ರಾಹುಲ್ RCB ಸೇರೋದು ಫಿಕ್ಸ್ – KL ಕ್ಯಾಪ್ಟನ್ & ವಿಕೆಟ್ ಕೀಪರ್
ಕನ್ನಡಿಗನ ಎಂಟ್ರಿಗೆ ಕೊಹ್ಲಿ ಒಪ್ಪಿದ್ರಾ?
ಫೈನಲಿ ಕೋಟಿ ಕೋಟಿ ಕನ್ನಡಿಗರು ಕಾಯ್ತಾ ಇದ್ದ ಗಳಿಗೆ ಕೊನೆಗೂ ಹತ್ತಿರವಾಗಿದೆ. ವರ್ಷಗಳ ಕನಸು ನನಸಾಗೋ ಕಾಲ ಬಂದಿದೆ. ಕನ್ನಡಿಗ ಕೆ.ಎಲ್ ರಾಹುಲ್ ಆರ್‌ಸಿಬಿ ಸೇರ್ತಾರೆ ಅನ್ನೋ ಬ್ರೇಕಿಂಗ್ ನ್ಯೂಸ್ ಕ್ರಿಕೆಟ್ ಲೋಕದಲ್ಲಿ ಹಲ್ಚಲ್ ಸೃಷ್ಟಿಸಿದೆ. 2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ರೇ ಮುನ್ನಡೆಸಲಿದ್ದಾರೆ ಅನ್ನೋ ಸುದ್ದಿ ಕೇಳೋಕೇ ಇಷ್ಟು ಚೆನ್ನಾಗಿದೆ. ಇನ್ನು ರಾಹುಲ್ರೇ ಆರ್‌ಸಿಬಿ ಜೆರ್ಸಿಯಲ್ಲಿ ಕಣಕ್ಕಿಳಿದ್ರೆ ಅದ್ರ ಎಫೆಕ್ಟ್ ಇನ್ಯಾವ ಮಟ್ಟಿಗೆ ಇರ್ಬೋದು. ಹಾಗಂತ ಇದೇನು ಊಹಾಪೋಹದ ಸುದ್ದಿ ಅಲ್ಲ. ಉನ್ನತ ಮೂಲಗಳ ಮಾಹಿತಿಯೊಂದಿಗೆ ನ್ಯಾಷನಲ್ ಮೀಡಿಯಾಗಳೇ ಈ ಬಗ್ಗೆ ರಿಪೋರ್ಟ್ ಮಾಡಿವೆ. ರಾಹುಲ್ ಎಲ್‌ಎಸ್‌ಜಿ ತಂಡ ಬಿಟ್ಟು ಬೆಂಗಳೂರು ತಂಡಕ್ಕೆ ಸೇರ್ತಾರೆ ಅಂತಾ ವರದಿ ಮಾಡಿದೆ. ಅಷ್ಟಕ್ಕೂ ರಾಹುಲ್ ಆರ್ಸಿಬಿಗೆ ಬಂದ್ರೆ ಏನೆಲ್ಲಾ ಲಾಭ ಇದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಟಿಯ ಕಣ್ಣಿಗೆ ಕಂಟಕವಾಯ್ತು ಕಾಂಟ್ಯಾಕ್ಟ್ ಲೆನ್ಸ್ – ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಜಸ್ಮೀನ್ ಗೆ ದೃಷ್ಟಿದೋಷ
ಆರ್‌ಸಿಬಿ.. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ತಂಡ. 17 ಆವೃತ್ತಿಯ ಐಪಿಎಲ್‌ನಲ್ಲಿ ಒಂದೇ ಒಂದು ಬಾರಿ ಕಪ್ ಗೆಲ್ಲದೇ ಇರುವ ಬೇಸರ ಇದ್ದೇ ಇದೆ. ಆದರೆ, ಅಭಿಮಾನಿಗಳು ಮಾತ್ರ ಈ ತಂಡವನ್ನು ಯಾವತ್ತೂ ಬಿಟ್ಟು ಕೊಟ್ಟಿಲ್ಲ. ಇದೀಗ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಲಖನೌ ಸೂಪರ್ ಜೇಂಟ್ಸ್ ತಂಡದಿಂದ ಹೊರ ಬರೋದು ಫೈನಲ್ ಆಗಿದೆ. 2022ರ ರಿಂದ ಇಲ್ಲಿಯವರೆಗೂ ಕೆಎಲ್ ರಾಹುಲ್ ಲಕ್ನೋ ತಂಡವನ್ನು ಮೂರು ವರ್ಷಗಳ ಕಾಲ ಮುನ್ನಡೆಸಿದ್ದಾರೆ. ಇದೀಗ ಅವರ ಮೂರು ವರ್ಷಗಳ ಒಪ್ಪಂದ ಅಂತ್ಯವಾಗಿದೆ. ಹೀಗಾಗಿ ಮುಂದಿನ ಐಪಿಎಲ್‌ಗೆ ಬೇರೆ ತಂಡವನ್ನು ಪ್ರತಿನಿಧಿಸೋದು ಪಕ್ಕಾ ಆಗಿದೆ. ಅಲ್ದೇ ಕನ್ನಡಿಗನನ್ನು ಉಳಿಸಿಕೊಳ್ಳುವ ಆಸಕ್ತಿಯನ್ನು ಲಕ್ನೋ ಫ್ರಾಂಚೈಸಿ ಕೂಡ ತೋರುತ್ತಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ಅಮಿತ್ ಮಿಶ್ರಾ ಕೂಡ ಇತ್ತೀಚೆಗೆ ಸಂದರ್ಶನದಲ್ಲಿ ಲಕ್ನೋ ತಂಡ ಹೊಸ ನಾಯಕನ ಹುಡುಕಾಟದಲ್ಲಿದೆ ಅನ್ನೋದನ್ನ ಹೇಳಿದ್ದರು. ಎಲ್‌ಎಸ್‌ಜಿ ನಾಯಕನ ಹುಡುಕಾಟದಲ್ಲಿದೆ. ಒಬ್ಬ ಒಳ್ಳೆಯ ಬ್ಯಾಟರ್‌ಗೇ ನಾಯಕತ್ವ ನೀಡಲು ತೀರ್ಮಾನಿಸಿದ್ದಾಗಿ ಮಿಶ್ರಾ ಸುಳಿವು ನೀಡಿದ್ದರು. ಹೀಗಾಗಿ ರಾಹುಲ್ 2025 ಐಪಿಎಲ್‌ಗೆ ಬೇರೊಂದು ತಂಡ ಸೇರಲಿದ್ದಾರೆ. ಮುಂದಿನ ಆವೃತ್ತಿಗೆ ಎಷ್ಟು ಆಟಗಾರರನ್ನು ರಿಟೇನ್ ಮಾಡಿಕೊಳ್ಳಬೇಕೆಂಬ ನಿಯಮವನ್ನು ಐಪಿಎಲ್ ಆಡಳಿತ ಮಂಡಳಿ ಇನ್ನೂ ಅಂತಿಮಗೊಳಿಸಿಲ್ಲ. ಇನ್ನು ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರೊಂದಿಗಿನ ರಾಹುಲ್ ಸಂಬಂಧ ಹದಗೆಟ್ಟಿದೆ. ಇದೇ ಕಾರಣಕ್ಕೆ ತಂಡ ತೊರೆಯೋ ಚಿಂತನೆಯಲ್ಲಿದ್ದಾರೆ.
