IPL ಟ್ರೋಫಿಗೆ ಮುತ್ತಿಕ್ಕಿದ KKR  – RCB & ಕೊಹ್ಲಿಗೆ ಸಿಕ್ಕ ಹಣವೆಷ್ಟು?
17ನೇ ಸೀಸನ್ ನಲ್ಲಿ ಸೋತು ಗೆದ್ದವರೆಷ್ಟು?

IPL ಟ್ರೋಫಿಗೆ ಮುತ್ತಿಕ್ಕಿದ KKR  – RCB & ಕೊಹ್ಲಿಗೆ ಸಿಕ್ಕ ಹಣವೆಷ್ಟು?17ನೇ ಸೀಸನ್ ನಲ್ಲಿ ಸೋತು ಗೆದ್ದವರೆಷ್ಟು?

ಫೈನಲಿ ಐಪಿಎಲ್ ಸೀಸನ್ 17 ಚಾಂಪಿಯನ್ ಪಟ್ಟ ಕೆಕೆಆರ್ ಪಾಲಾಗಿದೆ. ಟೂರ್ನಿಯ ಸೆಕೆಂಡ್ ಆಫ್​ನಿಂದಲೂ ಟೇಬಲ್ ಟಾಪರ್ ಆಗಿದ್ದ ಕೆಕೆಆರ್ ಕೊನೆಗೂ ಟ್ರೋಫಿಗೆ ಮುತ್ತಿಕ್ಕಿದೆ. 3ನೇ ಬಾರಿ ಐಪಿಎಲ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಆದ್ರೆ ಟೂರ್ನಿಯುದ್ದಕ್ಕೂ ಸಾಲಿಡ್​ ಪರ್ಫಾಮೆನ್ಸ್​ ನೀಡಿ ಫೈನಲ್ಸ್​ಗೆ ರಾಯಲ್​ ಎಂಟ್ರಿ ಕೊಟ್ಟಿದ್ದ ಹೈದ್ರಾಬಾದ್​ ತಂಡ ಮಾತ್ರ ತನ್ನ ಎಡವಟ್ಟಿನಿಂದಲೇ ಕಪ್ ಗೆಲ್ಲೋ ಅವಕಾಶವನ್ನ ಮಿಸ್ ಮಾಡಿಕೊಳ್ತು. ಅಷ್ಟಕ್ಕೂ ಎಸ್​ಆರ್​ಹೆಚ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಮಾಡಿದ ಮಿಸ್ಟೆಕ್ಸ್ ಏನು? ಶ್ರೇಯರ್ ಅಯ್ಯರ್ ನೇತೃತ್ವದ ಕೆಕೆಆರ್ ಗೆ ಪ್ಲಸ್ ಆಗಿದ್ದೇನು? ಪ್ರಶಸ್ತಿ ಮೊತ್ತ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:   ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣ ಹೆಸರಿನಲ್ಲಿ ಅಕ್ರಮ ಹಣ ಸಂಗ್ರಹ! –  ನಟ ದರ್ಶನಗೂ ಮೋಸ?

ಕಳೆದ ಎರಡು ತಿಂಗಳಿಂದ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡಿದ್ದ ಐಪಿಎಲ್ ಹಬ್ಬಕ್ಕೆ ಕೊನೆಗೂ ತೆರೆ ಬಿದ್ದಿದೆ. ಭಾನುವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಮ್ಯಾಚ್​ನಲ್ಲಿ ಹೈದ್ರಾಬಾದ್ ತಂಡವನ್ನ ಮಣಿಸಿ ಕೊಲ್ಕತ್ತಾ ಐಪಿಎಲ್ ಕಪ್​ನ ಎತ್ತಿ ಹಿಡಿದಿದೆ. ಟಾಸ್ ಗೆದ್ದರೂ ಸಹ ಹೈದ್ರಾಬಾದ್ ತಂಡ ಫಸ್ಟ್ ಬ್ಯಾಟಿಂಗ್​ ಅನ್ನು ಆಯ್ಕೆ ಮಾಡಿಕೊಂಡಿತ್ತು. ಬಹುಶಃ ಪ್ಯಾಟ್​ ಕಮಿನ್ಸ್​ ಟಾಸ್​ ಗೆದ್ದು ತೆಗೆದುಕೊಂಡ ನಿರ್ಧಾರವೇ ತಂಡದ ಗೆಲುವಿಗೆ ಮುಳುವಾಗಿಬಿಡ್ತು. ಚೆಪಾಕ್​ ಅಂಗಳದಲ್ಲಿ ಇದ್ರ ಅಡ್ವಾಂಟೇಜ್​ ತೆಗೆದುಕೊಂಡು ಆರ್ಭಟಿಸಿದ ಕೆಕೆಆರ್​​, ಗೆಲುವಿನ ನಗಾರಿ ಬಾರಿಸಿತು. ನೀರು ಕುಡಿದಷ್ಟೇ ಸಲೀಸಾಗಿ ಚಾಂಪಿಯನ್ ಪಟ್ಟಕ್ಕೇರಿತು.

ಫಸ್ಟ್ ಬ್ಯಾಟಿಂಗ್ ಮಾಡಿದ್ರೆ ಹೈದ್ರಾಬಾದ್ ಆಟಗಾರರು ಭರ್ಜರಿ ಬ್ಯಾಟಿಂಗ್ ಮಾಡ್ತಾರೆ ಅಂತಾ ಪ್ಯಾಟ್ ಕಮಿನ್ಸ್ ಲೆಕ್ಕಾಚಾರ ಆಗಿತ್ತು. ಯಾಕಂದ್ರೆ ಈ ಟೂರ್ನಿಯಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದಾಗ ಹೈದ್ರಾಬಾದ್ ಪ್ಲೇಯರ್ಸ್ ರನ್​ ಮಳೆಯನ್ನೇ ಹರಿಸಿದ್ರು. ಸೋ ಈ ಮ್ಯಾಚ್​ನಲ್ಲೂ ಅದೇ ಪ್ಲ್ಯಾನ್ ಆಗಿತ್ತು. ಬಟ್ ಪಂದ್ಯದ ಆರಂಭದಲ್ಲೇ ಗೇಮ್ ಪ್ಲ್ಯಾನ್ ಉಲ್ಟಾ ಹೊಡೀತು. ಮೊದಲ ಓವರ್​ನಲ್ಲೇ ಮಿಚೆಲ್​​ ಸ್ಟಾರ್ಕ್​​ ಶಾಕ್​ ಕೊಟ್ರು. 5 ಬಾಲ್​ಗೆ 2 ರನ್ ಬಾರಿಸಿದ್ದ ಅಭಿಷೇಕ್ ಸ್ಟಾರ್ಕ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದ್ರು. ಇನ್ನು ಎರಡನೇ ಓವರ್​ನಲ್ಲಿ ವೈಭವ್​ ಅರೋರಾ, ಟ್ರಾವಿಸ್​ ಹೆಡ್​ಗೆ ಪೆವಿಲಿಯನ್​ ದಾರಿ ತೋರಿಸಿದ್ರು. ಮೊದಲ 2 ಓವರ್​ನಲ್ಲಿ 2 ವಿಕೆಟ್​ ಕಳೆದುಕೊಂಡ ಸನ್​ರೈಸರ್ಸ್​ ಹೈದ್ರಾಬಾದ್ ಆಟಗಾರರಿಗೆ ಮಿಚೆಲ್​ ಸ್ಟಾರ್ಕ್​ ಅವಕಾಶವನ್ನೇ ನೀಡಲಿಲ್ಲ. ನಿಧಾನಕ್ಕೆ ಕ್ರಿಸ್​ ಕಚ್ಚಿ ನಿಲ್ಲೋ ಯತ್ನದಲ್ಲಿದ್ದ ರಾಹುಲ್​ ತ್ರಿಪಾಠಿಯನ್ನ ಖೆಡ್ಡಾಗೆ ಕೆಡವಿದ್ರು. ಬಳಿಕ ಕಣಕ್ಕಿಳಿದ ಬರ್ತ್​​​ ಡೇ ಬಾಯ್​​ ನಿತಿಶ್​​ ರೆಡ್ಡಿ 13 ರನ್​​ಗಳಿಸಿ ಆಟ ಅಂತ್ಯಗೊಳಿಸಿದ್ರು. ಹೀಗೆ ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡದ ಬೌಲರ್​​ಗಳ ಅಬ್ಬರದ ಮುಂದೆ ಹೈದ್ರಾಬಾದ್ ಬ್ಯಾಟರ್ಸ್​​ ಪೆವಿಲಿಯನ್ ಪರೇಡ್ ನಡೆಸಿದ್ರು. ಸೌತ್​ ಆಫ್ರಿಕನ್​ ಸ್ಟಾರ್​​ಗಳಾದ ಏಡೆನ್​ ಮರ್ಕರಮ್​, ಹೆನ್ರಿಚ್​ ಕ್ಲಾಸೆನ್​​ ಎಚ್ಚರಿಕೆಯ ಆಟಕ್ಕೆ ಮುಂದಾದ್ರು. ಆದ್ರೆ, ಬಿಗ್​ಸ್ಕೋರ್​ ಕಲೆ ಹಾಕುವಲ್ಲಿ ಎಡವಿದ್ರು. 