ಟೆಸ್ಟ್ ಮ್ಯಾಚ್.. ರಾಹುಲ್ಲಾ ರನ್ಸ್ ಎಲ್ಲಪ್ಪಾ – 4 ಪಂದ್ಯಗಳಿಂದ ಬಾಲ್ ತಿಂದಿದ್ದೇ ಸಾಧನೆ?
ಟೀಕಿಸಿದವ್ರ ಮುಂದೆ ಮತ್ತೆ ಸೋತ KL
ಮಂಗಳವಾರ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಲಕ್ನೋ ವರ್ಸಸ್ ಡೆಲ್ಲಿ ಪಂದ್ಯದ ರಿಸಲ್ಟ್ ಪ್ಲೇಆಫ್ನಲ್ಲಿ ಏನೆಲ್ಲಾ ಬದಲಾವಣೆ ಮಾಡುತ್ತೆ ಅಂತಾ ಬಹುತೇಕರು ಪಂದ್ಯ ನೋಡ್ತಾ ಇದ್ರು. ಆದ್ರೆ ಮತ್ತೊಂದಷ್ಟು ಜನರ ಕಣ್ಣು ನೆಟ್ಟಿದ್ದು ಮಾತ್ರ ಕೆ.ಎಲ್ ರಾಹುಲ್ ಮೇಲೆ. ಯಾಕಂದ್ರೆ ಟೆಸ್ಟ್ ಮ್ಯಾಚ್ ಎಂದು ಟೀಕೆ ಮಾಡಿದವ್ರಿಗೆ ತಿರುಗೇಟು ಕೊಡ್ತಾರೆ, ಮೈದಾನದಲ್ಲೇ ಹೀಯಾಳಿಸಿದ ಮಾಲೀಕನಿಗೆ ಬುದ್ಧಿ ಕಲಿಸ್ತಾರೆ, ತನ್ನ ಸಾಮರ್ಥ್ಯ ಏನು ಅನ್ನೋದನ್ನ ಪ್ರೂವ್ ಮಾಡ್ತಾರೆ ಅಂತಾನೇ ಕಾಯ್ತಿದ್ರು. ಆದ್ರೆ ರಾಹುಲ್ ಮತ್ತೊಮ್ಮೆ ಎಲ್ಲರನ್ನೂ ನಿರಾಸೆಗೊಳಿಸಿದ್ರು. ತಂಡವನ್ನ ಗೆಲ್ಲಿಸೋದಿರಲಿ ತಾನೇನು ಅಂತಾ ತೋರಿಸೋ ಪ್ರಯತ್ನವನ್ನೂ ಮಾಡ್ತಿಲ್ಲ. ಆರಂಭದಲ್ಲೇ 3 ಬಾಲ್ಗೆ 5 ರನ್ ಗಳಿಸಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರು. ಈ ಸ್ಕೋರ್ ನೋಡಿದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಿದ್ದಾರೆ. ರಾಹುಲ್ಲಾ ರನ್ಸ್ ಎಲ್ಲಪ್ಪಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಮೊದ್ಲೆಲ್ಲಾ ನಿಮ್ಮ ಮೇಲೆ ನಂಬಿಕೆ ಇಡಬಹುದಿತ್ತು. ಈಗ ನೋಡಿದ್ರೆ ಈ ರೀತಿ ಆಡ್ತಿದ್ದೀರಾ? ಅಂತ ಬೇಸರ ಹೊರ ಹಾಕಿದ್ದಾರೆ.
ತಾನೂ ಸೋತ ರಾಹುಲ್!
ಮಂಗಳವಾರದ ಪಂದ್ಯ ಎಲ್‌ಎಸ್‌ಜಿಗೆ ಡು ಆರ್ ಡೈ ಪಂದ್ಯವಾಗಿತ್ತು. ದೆಹಲಿ ವಿರುದ್ಧ ಗೆದ್ದಿದ್ರೆ ಪ್ಲೇಆಫ್ಗೆ ಹೋಗೋ ಚಾನ್ಸ್ ಇತ್ತು. ಅಲ್ದೇ ಕಳೆದ ಪಂದ್ಯದಲ್ಲಿ ಹೈದ್ರಾಬಾದ್ ವಿರುದ್ಧ ಕಳಪೆ ಪರ್ಫಾಮೆನ್ಸ್ ಕೊಟ್ಟು ಮಾಲೀಕರ ಸಿಟ್ಟಿಗೆ ಗುರಿಯಾಗಿದ್ದ ರಾಹುಲ್, ಇಂದಾದ್ರೂ ಉತ್ತಮ ಆಟವಾಡಿ ಗೆಲ್ಲಿಸುತ್ತಾರೆ. ತಮ್ಮ ಸಾಮರ್ಥ್ಯವನ್ನ ತೋರಿಸ್ತಾರೆ ಅಂತ ಆಸೆ ಇಟ್ಟುಕೊಂಡಿದ್ದರು. ವಿಶ್ವಕಪ್‌ಗೆ ರಾಹುರ್ರನ್ನ ಸೆಲೆಕ್ಟ್ ಮಾಡದೇ ಇದ್ದಿದ್ದಕ್ಕೆ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದರು. ಆದರೆ ರಾಹುಲ್ ಈ ರೀತಿ ಆಡ್ತಿರೋದನ್ನ ನೋಡಿ ಅಭಿಮಾನಿಗಳು ರಾಹುಲ್ ಅವರನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಟೆಸ್ಟ್ ಪಂದ್ಯದಂತೆ ಟಿ-20 ಮ್ಯಾಚ್ ಆಡಿದ್ರೆ ಗೆಲ್ಲೋಕೆ ಆಗುತ್ತಾ, ತಂಡದ ಕ್ಯಾಪ್ಟನ್ ಆಗಿ ನೀವೇ ಉತ್ತಮ ಸ್ಕೋರ್ ಮಾಡಿಲ್ಲ ಅಂದ್ರೆ ತಂಡವನ್ನ ಹೇಗೆ ಗೆಲ್ಲಿಸ್ತಿರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಐಪಿಎಲ್ ನಲ್ಲಿ ರಾಹುಲ್ ಈ ಸಲ ಸ್ವಲ್ಪ ಡಲ್ ಆಗಿದ್ದಾರೆ ನಿಜ. ಆದ್ರೆ ರಾಹುಲ್ ಏನು ಸಾಮಾನ್ಯ ಆಟಗಾರನಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಟೀಂ ಇಂಡಿಯಾದ ನಾಯಕನಾಗಿ ಗೆದ್ದು ತೋರಿಸಿದ್ದಾರೆ. ಹಿಂದಿನ ಸೀಸನ್ಗಳಲ್ಲಿ ಐಪಿಎಲ್ನಲ್ಲಿ ಮೂರು ಫ್ರಾಂಚೈಸಿಗಳ ಪರ ಆಡಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ನಾಲ್ಕು ಫ್ರಾಂಚೈಸಿಗಳಲ್ಲಿ ಆಟ!
2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಐಪಿಎಲ್ಗೆ ಕಾಲಿಟ್ಟಿದ್ದ ರಾಹುಲ್, ಬಳಿಕ ಒಂದೇ ಸೀಸನ್ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಟೀಂ ಸೇರಿಕೊಂಡಿದ್ರು. 2 ವರ್ಷಗಳ ಬಳಿಕ ಅಂದ್ರೆ 2016ರಲ್ಲಿ ಮತ್ತೆ ಆರ್ಸಿಬಿಗೆ ಬಂದ ರಾಹುಲ್ 2018ರಲ್ಲಿ 11 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಸೇರಿಕೊಂಡಿದ್ರು. ಬಳಿಕ 2022ರಲ್ಲಿ ಹರಾಜು ವೇಳೆ 17 ಕೋಟಿ ರೂಪಾಯಿಗೆ ಲಕ್ನೋ ತಂಡಕ್ಕೆ ಸೇರಿದ ರಾಹುಲ್ ನಾಯಕನಾಗಿ ತಂಡವನ್ನ ಲೀಡ್ ಮಾಡ್ತಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ತಂಡವನ್ನ ಪ್ಲೇಆಫ್ಗೆ ಕೊಂಡೊಯ್ದಿದ್ದಾರೆ. ಆದ್ರೆ ಈ ಸೀಸನ್ನಲ್ಲಿ ಮಾತ್ರ ಯಾಕೋ ಚೆನ್ನಾಗಿ ಪರ್ಫಾಮ್ ಮಾಡ್ತಿಲ್ಲ. ಕಳೆದ ನಾಲ್ಕು ಪಂದ್ಯಗಳಲ್ಲಿ ಟೆಸ್ಟ್ ಮ್ಯಾಚ್ ರೀತಿಯಲ್ಲಿ ಆಡ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ 22 ಬಾಲ್ಗಳಲ್ಲಿ 28 ರನ್, ಕೊಲ್ಕತ್ತಾ ವಿರುದ್ಧ 21 ಎಸೆತಗಳಲ್ಲಿ 25 ರನ್, ಹೈದ್ರಾಬಾದ್ ವಿರುದ್ಧ 33 ಬಾಲ್ಗಳಲ್ಲಿ 29 ರನ್, ಡೆಲ್ಲಿ ವಿರುದ್ಧ 3 ಎಸೆತಗಳಲ್ಲಿ 5 ರನ್ ಅಷ್ಟೇ ಗಳಿಸಿದ್ದಾರೆ. ಸತತ ನಾಲ್ಕು ಪಂದ್ಯಗಳಿಂದ್ಲೂ ಉತ್ತಮ ಪ್ರದರ್ಶನ ನೀಡಲು ಆಗ್ದೇ ಒದ್ದಾಡ್ತಿದ್ದಾರೆ. ಐಪಿಎಲ್ ಕರಿಯರ್ನಲ್ಲಿ ಇದುವರೆಗೆ 131 ಮ್ಯಾಚ್ಗಳನ್ನ ಆಡಿರುವ ಕೆ.ಎಲ್ ರಾಹುಲ್ 4628 ರನ್ ಗಳಿಸಿದ್ದಾರೆ. ಈ ಪೈಕಿ 132 ರನ್ ಬಾರಿಸಿರೋದೇ ಹೈಯೆಸ್ಟ್ ಸ್ಕೋರ್ ಆಗಿದೆ. ಹಾಗೇ 134.61ರ ಸ್ಟ್ರೈಕ್ ರೇಟ್ನಲ್ಲಿ ಆಡಿದ್ದು 4 ಶತಕ ಹಾಗೂ 36 ಆಫ್ ಸೆಂಚುರಿಗಳನ್ನ ಸಿಡಿಸಿದ್ದಾರೆ. ಈವರೆಗೂ 397 ಫೋರ್ ಹಾಗೂ 184 ಸಿಕ್ಸ್ ಸಿಡಿಸಿದ್ದಾರೆ.
ಟೀಂ ಇಂಡಿಯಾದ ನಂಬಿಕೆಯ ಆಟಗಾರನಾಗಿರುವ ಕೆ.ಎಲ್ ರಾಹುಲ್ ಈ ಬಾರಿ ಟಿ 20 ವಿಶ್ವಕಪ್‌ಗೆ ಸೆಲೆಕ್ಟ್ ಆಗೋ ನಿರೀಕ್ಷೆಯಲ್ಲಿದ್ರು. ಆದ್ರೆ ಅದು ಸಾಧ್ಯವಾಗಿಲ್ಲ. ಟೀಮ್ಗೆ ಸೆಲೆಕ್ಟ್ ಆಗ್ಲಿಲ್ಲ ಅನ್ನೋ ಬೇಸರಕ್ಕೋ ಏನೋ ಐಪಿಎಲ್ನಲ್ಲೂ ಕಳಪೆ ಪ್ರದರ್ಶನ ತೋರಿಸುತ್ತಿದ್ದಾರೆ. ಲಕ್ನೋ ಫ್ರಾಂಚೈಸಿ ಮಾಲೀಕರ ಸಿಟ್ಟಿಗೂ ತುತ್ತಾಗಿದ್ದಾರೆ. ಈಗಾಗ್ಲೇ ಎಲ್ಎಸ್ಜಿ ಪ್ಲೇಆಫ್ ನಿಂದ ಹೊರ ಬಿದ್ದಿದ್ದು ಇನ್ನೊಂದು ಮ್ಯಾಚ್ ಇದೆ. ಈ ಪಂದ್ಯದ ಮೂಲಕವಾದ್ರೂ ರಾಹುಲ್ ಕಮ್ ಬ್ಯಾಕ್ ಮಾಡ್ಲಿ ಅನ್ನೋದೇ ಅಭಿಮಾನಿಗಳ ಆಶಯ.