ಆರ್ಸಿಬಿಯೊಂದಿಗೆ ತನ್ನ ಐಪಿಎಲ್ ವೃತ್ತಿಜೀವನ ಆರಂಭಿಸಿದ ರಾಹುಲ್, ಇದೀಗ ಮತ್ತೊಮ್ಮೆ ಫ್ರಾಂಚೈಸಿ ಸೇರುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಸದ್ಯ ಕೆಎಲ್ ರಾಹುಲ್ 2022ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಎರಡು ವರ್ಷ ಪ್ಲೇಆಫ್ ಪ್ರವೇಶಿಸಿತ್ತು. ಆದ್ರೆ 2024ರ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ತಂಡವು ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕಿಳಿಯಿತು. ಕೆಎಲ್ ರಾಹುಲ್ 2013 ಮತ್ತು 2016ರಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. 2016ರ ಐಪಿಎಲ್‌ನಲ್ಲಿ ಆಡಿದ 14 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಅರ್ಧ ಶತಕಗಳನ್ನು ಒಳಗೊಂಡಂತೆ 397 ರನ್ ಗಳಿಸುವುದರೊಂದಿಗೆ, ಆರ್‌ಸಿಬಿ ತಂಡವು ಆ ವರ್ಷ ರನ್ನರ್-ಅಪ್ ಆಗಿ ಮುಗಿಸಿತ್ತು. ಆರ್‌ಸಿಬಿ ನಂತರ ಎಸ್ಆರ್ಹೆಚ್, ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ತಂಡದ ಪರ ಕಣಕ್ಕಿಳಿದಿದ್ದರು. ಸದ್ಯ ಬೆಂಗಳೂರು ತಂಡವನ್ನು ಮುನ್ನಡೆಸಲು ಫ್ರಾಂಚೈಸಿ ಕೂಡ ಭಾರತೀಯ ಆಟಗಾರನ ಹುಡುಕಾಟ ನಡೆಸುತ್ತಿದೆ. 17 ಆವೃತ್ತಿಗಳಿಂದ ಟ್ರೋಫಿ ಗೆಲ್ಲುವಲ್ಲಿ ಫೇಲ್ ಆಗುತ್ತಿರುವ ರೆಡ್ ಆರ್ಮಿ, ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಕೈಬಿಡಲು ಚಿಂತಿಸುತ್ತಿದೆ. 2022ರಲ್ಲಿ ವಿರಾಟ್ ಕೊಹ್ಲಿ ಅವರಿಂದ ತಂಡದ ಜವಾಬ್ದಾರಿ ಪಡೆದ ಫಾಫ್ ನಾಯಕತ್ವದಲ್ಲೂ ಆರ್‌ಸಿಬಿ ಟ್ರೋಫಿ ಗೆಲ್ಲಲು ವಿಫಲವಾಯಿತು. ಪ್ರಸ್ತುತ ಫಾಫ್ಗೆ ಈಗ 40 ವರ್ಷ ವಯಸ್ಸಾಗಿರುವ ಕಾರಣ ಆರ್‌ಸಿಬಿ, ದೀರ್ಘಕಾಲೀನ ಯೋಜನೆಯತ್ತ ಪ್ಲ್ಯಾನ್ ಮಾಡುತ್ತಿದೆ. ಹೀಗಾಗಿ ರಾಹುಲ್ ಯೋಗ್ಯ ಆಯ್ಕೆ ಎಂದು ಆರ್‌ಸಿಬಿ ಚಿಂತಿಸಿದೆ. ಟ್ರೇಡ್ ಮೂಲಕವೇ ರಾಹುಲ್‌ಗೆ ಮಣೆ ಹಾಕಲು ಮುಂದಾಗಿದೆ.
ಕೆಎಲ್ ರಾಹುಲ್ ಲಕ್ನೋ ತಂಡ ಮಾತ್ರವಲ್ಲದೇ ಐಪಿಎಲ್ ನಲ್ಲಿ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಅನುಭವವನ್ನು ಹೊಂದಿದ್ದಾರೆ. ಟೀಂ ಇಂಡಿಯಾ ನಾಯಕರಾಗಿಯೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇನ್ನು ರಾಹುಲ್ RCBಗೆ ಕಮ್ ಬ್ಯಾಕ್ ಮಾಡ್ತಿರೋದಕ್ಕೆ ರಾಹುಲ್ ಹಾಗೂ ಫ್ರಾಂಚೈಸಿ ಕೂಡ ಸಕರಾತ್ಮಕವಾಗಿ ಸ್ಪಂದನೆ ನೀಡಿದೆ. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಬೆಂಗಳೂರು ತಂಡ ಈವರೆಗೂ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಸದ್ಯ ಆರ್ ಸಿಬಿ ಅಭಿಮಾನಿಗಳು ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಲು ಕಾಯುತ್ತಿದ್ದು, ಅದು ಕನ್ನಡಿಗ ಕೆಎಲ್ ರಾಹುಲ್ ಅವರ ನಾಯಕತ್ವದಲ್ಲಿ ಸಿಕ್ಕರೆ ಕ್ಯಾಪ್ಟನ್ ಆಗಿ ಕನ್ನಡಿಗ ಇತಿಹಾಸ ಸೃಷ್ಟಿ ಮಾಡಲಿದ್ದಾರೆ. 2024ರ ಐಪಿಎಲ್ ಟೂರ್ನಿ ಬಳಿಕ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿದ್ದರು. ಹೀಗಾಗಿ ವಿಕೆಟ್ ಕೀಪರ್ ಸ್ಥಾನವನ್ನೂ ತುಂಬುವ ಸಾಮರ್ಥ್ಯ ಕೆ.ಎಲ್ ರಾಹುಲ್‌ಗೆ ಇದೆ. ಸದ್ಯ ದಿನೇಶ್ ಕಾರ್ತಿಕ್ ಬೆಂಗಳೂರು ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿರುವ ಕಾರಣ ಈ ಬಾರಿ ತಂಡದಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕೆಎಲ್ ರಾಹುಲ್‌ಗೆ ಆರ್ ಸಿಬಿ ಜೊತೆ ಭಾವನಾತ್ಮಕ ನಂಟಿದ್ದು, ಆರ್ ಸಿಬಿ ನನ್ನಿಷ್ಟದ ತಂಡ, ತವರಿನಲ್ಲಿ ಆಡುವುದು ಎಂದಿಗೂ ಖುಷಿ ಕೊಡುತ್ತದೆ ಎಂದು ಹಲವು ಬಾರಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ 2025ರ ಟೂರ್ನಿಗೂ ಮುನ್ನ ಸಾಕಷ್ಟು ಸ್ಟಾರ್ ಆಟಗಾರರು ತಂಡವನ್ನ ತೊರೆಯೋ ನಿರ್ಧಾರ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ನ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ತಂಡ ತೊರೆಯುತ್ತಾರೆ ಎಂದೂ ಸುದ್ದಿಯಾಗಿದೆ. ಅಲ್ಲದೆ, ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಿಂದ ಬೇರ್ಪಟ್ಟು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂಎಸ್ ಧೋನಿ ಸ್ಥಾನ ತುಂಬಲಿದ್ದಾರೆ ಎಂಬ ಬಗ್ಗೆ ಚರ್ಚೆಯಾಗ್ತಿದೆ. ಐಪಿಎಲ್‌ನಲ್ಲಿ ತಂಡಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದರ ನಿಯಮ ಬಿಡುಗಡೆ ಮಾಡಿದ ನಂತರ ಈ ವದಂತಿಗಳಿಗೂ ಸ್ಪಷ್ಟನೆ ಸಿಗಲಿದೆ. ಕೆಲವು ವರದಿಗಳು ಒಂದು ತಂಡ ಒಬ್ಬರನ್ನಷ್ಟೇ ಉಳಿಸಿಕೊಳ್ಳುವ ನಿಯಮ ಜಾರಿಗೆ ತರಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಹೇಳಿವೆ. ಒಟ್ಟಾರೆ ಒಂದಲ್ಲ ಎರಡಲ್ಲ ಬರೋಬ್ಬರಿ 17 ವರ್ಷಗಳಿಂದ ಕಪ್ ಗೆಲ್ಲದೇ ಇರೋ ಬೆಂಗಳೂರು ಫ್ರಾಂಚೈಸಿ 18ನೇ ಸೀಸನ್ನಲ್ಲಿ ಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಇದೇ ಕಾರಣಕ್ಕೆ ತಂಡದಲ್ಲಿ ಈಗಾಗ್ಲೇ ಸಾಕಷ್ಟು ಬದಲಾವಣೆಗಳಿಗೂ ಮುನ್ನುಡಿ ಬರೆದಿದೆ. ಅದ್ರಂತೆ ಕೆ.ಎಲ್ ರಾಹುಲ್ ಏನಾದ್ರೂ ತಂಡ ಸೇರಿಕೊಂಡ್ರೆ ಆನೆ ಬಲ ಬಂದಂತಾಗುತ್ತೆ.