ಅಂತರಾಷ್ಟ್ರೀಯ ಕ್ರಿಕೆಟ್​ಗೆ KL ಗುಡ್ ಬೈ? – RCB ಕ್ಯಾಪ್ಟನ್ಸಿ ಹಿಂಟ್ ಕೊಟ್ರಾ ರಾಹುಲ್?
ಕನ್ನಡಿಗನ ಇನ್ಸ್​ಟಾಗ್ರಾಂ ಪೋಸ್ಟ್ ಗುಟ್ಟೇನು?

ಅಂತರಾಷ್ಟ್ರೀಯ ಕ್ರಿಕೆಟ್​ಗೆ KL ಗುಡ್ ಬೈ? – RCB ಕ್ಯಾಪ್ಟನ್ಸಿ ಹಿಂಟ್ ಕೊಟ್ರಾ ರಾಹುಲ್?ಕನ್ನಡಿಗನ ಇನ್ಸ್​ಟಾಗ್ರಾಂ ಪೋಸ್ಟ್ ಗುಟ್ಟೇನು?

ಸೋಶಿಯಲ್ ಮೀಡಿಯಾದಲ್ಲಿ ಕೆ.ಎಲ್ ರಾಹುಲ್ ಬಗೆಗಿನ ಸುದ್ದಿಯೊಂದು ಕಾಡ್ಗಿಚ್ಚಿನಂತೆ ಹಬ್ಬಿದೆ. ಕನ್ನಡಿಗ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ ಅನ್ನೋದು. ಅರೆ 40 ವರ್ಷ ಆಸುಪಾಸಿನಲ್ಲಿರೋ ಕ್ರಿಕೆಟಿಗರೇ ಕ್ರೀಡಾಂಗಣಕ್ಕೆ ಇಳಿದು ಆಡ್ತಿರುವಾಗ 32 ವರ್ಷದ ಕೆಎಲ್ ರಾಹುಲ್ ಅದ್ಯಾಕೆ ನಿವೃತ್ತಿ ಘೋಷಣೆ ಮಾಡಿದ್ರು ಅಂತಾ ಕೋಟಿ ಕೋಟಿ ಕನ್ನಡಿಗರು ಶಾಕ್ ಆಗಿದ್ದಾರೆ. ಹಾಗಾದ್ರೆ ಕೆಎಲ್ ಇಂಟರ್ ನ್ಯಾಷನಲ್ ಕ್ರಿಕೆಟ್ ಕರಿಯರ್ ಅಂತ್ಯವಾಯ್ತಾ? ನಿವೃತ್ತಿ ಘೋಷಣೆ ನಿಜನಾ? ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆಗಳೇನು ಅನ್ನೋ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಗ್‌ಬಾಸ್‌ ಗಾಗಿ 3 ಸೀರಿಯಲ್‌ ಎಂಡ್‌? – ಕಲರ್ಸ್‌ ಕನ್ನಡದಲ್ಲಿ ಎಲ್ಲವೂ ಚೇಂಜ್!!‌

ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್. ಮಿಡಲ್ ಆರ್ಡರ್​ನಲ್ಲಿ ಭಾರತ ತಂಡಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವ ಕ್ರಿಕೆಟರ್. ಇದೇ ತಿಂಗಳ ಮೊದಲ ವಾರ ಶ್ರೀಲಂಕಾ ವಿರುದ್ಧ ನಡೆದಿದ್ದ ಮೂರು ದಿನಗಳ ಏಕದಿನ ಸರಣಿಯಲ್ಲೂ ಕಣಕ್ಕಿಳಿದಿದ್ರು. ಹೀಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗ್ತಿದ್ರೂ ರಾಹುಲ್ ವಿದಾಯ ಘೋಷಿಸಿದ್ರಾ ಅಂತಾ ಇಡೀ ಕ್ರಿಕೆಟ್ ಜಗತ್ತೇ ಬಾಯ್ಮೇಲೆ ಬೆರಳಿಟ್ಟುಕೊಂಡಿದೆ. ರಾಹುಲ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಲಾಗಿದೆ ಎನ್ನಲಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿದೆ. ನಿವೃತ್ತಿ ಘೋಷಣೆಯ ಸ್ಕ್ರೀನ್ ಶಾಟ್ ಹರಿದಾಡ್ತಿದ್ದು ಅಭಿಮಾನಿಗಳಂತೂ ಆಘಾತಕ್ಕೆ ಒಳಗಾಗಿದ್ದಾರೆ. ಲಂಕಾ ಸರಣಿಯಲ್ಲಿ ಕಳಪೆ ಪ್ರದರ್ಶನದ ಕಾರಣ ನೀಡಿ ಮೂರನೇ ಪಂದ್ಯಕ್ಕೆ ಬೆಂಚ್ ಕಾಯಿಸಿದ್ದಕ್ಕೆ ಈ ನಿರ್ಧಾರಕ್ಕೆ ಬಂದ್ರಾ ಅನ್ನೋ ಚರ್ಚೆ ಶುರುವಾಗಿದೆ.

