KL ಬಾಯಲ್ಲಿ ಈ ಸಲ ಕಪ್ ನಮ್ದೇ – ರಾಹುಲ್ RCB ಸೇರೋದು ಪಕ್ಕಾ?
ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿದ್ದೇಕೆ ಕನ್ನಡಿಗ?

KL ಬಾಯಲ್ಲಿ ಈ ಸಲ ಕಪ್ ನಮ್ದೇ – ರಾಹುಲ್ RCB ಸೇರೋದು ಪಕ್ಕಾ?ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿದ್ದೇಕೆ ಕನ್ನಡಿಗ?

2025ರ ಐಪಿಎಲ್ ಗೆ ಕೆಎಲ್ ರಾಹುಲ್ ಆರ್ ಸಿಬಿಗೆ ಸೇರ್ತಾರೆ ಅನ್ನೋ ಸುದ್ದಿ ಜೋರಾಗೇ ಸದ್ದು ಮಾಡ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್ ಕೂಡ ನಮ್ಮ ಕನ್ನಡಿಗ ನಮ್ಮ ಟೀಮ್​ನಲ್ಲೇ ಆಡಲಿ ಅಂತಾ ಕೇಳಿಕೊಳ್ತಿದ್ದಾರೆ. ಲಕ್ನೋ ತಂಡದಲ್ಲಿನ ಕೆಲ ಬೆಳವಣಿಗೆಗಳೂ ಕೂಡ ಇದಕ್ಕೆ ಪುಷ್ಠಿ ನೀಡುವಂತಿವೆ. ಆದ್ರೆ ಈ ಯಾವ ಪ್ರಶ್ನೆಗಳಿಗೂ ಕೂಡ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದೀಗ ಕೆಎಲ್ ರಾಹುಲ್ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕನ್ನಡಿಗರ ಟೀಮ್​ನಲ್ಲಿ ನಮ್ಮ ಕನ್ನಡದ ಹುಡುಗ ಆಡ್ತಾನಾ ಅಂತಾ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಅಷ್ಟಕ್ಕೂ ಏನದು ವಿಡಿಯೋ? ಕನ್ನಡಿಗರು ಖುಷಿಯಾಗಿರೋದ್ಯಾಕೆ? 2025ರ ಐಪಿಎಲ್​ಗೆ ಅತಿದೊಡ್ಡ ಅಚ್ಚರಿ ಕಾದಿದ್ಯಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೀತಾ – ಶ್ಯಾಮ.. ಪಾಪ ರಾಮ್‌ – ಸಿಹಿ ಸೀತಮ್ಮ ಜೊತೆ ಇರ್ಬೇಕಾ ಬೇಡ್ವಾ?

ಆರ್‌ಸಿಬಿ ಅಂದ್ರೆನೆ ಕನ್ನಡಿಗರಿಗೆ ಒಂಥರಾ ಎಮೋಷನ್‌. ಸೀಸನ್‌ ಹೆಚ್ಚಾದಂತೆ ಕ್ರೇಜ್‌ ಕೂಡ ಜಾಸ್ತಿ ಆಗ್ತಿದೆ. 17 ವರ್ಷಗಳಿಂದ ಕಪ್ ಕೈ ಸೇರದೇ ಇದ್ರೂ ಈ ಸಲ ಕಮ್‌ ನಮ್ದೇ ಅನ್ನೋ ಗತ್ತು ಮಾತ್ರ ಕಮ್ಮಿಯಾಗಿಲ್ಲ. ಬಟ್ ಅಭಿಮಾನಿಗಳಿಗೆ ಕಪ್ ಗೆದ್ದಿಲ್ಲ ಅನ್ನೋ ನೋವಿಗಿಂತ ಬೆಂಗಳೂರು ತಂಡದಲ್ಲಿ ನಮ್ಮ ಕನ್ನಡಿಗರಿಗೆ ಹೆಚ್ಚೆಚ್ಚು ಚಾನ್ಸ್ ಸಿಕ್ತಿಲ್ವಲ್ಲ ಅನ್ನೋ ಬೇಸರವೇ ಜಾಸ್ತಿ. ಹೀಗಾಗೇ ಪ್ರತಿ ಐಪಿಎಲ್ ಸೀಸನ್‌ ಶುರುವಾದಾಗಲೂ ಆರ್‌ಸಿಬಿ ಫ್ಯಾನ್ಸ್‌ ಕನ್ನಡಿಗರಿಗೆ ಚಾನ್ಸ್ ಕೊಡಿ ಅಂತಾ ಕೇಳಿಕೊಳ್ತಾನೇ ಇದ್ದಾರೆ. ಎಂದಿನಿಂತೆ ಈ ವರ್ಷವೂ ಅದೇ ಬೇಡಿಕೆ ಮುಂದಿಟ್ಟಿದ್ದಾರೆ. ಅದ್ರಲ್ಲೂ ಕೆಎಲ್ ರಾಹುಲ್​ರನ್ನ ತಂಡಕ್ಕೆ ಸೇರಿಸಿಕೊಳ್ಬೇಕು ಅನ್ನೋದು ಅವ್ರ ಮಹದಾಸೆ.

