70 ಸಾವಿರ ಕೊಟ್ಟು ಖರೀದಿಸಿದ ಮಹಿಳೆಯನ್ನು ಮದುವೆಯಾದ – ಮಾತು ಕೇಳದ ಹೆಣ್ಣನ್ನು ಕತ್ತುಹಿಸುಕಿ ಕೊಂದೇಬಿಟ್ಟ

70 ಸಾವಿರ ಕೊಟ್ಟು ಖರೀದಿಸಿದ ಮಹಿಳೆಯನ್ನು ಮದುವೆಯಾದ – ಮಾತು ಕೇಳದ ಹೆಣ್ಣನ್ನು ಕತ್ತುಹಿಸುಕಿ ಕೊಂದೇಬಿಟ್ಟ

ಆತ ಅವಳನ್ನು ಖರೀದಿ ಮಾಡಿದ್ದ. ನಂತರ ಮದುವೆಯನ್ನೂ ಆಗಿದ್ದ. ಖರೀದಿ ಮಾಡಿದ ಹೆಣ್ಣು ಯಾಕೋ ಮಾಲೀಕನ ಮಾತು ಕೇಳುತ್ತಿರಲಿಲ್ಲ. ಗಂಡನಿಗೋ ತಾನು ಖರೀದಿಸಿದ ಹೆಂಡತಿ ತನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಸಿಟ್ಟು. ಅವಳು ಕೂಡಾ ಮನೆಬಿಟ್ಟು ಹೋದರೆ ತಿಂಗಳಾದರೂ ಬರುತ್ತಿರಲಿಲ್ಲ. ಆದರೆ, ಕೊನೆಗೂ ರೊಚ್ಚಿಗೆದ್ದ ಗಂಡ ಒಂದು ತೀರ್ಮಾನಕ್ಕೆ ಬಂದೇ ಬಿಟ್ಟಿದ್ದ.

ಇದನ್ನೂ ಓದಿ: ಜೀವಜಲವಾಯ್ತು ಜೀವಕ್ಕೆ ಕಂಟಕ – ಚಿತ್ತಾಪುರದಲ್ಲಿ 80ಕ್ಕೂ ಹೆಚ್ಚು ಜನ ಅಸ್ವಸ್ಥ

ದೆಹಲಿಯ ನಿವಾಸಿ ಧರಂವೀರ್ ಎಂಬಾತ 70 ಸಾವಿರ ರೂಪಾಯಿಗೆ ಮಹಿಳೆಯನ್ನು ಖರೀದಿಸಿದ್ದ. ಬಿಹಾರದ ಪಾಟ್ನಾ ಮೂಲದ ಮಹಿಳೆಯನ್ನು ಖರೀದಿಸಿ ಕರೆದುಕೊಂಡು ಬಂದಿದ್ದ ಧರಂವೀರ್ ಅವಳನ್ನು ಮದುವೆಯಾಗಿದ್ದ. ಆದರೆ, ಅವಳು ಧರಂವೀರ್ ಅಂದುಕೊಂಡಂತೆ ಇರಲಿಲ್ಲ. ಆಕೆ ಯಾವುದೇ ಮಾಹಿತಿಯನ್ನು ನೀಡದೇ ತಿಂಗಳುಗಟ್ಟಲೆ ಮನೆಯಿಂದ ಓಡಿಹೋಗುತ್ತಿದ್ದಳು. ಈತನಿಗೂ ಆಕೆಯ ವರ್ತನೆಯಿಂದ ಸಾಕಾಗಿ ಹೋಗಿತ್ತು. ಅವಳು ಯಾರು, ಅವಳ ಪೋಷಕರು ಯಾರೂ ಅಂತಾ ಈತನಿಗೂ ಗೊತ್ತಿಲ್ಲವಂತೆ. ಆಕೆ ಬಿಹಾರದ ಪಾಟ್ನಾ ಮೂಲದವಳು ಎಂಬುದನ್ನು ಮಾತ್ರ ಧರಂವೀರ್ ಹೇಳಿದ್ದ. ಪತ್ನಿ ಪದೇ ಪದೇ ಮನೆಬಿಟ್ಟು ಹೋಗುತ್ತಿರುವುದಕ್ಕೆ ಸಿಟ್ಟಿಗೆದ್ದ ಧರಂವೀರ್ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಪತ್ನಿಯ ಶವವನ್ನು ಫತೇಪುರ್ ಬೇರಿಯ ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಧರಂವೀರ್ ಹಾಗೂ ಕೊಲೆಗೆ ಸಹಾಯ ಮಾಡಿದ ಅರುಣ್ ಹಾಗೂ ಸತ್ಯವಾನ್ನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಫತೇಪುರ್ ಬೇರಿಯ ಝೀಲ್ ಖುರ್ದ್ ಗಡಿಯ ಬಳಿಯ ಕಾಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ತಲುಪಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ವಶಪಡಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ತನಿಖೆ ವೇಳೆ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಶನಿವಾರ ನಸುಕಿನ ಸಮಯ ಸುಮಾರು 1:40ರ ವೇಳೆಗೆ ಅನುಮಾನಾಸ್ಪದವಾಗಿ ಆಟೋ ರಿಕ್ಷಾ ಓಡಾಡಿರುವುದು ಕಂಡುಬಂದಿತ್ತು. ಆಟೋ ರಿಕ್ಷಾದ ಮಾರ್ಗವನ್ನು ಟ್ರ್ಯಾಕ್ ಮಾಡಿ, ಅದರ ನೋಂದಣಿ ಸಂಖ್ಯೆಯನ್ನು ಗುರುತಿಸಲಾಗಿತ್ತು. ಬಳಿಕ ಆಟೋ ಚಾಲಕ ಛತ್ತರ್ಪುರ್ ನಿವಾಸಿ ಅರುಣ್‌ನನ್ನು ಗಡಾಯಿಪುರ ಬ್ಯಾಂಡ್ ರಸ್ತೆ ಬಳಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಮೃತ ಮಹಿಳೆಯನ್ನು ಧರ್ಮವೀರ್ ಪತ್ನಿ ಸ್ವೀಟಿ ಎಂದು ಅರುಣ್ ತಿಳಿಸಿದ್ದಾನೆ. ವಿಚಾರಣೆ ವೇಳೆ ಅರುಣ್, ಧರಂವೀರ್ ಹಾಗೂ ಸತ್ಯವಾನ್ ತನ್ನ ಸಂಬಂಧಿಕರಾಗಿದ್ದು, ನಂಗ್ಲೋಯಿ ನಿವಾಸಿಗಳು. ಅವರು ಸ್ವೀಟಿಯನ್ನು ಹರ್ಯಾಣದ ಗಡಿಯಲ್ಲಿ ಕತ್ತು ಹಿಸುಕಿ ಕೊಂದು ಶವವನ್ನು ಕಾಡಿನಲ್ಲಿ ಎಸೆದಿರುವುದಾಗಿ ತಿಳಿಸಿದ್ದಾನೆ.

ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ ಆಕೆಯ ಪತಿ ಧರಂವೀರ್, ಹತ್ಯೆಗೆ ಸಹಾಯ ಮಾಡಿದ ಅರುಣ್ ಹಾಗೂ ಸತ್ಯವಾನ್ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದ್ದು ಪ್ರಕರಣ ಹೆಚ್ಚಿನ ತನಿಖೆಯಲ್ಲಿದೆ. ಮಹಿಳೆ ತನ್ನ ಗಂಡನ ಮನೆಯನ್ನು ತೊರೆದು ಪದೇ ಪದೇ ಎಲ್ಲಿಗೆ ಹೋಗುತ್ತಿದ್ದಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana