ತವರಿನಲ್ಲೇ KKR ಢಮಾರ್ – ತಿರಸ್ಕರಿಸಿದ್ದ ಶಶಾಂಕ್ ಪಂಜಾಬ್ HERO

ತವರಿನಲ್ಲೇ KKR ಢಮಾರ್ – ತಿರಸ್ಕರಿಸಿದ್ದ ಶಶಾಂಕ್ ಪಂಜಾಬ್ HERO

ಬಿಗ್ ಟಾರ್ಗೆಟ್.. 262 ರನ್​ಗಳ ಬಿಗ್ ಟಾರ್ಗೆಟ್. ಚೇಸ್ ಮಾಡ್ತಾರೆ ಅಂತಾ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದವ್ರೂ ಅನ್ಕೊಂಡಿರಲಿಲ್ಲ. ಅಷ್ಟೇ ಯಾಕೆ ಸ್ವತಃ ಪಂಜಾಬ್ ತಂಡಕ್ಕೂ ಆ ಕಾನ್ಫಿಡೆನ್ಸ್ ಇತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಇಡೀ ವಿಶ್ವ ಕ್ರಿಕೆಟ್ಟೇ ನಿಬ್ಬೆರಗಾಗುವಂಥ ಚೇಸಿಂಗ್ ನಡೆದಿತ್ತು. ಇನ್ನೂ 20 ರನ್ ಇದ್ರೂ ಹೊಡೆದು ಬಿಸಾಕ್ತೀವಿ ಅನ್ನೋ ರೇಂಜ್​ಗೆ ಪಂಜಾಬ್ ಹುಲಿಗಳು ಕೆಕೆಆರ್ ತಂಡದ ಬೌಲರ್ಸ್​​ನ ಬೆಂಡೆತ್ತಿದ್ರು. ಪಂದ್ಯ ಆರಂಭದಿಂದ ಹಿಡಿದು ಅಂತ್ಯದವರೆಗೂ ಥೇಟ್ ಹೈಲೇಟ್ಸ್ ಥರನೇ ಫ್ಯಾನ್ಸ್​ಗೆ ಫುಲ್ ಮನರಂಜನೆ ನೀಡಿತ್ತು. ಒಂದೊಂದು ಬಾಲ್​ನಲ್ಲೂ ಬೌಂಡರಿ, ಸಿಕ್ಸರ್ ಗಳು ಸಿಡೀತಿದ್ರೆ ದಾಖಲೆಗಳೂ ಧೂಳೀಪಟ ಆಗ್ತಿದ್ವು. ಶುಕ್ರವಾರ ಕೆಕೆಆರ್ ಮತ್ತು ಪಂಜಾಬ್ ನಡುವಿನ ಪಂದ್ಯದ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB ವಿರುದ್ಧ ಸೋತ ಸಿಟ್ಟಲ್ಲಿ ಕಮಿನ್ಸ್ ಸಿಡಿಮಿಡಿ – SRH ತಂಡದ ಓನರ್ ಕಾವ್ಯ ಮಾರನ್ ನೋವಿಗೂ ಕೊನೆಯಿಲ್ಲ..!

ವಿಶ್ವಕ್ರಿಕೆಟ್​​ನಲ್ಲೇ ಅತೀ ಹೆಚ್ಚು ರನ್ ಚೇಸಿಂಗ್.. ಐಪಿಎಲ್​​ನಲ್ಲೇ ಅತೀ ಹೆಚ್ಚು ಸಿಕ್ಸಸ್.. ಕೆಕೆಆರ್ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಬರೆದ ದಾಖಲೆಗಳು ಒಂದೆರಡಲ್ಲ. ಸತತ ಸೋಲುಗಳಿಂದ ಹಸಿದ ಹೆಬ್ಬುಲಿಗಳಂತಾಗಿದ್ದ ಪಂಜಾಬ್ ಪ್ಲೇಯರ್ಸ್ ಕೆಕೆಆರ್​ ಆಟಗಾರರನ್ನ ಬೇಟೆಯಾಡಿದ್ರು.. ಕೆಕೆಆರ್ ನೀಡಿದ್ದ 262 ರನ್​ಗಳ ಬಿಗ್​ ಟಾರ್ಗೆಟ್​ ಚೇಸ್​ ಮಾಡಿ ಐಪಿಎಲ್​ನಲ್ಲೇ ಹೊಸ ಇತಿಹಾಸ ನಿರ್ಮಿಸಿದೆ. ಟಾಸ್ ಸೋತು ಫಸ್ಟ್​ ಬ್ಯಾಟಿಂಗ್​ ಮಾಡಿದ ಕೆಕೆಆರ್​ ಪರ ಓಪನರ್​ ಆಗಿ ಬಂದ ಫಿಲ್ ಸಾಲ್ಟ್​ ಸ್ಫೋಟಕ ಬ್ಯಾಟಿಂಗ್ ಮಾಡಿದ್ರು. ಕೇವಲ 37 ಬಾಲ್​ನಲ್ಲಿ 6 ಸಿಕ್ಸರ್​​, 6 ಫೋರ್​ ಸಮೇತ 75 ರನ್​ಗಳನ್ನ ಚಚ್ಚಿದ್ರು. ಇನ್ನು ಇವ್ರಿಗೆ ಸಾಥ್ ನೀಡಿ ಎಂದಿನಂತೆ ಅಬ್ಬರಿಸಿದ ಸುನೀಲ್​ ನರೈನ್​​ ಕೇವಲ 32 ಬಾಲ್​ನಲ್ಲಿ 4 ಸಿಕ್ಸ್​​, 9 ಫೋರ್​ ಸಮೇತ 71 ರನ್​ ಬಾರಿಸಿದ್ರು. ಬಳಿಕ ಬಂದ ವೆಂಕಟೇಶ್​​ ಅಯ್ಯರ್​ ತಾಳ್ಮೆಯಿಂದ ಬ್ಯಾಟ್​ ಬೀಸಿ 23 ಬಾಲ್​ನಲ್ಲಿ 2 ಸಿಕ್ಸರ್​, 3 ಫೋರ್​ ಜತೆಗೆ 39 ರನ್​ ಗಳಿಸಿದ್ರು. ರಸ್ಸೆಲ್​ 12 ಬಾಲ್​ನಲ್ಲಿ 2 ಸಿಕ್ಸರ್​, 2 ಫೋರ್​ ಸಮೇತ 24 ರನ್​ ಬಾರಿಸಿದ್ರು. ಕ್ಯಾಪ್ಟನ್​ ಶ್ರೇಯಸ್ ಅಯ್ಯರ್​​ 10 ಬಾಲ್​ನಲ್ಲಿ 3 ಸಿಕ್ಸರ್​​, 1 ಫೋರ್​​ನೊಂದಿಗೆ 28 ರನ್​​ ಸಿಡಿಸಿದ್ರು. ರಿಂಕು ಸಿಂಗ್​ 5, ರಮಣ್​ದೀಪ್​ ಸಿಂಗ್​​ 6 ರನ್​​​ ಗಳಿಸಿದ ಪರಿಣಾಮ ಕೆಕೆಆರ್​​ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 261 ರನ್​ ಕಲೆ ಹಾಕಿ 262 ರನ್​ಗಳ ಬಿಗ್​ ಟಾರ್ಗೆಟ್​ ನೀಡಿತ್ತು.

262 ಅಂದಾಗ್ಲೇ ಎದುರಾಳಿ ಟೀಂ ಆತ್ಮವಿಶ್ವಾಸವೇ ಕುಗ್ಗಿ ಹೋಗುತ್ತೆ. ಬಿಗ್ ಟಾರ್ಗೆಟ್ ಇರೋದ್ರಿಂದ ಹೊಡೀಬೇಕು ಅನ್ನೋ ಪ್ರೆಶರ್​ನಲ್ಲಿ ಬೇಗ ಬೇಗ ವಿಕೆಟ್ ಒಪ್ಪಿಸಿಬಿಡ್ತಾರೆ. ಆದ್ರೆ ಪಂಜಾಬ್​ನ ಯಾವ ಆಟಗಾರರು ಕೂಡ ಇಂಥಾ ತಪ್ಪು ಮಾಡ್ಲೇ ಇಲ್ಲ. ಕೆಕೆಆರ್​ ನೀಡಿದ ಬೃಹತ್​ ಗುರಿ ಬೆನ್ನತ್ತಿದ ಪಂಜಾಬ್​ ಕಿಂಗ್ಸ್ ಪರ ಓಪನರ್​ ಆಗಿ ಬಂದ ಪ್ರಭುಸಿಮ್ರಾನ್​ ಸಿಂಗ್​ ರಣರೋಚಕ ಇನ್ನಿಂಗ್ಸ್ ಕಟ್ಟಿದ್ರು. ಕೇವಲ 20 ಬಾಲ್​ನಲ್ಲಿ 5 ಸಿಕ್ಸರ್​​, 4 ಫೋರ್​ ಸಮೇತ 54 ರನ್​ ಚಚ್ಚಿದ್ರು. ಮತ್ತೊಂದೆಡೆ ಇವರಿಗೆ ಸಾಥ್​ ಕೊಟ್ಟ ಜಾನಿ ಬೇರ್​ಸ್ಟೋ ಭರ್ಜರಿ ಬ್ಯಾಟಿಂಗ್​ ಮಾಡ್ತಿದ್ರು. ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೇರ್​ಸ್ಟೋ ಭರ್ಜರಿ ಜೊತೆಯಾಟವಾಡಿದರು. ಕೇವಲ 5.6 ಓವರ್​ಗೆ ಮೊದಲ ವಿಕೆಟ್​​ಗೆ 93 ರನ್​ ಗಳಿಸುವ ಮೂಲಕ ಅಬ್ಬರದ ಬ್ಯಾಟಿಂಗ್​ ಮಾಡಿದರು. ಆದ್ರೆ ನರೈನ್ ಬೌಲಿಂಗ್ ವೇಳೆ ಸಿಂಗಲ್ ರನ್ ತೆಗೆದುಕೊಳ್ಳುವಾಗ ಪ್ರಭ್ ಸಿಮ್ರಾನ್ ರನ್​ಔಟ್ ಆಗಿ ವಿಕೆಟ್ ಒಪ್ಪಿಸಿದ್ರು. ಭರ್ಜರಿ ಫಾರ್ಮ್​ನಲ್ಲಿದ್ದ ಪ್ರಭುಸಿಮ್ರಾನ್ ಔಟ್ ಆಗ್ತಿದ್ದಂತೆ ಪಂಜಾಬ್​ ಅಭಿಮಾನಿಗಳು ಇನ್ನೇನು ಮುಗೀತು ಅಂತಾನೇ ಅನ್ಕೊಳ್ತಿದ್ರು.

ಆದ್ರೆ ಬೇರ್​ಸ್ಟೋ ಮಾತ್ರ ಕೆಕೆಆರ್​ ಬೌಲರ್​ಗಳನ್ನ ಸರಿಯಾಗೇ ಬೆಂಡೆತ್ತಿದ್ರು. ಕೇವಲ 48 ಬಾಲ್​ನಲ್ಲಿ 108 ರನ್​ ಸಿಡಿಸಿದ್ರು. ಬರೋಬ್ಬರಿ 9 ಸಿಕ್ಸರ್​​, 8 ಭರ್ಜರಿ ಫೋರ್​ನೊಂದಿಗೆ ಶತಕ ಸಿಡಿಸಿ ಅಜೇಯರಾಗಿ ಉಳಿದ್ರು. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 220ಕ್ಕೂ ಹೆಚ್ಚು ಇತ್ತು. ರಿಲೀ ರೋಸೌವ್ 16 ಬಾಲ್​ಗಳಲ್ಲಿ 26 ರನ್​ಗಳಿಗೆ ನರೈನ್ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ಟು ನಿರ್ಗಮಿಸಿದ್ರು. ಆಗ್ಲೇ ನೋಡಿ ಪಂಜಾಬ್​ನ ಆಪತ್​ಬಾಂಧವನ ಎಂಟ್ರಿಯಾಗಿತ್ತು. ಹರಾಜಿನಲ್ಲಿ ತಪ್ಪಾಗಿ ಪಂಜಾಬ್ ತಂಡ ಸೇರಿದ್ದ ಶಶಾಂಕ್ ಸಿಂಗ್ ಸಿಡಿಗುಂಡಿನಂತೆ ಅಬ್ಬರಿಸಿದ್ರು. ಸಿಕ್ಸ್, ಫೋರ್​​ಗಳ ಸುರಿಮಳೆಯಾಗಿತ್ತು. ಜಸ್ಟ್ 27 ಬಾಲ್​ನಲ್ಲಿ 8 ಸಿಕ್ಸರ್​​, 2 ಫೋರ್​ ಸಮೇತ 67 ರನ್​ ಚಚ್ಚಿದ್ರು. ಈ ಮೂಲಕ ಪಂಜಾಬ್​ ತಂಡವನ್ನು ಇನ್ನೂ 8 ಬಾಲ್​ಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿಸಿದ್ರು. ಯಾರು ಶಶಾಂಕ್ ಸಿಂಗ್ ತಮ್ಮ ತಂಡಕ್ಕೆ ಬೇಡ ಅಂತಾ ಹೇಳಿದ್ರೋ ಅವ್ರ ಮುಖಕ್ಕೆ ಹೊಡೆದಂತೆ ತಂಡವನ್ನ ಗೆಲ್ಲಿಸಿದ್ರು.

ಶುಕ್ರವಾರದ ಪಂದ್ಯದಲ್ಲಿ ಪಂಜಾಬ್ ಆಟಗಾರರ ಪ್ರದರ್ಶನ ಹೇಗಿತ್ತು ಅಂದ್ರೆ ಬಹುಶಃ ಇನ್ನೂ 20 ರನ್ ಎಕ್ಸ್​ಟ್ರಾ ಇದ್ರೂ ಹೊಡೆದು ಬಿಸಾಕ್ತೀವಿ ಅನ್ನೋ ಌಟಿಟ್ಯೂಡ್​ನಲ್ಲಿ ಆಡಿದ್ರು. ಕೊನೆಗೂ ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದೆ. ಅತಿ ಹೆಚ್ಚು ರನ್​ ಚೇಸ್ ಮೂಲಕ ಶ್ರೀಮಂತ ಕ್ರಿಕೆಟ್​ ಲೀಗ್​ನಲ್ಲಿ​ ವಿಶ್ವದಾಖಲೆ ಬರೆದಿದೆ. ಕೆಕೆಆರ್ ನೀಡಿದ್ದ 262 ರನ್​ಗಳ ಶಿಖರವನ್ನ ಇನ್ನೂ 8 ಎಸೆತಗಳಿರುವಂತೆ ಚೇಸ್​ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದೆ.

ಪಂಜಾಬ್ ಕೇವಲ ಐಪಿಎಲ್​ನಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಟಿ20, ವಿಶ್ವ ಟಿ20 ಲೀಗ್​ಗಳಲ್ಲೂ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ದಾಖಲೆ ಬರೆದಿದೆ. ಈ ವಿಶ್ವದಾಖಲೆ ಹಿಂದೆ ದಕ್ಷಿಣ ಅಫ್ರಿಕಾ ತಂಡದ ಹೆಸರಿನಲ್ಲಿತ್ತು. 2023ರಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ 259ರನ್​ಗಳ ಗುರಿಯನ್ನ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ತಲುಪಿ ವಿಶ್ವದಾಖಲೆ ಬರೆದಿತ್ತು. ಒಟ್ನಲ್ಲಿ ಕೋಲ್ಕತ್ತಾ ಟೀಮ್ ನೀಡಿದ 262 ರನ್​ಗಳ ಬೃಹತ್ ಮೊತ್ತ ಟಾರ್ಗೆಟ್ ಮಾಡಿದ ಪಂಜಾಬ್​ ಸ್ಟೇಡಿಯಂನಲ್ಲಿ ಬರೀ ಸಿಕ್ಸರ್​, ಬೌಂಡರಿಗಳನ್ನ ಬಾರಿಸುವ ಮೂಲಕ ಫ್ಯಾನ್ಸ್​ಗೆ ಫುಲ್ ಕಿಕ್​ ಕೊಟ್ಟಿದೆ. ಪಂದ್ಯದ ವೇಳೆ ಹಲವು ದಾಖಲೆಗಳು ಮೂಡಿ ಬಂದಿವೆ. ಇಡೀ ಐಪಿಎಲ್ ಇತಿಹಾಸದಲ್ಲೇ ಈ ರೀತಿ ಚೇಸ್ ಮಾಡಿರುವುದು ಇದೇ ಮೊದಲಾಗಿದೆ. ವಿಶ್ವದಲ್ಲೂ ಟಿ20 ಪಂದ್ಯಗಳಲ್ಲಿ ಇಷ್ಟೊಂದು ರನ್ಸ್ ಯಾರು ಚೇಸ್ ಮಾಡಿರಲಿಲ್ಲ.

Sulekha