RCBಯಲ್ಲಿ ಯಾರಿಗೆ DK ಸ್ಥಾನ? – KL, ಕಿಶನ್, ಪಂತ್.. ಯಾರು ಬೆಸ್ಟ್?
ಬ್ಯಾಟರ್ ಕಂ ಕೀಪರ್ ರೇಸ್ ಹೇಗಿದೆ?
2024ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ರು. ಫಸ್ಟ್ ಇನ್ನಿಂಗ್ಸ್ನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ಕಂಡು ಅತ್ಯಂಕ ಕಳಪೆ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡದ ಆಟಗಾರರು ಸೆಕೆಂಡ್ ಆಫ್ನಲ್ಲಿ ಥೂಫಾನ್ನಂತೆ ಕಮ್ಬ್ಯಾಕ್ ಮಾಡಿದ್ರು. ಯಾರೂ ಊಹೆ ಮಾಡದ ರೀತಿಯಲ್ಲಿ ಪ್ಲೇಆಫ್ಗೂ ಕೂಡ ಎಂಟ್ರಿ ಕೊಟ್ಟಿದ್ರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರು ಆಟಗಾರರು ರೋಚಕ ಜಯ ಸಾಧಿಸಿ ಪ್ಲೇಆಫ್ಗೆ ಕಾಲಿಟ್ಟಾಗ ಫ್ಯಾನ್ಸ್ ಅಂತೂ ಕಪ್ ಗೆದ್ದಷ್ಟೇ ಸಂಭ್ರಮಿಸಿದ್ರು. ಆದ್ರೆ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದ್ರು. ಕ್ವಾಲಿಫೈಯರ್ ಮ್ಯಾಚ್ನಲ್ಲಿ ಆರ್‌ಸಿಬಿ ಸೋಲ್ತು ಅನ್ನೋದಕ್ಕಿಂತ ಬೆಂಗಳೂರು ಅಭಿಮಾನಿಗಳಿಗೆ ತುಂಬಾನೇ ಬೇಸರ ಮೂಡಿಸಿದ್ದು ದಿನೇಶ್ ಕಾರ್ತಿಕ್ ರಿಟೈರ್ಮೆಂಟ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಒನ್ ಆಫ್ ದಿ ಬೆಸ್ಟ್ ಪ್ಲೇಯರ್ ಆಗಿದ್ದ ಡಿಕೆ ಬಾಸ್ ನಿವೃತ್ತಿ ಅಭಿಮಾನಿಗಳ ನೋವಿಗೆ ಕಾರಣ ಆಗಿತ್ತು. ಇದೀಗ 2025ರ ಐಪಿಎಲ್‌ನಲ್ಲಿ ಬೆಂಗಳೂರು ತಂಡದಲ್ಲಿ ದಿನೇಶ್ ಕಾರ್ತಿಕ್ ಸ್ಥಾನ ಯಾರು ತುಂಬುತ್ತಾರೆ ಅನ್ನೋ ಟೆನ್ಷನ್ ಶುರುವಾಗಿದೆ.
ಇದನ್ನೂ ಓದಿ; 1 ರನ್.. 14 ಬಾಲ್.. 2 ವಿಕೆಟ್! – ಮ್ಯಾಚ್ ಟೈ.. ಸೂಪರ್ ಓವರ್ ಯಾಕಿಲ್ಲ?
ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿರುವ ತಂಡ. 17 ಆವೃತ್ತಿಯಲ್ಲಿ ಒಂದೇ ಒಂದು ಬಾರಿ ಕಪ್ ಗೆಲ್ಲದೇ ಇದ್ರೂ ಈ ತಂಡಕ್ಕಿರುವಂಥ ನಿಷ್ಠಾವಂತ ಫ್ಯಾನ್ಸ್ ಮತ್ಯಾವ ಫ್ರಾಂಚೈಸಿಗೂ ಇಲ್ಲ. ಒಂದಲ್ಲ, ಎರಡಲ್ಲ ನೂರು ಸಲ ಸೋತ್ರೂ ಆರ್ಸಿಬಿಯೇ ಅಂತಾ ಎದೆಯೊಳಗೆ ಇಟ್ಟುಕೊಂಡು ಪೂಜಿಸ್ತಾರೆ. ಜೈ ಆರ್‌ಸಿಬಿ ಅಂತಾ ತಲೆ ಮೇಲೆ ಹೊತ್ತು ಮೆರೆಸ್ತಾರೆ. ಅದ್ರಲ್ಲೂ ಕಳೆದ ಸೀಸನ್ನಲ್ಲಿ ಬೆಂಗಳೂರು ತಂಡದ ಪ್ರದರ್ಶನಕ್ಕೆ ಮತ್ತಷ್ಟು ಅಭಿಮಾನ ಜಾಸ್ತಿಯಾಗಿದೆ. ಗೆಲ್ಲೋಕೆ 1 ಪರ್ಸೆಂಟ್ ಚಾನ್ಸ್ ಇದ್ರೂ ಕೈಚೆಲ್ಲಿ ಕೂರಬಾರದು ಅನ್ನೋ ವಿರಾಟ್ ಕೊಹ್ಲಿಯವ್ರ ಮಾತನ್ನ ಸೀಸನ್ 17 ಐಪಿಎಲ್‌ನಲ್ಲಿ ಆರ್‌ಸಿಬಿ ಪ್ರೂವ್ ಮಾಡಿತ್ತು. ಬಟ್ ಬ್ಯಾಡ್ ಲಕ್ ಟ್ರೋಫಿ ಗೆಲ್ಲೋಕೆ ಆಗ್ಲಿಲ್ಲ ಅಷ್ಟೇ. ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಕೊನೇ ಪಂದ್ಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಕೂಡ ತಮ್ಮ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ರು. ಬಟ್ ಡಿಕೆ ಹೋದ್ಮೇಲೆ ಅವ್ರ ಪ್ಲೇಸ್ಗೆ ಬೆಸ್ಟ್ ರಿಪ್ಲೇಸ್ ಯಾರಾಗ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಯಾಕಂದ್ರೆ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿಯವ್ರನ್ನ ಹೊರತು ಪಡಿಸಿದ್ರೆ ಸ್ಥಿರವಾಗಿ ಬ್ಯಾಟ್ ಬೀಸುವಂಥ ಮತ್ತೊಬ್ಬ ಆಟಗಾರ ಇಲ್ಲ. ಸೋ ಇಂಥಾ ಟೈಮಲ್ಲಿ ಅಭಿಮಾನಿಗಳಿಗೆ ಭರವಸೆಯಾಗಿ ಇದ್ದದ್ದು ದಿನೇಶ್ ಕಾರ್ತಿಕ್. ಅದೆಷ್ಟೇ ಸಣ್ಣ ಸ್ಕೋರ್ ಇರ್ಲಿ ಅಥವಾ ಅದೆಂಥದ್ದೇ ಟಾರ್ಗೆಟ್ ಇದ್ರೂ ಕೂಡ ಡಿಕೆ ಇದ್ದಾರಲ್ಲ ಬಿಡು ಅಂತಾ ಕೊಂಚ ನಿರಾಳ ಆಗ್ತಿದ್ರು. ಹಾಗೇ ದಿನೇಶ್ ಕಾರ್ತಿಕ್ ಕೂಡ ಅಭಿಮಾನಿಗಳು ತಮ್ಮ ಮೇಲೆ ಇಟ್ಟಿರೋ ಭರವಸೆಯನ್ನ ಹುಸಿಗೊಳಿಸ್ತಿರಲಿಲ್ಲ. ಕ್ರೀಸ್ನಲ್ಲಿ ಇದ್ದೊಷ್ಟು ಹೊತ್ತೂ ಕೂಡ ರನ್ಗಳನ್ನ ಕೊಳ್ಳೇ ಹೊಡೀತಿದ್ರು. ತಂಡದ ಸ್ಕೋರ್ ಹೆಚ್ಚಾಗುವಂತೆ ಮಾಡ್ತಿದ್ರು. ಹಾಗೇ ಚೇಸಿಂಗ್ ಟೈಮಲ್ಲೂ ತಂಡಕ್ಕೆ ಆಸರೆಯಾಗ್ತಿದ್ರು. ಬಟ್ ಇನ್ಮುಂದೆ ಯಾವತ್ತೂ ದಿನೇಶ್ ಕಾರ್ತಿಕ್ರನ್ನ ಮೈದಾನದ ಒಳಗೆ ನೋಡೋಕೆ ಆಗಲ್ಲ.
