ಪಾಂಡ್ಯ Vs ರಾಹುಲ್ ಕ್ಯಾಪ್ಟನ್ ರೇಸ್ – ಲಂಕಾ ಸರಣಿಗೆ ಕನ್ನಡಿಗ KL ಸಾರಥಿ?
KO-RO ಜೊತೆ ಶಾಕ್ ಕೊಟ್ಟ ಬುಮ್ರಾ

ಟಿ-20 ವಿಶ್ವಕಪ್ ಫೈನಲ್ ಗೆದ್ದ ಬೆನ್ನಲ್ಲೇ ಹಿಟ್ಮ್ಯಾನ್ ರೋಹಿತ್ ಶರ್ಮಾ ಹಾಗೇ ರನ್ ಮಿಷನ್ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದಾರೆ. ಸೋ ಈ ಇಬ್ಬರು ಲೆಜೆಂಡರಿ ಕ್ರಿಕೆಟರ್ಸ್ ಮತ್ತೆ ಯಾವಾಗ ಮೈದಾನಕ್ಕೆ ಬರ್ತಾರೋ ಅಂತಾ ಕೋಟಿ ಕೋಟಿ ಅಭಿಮಾನಿಗಳು ಕಾಯ್ತಿದ್ದಾರೆ. ಬಟ್ ಸದ್ಯಕ್ಕಂತೂ ಈ ದಿಗ್ಗಜ ಆಟಗಾರರು ಗ್ರೌಂಡ್ಗೆ ಇಳಿಯೋದು ಡೌಟಿದೆ. ವಿಶ್ವಕಪ್ ವಿಜೇತ ಈ ಜೋಡಿ ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಭಾಗಿಯಾಗುವ ಸಾಧ್ಯತೆ ಇಲ್ಲ. ಅಲ್ದೇ ಹೆಚ್ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಈಗಾಗ್ಲೇ ಕೆಳಗಿಳಿದಿರೋದ್ರಿಂದ ಗೌತಮ್ ಗಂಭೀರ್ ಹೆಡ್ಕೋಚ್ ಪಟ್ಟಕ್ಕೇರಲಿದ್ದಾರೆ. ಬಟ್ ಇಲ್ಲಿ ಇನ್ನೊಂದು ಟ್ವಿಸ್ಟ್ ಅಂದ್ರೆ ಕ್ಯಾಪ್ಟನ್ ಯಾರಾಗ್ತಾರೆ ಅನ್ನೋದು. ವಿಶ್ವಕಪ್ ಹೀರೋ ಹಾಗೇ ಕನ್ನಡಿಗನ ನಡುವೆ ಕ್ಯಾಪ್ಟನ್ಸಿ ರೇಸ್ ನಡೀತಿದೆ. ಅಷ್ಟಕ್ಕೂ ಯಾರು ಆ ಇಬ್ಬರು? ಕೊಹ್ಲಿ ಮತ್ತು ರೋಹಿತ್ ಮತ್ತೆ ಮೈದಾನಕ್ಕೆ ಇಳಿಯೋದು ಯಾವಾಗ? ಲಂಕಾ ಸರಣಿಯಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಅನ್ನೋ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚಹಲ್ ಗೆ ಲೇಡಿ ಲಕ್ – ಧನ್ಯಶ್ರೀಗೆ ಮೆಡಲ್ ಅರ್ಪಣೆ!! – ಬೌಲರ್‌ಗೆ ಡ್ಯಾನ್ಸ್ ಟೀಚರ್ ಬೋಲ್ಡ್
ಸದ್ಯ ಟಿ-20 ವಿಶ್ವಕಪ್ ಗೆದ್ದ ಬಳಿಕ ಕೊಹ್ಲಿ, ವಿರಾಟ್ ಹಾಗೇ ಬುಮ್ರಾ ಮೂವರೂ ಕೂಡ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡೋ ಮುನ್ನ ಮತ್ತಷ್ಟು ದಿನ ಬ್ರೇಕ್ ತೆಗೆದುಕೊಳ್ಳೋಕೆ ನಿರ್ಧರಿಸಿದ್ದಾರೆ. ಬಿಸಿಸಿಐ ಮೂಲಗಳಿಂದಲೇ ಈ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ಶ್ರೀಲಂಕಾ ಪ್ರವಾಸಕ್ಕೆ ಅಲಭ್ಯರಾಗಲಿರುವ ಈ ಮೂವರು ಕ್ರಿಕೆಟಿಗರು ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರು ಕೊನೆಯದಾಗಿ ಏಕದಿನ ಕ್ರಿಕೆಟ್ ಆಡಿದ್ದು 2023ರ ನವೆಂಬರ್ 19ರಂದು. ಏಕದಿನ ವಿಶ್ವಕಪ್ ಫೈನಲ್ ನಂತರ ಒಡಿಐ ಆಡದ ಹಿಟ್ಮ್ಯಾನ್ ಮತ್ತು ಕಿಂಗ್ ಇದೀಗ 50 ಓವರ್ಗಳ ಮಾದರಿಗೆ ಮರಳಲು ಮತ್ತಷ್ಟು ಡಿಲೇ ಆಗಲಿದೆ. ಕಳೆದ ತಿಂಗಳು ಕೆರಿಬಿಯನ್ನಲ್ಲಿ ನಡೆದ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ನಂತರ ಚುಟುಕು ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರೂ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಕದಿನ ಮಾದರಿಯಲ್ಲಿ ಇಬ್ಬರೂ ಕೂಡ ಮೇನ್ ಪಿಲ್ಲರ್ ಆಗಿದ್ರೂ ಲಂಕಾ ಸರಣಿಯಿಂದ ದೂರವೇ ಉಳಿಯಲಿದ್ದಾರೆ. ಬಟ್ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯೋ ಚಾನ್ಸಸ್ ಇದೆ. ಉಳಿದಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಗ್ರೌಂಡ್ಗೆ ಇಳಿಯಲಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ರೋಹಿತ್ ಅವರೇ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವ್ರೇ ಇದನ್ನ ಕನ್ಫರ್ಮ್ ಮಾಡಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಡಬ್ಲ್ಯುಟಿಸಿಯಲ್ಲಿ ಎರಡು ಟೆಸ್ಟ್ ಸರಣಿಗೆ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಆ ಬಳಿಕ ನ್ಯೂಜಿಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯ ನಂತರ ಭಾರತ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸುವ ನಿರೀಕ್ಷೆ ಇದೆ. ಶ್ರೀಲಂಕಾ ಈ ತಿಂಗಳ ಕೊನೆಯಲ್ಲಿ 3 ಟಿ20 ಮತ್ತು ಏಕದಿನ ಪಂದ್ಯಗಳಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. 3 ಪಂದ್ಯಗಳ ಏಕದಿನ ಸರಣಿ ಆಗಸ್ಟ್ನಲ್ಲಿ ಪ್ರಾರಂಭವಾಗಲಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕೆ.ಎಲ್ ರಾಹುಲ್ ಅಥವಾ ಹಾರ್ದಿಕ್ ಪಾಂಡ್ಯ ಮುನ್ನಡೆಸೋ ಸಾಧ್ಯತೆ ಇದೆ. ಯಾಕಂದ್ರೆ ಈ ಸರಣಿಯಿಂದ ಭಾರತ ತಂಡದ ಸ್ಟಾರ್ ಪ್ಲೇಯರ್ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ವಿಶ್ರಾಂತಿಯ ಕಾರಣದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ಬದಲಿಗೆ ಕೆಎಲ್ ರಾಹುಲ್ ಅಥವಾ ಹಾರ್ದಿಕ್ ಪಾಂಡ್ಯಗೆ ನಾಯಕನ ಪಟ್ಟ ಕಟ್ಟೋ ಸಾಧ್ಯತೆ ಇದೆ. ಸದ್ಯ ಝಿಂಬಾಬ್ವೆಯಲ್ಲಿ 5 ಪಂದ್ಯಗಳ ಟಿ-20 ಸರಣಿ ಆಡ್ತಿರೋ ಟೀಂ ಇಂಡಿಯಾ ಈಗಾಗ್ಲೇ 2 ಪಂದ್ಯಗಳನ್ನ ಆಡಿದೆ. ಈ ಪೈಕಿ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿದೆ. ಜಿಂಬಾಬ್ವೆ ಸರಣಿಯನ್ನ ಶುಭ್ಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ಸೋ ಈ ಸರಣಿ ಮುಗಿದ ಬಳಿಕ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಇಲ್ಲಿ ಏಕದಿನ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸುವ ಸಾಧ್ಯತೆಯಿದ್ದರೆ, ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಮುಂದುವರೆಸೋ ನಿರೀಕ್ಷೆಯಿದೆ. ಯಾಕಂದ್ರೆ ಈ ಹಿಂದೆ ಭಾರತ ಟಿ20 ತಂಡದ ನಾಯಕರಾಗಿ ಪಾಂಡ್ಯ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿಯ ಟಿ20 ವಿಶ್ವಕಪ್ಗೂ ಮುನ್ನ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ನೀಡಲಾಗಿತ್ತು. ಇದೀಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹಿಟ್ಮ್ಯಾನ್ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. ಇನ್ನು ಭಾರತ ಮತ್ತು ಶ್ರೀಲಂಕಾ ನಡುವಿನ 6 ಪಂದ್ಯಗಳ ಸರಣಿಯ ವೇಳಾಪಟ್ಟಿಯನ್ನು ಇನ್ನೂ ಸಹ ನಿಗದಿ ಮಾಡಲಾಗಿಲ್ಲ. ಬಟ್ ಜುಲೈ 27 ರಿಂದ ಆಗಸ್ಟ್ 7 ರ ನಡುವೆ ನಡೆಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಹೀಗಾಗಿ ಇದೇ ಅವಧಿಯಲ್ಲಿ ಆರು ಪಂದ್ಯಗಳು ನಡೆಯುವ ಸಾಧ್ಯತೆಯಿದೆ.
ತಿಂಗಳಾಂತ್ಯದಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವೆ ಸರಣಿ ನಡೆಯಲಿದೆ. ಬಟ್ ಲಂಕಾ ವಿರುದ್ಧದ ಪ್ರವಾಸಕ್ಕೆ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಮುಂದಿನ ವಾರ ಆಯ್ಕೆ ಸಮಿತಿ ಸಭೆ ಸೇರಿ ಶ್ರೀಲಂಕಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಲಿದೆ. ಇದರ ಜೊತೆಗೆ ಟೀಂ ಇಂಡಿಯಾಕ್ಕೆ ಹೊಸ ಮುಖ್ಯ ಕೋಚ್ ಕೂಡ ಆಯ್ಕೆಯಾಗಬೇಕಿದೆ. ಈ ಮುಖ್ಯ ಕೋಚ್ ಅಧಿಕಾರಾವಧಿಯಲ್ಲಿ ಲಂಕಾ ಪ್ರವಾಸಕ್ಕೆ ಯಾವ ತಂಡ ಆಯ್ಕೆಯಾಗಲಿದೆ ಅನ್ನೋದು ಕೂಡ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆ. ಬಿಸಿಸಿಐ ಮೂಲಗಳ ಪ್ರಕಾರ ‘ಹಿರಿಯ ಆಟಗಾರರು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಆನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ತಂಡಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ. ಬಾಂಗ್ಲಾದೇಶದೊಂದಿಗಿನ ಸರಣಿಯ ನಂತರ, ಭಾರತ ತಂಡ ಅಕ್ಟೋಬರ್ 16 ರಿಂದ ನವೆಂಬರ್ 5 ರವರೆಗೆ ನ್ಯೂಜಿಲೆಂಡ್‌ಗೆ ಆತಿಥ್ಯ ವಹಿಸಲಿದೆ. ಈ ಮುಖಾಮುಖಿಯಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಇದಾದ ಬಳಿಕ ಟೀಂ ಇಂಡಿಯಾ ನವೆಂಬರ್ 8 ಮತ್ತು 15 ರ ನಡುವೆ ನಾಲ್ಕು ಟಿ20 ಪಂದ್ಯಗಳನ್ನು ಆಡಲು ದಕ್ಷಿಣ ಆಫ್ರಿಕಾಕ್ಕೆ ಹೋಗಲಿದೆ. ಇದಾದ ಬಳಿಕ ನವೆಂಬರ್ 22 ರಿಂದ ಆಸ್ಟ್ರೇಲಿಯಾದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಇನ್ನು ಟೀಂ ಇಂಡಿಯಾದ ಮುಂಬರುವ ಸರಣಿಗಳಿಗೆ ಆಟಗಾರರು, ಹೆಡ್ಕೋಚ್, ಕ್ಯಾಪ್ಟನ್ ಜೊತೆಗೆ ಬಿಸಿಸಿಐಗೆ ಮತ್ತೊಂದು ಸವಾಲೂ ಇದೆ. ತಂಡದ ಸಹಾಯಕ ಸಿಬ್ಬಂದಿಗೆ ಅರ್ಜಿಗಳನ್ನು ಆಹ್ವಾನಿಸಬೇಕಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಕ್ರಿಕೆಟ್ ಸಲಹಾ ಸಮಿತಿಯು ಈಗಾಗಲೇ ಇಬ್ಬರು ಅಭ್ಯರ್ಥಿಗಳಾದ ಗೌತಮ್ ಗಂಭೀರ್ ಮತ್ತು ಡಬ್ಲ್ಯೂವಿ ರಾಮನ್ ಅವರನ್ನು ಮುಖ್ಯ ಕೋಚ್ ಹುದ್ದೆಗೆ ಸಂದರ್ಶನ ನಡೆಸಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಸ್ಥಾನವನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ. ನೂತನ ಕೋಚ್ ಶ್ರೀಲಂಕಾ ಸರಣಿಗೆ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಅಲ್ದೇ ಗಂಭೀರ್‌ಗೆ ಇಲ್ಲಿ ಸ್ಪೆಷನ್ ಪವರ್ ಕೂಡ ನೀಡಲಾಗಿದೆ. ತಮ್ಮ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಲು ಮಂಡಳಿಯು ಗಂಭೀರ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಿದೆ. ಗಂಭೀರ್ ಸ್ವತಃ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವುದರಿಂದ ಭಾರತ ತಂಡಕ್ಕೆ ಅವರೇ ಬ್ಯಾಟಿಂಗ್ ಕೋಚ್ ಆಗುವ ಸಾಧ್ಯತೆಗಳೂ ಇವೆ.
ಸದ್ಯ ವಿಶ್ವಕಪ್ ಗೆದ್ದ ಬಳಿಕ ದಿಗ್ಗಜ ಆಟಗಾರರು ರಿಲ್ಯಾಕ್ಸ್ ಮೋಡ್ಗೆ ಜಾರಿದ್ದಾರೆ. ಅನುಭವಿ ಆಟಗಾರರ ಆಬ್ಸೆನ್ಸ್ನಲ್ಲಿ ಕ್ಯಾಪ್ಟನ್ ಮತ್ತು ಆಟಗಾರರನ್ನ ಸೆಲೆಕ್ಟ್ ಮಾಡಬೇಕಾದ ಸವಾಲು ಬಿಸಿಸಿಐ ಮೇಲಿದೆ. ಲಂಕಾ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಹೆಸರು ಕ್ಯಾಪ್ಟನ್ಸಿ ರೇಸ್ನಲ್ಲಿದೆ. ಟಿ-20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಮತ್ತೊಮ್ಮೆ ತಂಡಕ್ಕೆ ಕಮ್ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದ್ದಾರೆ.