ಕನ್ನಡಿಗನ ಕೈಯಲ್ಲಿ RCB ಪ್ಲೇ ಆಫ್ – ಡೆಲ್ಲಿ ವಿರುದ್ಧ ಆಡಲ್ವಾ K.L ರಾಹುಲ್?
ಹೊಸ ನಾಯಕನಿಗೆ ಪಟ್ಟ ಕಟ್ಟುತ್ತಾ LSG?
ಯಾರು ಗೆದ್ರೆ ಯಾರಿಗೆ ಅನುಕೂಲ. ಯಾರು ಸೋತ್ರೆ ಮತ್ತೊಬ್ಬರಿಗೆ ಲಾಭ. ಹೀಗೆ ಐಪಿಎಲ್ನಲ್ಲಿ ಪ್ಲೇ ಆಫ್ ಕ್ಯಾಲ್ಕುಲೇಷನ್ ಭರ್ಜರಿಯಾಗಿ ನಡೀತಿದೆ. ಸ್ಕೂಲಲ್ಲಿ ಮ್ಯಾತ್ಸ್ ಕ್ಯಾಸ್ಗಳಲ್ಲೂ ಈ ರೇಂಜ್ಗೆ ತಲೆ ಕೆಡಿಸಿಕೊಂಡಿದ್ರೋ ಇಲ್ವೋ. ಆ ರೇಂಜ್ಗೆ ಟಾಪ್ 4 ರೇಸ್ ಲೆಕ್ಕಾಚಾರ ಹಾಕ್ತಿದ್ದಾರೆ. ಸದ್ಯ ಈ ರೇಸ್ನಲ್ಲಿರೋ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೇಂಟ್ಸ್ ನಡುವೆ ಮಂಗಳವಾರ ಮ್ಯಾಚ್ ನಡೆಯಲಿದ್ದು, ಉಭಯ ತಂಡಗಳಿಗೂ ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಪಂದ್ಯದಲ್ಲಿ ಯಾರು ಗೆದ್ದು ಯಾರು ಸೋತ್ರೆ ನಮ್ಮ ಹಾದಿ ಕ್ಲಿಯರ್ ಆಗುತ್ತೆ ಅಂತಾ ಆರ್ಸಿಬಿ ಫ್ಯಾನ್ಸ್ ಕೂಡ ಯೋಚನೆಯಲ್ಲಿದ್ದಾರೆ. ಆದ್ರೆ ಪಂದ್ಯಕ್ಕೂ ಮುನ್ನವೇ ಲಕ್ನೋ ತಂಡದಲ್ಲಿ ಸ್ಫೋಟಕ ಬೆಳವಣಿಗೆಗಳು ನಡೆದಿವೆ. ಎಲ್ಎಸ್ಜಿ ಕ್ಯಾಪ್ಟನ್ ಕೆ.ಎಲ್ ರಾಹುಲ್ ತಂಡದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಹುಕಾಲದ ಮೊದಲೇ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ಹೆಚ್.ಡಿ. ರೇವಣ್ಣ
ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿದೆ. ಈ ಎರಡೂ ತಂಡಗಳು ಇನ್ನೂ ಐಪಿಎಲ್ 2024ರ ಪ್ಲೇಆಫ್ ಲೆಕ್ಕಾಚಾರದಲ್ಲಿವೆ. ಹೀಗಾಗಿ ಈ ಪಂದ್ಯ ಗೆದ್ದ ತಂಡದ ಪ್ಲೇಆಫ್ ಆಸೆ ಜೀವಂತವಾಗಿರಲಿದೆ. ಸೋತರೆ ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ. ಈಗಾಗಲೇ ಡೆಲ್ಲಿ ಆಡಿರುವ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 7ರಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಲಕ್ನೋ ತಂಡ ಆಡಿದ 12 ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇದರಿಂದಾಗಿ ಈ ಎರಡೂ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲಿಯೂ ಕೆಎಲ್ ರಾಹುಲ್‌ಗೆ ಈ ಪಂದ್ಯ ತುಂಬಾನೇ ಇಂಪಾರ್ಟೆಂಟ್. ಕಳೆದ ಪಂದ್ಯದಲ್ಲಿ ಹೈದ್ರಾಬಾದ್ ವಿರುದ್ಧ ತಂಡ ಸೋತಿದ್ದರಿಂದ ರಾಹುಲ್ ಅವಮಾನಕ್ಕೆ ಒಳಗಾಗಿದ್ರು. ತಂಡದ ಮಾಲೀಕ ಸಂಜೀವ್ ಗೋಯೆಂಕಾ ಕೆ.ಎಲ್ ರಾಹುಲ್‌ಗೆ ಸಾರ್ವಜನಿಕವಾಗಿಯೇ ನಿಂದಿಸಿದ್ರು. ಈ ಬೆಳವಣಿಗೆಗಳ ನಡುವೆ ಎಲ್ಎಸ್ಜಿ ತಂಡದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕಾಗಿ KL ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದೊಂದಿಗೆ ದೆಹಲಿಗೆ ಪ್ರಯಾಣಿಸಿಲ್ಲ ಎನ್ನಲಾಗಿದೆ. ಸಹ ಆಟಗಾರರ ಜೊತೆ ಕೆಎಲ್ ರಾಹುಲ್ ಏಕೆ ಪ್ರಯಾಣಿಸಲಿಲ್ಲ ಎನ್ನುವುದೇ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕಳೆದ ಪಂದ್ಯದ ಬಳಿಕ ಮಾಲೀಕರಿಂದ ಆಗಿದ್ದ ಅವಮಾನದಿಂದ ರಾಹುಲ್ ಲಕ್ನೋ ತಂಡವನ್ನು ಬಿಟ್ಟು ಹೊರಬರಬೇಕು ಎಂಬ ಮಾತುಗಳೂ ಸಹ ಕೇಳಿಬಂದಿದ್ದವು. ಅಲ್ಲದೇ ಅನೇಕ ಹಿರಿಯ ಆಟಗಾರರರು ಹಾಗೂ ಅಭಿಮಾನಿಗಳು, ಕನ್ನಡಿಗರು ಈ ವಿಚಾರವಾಗಿ ರಾಹುಲ್ ಪರ ನಿಂತಿದ್ದರು. ಇದರ ನಡುವೆ ರಾಹುಲ್ ನಾಯಕತ್ವದ ಬಗ್ಗೆಯೂ ವಿವಾದಗಳು ಹುಟ್ಟಿಕೊಂಡಿತ್ತು. ಇದೀಗ ಸಂಜೀವ್ ಗೋಯೆಂಕಾ ಅವರೊಂದಿಗಿನ ಜಗಳದ ನಂತರ ರಾಹುಲ್ ಕೂಡ ಬೇಸರಗೊಂಡಿದ್ದು, ಇದೇ ಕಾರಣಕ್ಕಾಗಿ ಅವರು ತಂಡದ ಜೊತೆಗೆ ಪ್ರಯಾಣಿಸಿಲ್ಲ ಎನ್ನಲಾಗುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಹುಲ್ ಆಡುತ್ತಾರೆಯೇ? ಇಲ್ಲವೇ? ಎಂಬ ಪ್ರಶ್ನೆ ಮೂಡಿದೆ. ರಾಹುಲ್ ಆಡದಿದ್ದರೆ ಅವರ ಬದಲಿಗೆ ನಿಕೋಲಸ್ ಪೂರನ್ ನಾಯಕತ್ವ ವಹಿಸಬೇಕಾಗುತ್ತದೆ. ಆದರೆ ರಾಹುಲ್ ನೇರವಾಗಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಒಂದ್ಕಡೆಯಾದ್ರೆ ಲಕ್ನೋ ಮತ್ತು ಡೆಲ್ಲಿ ನಡುವಿನ ಪಂದ್ಯ ಆರ್ಸಿಬಿ ಪಾಲಿಗೂ ಮಹತ್ವದ್ದಾಗಿದೆ. ಯಾಕಂದ್ರೆ ಈ ಪಂದ್ಯದ ಫಲಿತಾಂಶ ಆರ್ಸಿಬಿ ತಂಡದ ಪ್ಲೇಆಫ್ ಹಾದಿಯನ್ನು ನಿರ್ಧರಿಸಲಿದೆ. ಅಂದರೆ ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದರ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಹಾದಿ ಸುಗಮವಾಗಲಿದೆ.
ಆರ್ಸಿಬಿ ಪಾಲಿಗೆ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲುವುದು ಉತ್ತಮ. ಏಕೆಂದರೆ 12 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು -0.482 ನೆಟ್ ರನ್ ರೇಟ್ ಹೊಂದಿದೆ. ಹೀಗಾಗಿ ಆರ್ಸಿಬಿ ತಂಡವನ್ನ ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಲು ಡೆಲ್ಲಿ ಕ್ಯಾಪಿಟಲ್ಸ್ ಏನಿಲ್ಲಾ ಅಂದರೂ ಕನಿಷ್ಠ 100 ಕ್ಕಿಂತ ಹೆಚ್ಚಿನ ರನ್ಗಳ ಅಂತರದಿಂದ ಗೆಲ್ಲಬೇಕು. ಅಂತಹ ಅಮೋಘ ಗೆಲುವು ಸಾಧಿಸಿದರೆ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರ್ಸಿಬಿಯನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಲು ಸಾಧ್ಯ. ಹಾಗೇ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋತರೆ 16 ಅಂಕಗಳನ್ನು ಕಲೆಹಾಕುವ ಅವಕಾಶ ಕಳೆದುಕೊಳ್ಳಲಿದೆ. ಅಂದರೆ ಎಲ್ಎಸ್ಜಿ ತಂಡಕ್ಕೆ ಇಂದಿನ ಪಂದ್ಯ ಸೇರಿ 2 ಪಂದ್ಯಗಳಿದ್ದು, ಈ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 16 ಅಂಕಗಳನ್ನು ಪಡೆಯಲಿದೆ. ಇದರಿಂದ ಆರ್ಸಿಬಿ ಪ್ಲೇಆಫ್ ರೇಸ್ನಿಂದ ಹೊರಬೀಳಬಹುದು. ಅದೇ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೋತರೆ ಆರ್ಸಿಬಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಹೆಚ್ಚಾಗಲಿದೆ. ಯಾಕಂದ್ರೆ ಎಲ್ಎಸ್ಜಿ ನೆಟ್ ರನ್ ರೇಟ್ ಆರ್ಸಿಬಿಗಿಂತ ಕಮ್ಮಿ ಇದೆ. ಹೀಗಾಗಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಲಕ್ನೋ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಡಿಮೆ ರನ್ಗಳ ಅಂತರದಿಂದ ಅಥವಾ ಸಾಮಾನ್ಯ ಗೆಲುವು ಸಾಧಿಸಬೇಕು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಲಿದೆ. ಇದಾಗ್ಯೂ ಸಿಎಸ್ಕೆ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಆರ್ಸಿಬಿಗೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲು ಉತ್ತಮ ಅವಕಾಶ ಇರಲಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಆರ್ಸಿಬಿ ಪಾಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವುದು ಉತ್ತಮ.