ. ದೇಹದಲ್ಲಿ ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆಯಾಗುವುದರಿಂದ ದೈಹಿಕ ನೋವು ನಿವಾರಣೆಯಾಗುತ್ತದೆ. ಈ ಹಾರ್ಮೋನ್‌ಗಳ ಬಿಡುಗಡೆಯಿಂದಾಗಿ ನೀವು ಅತ್ತ ನಂತರ ಮನಸ್ಸು ಹಗುರವಾದ ಅನುಭವ ಪಡೆಯುತ್ತೀರಿ.