ಟೀಕಿಸಿದವರ ಬಾಯಿ ಮುಚ್ಚಿಸಿದ್ದ ದಿನೇಶ್ ಕಾರ್ತಿಕ್!
2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಡಿಕೆ, 2022ರಿಂದ ಮತ್ತೆ ತಂಡ ಸೇರಿಕೊಂಡಿದ್ರು. 2022ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 5.5 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಖರೀದಿಸಿದ ನಂತರ ಅವರು ಕಳೆದ ಎರಡು ಋತುಗಳಿಂದ ಆರ್‌ಸಿಬಿ ತಂಡದ ಪ್ರಮುಖ ಫಿನಿಶರ್ ಆಗಿದ್ದಾರೆ. ಅದಕ್ಕೂ ಹಿಂದೆ 2015ರಲ್ಲಿ ಆರ್‌ಸಿಬಿಯು ಅವರನ್ನು 10.5 ಕೋಟಿ ರೂಪಾಯಿಗೆ ಖರೀದಿಸಿ ನಂತರ ಕೈಬಿಟ್ಟಿತ್ತು. ನಂತ್ರ 2022ರಲ್ಲಿ ಮತ್ತೆ ಆರ್‌ಸಿಬಿ ಹರಾಜಿನಲ್ಲಿ ಡಿಕೆಯನ್ನು ಖರೀದಿಸಿದಾಗ ಎಲ್ರೂ ಟೀಕಿಸಿದ್ರು. ಅಷ್ಟೊಂದು ಹಣ ಕೊಟ್ಟು ಖರೀದಿ ಮಾಡಿ ಹಣ ವೇಸ್ಟ್ ಮಾಡಿದ್ರೆ ಅಂತೆಲ್ಲಾ ವ್ಯಂಗ್ಯವಾಡಿದ್ರು. ಆದ್ರೆ 2022ರಲ್ಲೇ 16 ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 330 ರನ್ ಗಳಿಸಿದ್ದರು. ಆ ವರ್ಷ 183.33ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ತಂಡವು ಪ್ಲೇ ಆಫ್ ಪ್ರವೇಶಿಸುವಲ್ಲಿ ನೆರವಾಗಿದ್ದರು. ಹೀಗೆ ತಮ್ಮ ವಿರುದ್ಧದ ಟೀಕೆಗಳಿಗೆಲ್ಲಾ ಕಾರ್ತಿಕ್, ತಮ್ಮ ಬ್ಯಾಟ್ನಿಂದಲೇ ಉತ್ತರ ಕೊಟ್ರು. ಫಿನಿಷರ್ ಆಗಿ ಮಿಂಚು ಹರಿಸಿದ ಡಿಕೆ ಬಾಸ್ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಎಬಿಡಿ ಅಲಭ್ಯತೆಯ ಕೊರತೆ ಕಾಡದಂತೆ ತಮ್ಮ ರೋಲ್ನ ಸ್ಪಷ್ಟವಾಗಿ ನಿಭಾಯಿಸಿದ್ರು. 2024ರ ಐಪಿಎಲ್ನಲ್ಲೂ ಕ್ರಿಕೆಟ್ ಕಾಮೆಂಟ್ರಿ ಹೇಳಲು ನೀನು ಬೆಸ್ಟ್ ಅನ್ನೋ ಟೀಕೆಯನ್ನೂ ಎದುರಿಸಿದ್ದರು. ಆಡೋದು ಬಿಟ್ಟು ಕಾಮೆಂಟ್ರಿ ಮಾಡ್ತಾ ಇರು ಎಂದು ಕೆಲವರು ಲೇವಡಿ ಮಾಡಿದ್ದರು. ಆದ್ರೆ ಡಿಕೆ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.. ನಿವೃತ್ತಿ ಬಗ್ಗೆ ಟೀಕಿಸಿದವರಿಗೂ ಕೂಡಾ ತನ್ನ ಬ್ಯಾಟ್ ಮೂಲಕವೇ ತಿರುಗೇಟು ಕೊಟ್ಟಿದ್ದರು. ಕೇವಲ ಸಿಕ್ಸ್ ಫೋರ್‌ಗಳ ಮೂಲಕ ಅಬ್ಬರಿಸಿ ಬಾಯಿ ಮುಚ್ಚಿಸಿದ್ದರು. ಆದ್ರೆ ಡಿಕೆ ಇಲ್ಲದೆ ಬಟ್ ಮುಂದಿನ ಸೀಸನ್ನಿಂದ ಕಥೆ ಏನು? ಇದೇ ಈಗ ಆರ್ಸಿಬಿಯ ಕೋಟಿ ಕೋಟಿ ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆ.
ವಿಕೆಟ್ ಕೀಪಿಂಗ್ & ಬೆಸ್ಟ್ ಫಿನಿಶರ್ ಹುಡುಕಾಟದಲ್ಲಿ RCB!
ದಿನೇಶ್ ಕಾರ್ತಿಕ್ ಎಂತಹ ಅದ್ಭುತ ಬ್ಯಾಟರ್ ಆಗಿದ್ರೋ ಅಷ್ಟೇ ಚಾಣಾಕ್ಷತನದ ವಿಕೆಟ್ ಕೀಪರ್ ಆಗಿದ್ರು. ವಿಕೆಟ್ ಮುಂದೆ ನಿಂತು ಬ್ಯಾಟ್ ಹಿಡಿದ್ರೆ ಹೊಡಿಬಡಿ ಆಟವಾಡ್ತಿದ್ದ ಡಿಕೆ ಕೈಗೆ ಗ್ಲೌಸ್ ಹಾಕಿ ವಿಕೆಟ್ ಹಿಂದೆ ನಿಂತ್ರೆ ಎದುರಾಳಿಗಳ ವಿಕೆಟ್ ಬೇಟೆಯಾಡುವಲ್ಲಿ ಪ್ರಮುಖ ಪಾತ್ರ ವಹಿಸ್ತಿದ್ರು. ಅಲ್ದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಫಿನಿಶರ್ ಆಗಿದ್ದವರು ದಿನೇಶ್ ಕಾರ್ತಿಕ್. ಇದೇ ಕಾರಣಕ್ಕೆ ಡಿಕೆಯನ್ನ ಬಿಟ್ಟು ಕೊಡೋಕೆ ಫ್ರಾಂಚೈಸಿ ಕೂಡ ರೆಡಿ ಇಲ್ಲ. ಹೀಗಾಗೇ ನಿವೃತ್ತಿ ಘೋಷಣೆ ಬೆನ್ನಲ್ಲೇ ಅವ್ರನ್ನ 2025ರ ಐಪಿಎಲ್ ಸೀಸನ್ಗೂ ಮುನ್ನ ಆರ್‌ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಇದೀಗ ಡಿಕೆ ಪ್ಲೇಸ್ಗೆ ಅವ್ರಷ್ಟೇ ಸಾಮರ್ಥ್ಯ ಇರೋ ಆಟಗಾರನನ್ನ ಆರ್‌ಸಿಬಿ ಫ್ರಾಂಚೈಸಿ ಹುಡುಕಾಡ್ತಿದೆ. ವಿಕೆಟ್ ಕೀಪಿಂಗ್ ಜತೆಗೆ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಫಿನಿಶ್ ಮಾಡಬೇಕಿರೋ ಆಟಗಾರ ಆರ್‌ಸಿಬಿಗೆ ಬೇಕಾಗಿದೆ. ಹೀಗಾಗೇ ಮೂವರು ಆಟಗಾರರ ಮೇಲೆ ಆರ್‌ಸಿಬಿ ಫ್ರಾಂಚೈಸಿ ಕಣ್ಣಿಟ್ಟಿದೆ. ಅದ್ರಲ್ಲಿ ಮೊದಲಿಗರೇ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್.
