ಬಾಡಿಗೆ ಮನೆಗಾಗಿ ಹಣ ಬೇಕು – ಕಿಡ್ನಿ ಮಾರಾಟಕ್ಕಿದೆ ಎಂಬ ಪೋಸ್ಟರ್ ವೈರಲ್

ಬಾಡಿಗೆ ಮನೆಗಾಗಿ ಹಣ ಬೇಕು – ಕಿಡ್ನಿ ಮಾರಾಟಕ್ಕಿದೆ ಎಂಬ ಪೋಸ್ಟರ್ ವೈರಲ್

ಬೆಂಗಳೂರು: ಇಂದಿನ ದಿನಗಳಲ್ಲಿ ಎಲ್ಲವೂ ದುಬಾರಿಯಾಗಿದೆ. ನಾವು ಬಳಸುವ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳು, ವಸ್ತ್ರ, ತೈಲ ಬೆಲೆ, ಇಂಧನ ಬೆಲೆ ಎಲ್ಲದರ ಬೆಲೆ ಗಗನಕ್ಕೇರುತ್ತಿದೆ. ಇನ್ನೂ ಈ ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗ ಹಾಗೂ ಬಡವರ ಬದುಕು ಹೈರಾಣಾಗುತ್ತಿದೆ. ಇನ್ನೂ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮಧ್ಯಮ ವರ್ಗದವರು, ಬಡವರು ಕಡಿಮೆ ಬೆಲೆಗೆ ಬಾಡಿಗೆ ಮನೆ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಕೊವಿಡ್ ನಂತರ ಮನೆ ಮಾಲೀಕರು ಬಾಡಿಗೆ ದರ, ಅಡ್ವಾನ್ಸ್ ಅನ್ನು ದುಪ್ಪಟ್ಟು ಮಾಡಿದ್ದಾರೆ. ಇದನ್ನು ಟೀಕಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಿದ್ದ 11 ವರ್ಷದ ಬಾಲಕಿ ದಿಢೀರ್ ನಿವೃತ್ತಿಗೆ ಮುಂದಾಗಿದ್ದೇಕೆ..?  

ಬೆಂಗಳೂರಿನಂತಹ ಬೃಹತ್ ಸ್ಮಾರ್ಟ್ ಸಿಟಿಗಳಲ್ಲಿ ವಾಸ ಮಾಡ್ಬೇಕಂದ್ರೆ ಕೈತುಂಬಾ ಹಣವಿರಬೇಕು. ಕಡಿಮೆ ವೇತನ ಪಡೆಯುವವರ ಕಷ್ಟ ಕೇಳೋದೇ ಬೇಡ. ಮನೆ ಬಾಡಿಗೆ ಕಟ್ಟುವಷ್ಟರಲ್ಲೇ ಬಹುಪಾಲು ಸಂಬಳ ಮುಗಿದುಹೋಗುತ್ತದೆ. ಇದು ತುಂಬಾ ಸೀರಿಯಸ್ ವಿಷಯವಾಗಿದೆ. ಇದೇ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಅದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ವೈರಲ್ ಆದ ಈ ಪೋಸ್ಟರ್ ಮತ್ತು ಟ್ವೀಟ್.

ಬೆಂಗಳೂರಿನಲ್ಲಿ ಬಾಡಿಗೆ ಮನೆಗೆ ಹಣ ಠೇವಣಿ ಇಡಲು ವ್ಯಕ್ತಿಯು ತಮ್ಮ ಎಡ ಕಿಡ್ನಿ  ಮಾರಾಟ ಮಾಡುವುದಾಗಿ ಪೋಸ್ಟರ್ ನಲ್ಲಿ ತಿಳಿಸಿದ್ದಾರೆ. ಇದು ತಮಾಷೆ, ವ್ಯಂಗ್ಯ ಭರಿತ ಪೋಸ್ಟರ್ ಆಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಡಿಗೆ ಮನೆಗಾಗಿ ಡೆಪಾಸಿಟ್ ಹಣ ಪಡೆಯಲು ತನ್ನ ಎಡ ಕಿಡ್ನಿಯನ್ನು ಮಾರಾಟ ಮಾಡುವುದಾಗಿ ವ್ಯಕ್ತಿ ಪೋಸ್ಟರ್ ಅಂಟಿಸಿದ್ದಾರೆ. ರಮ್ಯಖ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.

ಈ ಪೋಸ್ಟರ್ ಹಾಕಿರುವ ವ್ಯಕ್ತಿ ಬೆಂಗಳೂರಿನ ಇಂದಿರಾ ನಗರ ಸುತ್ತಮುತ್ತ ಮನೆ ಹುಡುಕುತ್ತಿರುವುದಾಗಿ ಹೇಳಿದ್ದಾನೆ. ತನಗೆ ಮನೆ ಮಾಲೀಕರು ಕೇಳುತ್ತಿರುವಷ್ಟು ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಬಾಡಿಗೆ ಮನೆಯ ಡೆಪಾಸಿಟ್ ಕಟ್ಟಲು ಹಣ ಬೇಕು ಎಂದು ಬರೆದಿದ್ದಾನೆ. ಅಲ್ಲದೇ ಆ ಪೋಸ್ಟರ್ ನಲ್ಲಿ ಕ್ಯೂಆರ್ ಕೋಡ್ ಸಹ ಇಡಲಾಗಿದೆ. ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಡೆಪಾಸಿಟ್ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

suddiyaana