20 ರನ್ ಗಳಿಸಿದ್ದ ಮಾರ್ಕ್ರಮ್​ಗೆ ಆ್ಯಂಡ್ರೆ ರೆಸೆಲ್​ ಹಾಗೇ 16 ರನ್ ಗಳಿಸಿದ್ದ ಕ್ಲಾಸೆನ್ ಆಟಕ್ಕೆ ಹರ್ಷಿತ್​ ರಾಣಾ ಬ್ರೇಕ್​ ಹಾಕಿದ್ರು. ಬಳಿಕ ಕಣಕ್ಕಿಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ತಂಡಕ್ಕೆ ನೆರವಾಗಲೇ ಇಲ್ಲ. ನಾಯಕ ಪ್ಯಾಟ್​ ಕಮಿನ್ಸ್​ ಗಳಿಸಿದ 24 ರನ್​ಗಳೇ ತಂಡದ ಪರ ಹೈಯೆಸ್ಟ್​ ಸ್ಕೋರ್​ ಆಯ್ತು. ಹೀಗೆ ಬ್ಯಾಟ್ಸ್​ಮನ್​ಗಳ ಫ್ಲಾಪ್ ಶೋನಿಂದಾಗಿ ಕೇವಲ 18.3 ಓವರ್​​ಗಳಲ್ಲಿ ಆಲೌಟ್​ ಆದ ಸನ್​ರೈಸರ್ಸ್​ ಹೈದ್ರಾಬಾದ್​ ಕೇವಲ 113 ರನ್​ಗಳನ್ನ ಕಲೆ ಹಾಕಿತು. ಈ ಟಾರ್ಗೆಟ್ ಫಿಕ್ಸ್ ಆದಾಗ್ಲೇ ಇಡೀ ಪಂದ್ಯ ಕೆಕೆಆರ್ ಪರ ವಾಲಿತ್ತು. ಸೆಕೆಂಡ್ ಇನ್ನಿಂಗ್ಸ್ ಶುರುವಾಗೋ ಮೊದ್ಲೇ ಚಾಂಪಿಯನ್ ಯಾರು ಅನ್ನೋದು ಫೈನಲ್ ಆದಂತೆಯೇ ಆಗಿತ್ತು.

ಫಿನಾಲೆ ಮ್ಯಾಚ್.. ಟೇಬಲ್ ಟಾಪರ್ ಟೀಂ.. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡ್ರಲ್ಲೂ ಸೂಪರ್ ಸ್ಟ್ರಾಂಗ್ ಇರೋ ಕೆಕೆಆರ್ ಇಂಥಾ ಮ್ಯಾಚ್​ನ ಮಿಸ್ ಮಾಡ್ಕೊಳ್ತಾರಾ. 114 ರನ್​ಗಳ ಟಾರ್ಗೆಟ್ ಟಾರ್ಗೆಟ್ಟೇ ಅಲ್ಲ ಅನ್ನೋ ಹಾಗೇ ಕೆಕೆಆರ್ ಚೇಸಿಂಗ್​ಗೆ ಇಳ್ದಿತ್ತು. ಆರಂಭಿಕನಾಗಿ ಕಣಕ್ಕಿಳಿದ ಸುನಿಲ್​ ನರೈನ್​, ಸಿಕ್ಸರ್​ ಸಿಡಿಸಿ ಭರ್ಜರಿ ಆರಂಭ ಮಾಡಿದ್ರು. ಆದ್ರೆ, ಮರು ಎಸೆತದಲ್ಲೇ ಪ್ಯಾಟ್ ಕಮಿನ್ಸ್​, ನರೈನ್​ ಅವರ ವಿಕೆಟ್​ ಕಬಳಿಸಿದ್ರು. ಆದ್ರೆ, ಆ ಬಳಿಕ ಜೊತೆಯಾದ ರೆಹಮಾನುಲ್ಲಾ ಗುರ್ಬಾಜ್​​, ವೆಂಕಟೇಶ್​ ಅಯ್ಯರ್​ ಹೈದ್ರಾಬಾದ್​ ಬೌಲರ್​ಗಳನ್ನ ಬೆಂಡೆತ್ತಿದ್ರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್​ ಅಯ್ಯರ್​​, ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸಿ 24 ಎಸೆತಗಳಲ್ಲೇ ಹಾಫ್​ ಸೆಂಚುರಿ ಚಚ್ಚಿದ್ರು. ವೆಂಕಟೇಶ್​ ಅಯ್ಯರ್​ಗೆ ಸಾಥ್​ ಕೊಟ್ಟ ರೆಹಮಾನುಲ್ಲಾ ಗುರ್ಬಾಜ್,​ 39 ರನ್​ಗಳಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ಶ್ರೇಯಸ್​​ ಅಯ್ಯರ್​​ ಅಜೇಯ 6 ರನ್​ಗಳಿಸಿದ್ರು. ವಿನ್ನಿಂಗ್​​ ಶಾಟ್​ ಬಾರಿಸಿದ ವೆಂಕಟೇಶ್​ ಅಯ್ಯರ್​ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ ಕೆಕೆಆರ್​​, 3ನೇ ಬಾರಿ ಐಪಿಎಲ್​ ಕಿರೀಟಕ್ಕೆ ಮುತ್ತಿಕ್ಕಿತು.

ಇನ್ನು, ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ 3ನೇ ಬಾರಿಗೆ ಐಪಿಎಲ್‌ ಪ್ರಶಸ್ತಿ ಗೆದ್ದ ಕೋಲ್ಕತ್ತಾ ನೈಟ್‌‌ ರೈಡರ್ಸ್ ತಂಡವು ಟ್ರೋಪಿ ಜೊತೆಗೆ ಭರ್ಜರಿ ಸೆಲಬ್ರೇಷನ್‌ ಮಾಡಿದರು. ಈ ವೇಳೆ ತಂಡದ ಜೊತೆ ಓನರ್ ಶಾರೂಖ್‌ ಖಾನ್‌ ಸಹ ಸಂಭ್ರಮಿಸಿದರು ಹರ್ಷಿತ್‌ ರಾಣಾ ಅವರ ಸಿಗ್ನೇಚರ್‌ ಸ್ಟೈಲ್‌ ಅನ್ನು ಎಲ್ಲರೂ ಪ್ಲೈಯಿಂಗ್‌ ಕಿಸ್‌‌ ನೀಡುವ ಮೂಲಕ ಖುಷಿ ಪಟ್ರು. ಚಾಂಪಿಯನ್‌ಗಳೊಂದಿಗೆ ಪೋಸ್ ನೀಡಲು ಶಾರೂಖ್‌ ಸಹ ಬಂದಾಗ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದಂತೆ, ಶಾರುಖ್ ತಂಡದ ಆಟಗಾರರಲ್ಲಿ ರಾಣಾ ರೀತಿಯಲ್ಲಿ ಕ್ಯಾಮರಾಗೆ ಕಿಸ್ ಮಾಡಲು ಕೇಳಿದರು. ಆಗ ತಂಡದ ಎಲ್ಲಾ ಆಟಗಾರರೂ ಸಹ ಪ್ಲೈಯಿಂಗ್‌ ಕಿಸ್‌‌ ನೀಡಿ ಸೆಲೆಬ್ರೇಟ್ ಮಾಡಿದ್ರು.

ಇನ್ನು ಕ್ವಾಲಿಫೈಯರ್ 2 ಮ್ಯಾಚ್​​ನಲ್ಲಿ ರಾಜಸ್ಥಾನ ವಿರುದ್ಧ ಹೈದ್ರಾಬಾದ್ ಗೆದ್ದು ಫಿನಾಲೆಗೆ ಕಾಲಿಟ್ಟಾಗ ತಂಡದ ಮಾಲೀಕರಾದ ಕಾವ್ಯಾ ಮಾರನ್ ಕುಣಿದು ಕುಪ್ಪಳಿದ್ದರು. ಆದ್ರೆ ಫಿನಾಲೆಯಲ್ಲಿ ತಮ್ಮ ತಂಡದ ನೀರಸ ಪ್ರದರ್ಶನ ಮತ್ತು ಸೋಲಿನ ನೋವಲ್ಲಿ ಕಣ್ಣೀರಿಟ್ರು. ಒಂದ್ಕಡೆ ಮೈದಾನದಲ್ಲಿ ಕೆಕೆಆರ್​ ಆಟಗಾರರು ಟ್ರೋಫಿ ಗೆದ್ದು ಸಂಭ್ರಮದಲ್ಲಿ ತೇಲಾಡುತ್ತಿದ್ರೆ, ಇತ್ತ ಸ್ಟೇಡಿಯಂ ಗ್ಯಾಲರಿಯಲ್ಲಿ ಎಸ್​​ಆರ್​ಹೆಚ್​ ಓನರ್​ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಕಣ್ಣೀರಾಕಿದ್ರು. ಎರಡು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡಿದ್ದಾರೆ.

ಸೀಸನ್ 17 ಐಪಿಎಲ್ ಟ್ರೋಫಿ ಗೆದ್ದವರಿಗೆ ಭರ್ಜರಿ ಪ್ರಶಸ್ತಿ ಮೊತ್ತವೇ ಸಿಕ್ಕಿದೆ. ಐಪಿಎಲ್ 2024ರ ಒಟ್ಟು ಬಹುಮಾನದ ಮೊತ್ತ ಬರೋಬ್ಬರಿ 46.5 ಕೋಟಿ ರೂಪಾಯಿ. ಈ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಕೋಲ್ಕತ್ತಾ‌ ತಂಡವು ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಪಡೆಯಲಿದೆ. ಹಾಗೆಯೇ ರನ್ನರ್ ಅಪ್ ಆಗಿರುವಸನ್‌ರೈರ್ಸ್ ಹೈದರಾಬಾದ್‌ ತಂಡಕ್ಕೆ ಈ ಬಾರಿ 12.5 ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಪಡೆದಿದೆ. ವಿಜೇತರು ಮತ್ತು ರನ್ನರ್ ಅಪ್ ಮಾತ್ರವಲ್ಲದೆ, ಪ್ಲೇ ಆಫ್‌ಗೆ ಅರ್ಹತೆ ಪಡೆದ ತಂಡಗಳಿಗೂ ಬಹುಮಾನ ನೀಡಲಾಗುತ್ತದೆ. ಅಂದರೆ ಈ ವರ್ಷ ಕೋಲ್ಕತ್ತಾ ನೈಟ್‌ ರೈಡರ್ಸ್, ಸನ್‌ರೈರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಐಪಿಎಲ್‌ ಬಹುಮಾನದ ಮೊತ್ತ ದೊರಕಲಿದೆ. ಐಪಿಎಲ್ ಟೂರ್ನಿಯಲ್ಲಿ ಮೂರನೇ ಸ್ಥಾನದಲ್ಲಿರುವ ತಂಡ ರಾಜಸ್ಥಾನ್‌ ರಾಯಲ್ಸ್‌ ಗೆ 7 ಕೋಟಿ ರೂ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ಸ್‌‌ ಬೆಂಗಳೂರು ತಂಡಕ್ಕೆ 6.5 ಕೋಟಿ ರೂ ದೊರಕಿದೆ. ಹಾಗೇ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ,ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಈ ಬಾರಿ 15 ಪಂದ್ಯಗಳಿಂದ ಬರೋಬ್ಬರಿ ದಾಖಲೆಯ 741 ರನ್‌ ಸಿಡಿಸಿರುವ ವಿರಾಟ್ ಕೊಹ್ಲಿ ಆರೆಂಜ್‌ ಕ್ಯಾಪ್‌ ಹೋಲ್ಡರ್‌ ಆಗಿದ್ದು, ಪಂಜಾಬ್‌ ಕಿಂಗ್ಸ್‌ ಬೌಲರ್‌ ಹರ್ಷಲ್‌ ಪಟೇಲ್‌ 14 ಪಂದ್ಯದಿಂದ 24 ವಿಕೆಟ್ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ಗೆದ್ದಿದ್ದಾರೆ. ಇವರಿಬ್ಬರಿಗೂ ತಲಾ 10 ಲಕ್ಷ ರೂಪಾಯಿ ಸಿಗಲಿದೆ. ವಿರಾಟ್ ಕೊಹ್ಲಿಗೆ ಐಪಿಎಲ್​ನ 17 ಸೀಸನ್​ಗಳಲ್ಲಿ 2ನೇ ಆರೆಂಜ್ ಕ್ಯಾಪ್ ಇದು. 