ಕ್ಯಾಪ್ಟನ್, ಬ್ಯಾಟರ್ & ವಿಕೆಟ್ ಕೀಪರ್ KL ರಾಹುಲ್!
ಆರ್ಸಿಬಿಯೊಂದಿಗೆ ತನ್ನ ಐಪಿಎಲ್ ವೃತ್ತಿಜೀವನ ಆರಂಭಿಸಿದ ರಾಹುಲ್, ಇದೀಗ ಮತ್ತೊಮ್ಮೆ ಫ್ರಾಂಚೈಸಿ ಸೇರುತ್ತಾರೆ ಎನ್ನಲಾಗ್ತಿದೆ. ಸದ್ಯ ಕೆಎಲ್ ರಾಹುಲ್ 2022ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದ್ರೆ 2025ಕ್ಕೆ ಬೇರೆ ತಂಡ ಸೇರ್ತಾರೆ ಎನ್ನಲಾಗಿದ್ದು ರಾಹುಲ್ರನ್ನ ಬೆಂಗಳೂರು ತಂಡ ಕರೆ ತರೋ ಸಾಧ್ಯತೆ ಇದೆ. ಯಾಕಂದ್ರೆ ಬೆಂಗಳೂರು ತಂಡಕ್ಕೆ ಒಬ್ಬ ಬೆಸ್ಟ್ ಕ್ಯಾಪ್ಟನ್ ಅವಶ್ಯಕತೆ ಇದೆ. 17 ಆವೃತ್ತಿಗಳಿಂದ ಟ್ರೋಫಿ ಗೆಲ್ಲುವಲ್ಲಿ ಫೇಲ್ ಆಗುತ್ತಿರುವ ರೆಡ್ ಆರ್ಮಿ, ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಕೈಬಿಡಲು ಚಿಂತಿಸುತ್ತಿದೆ. ಹೀಗಾಗಿ ರಾಹುಲ್ ಯೋಗ್ಯ ಆಯ್ಕೆ ಎಂದು ಆರ್‌ಸಿಬಿ ಚಿಂತಿಸಿದೆ. ಟ್ರೇಡ್ ಮೂಲಕವೇ ರಾಹುಲ್ಗೆ ಮಣೆ ಹಾಕಲು ಮುಂದಾಗಿದೆ. ಕೆಎಲ್ ರಾಹುಲ್ ಲಕ್ನೋ ತಂಡ ಮಾತ್ರವಲ್ಲದೇ ಐಪಿಎಲ್ ನಲ್ಲಿ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಅನುಭವವನ್ನು ಹೊಂದಿದ್ದಾರೆ. ಟೀಂ ಇಂಡಿಯಾ ನಾಯಕರಾಗಿಯೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದಾರೆ. ಹಾಗೇ ದಿನೇಶ್ ಕಾರ್ತಿಕ್ ನಿವೃತ್ತಿಯಿಂದ ತೆರವಾಗಿರೋ ವಿಕೆಟ್ ಕೀಪರ್ ಸ್ಥಾನವನ್ನೂ ತುಂಬುವ ಸಾಮರ್ಥ್ಯ ಕೆ.ಎಲ್ ರಾಹುಲ್ಗೆ ಇದೆ. ಹಾಗೇ ಫಾಫ್ ಕೂಡ ನಿವೃತ್ತಿ ಪಡೆದ್ರೆ ಓಪನರ್ ಬ್ಯಾಟ್ಸ್ಮನ್ ಆಗಿಯೂ ಕಣಕ್ಕಿಳಿಸಬಹುದು. ಹೀಗಾಗೇ ರಾಹುಲ್ ಬೆಂಗಳೂರು ತಂಡಕ್ಕೆ ಬಂದ್ರೆ ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡಿಯಬಹುದು.
