RO ಟೆಸ್ಟ್ ಉತ್ತರಾಧಿಕಾರಿ KL? – ಕನ್ನಡಿಗನಿಗೆ ಸಿಗುತ್ತಾ ಕ್ಯಾಪ್ಟನ್ಸಿ ಪಟ್ಟ?
ಪಂತ್ ರೇಸ್.. ರಾಹುಲ್ ಪ್ಲಸ್ಗಳೇನು?

ಟಿ-20 ವಿಶ್ವಕಪ್ ಬಳಿಕ ಹಿಟ್ಮ್ಯಾನ್ ರೋಹಿತ್ ಶರ್ಮಾ ಟಿ-20 ಫಾರ್ಮೆಟ್ಗೆ ಗುಡ್ಬೈ ಹೇಳಿದ್ರು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ಗೆ ನಾಯಕನಾಗಿ ಕಂಟಿನ್ಯೂ ಆಗಿದ್ದಾರೆ. ರೋಹಿತ್ ನಿವೃತ್ತಿ ಬಳಿಕ ಸೂರ್ಯಕುಮಾರ್ ಯಾದವ್ಗೆ ಟಿ-20 ಕ್ರಿಕೆಟ್ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ. ಬಟ್ ರೋಹಿತ್ ಶರ್ಮಾಗೆ ಸದ್ಯ 37 ವರ್ಷ ವಯಸ್ಸಾಗಿದ್ದು, ಮುಂದಿನ ವರ್ಷ ಎಲ್ಲಾ ಫಾರ್ಮೆಟ್ನ ಅಂತಾರಾಷ್ಟ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳ್ತಾರೆ ಅನ್ನೋ ಸುದ್ದಿ ಇದೆ. ಈಗ ಇರೋ ಪ್ರಶ್ನೆ ಅಂದ್ರೆ ಏಕದಿನ ಮತ್ತು ಟೆಸ್ಟ್ ಪಂದ್ಯಗಳ ಸಾರಥ್ಯ ಯಾರಿಗೆ ಅನ್ನೋದು. ಈ ಪೈಕಿ ಟೆಸ್ಟ್ ಕ್ಯಾಪ್ಟನ್ಸಿ ರೇಸ್ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹೆಸರು ಮುಂಚೂಣಿಯಲ್ಲಿದೆ.
ಇದನ್ನೂ ಓದಿ: ಬಾಲಿವುಡ್ ನಟಿ ಮಲೈಕಾ ಅರೋರ ತಂದೆ ದುರಂತ ಅಂತ್ಯ – ಕಾರಣವೇನು?
ಟಿ-20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾದ ನೆಕ್ಸ್ಟ್ ಟಾರ್ಗೆಟ್ ಇರೋದು 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಾಗೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮೇಲೆ. ಅದ್ರಲ್ಲೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ 2 ಬಾರಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿರೋ ಟೀಂ ಇಂಡಿಯಾ ಈ ಬಾರಿ ಟ್ರೋಫಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಎಲ್ಲಾ ದೇಶಗಳು 2023-25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಿವೆ. ಭಾರತ ಮತ್ತು ಆಸ್ಟ್ರೇಲಿಯಾ ಪ್ರಸ್ತುತ ಅಂಕಪಟ್ಟಿಯಲ್ಲಿ ಟಾಪ್ ತಂಡಗಳಾಗಿವೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಪಾಕಿಸ್ತಾನ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಸೇರಿದಂತೆ ಐದು ತಂಡಗಳು ಫೈನಲ್ಗೆ ಪ್ರವೇಶಿಸುವ ಸ್ಪರ್ಧೆಯಲ್ಲಿಲ್ಲ. ಇವುಗಳಲ್ಲಿ ಯಾವುದೇ ತಂಡ ಫೈನಲ್ ತಲುಪಬೇಕು ಅಂದ್ರೆ ಪವಾಡವೇ ನಡೀಬೇಕು ಅಷ್ಟೇ.
ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತ?
ಸದ್ಯ ಕ್ರಿಕೆಟ್ನಲ್ಲಿನ ಬೆಳವಣಿಗೆಗಳನ್ನ ಗಮನಿಸಿದ್ರೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2023-25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಪ್ರವೇಶಿಸುವ ಸಾಧ್ಯತೆಯಿದೆ. 2023 ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಇದೀಗ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವ ಅವಕಾಶವೂ ಇದೆ. ಬಟ್ ಡಬ್ಲ್ಯುಟಿಸಿ ಫೈನಲ್ ರೇಸ್ ನಲ್ಲಿ ಇಂಗ್ಲೆಂಡ್ ಕೂಡ ಬಲಿಷ್ಠ ತಂಡವಾಗಿದೆ. 2024ರ ಟಿ20 ವಿಶ್ವಕಪ್ ಮುಗಿಯುವವರೆಗೂ ಈ ತಂಡ ಸ್ಪರ್ಧೆಯಲ್ಲೇ ಇರ್ಲಿಲ್ಲ. ಬಟ್ ಇಂಗ್ಲೆಂಡ್ ಇತ್ತೀಚೆಗೆ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಭಾರತವು ಪ್ರಸ್ತುತ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 3ನೇ ಸ್ಥಾನ, ಬಾಂಗ್ಲಾದೇಶ 4ನೇ ಸ್ಥಾನ ಹಾಗೂ ಶ್ರೀಲಂಕಾ 5ನೇ ಸ್ಥಾನದಲ್ಲಿದೆ.
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಭಾರತಕ್ಕೆ ಇಂಪಾರ್ಟೆಂಟ್!
ಭಾರತವು ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಎರಡು ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಅಲ್ದೇ ಕೆಲ ನಿರ್ಣಾಯಕ ಟೆಸ್ಟ್ ಸರಣಿಗಳು ಟೀಮ್ ಇಂಡಿಯಾದ ಸ್ಥಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಭಾರತವು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ತವರು ಸರಣಿಗಳನ್ನು ಆಡಲಿದೆ. ಬಾಂಗ್ಲಾ ಸರಣಿ ಬಳಿಕ ಟೀಂ ಇಂಡಿಯಾ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ 2024 ರ ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ. ಸರಣಿಯ ಐದು ಟೆಸ್ಟ್ ಪಂದ್ಯಗಳು ಜನವರಿ 2025 ರವರೆಗೆ ನಡೆಯಲಿವೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬಳಿಕ ರೋಹಿತ್ ನಿವೃತ್ತಿ?
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬಳಿಕ ರೆಡ್ ಬಾಲ್ ಕ್ರಿಕೆಟ್ಗೆ ರೋಹಿತ್ ಶರ್ಮಾ ವಿದಾಯ ಹೇಳುವ ಸಾಧ್ಯತೆ ಇದೆ. ಹೀಗಾಗಿ ರೋಹಿತ್ ನಂತರ ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವ ಯಾರಿಗೆ ನೀಡಬೇಕು ಅನ್ನುವುದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ರೋಹಿತ್ ಜಾಗಕ್ಕೆ ಯಾರು ಬೆಸ್ಟ್ ಅನ್ನೋ ಚರ್ಚೆಯಲ್ಲಿ ಕೆ.ಎಲ್ ರಾಹುಲ್, ರಿಷಭ್ ಪಂತ್ ಹೆಸರು ಕೇಳಿ ಬಂದಿದೆ. ಬಾಂಗ್ಲಾ ವಿರುದ್ಧದ ಸೀರೀಸ್ಗೆ ಟೀಮ್ ಇಂಡಿಯಾ ಉಪನಾಯಕ ಯಾರು ಅನ್ನೋದನ್ನ ಅನೌನ್ಸ್ ಮಾಡಿಲ್ಲ. ಶುಭ್ಮನ್ ಗಿಲ್ ಅವರನ್ನು ಈಗಾಗಲೇ ಸೀಮಿತ ಓವರ್ಗಳ ಎರಡೂ ಆವೃತ್ತಿಗಳಿಗೆ ಉಪನಾಯಕ ಎಂದು ಘೋಷಿಸಲಾಗಿದೆ. ಆದರೆ ಟೆಸ್ಟ್ ಸರಣಿಗೆ ಯಾರನ್ನೂ ಆಯ್ಕೆ ಮಾಡಿಲ್ಲ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಕೆ.ಎಲ್ ರಾಹುಲ್ ಅವರನ್ನೇ ಟೆಸ್ಟ್ ತಂಡದ ಕ್ಯಾಪ್ಟನ್ ಮಾಡುವ ನಿರ್ಧಾರವನ್ನ ಬಿಸಿಸಿಐ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಕಾರಣವೂ ಇದೆ.
ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್!
ಟೆಸ್ಟ್ ಮ್ಯಾಚ್ಗೆ ಕೆಎಲ್ ರಾಹುಲ್ ಉತ್ತಮ ಆಯ್ಕೆ ಅನ್ನೋದಕ್ಕೆ ಕಾರಣವೂ ಅವ್ರ ಪರ್ಫಾಮೆನ್ಸ್. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ನಾಯಕತ್ವ ವಹಿಸಿರುವ ಅನುಭವ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೆ.ಎಲ್ಗೆ ಆಕ್ರಮಣಕಾರಿ ಮನೋಭಾವ ಇದ್ರೂ ತಾಳ್ಮೆಯಿಂದ ಇರುವ ಆಟಗಾರು. ಟೆಸ್ಟ್ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿರೋ ಕೆ.ಎಲ್ ರಾಹುಲ್ ಕ್ಲಾಸ್ ಮತ್ತು ತಾಳ್ಮೆಯಾಟಕ್ಕೆ ಸಾಕ್ಷಿ. ಕೆಎಲ್ ರಾಹುಲ್ ಇದುವರೆಗೆ 50 ಅಂತಾರಾಷ್ಟ್ರೀಯ ಟೆಸ್ಟ್ ಮ್ಯಾಚ್ಗಳಲ್ಲಿ ಆಡಿದ್ದಾರೆ. 86 ಇನ್ನಿಂಗ್ಸ್ಗಳಿಂದ 2863 ರನ್ ಕಲೆ ಹಾಕಿದ್ದಾರೆ. 199 ರನ್ ಅವ್ರ ಹೈಯೆಸ್ಟ್ ಸ್ಕೋರ್. 52.23ರ ಸ್ಟ್ರೈಕ್ರೇಟ್ನಲ್ಲಿ 34.08 ಆವರೇಜ್ ಹೊಂದಿದ್ದಾರೆ. ಹೀಗಾಗಿ ಟೆಸ್ಟ್ ಕ್ಯಾಪ್ಟನ್ಸಿಗೆ ಕೆಎಲ್ ಬೆಸ್ಟ್ ಆಯ್ಕೆಯಾಗಲಿದ್ದಾರೆ.
ಇನ್ನು ರೋಹಿತ್ ಶರ್ಮಾ ಬಗ್ಗೆ ಹೇಳೋದೇ ಬೇಡ. ಆರಂಭಿಕನಾಗಿ, ನಾಯಕನಾಗಿ ಟೀಂ ಇಂಡಿಯಾದ ಮೂರೂ ಫಾರ್ಮೆಟ್ಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ವರ್ಷ ತವರಿನಲ್ಲೇ ನಡೆದಿದ್ದ 2023ರ ಏಕದಿನ ವಿಶ್ವಕಪ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ರೋಹಿತ್, 120-ಪ್ಲಸ್ ಸ್ಟ್ರೈಕ್ ರೇಟ್‌ನಲ್ಲಿ 597 ರನ್ ಸಿಡಿಸಿದ್ದರು. 2019 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟರ್ ಆಗಿದ್ದು, 35 ಪಂದ್ಯಗಳಲ್ಲಿ 2552 ರನ್ ಗಳಿಸಿದ್ದಾರೆ. 2023-25ರ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ ರೋಹಿತ್ 3 ಶತಕ, 1 ಅರ್ಧಶತಕ ಸಹಿತ 700 ರನ್ ಬಾರಿಸಿದ್ದಾರೆ. ಸೋ ರೋಹಿತ್ರಷ್ಟೇ ಸಮರ್ಥ ಆಟಗಾರನಿಗೆ ನಾಯಕತ್ವ ನೀಡೋಕೆ ಬಿಸಿಸಿಐ ಪ್ಲ್ಯಾನ್ ಮಾಡ್ತಿದೆ. ಹೀಗಾಗಿ ಬಾಂಗ್ಲಾ ಸರಣಿಯಲ್ಲಿ ಕೆಎಲ್ ರಾಹುಲ್ ಹೇಗೆ ಪ್ರದರ್ಶ ನೀಡ್ತಾರೆ ಅನ್ನೋದನ್ನ ಕಾದು ನೋಡ್ಬೇಕು.