2016ರಲ್ಲಿ ವಿರಾಟ್ 973 ರನ್​ ಸಿಡಿಸಿದ್ದರು. ಈವರೆಗೂ ಈ ದಾಖಲೆಯನ್ನ ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಇನ್ನೂ 14 ಪಂದ್ಯಗಳಿಂದ 24 ವಿಕೆಟ್ ಪಡೆದ ಹರ್ಷಲ್​ ಪಟೇಲ್​ಗೆ ಇದು 2ನೇ ಪರ್ಪಲ್ ಕ್ಯಾಪ್ ಆಗಿದೆ. ಈ ಹಿಂದೆ 2021ರಲ್ಲಿ ಆರ್​ಸಿಬಿಯಲ್ಲಿದ್ದ ವೇಳೆ 32 ವಿಕೆಟ್ ಪಡೆದು ಮೊದಲ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು. ಹಾಗೇ ಈ ಋತುವಿನ ಉದಯೋನ್ಮುಖ ಆಟಗಾರನಾಗಿ ಹೈದ್ರಾಬಾದ್​ನ ನಿತೀಶ್ ಕುಮಾರ್ ರೆಡ್ಡಿ ಹೊರ ಹೊಮ್ಮಿದ್ದಾರೆ. ಅಲ್ಟಿಮೇಟ್ ಫ್ಯಾಂಟಸಿ ಪ್ಲೇಯರ್ ಆಫ್ ದಿ ಸೀಸನ್ ಹಾಗೇ ಅತ್ಯಂತ ಮೌಲ್ಯಯುತ ಆಟಗಾರನ ಕಿರೀಟ ಸುನಿಲ್ ನರೈನ್ ಪಾಲಾಗಿದೆ. ಅತಿ ಹೆಚ್ಚು ಸಿಕ್ಸ್‌ಗಳ ಪ್ರಶಸ್ತಿ ಅಭಿಷೇಕ್ ಶರ್ಮಾ ಪಾಲಾಗಿದ್ರೆ ಅತಿ ಹೆಚ್ಚು ಫೋರ್‌ಗಳ ಪ್ರಶಸ್ತಿ – ಟ್ರಾವಿಸ್ ಹೆಡ್ ಮುಡಿಗೇರಿದೆ. ಅತ್ಯುತ್ತಮ ಸ್ಟ್ರೈಕ್ ರೇಟ್ ಪ್ರಶಸ್ತಿ – ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಪಾಲಾಗಿದ್ದು, 10 ಲಕ್ಷದ ಜೊತೆಗೆ ಟಾಟಾ ಪಂಚ್ ಇವಿ ಕಾರ್ ಪ್ರಶಸ್ತಿ ದೊರಕಿದೆ. ಕ್ಯಾಚ್ ಆಫ್ ದಿ ಸೀಸನ್ – ರಮಣದೀಪ್ ಸಿಂಗ್ ಪಾಲಾಗಿದೆ. ಇವ್ರಿಗೂ 10 ಲಕ್ಷ ರೂಪಾಯಿ ಲಭಿಸಿದೆ.  ಇನ್ನು ಫೇರ್ ಪ್ಲೇ ಪ್ರಶಸ್ತಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸಿಕ್ಕಿದೆ. ಪಿಚ್ ಮತ್ತು ಗ್ರೌಂಡ್ ಅವಾರ್ಡ್ ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದ ಪಾಲಾಗಿದ್ದು 50 ಲಕ್ಷ ರೂಪಾಯಿ ಬಹುಮಾನದ ಮೊತ್ತ ದೊರಕಿದೆ. ಒಟ್ಟಾರೆ 2 ತಿಂಗಳಿಂದ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸಿದ್ದ ರಂಗು ರಂಗಿನ ಐಪಿಎಲ್ ಮುಕ್ತಾಯಗೊಂಡಿದೆ. ಕೊಲ್ಕತ್ತಾ ಚಾಂಪಿಯನ್ ಆಗಿ ಟ್ರೋಫಿಗೆ ಮುತ್ತಿಕ್ಕಿದೆ. ಇದೀಗ ಐಪಿಎಲ್​ಗೆ ಗುಡ್ ಬೈ ಹೇಳಿರೋ ಅಭಿಮಾನಿಗಳ ಚಿತ್ತ ಟಿ-20 ವಿಶ್ವಕಪ್​ನತ್ತ ನೆಟ್ಟಿದೆ.

Shwetha M