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದ ಬೇಸರದಲ್ಲಿ ವಿದಾಯ?  

ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್, ಕನ್ನಡಿಗ ಕೆಎಲ್ ರಾಹುಲ್ ಬಹಳ ದಿನಗಳ ನಂತರ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ರು. 2024 ರ ಐಪಿಎಲ್ ವೇಳೆ ಇಂಜುರಿಗೆ ತುತ್ತಾಗಿದ್ದ ರಾಹುಲ್, ಚೇತರಿಸಿಕೊಂಡ ನಂತರ ಶ್ರೀಲಂಕಾ ವಿರುದ್ಧದ ಮೂರು ದಿನಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆದರೆ ಲಂಕಾ ವಿರುದ್ಧದ ಸರಣಿಯಲ್ಲಿ ರಾಹುಲ್ ಪ್ರದರ್ಶನ ಅಷ್ಟಕಷ್ಟೆಯಾಗಿತ್ತು. ಹೀಗಾಗಿ ಮೂರನೇ ಏಕದಿನ ಪಂದ್ಯದಿಂದ ರಾಹುಲ್​ರನ್ನು ತಂಡದಿಂದ ಕೈಬಿಡಲಾಗಿತ್ತು. ಲಂಕಾ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ರಾಹುಲ್​ಗೆ ಭವಿಷ್ಯದಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಕಷ್ಟಕರ ಎಂದು ಹೇಳಲಾಗುತ್ತಿದೆ. ಮುಂಬರುವ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ವೇಳೆಯೂ ರಿಷಭ್ ಪಂತ್​ಗೆ ಚಾನ್ಸ್ ಸಿಗುತ್ತೆ, ಕೆಎಲ್ ರಾಹುಲ್​ರನ್ನ ಕೈ ಬಿಡಲಾಗುತ್ತೆ ಅನ್ನೋ ಬಗ್ಗೆ ಚರ್ಚೆಯಾಗ್ತಿದೆ. ಈ ಬಿಸಿ ಬಿಸಿ ಟಾಪಿಕ್ ನಡುವೆಯೇ ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ನಿವೃತ್ತಿ ಘೋಷಣೆ ಸುದ್ದಿ ಸದ್ದು ಮಾಡ್ತಿದೆ.  ಕೆಎಲ್ ರಾಹುಲ್​ ಅವರದ್ದೇ ಎಂದು ಬಿಂಬಿಸಿರುವ ಇನ್ಸಟಾಗ್ರಾಮ್ ಪೋಸ್ಟ್​ವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಪೋಸ್ಟ್​ನಲ್ಲಿ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿರುವ ಮಾಹಿತಿ ಇದೆ.

ಸಾಕಷ್ಟು ಬಾರಿ ಯೋಚಿಸಿದ ಬಳಿಕ ನಾನು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಯಾಕಂದ್ರೆ ಅನೇಕ ವರ್ಷಗಳಿಂದ ಕ್ರಿಕೆಟ್ ನನ್ನ ಜೀವನದ ಪ್ರಮುಖ ಭಾಗವಾಗಿದೆ. ನನ್ನ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ನನ್ನ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಮೈದಾನದ ಒಳಗೆ ಮತ್ತು ಹೊರಗೆ ನಾನು ಪಡೆದ ಅನುಭವಗಳು ಮತ್ತು ನೆನಪುಗಳು ನಿಜವಾಗಿಯೂ ಬೆಲೆಕಟ್ಟಲಾಗದವು. ನನ್ನ ದೇಶವನ್ನು ಪ್ರತಿನಿಧಿಸಲು ಮತ್ತು ಅನೇಕ ಪ್ರತಿಭಾವಂತ ಕ್ರಿಕೆಟಿಗರೊಂದಿಗೆ ಆಡಿದ್ದು ನನಗೆ ಹೆಮ್ಮೆ ತಂದಿದೆ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು.

ಹೀಗೆ ಇನ್ಸ್​​ಟಾಗ್ರಾಂ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಅಸಲಿಗೆ ಕೆಎಲ್ ರಾಹುಲ್​ ನಿವೃತ್ತಿ ಘೋಷಣೆಯನ್ನೇ ಮಾಡಿಲ್ಲ. ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರೋದಂತೂ ನಿಜ. ಆದರೆ ಆ ಪೋಸ್ಟ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯಕ್ಕೆ ಸಂಬಂಧಿಸಿದಲ್ಲ. ಬದಲಿಗೆ ರಾಹುಲ್ ಅವರ ಪೋಸ್ಟ್​ನಲ್ಲಿರೋದು ಏನಂದ್ರೆ, I have an announcement to make, stay tuned ಎಂದು ಬರೆದುಕೊಂಡಿದ್ದಾರೆ. ಅಂದ್ರೆ ನಾನು ನಿಮ್ಮ ಬಳಿ ಏನನ್ನೋ ಹೇಳಬೇಕಿದೆ.. ಕಾಯುತ್ತಿರಿ. ಅಂತಾ ಅರ್ಥ ಅಷ್ಟೇ. ಆದರೆ ರಾಹುಲ್ ಅವರ ಈ ಪೋಸ್ಟ್​​ ಅನ್ನು ತಿರುಚಿರುವ ಕಿಡಿಗೇಡಿಗಳು ರಾಹುಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ ಎಂಬ ಸುಳ್ಳುಸುದ್ದಿಯನ್ನ ಹಬ್ಬಿಸುತ್ತಿದ್ದಾರೆ. ಅದೂ ಕೂಡ ಕೆಎಲ್ ರಾಹುಲ್​ ಅವ್ರ ಅಧಿಕೃತ ಖಾತೆಯಲ್ಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ.

2014ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ

ಅಷ್ಟಕ್ಕೂ ಕೆಎಲ್ ರಾಹುಲ್ 2014 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ರು. ಇದುವರೆಗೆ ಟೀಂ ಇಂಡಿಯಾ ಪರ 50 ಟೆಸ್ಟ್, 77 ಏಕದಿನ ಹಾಗೂ 72 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಟೆಸ್ಟ್‌ನಲ್ಲಿ 2,863 ರನ್ ಕಲೆಹಾಕಿರುವ ರಾಹುಲ್, ಏಕದಿನದಲ್ಲಿ 2851 ರನ್ ಮತ್ತು ಟಿ20ಯಲ್ಲಿ 2,265 ರನ್ ಗಳಿಸಿದ್ದಾರೆ. ಇದಲ್ಲದೆ, ಐಪಿಎಲ್‌ನಲ್ಲೂ ಕೂಡ ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ.   2013 ರಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದ ರಾಹುಲ್ ಈವರೆಗೂ ನಾಲ್ಕು IPL ತಂಡಗಳಲ್ಲಿ ಆಡಿದ್ದಾರೆ. ಫಸ್ಟ್ ಸೀಸನ್​ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಆಡಿದ್ದ ರಾಹುಲ್ 2014 ಮತ್ತು 2015 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಭಾಗವಾಗಿದ್ದರು. ಬಳಿಕ 2016 ರಲ್ಲಿ RCB ಗೆ ರೀ ಜಾಯ್ನ್ ಆಗಿದ್ರು. ಇನ್ನು IPL 2017ರಲ್ಲಿ ಗಾಯದ ಸಮಸ್ಯೆಯಿಂದ ಕಣಕ್ಕಿಳಿದಿರಲಿಲ್ಲ. ನಂತರ 2018 ರಿಂದ 2021 ರವರೆಗೆ ಪಂಜಾಬ್ ಕಿಂಗ್ಸ್ ಪ್ರತಿನಿಧಿಸಿದರು. 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್  ಸೇರಿದ್ದ ಕೆಎಲ್ ಕಳೆದ ಮೂರು ವರ್ಷಗಳಿಂದ ತಂಡವನ್ನ ಲೀಡ್ ಮಾಡ್ತಿದ್ದಾರೆ.

2025ಕ್ಕೆ ಬೆಂಗಳೂರು ತಂಡಕ್ಕೆ ಬರ್ತಾರಾ ರಾಹುಲ್?

ಸದ್ಯ ಲಕ್ನೋ ತಂಡದ ಕ್ಯಾಪ್ಟನ್ ಆಗಿರುವ ರಾಹುಲ್ 2025ರ ಐಪಿಎಲ್ ವೇಳೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರ್ತಾರೆ ಅನ್ನೊ ಸುದ್ದಿ ಇದೆ. ಈ ಹಿಂದೆ ಆರ್​ಸಿಬಿ ಪರ ಆಡಿದ್ದ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ದೇ ಬೆಂಗಳೂರು ತಂಡ ಭವಿಷ್ಯದ ದೃಷ್ಟಿಯಿಂದ ಈಗಲೇ ಹೊಸ ನಾಯಕನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯಿದೆ. ಇತ್ತ ಕೆಎಲ್ ರಾಹುಲ್ ಆಯ್ಕೆಯಿಂದ ಆರ್​ಸಿಬಿ ಈ ಎರಡು ಸ್ಥಾನಗಳನ್ನು ತುಂಬಬಹುದು. ಅಂದರೆ ನಾಯಕನಾಗಿ ಎರಡು ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ಲೇಆಫ್​ಗೆ ಕೊಂಡೊಯ್ದಿರುವ ಕೆಎಲ್ ರಾಹುಲ್​ ಈಗಾಗಲೇ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿಯೂ ಐಪಿಎಲ್​ನಲ್ಲಿ ಮಿಂಚಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಆಯ್ಕೆಯಿಂದ ಆರ್​ಸಿಬಿ ವಿಕೆಟ್ ಕೀಪರ್ ಹಾಗೂ ನಾಯಕನ ಸ್ಥಾನವನ್ನು ತುಂಬಿಕೊಳ್ಳಬಹುದು. ಕರ್ನಾಟಕದ ಅಭಿಮಾನಿಗಳೂ ಕೂಡ ರಾಹುಲ್​ರನ್ನ ಬೆಂಗಳೂರು ತಂಡಕ್ಕೆ ಖರೀದಿ ಮಾಡುವಂತೆ ಫ್ರಾಂಚೈಸಿಗೆ ಮನವಿ ಮಾಡ್ತಿದ್ದಾರೆ. ಬಹುಶಃ ಇದೇ ವಿಚಾರವಾಗಿ ಹೇಳೋಕೆ ರಾಹುಲ್ ತಮ್ಮ ಇನ್ಸ್​​ಟಾಗ್ರಾಂನಲ್ಲಿ ಪೀಠಿಕೆ ಹಾಕಿದ್ರೇನೋ. ಅದನ್ನೇ ಕಿಡಿಗೇಡಿಗಳು ಈ ರೀತಿ ತಿರುಚಿದ್ರಾ ಅನ್ನೋ ಚರ್ಚೆ ಶುರುವಾಗಿದೆ. ಒಟ್ನಲ್ಲಿ ನಿವೃತ್ತಿ ಘೋಷಣೆ ವಿಚಾರವಂತೂ ಶುದ್ಧ ಸುಳ್ಳು. ಆದ್ರೆ ಕೆಎಲ್ ರಾಹುಲ್ ಆರ್​ಸಿಬಿಗೆ ಬರ್ತಾರೆ ಅನ್ನೋ ಸುದ್ದಿ ಮಾತ್ರ ನಿಜವಾಗ್ಲಿ ಅಂತಾ ಫ್ಯಾನ್ಸ್ ಕೂಡ ಕೇಳಿ ಕೊಳ್ತಿದ್ದಾರೆ.

Shwetha M