ರಿಷಭ್ ಪಂತ್ ಮೇಲೆ ಕಣ್ಣಿಟ್ಟ ಬೆಂಗಳೂರು ಫ್ರಾಂಚೈಸಿ!
18ನೇ ಆವೃತ್ತಿಯ ಐಪಿಎಲ್ಗೆ ಸ್ಟಾರ್ ಆಟಗಾರರ ಬಳಗ ಕಟ್ಟೋಕೆ ರೆಡಿಯಾಗಿರೋ ಬೆಂಗಳೂರು ಪ್ರಾಂಚೈಸಿ ಈಗಾಗ್ಲೇ ಪ್ರತಿಭಾವಂತ ಆಟಗಾರರ ಲಿಸ್ಟ್ ರೆಡಿ ಮಾಡಿಕೊಳ್ತಿದೆ. ಈ ಪೈಕಿ ರಿಷಭ್ ಪಂತ್ ಕೂಡ ಒಬ್ಬರು. ಪಂತ್ ಆರ್‌ಸಿಬಿಗೆ ಬಂದರೆ ಎರಡೂ ಸ್ಲಾಟ್ಗಳು ಫಿಲ್ ಆಗಲಿವೆ ಎಂಬುದು ಮ್ಯಾನೇಜ್ಮೆಂಟ್ ಪ್ಲಾನ್. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕ್ಕಿ ಪಾಂಟಿಂಗ್ ತಂಡವನ್ನು ಬಿಟ್ಟು ಹೊರ ನಡೆಯುತ್ತಿದ್ದಂತೆ, ರಿಷಭ್ ಪಂತ್ ಸಹ ಡೆಲ್ಲಿ ಬಿಡುತ್ತಾರೆ ಎಂಬ ಸುದ್ದಿ ಇದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಸ್ಪೋಟಕ ಬ್ಯಾಟರ್ ರಿಷಭ್ ಪಂತ್ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಆರ್‌ಸಿಬಿ ಮುಂದಿನ ಹರಾಜಿನಲ್ಲಿ ಅನುಭವಿ ವಿಕೆಟ್ ಕೀಪರ್ ಪ್ಲಸ್ ಮಿಡ್ಲ್ ಆರ್ಡರ್ ಬ್ಯಾಟರ್‌ನ ಹುಡುಕಾಟದಲ್ಲಿದೆ. ಹೀಗಾಗಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಬಿಡುವುದೇ ನಿಜವಾದರೇ, ಆರ್‌ಸಿಬಿ ಮ್ಯಾನೇಜ್ಮೆಂಟ್ ಅವರೊಂದಿಗೆ ಮಾತುಕತೆ ನಡೆಸಲಿದೆ. ಹಾಗೇನಾದ್ರೂ ಪಂತ್ ಬೆಂಗಳೂರು ತಂಡಕ್ಕೆ ಬಂದ್ರೆ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಎರಡರಲ್ಲೂ ಕೂಡ ತಂಡಕ್ಕೆ ಬಲ ಹೆಚ್ಚಿಸಲಿದ್ದಾರೆ. ಇನ್ನು ಪಂತ್ 2016ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇಲ್ಲಿವರೆಗೆ ಪಂತ್ 111 ಐಪಿಎಲ್ ಪಂದ್ಯಗಳನ್ನು ಆಡಿದ್ದು, 3284 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 18 ಅರ್ಧಶತಕಗಳು ಸೇರಿವೆ. ಇದರಲ್ಲಿ 296 ಬೌಂಡರಿ ಹಾಗೂ 154 ಸಿಕ್ಸರ್‌ಗಳು ಸೇರಿವೆ. ಇದರಲ್ಲಿ 75 ಕ್ಯಾಚ್ ಹಾಗೂ 23 ಸ್ಟಂಪ್ಸ್‌ಗಳನ್ನು ಮಾಡಿದ್ದಾರೆ.
ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಆರ್ ಸಿಬಿಗೆ ಬರ್ತಾರಾ?
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ ಬೆಂಗಳೂರು ತಂಡ ಇಶಾನ್ ಕಿಶಾನ್ ಮೇಲೆ ಬಿಡ್ ಮಾಡಲು ಎಲ್ಲ ಸಿದ್ಧತೆ ನಡೆಸಿದೆ ಎನ್ನಲಾಗಿದೆ.. ಆರ್‌ಸಿಬಿ ಯುವ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಹುಡುಕಾಟದಲ್ಲಿದ್ದು, ತಂಡಕ್ಕೆ ಇಶಾನ್ ಕಿಶನ್ ಕರೆ ತರುವ ದೊಡ್ಡ ಯೋಜನೆ ರೂಪಿಸಿದೆ. ಒಂದು ವೇಳೆ ಇಶಾನ್ ಕಿಶನ್ ಆರ್‌ಸಿಬಿ ಸೇರಿಕೊಂಡರೆ, ತಂಡಕ್ಕೆ ಅಪಾರ ಶಕ್ತಿ ಸಿಕ್ಕಂತಾಗುತ್ತದೆ. ಅಲ್ಲದೆ ಮುಂಬರುವ ಐಪಿಎಲ್‌ನಲ್ಲಿ ಫಾಪ್ ಡು ಪ್ಲೆಸಿಸ್ ಆಡುವುದು ಅನುಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಎಡಗೈ ಬ್ಯಾಟರ್ ಆಗಿರುವುದರಿಂದ ಆರ್‌ಸಿಬಿಗೆ ಆರಂಭಿಕನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿಬಹುದು. ಇದು ಸಾಧ್ಯವಾಗದೆ ಇದ್ದಲ್ಲಿ, ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಮೂಲಕ ಆರ್‌ಸಿಬಿ ಬ್ಯಾಟಿಂಗ್ ಬಲ ಹೆಚ್ಚಿಸಬಹುದು. ಎಂಐ ಪರ ಇಶಾನ್ ಕಿಶನ್ ಏಕಾಂಗಿಯಾಗಿ ಆಡಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಜೊತೆಗೆ ವಿಕೆಟ್ ಕೀಪಿಂಗ್‌ನಲ್ಲಿಯೂ ಮಿಂಚಿದ್ದಾರೆ. ಹೀಗಾಗಿ ನಿವೃತ್ತಿ ಘೋಷಿಸಿರುವ ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಇಶಾನ್ ಕಿಶನ್ ಸೂಕ್ತ ಆಟಗಾರರಾಗಿದ್ದಾರೆ. ಒಟ್ನಲ್ಲಿ ಬೆಂಗಳೂರು 18ನೇ ಆವೃತ್ತಿಯಲ್ಲಾದ್ರೂ ಕಪ್ ಗೆಲ್ಬೇಕು ಅಂದ್ರೆ ಒಳ್ಳೆ ತಂಡ ಕಟ್ಟಬೇಕಿದೆ. ಹಾಗೇ ದಿನೇಶ್ ಕಾರ್ತಿಕ್ ಜಾಗಕ್ಕೂ ಉತ್ತಮ ಆಟಗಾರನನ್ನೇ ತರಬೇಕಿದೆ.