ದುಲೀಫ್ ಟ್ರೋಫಿಯಲ್ಲಿ ರಾಹುಲ್ ಗೆ ಫ್ಯಾನ್ಸ್ ಮನವಿ!

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿ ಪಂದ್ಯದ ವೇಳೆಯೂ ಆರ್​ಸಿಬಿ ಅಭಿಮಾನಿಗಳು ರಾಹುಲ್​ಗೆ ಭರ್ಜರಿ ಬೆಂಬಲ ವ್ಯಕ್ತಪಡಿಸಿದ್ದರು. ಭಾರತ ಎ ತಂಡದ ಪರ ಬ್ಯಾಟ್ ಮಾಡಿದ್ದ ರಾಹುಲ್ ಗೆ ಸಪೋರ್ಟ್ ಮಾಡಿದ್ರು. ಕೆಎಲ್ ರಾಹುಲ್ ಮೈದಾನಕ್ಕೆ ಇಳಿದಾಗ ಫ್ಯಾನ್ಸ್‌ ಘೋಷಣೆಗಳನ್ನು ಕೂಗಿ, ಆರ್‌ಸಿಬಿ ನಾಯಕ ಹೇಗಿರಬೇಕು, ಕೆ.ಎಲ್‌ ರಾಹುಲ್‌ ನಂತಿರಬೇಕು ಎಂದು ಜೈಕಾರ ಹಾಕಿದ್ರು. ಈ ಘೋಷಣೆ ಸಖತ್ ವೈರಲ್ ಆಗಿತ್ತು. ಅಭಿಮಾನಿಗಳ ಈ ಜೋಶ್ ನೋಡಿ ಪುಳಕಿತರಾಗಿದ್ದ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದರು. ಥ್ಯಾಂಕ್ಸ್ ಫಾರ್ ದಿ ಸಪೋರ್ಟ್. ಬೆಂಗಳೂರು ಫ್ಯಾನ್ಸ್ ಅಂತಾ ಬರೆದುಕೊಂಡಿದ್ರು. ದುಲೀಪ್ ಟ್ರೋಫಿ ಪಂದ್ಯದ ಬಳಿಕ ಕೆಎಲ್ ರಾಹುಲ್ ಹಾಕಿದ್ದ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್‌ಗೆ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ರಾಹುಲ್ ನಮ್ಮ ಆರ್ ಸಿಬಿಗೆ ಬನ್ನಿ ಅಂತಾ ಡಿಮ್ಯಾಂಡ್ ಮಾಡ್ತಿದ್ದಾರೆ.

ಆರ್ ಸಿಬಿ ಕಪ್ ಗೆಲ್ಲಲಿ.. ಈ ಸಲ ಕಪ್ ನಮ್ದೇ!

ಯಾವುದೇ ಆಟಗಾರನಿಗೆ ತನ್ನ ತವರು ತಂಡದಲ್ಲಿ ಆಡ್ಬೇಕು ಅನ್ನೋ ಕನಸಿರುತ್ತೆ. ಕೆಎಲ್ ರಾಹುಲ್​ಗೂ ಕೂಡ ಇದು ಹೊರತಾಗಿಲ್ಲ. ಈ ಹಿಂದೆಯೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಹುಲ್​ಗೆ ಈ ಸಲ ಆರ್​ಸಿಬಿ ಕಪ್ ಗೆಲ್ಲಲಿದೆಯಾ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಕೆಎಲ್​ಆರ್​, ನಾನು ಸಹ ಆರ್​ಸಿಬಿ ಕಪ್ ಗೆಲ್ಲಲಿ ಎಂದು ಆಶಿಸುತ್ತೇನೆ ಎಂದಿದ್ದರು. ನಾನು ಮೊದಲು ಕರ್ನಾಟಕದವ. ಅದರಲ್ಲೂ ಬೆಂಗಳೂರಿನವ. ಇದನ್ನೂ ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನನಗೆ ತವರು. ಪ್ರತಿಯೊಬ್ಬ ಆಟಗಾರ ಕೂಡ ತನ್ನ ತವರು ತಂಡದ ಪರ ಆಡಲು ಬಯಸುತ್ತಾರೆ. ಹೀಗಾಗಿ ನಾನು ಸಹ ಬೆಂಗಳೂರು ಪರ ಆಡುವುದು ಸೂಕ್ತ. ನನ್ನ ನಗರದ ಪರ ಆಡುವುದು ನನ್ನ ಕನಸಾಗಿತ್ತು. ಈ ಹಿಂದೆ ನಾನು ಆರ್​ಸಿಬಿ ಪರ ಆಡಿದ್ದೇನೆ. ಈಗ ಮತ್ತೆ ಅದೇ ತಂಡದಲ್ಲಿ ಆಡಲು ಸಾಧ್ಯವಾದರೆ ಆಡುತ್ತೇನೆ ಎಂದಿದ್ದಾರೆ. ಇದೀಗ ಕನ್ನಡಿಗ ಕೆ.ಎಲ್​ ರಾಹುಲ್​ ಈ ಸಲ ಕಪ್​ ನಮ್ದೇ ಎಂದಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಭಿಮಾನಿ ಜತೆಗೆ ರಾಹುಲ್​ ಕೂಡ ಈ ಸಲ ಕಪ್​ ನಮ್ದೇ ಎಂದಿದ್ದಾರೆ.

ಲಕ್ನೋದಲ್ಲಿ ಆದ ಅವಮಾನಕ್ಕೆ ಕನ್ನಡಿಗರಿಗೆ ಸಿಟ್ಟು!

ಅಷ್ಟಕ್ಕೂ ಕೆಎಲ್ ರಾಹುಲ್ ಲಕ್ನೋ ತಂಡದಲ್ಲಿ ಮುಂದುವರಿಯೋದು ಅಭಿಮಾನಿಗಳಿಗೂ ಇಷ್ಟ ಇಲ್ಲ. ಕಳೆದ ಸೀಸನ್​ನಲ್ಲಿ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಂಡ ಸೋತಿದ್ದಕ್ಕೆ ಬಹಿರಂಗವಾಗೇ ರಾಹುಲ್​ ಮೇಲೆ ಸಿಟ್ಟಾಗಿದ್ರು. ಇದ್ರಿಂದ ಕನ್ನಡಿಗನಿಗೆ ಅವಮಾನ ಆಯ್ತು ಅಂತಾ ಸಿಟ್ಟಾಗಿದ್ರು. ಹೀಗಾಗಿ 2025ರ ಐಪಿಎಲ್​ಗೆ ಎಲ್​ಎಸ್​ಜಿ ತಂಡದಲ್ಲಿ ಆಡೋದು ಬೇಡ ಅಂತಿದ್ದಾರೆ. ಅಲ್ದೇ ರಾಹುಲ್​ಗೂ ಕೂಡ ತಂಡದಲ್ಲಿ ಮುನ್ನಡೆಯೋ ಮನಸ್ಸಿಲ್ಲ. ಹೀಗಾಗಿ ತಂಡದಿಂದ ಹೊರಬರುವ ಸಾಧ್ಯತೆಗಳಿವೆ. ಹೀಗಾಗಿ ರಾಹುಲ್ ಆರ್​ಸಿಬಿಗೆ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಅದರಲ್ಲೂ ಕನ್ನಡಿಗನ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲಿ ಎಂಬ ಬಯಕೆಯನ್ನು ಆರ್​ಸಿಬಿ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಕೆಎಲ್ ರಾಹುಲ್ ನೀಡಿರುವ ಹೇಳಿಕೆ ಮತ್ತಷ್ಟು ಖುಷಿ ಕೊಡ್ತಿದೆ.

