ಬ್ರಿಟನ್‌ನ ರಾಜನಾಗಿ ಕಿಂಗ್ ಚಾರ್ಲ್ಸ್ III -ಅದ್ಧೂರಿಯಾಗಿ ನಡೆದ ಪಟ್ಟಾಭಿಷೇಕ ಸಮಾರಂಭ
ಲಂಡನ್‌ನ ವೆಸ್ಟ್ ಮಿನಿಷ್ಟರ್ ಅಬ್ಬೆಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕ ಸಮಾರಂಭ ನಡೆದಿದೆ. ಸೆಪ್ಟೆಂಬರ್ 2022 ರಲ್ಲಿ ರಾಣಿ ಎಲಿಜಬೆತ್ II ರ ಮರಣದ ನಂತರ ಕಾನೂನುಬದ್ಧವಾಗಿ ರಾಜನಾದ ಚಾರ್ಲ್ಸ್, ಔಪಚಾರಿಕವಾಗಿ ಸೇಂಟ್ ಎಡ್ವರ್ಡ್ಸ್ ಕ್ರೌನ್ ಸ್ವೀಕರಿಸಿದ್ದಾರೆ. ಆರ್ಚ್‌ಬಿಷಪ್ ರಾಜನ ತಲೆಯ ಮೇಲೆ ಸೇಂಟ್ ಎಡ್ವರ್ಡ್ಸ್ ಕಿರೀಟವನ್ನು ಇರಿಸಿದ್ದು, ಬ್ರಿಟನ್ನ ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ ನಡೆದಿದೆ.
ಇದನ್ನೂ ಓದಿ: ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕಕ್ಕೆ ಕ್ಷಣಗಣನೆ – ಲಂಡನ್‌ನಲ್ಲಿ ನಡೆಯಲಿದೆ ಅದ್ಧೂರಿ ಸಮಾರಂಭ
ಎರಡು ಗಂಟೆಗಳ ಅವಧಿಯ ಸಮಾರಂಭಗಳ ನಂತರ, ಕಿಂಗ್ ಚಾರ್ಲ್ಸ್ ಬ್ರಿಟನ್‌ನ ಹೊಸ ರಾಜನಾಗಿ ಪಟ್ಟಾಭಿಷಿಕ್ತರಾಗಿದ್ದಾರೆ. ಇವರ ತಾಯಿ ರಾಣಿ ಎಲಿಜಬೆತ್ II ರ ಮರಣದ ನಂತರ, ಕಳೆದ ವರ್ಷ ಚಾರ್ಲ್ಸ್ ಸಿಂಹಾಸನವನ್ನು ಏರಿದರು. ಮೇ 6ರಂದು ಸಂಪ್ರದಾಯ, ವೈಭವ ಮತ್ತು ಶತಮಾನಗಳ-ಹಳೆಯ ಪದ್ಧತಿಗಳ ಪ್ರಕಾರ ರಾಜ ಕಿರೀಟವನ್ನು ಚಾರ್ಲ್ಸ್ ಮುಡಿಗೇರಿಸಲಾಯಿತು. ಈ ಕಿರೀಟಧಾರಣೆ, ಅಧಿಕೃತವಾಗಿ ಅವರ ಆಳ್ವಿಕೆಯ ಆರಂಭವನ್ನು ಸೂಚಿಸುತ್ತದೆ. ಕಿಂಗ್ ಚಾರ್ಲ್ಸ್ ಕಿರೀಟಧಾರಣೆ ವೇಳೆ ಟ್ರಂಪೆಟ್ಸ್ ಮತ್ತು “ಗಾಡ್ ಸೇವ್ ದ ಕಿಂಗ್” ಎಂಬ ಕೋರಸ್ ಮೊಳಗಿದ್ದು, ಕ್ಯಾಂಟರ್ಬರಿಯ ಆರ್ಚ್‌ಬಿಷಪ್ ರಾಜನ ತಲೆಯ ಮೇಲೆ ಸೇಂಟ್ ಎಡ್ವರ್ಡ್ಸ್ ಕಿರೀಟವನ್ನಿರಿಸಿದ್ದಾರೆ. ಚಾರ್ಲ್ಸ್ III ಯುನೈಟೆಡ್ ಕಿಂಗ್ಡಮ್ ಮತ್ತು 14 ಇತರ ಕಾಮನ್ವೆಲ್ತ್ ಸಾಮ್ರಾಜ್ಯಗಳ ರಾಜರಾಗಿದ್ದಾರೆ. ಕಿರೀಟಧಾರಣೆಗೆ ಮುನ್ನ ಆರ್ಚ್‌ಬಿಷಪ್ ಜಸ್ಟಿನ್ ವೆಲ್ಬಿ ಧರ್ಮೋಪದೇಶ ಮಾಡಿದ್ದಾರೆ. ನಾವು ರಾಜನನ್ನು ಪಟ್ಟಾಭಿಷೇಕ ಮಾಡಲು ಇಲ್ಲಿದ್ದೇವೆ. ಸೇವೆ ಮಾಡಲು ನಾವು ರಾಜನನ್ನು ಪಟ್ಟಾಭಿಷೇಕ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಕಿಂಗ್ ಚಾರ್ಲ್ಸ್ ನಾನು, ಚಾರ್ಲ್ಸ್ ದೇವರ ಸಮ್ಮುಖದಲ್ಲಿ ಪ್ರಾಮಾಣಿಕವಾಗಿ ನಾನು ನಂಬಿಗಸ್ತ ಪ್ರೊಟೆಸ್ಟೆಂಟ್ ಎಂದು ಘೋಷಿಸುತ್ತೇನೆ. ಪ್ರೊಟೆಸ್ಟಂಟ್ ಉತ್ತರಾಧಿಕಾರವನ್ನು ಭದ್ರಪಡಿಸುವ ಶಾಸನಗಳ ನಿಜವಾದ ಉದ್ದೇಶದ ಪ್ರಕಾರ ನಾನು ನಿಲ್ಲುತ್ತೇನೆ. ಸಿಂಹಾಸನಾರೋಹಣ ಮಾಡಿ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.