ರಾಹುಲ್ ಹರಾಜಿಗೆ ಬಂದ್ರೆ ಆರ್ ಸಿಬಿ ಫ್ರಾಂಚೈಸಿ ಖರೀದಿ!

ಅಷ್ಟಕ್ಕೂ ಕೆಎಲ್ ರಾಹುಲ್​ಗೆ RCB ತಂಡ ಹೊಸದೇನೂ ಅಲ್ಲ. ಬೆಂಗಳೂರು ತಂಡದ ಪರ ಎರಡು ಸೀಸನ್ ಆಡಿದ್ದಾರೆ. ಒಟ್ಟು 19 ಪಂದ್ಯಗಳನ್ನಾಡಿರುವ ರಾಹುಲ್ 14 ಇನಿಂಗ್ಸ್​ಗಳಿಂದ 4 ಅರ್ಧಶತಕಗಳೊಂದಿಗೆ 417 ರನ್ ಕಲೆಹಾಕಿದ್ದಾರೆ. ಇದಾದ ಬಳಿಕ ಸನ್​ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಪರ ಆಡಿದ್ದ ರಾಹುಲ್ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಲಕ್ನೋ ತಂಡದ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಹಾಗೇನಾದ್ರೂ ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ, ಅವರ ಖರೀದಿಗೆ ಆರ್​ಸಿಬಿ ಬಿಡ್ ಮಾಡಲಿದೆ. ಅದಕ್ಕೆ ಕಾರಣವೂ ಇದೆ. ಆರ್​ಸಿಬಿ ತಂಡವು ವಿಕೆಟ್ ಕೀಪರ್ ಹಾಗೂ ನಾಯಕನ ಹುಡುಕಾಟದಲ್ಲಿದೆ. ರಾಹುಲ್ ಖರೀದಿಯಿಂದಾಗಿ ಈ ಎರಡು ಸ್ಥಾನಗಳನ್ನು ತುಂಬಬಹುದು.  ಯಾಕಂದ್ರೆ ದಿನೇಶ್ ಕಾರ್ತಿಕ್ ನಿವೃತ್ತಿಯಿಂದ ವಿಕೆಟ್ ಕೀಪರ್ ಸ್ಥಾನ ಖಾಲಿಯಾಗಿದೆ. ಇನ್ನು ಫಾಫ್ ಡುಪ್ಲೆಸಿಸ್ ಯಾವಾಗ ಬೇಕಿದ್ರೂ ಐಪಿಎಲ್​ನಿಂದಲೂ ನಿವೃತ್ತಿ ಪಡೀಬಹುದು. ಹೀಗಾಗಿ ರಾಹುಲ್ ತಂಡಕ್ಕೆ ಬಂದ್ರೆ ಈ ಎರಡೂ ಹಕ್ಕಿಗಳನ್ನ ಒಂದೇ ಕಲ್ಲಲ್ಲಿ ಹೊಡೀಬಹುದು. ರಾಹುಲ್ ಕೂಡ ಬೆಂಗಳೂರು ತಂಡಕ್ಕೆ ಬರೋ ಆಸೆಯನ್ನ ಪದೇಪದೆ ವ್ಯಕ್ತಪಡಿಸುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *