ಮಾರ್ಕ್ ಚಿತ್ರದ ಬಿಗ್ ಅಪ್ಡೇಟ್ ಕೊಟ್ಟ ಕಿಚ್ಚ – ಲಿರಿಕಲ್ ಸಾಂಗ್ ರಿಲೀಸ್ ಗೆ ಮುಹೂರ್ತ ಫಿಕ್ಸ್!

ಕಿಚ್ಚ ಸುದೀಪ್ ಅವರ ಮುಂಬರುವ ಚಿತ್ರ ಮಾರ್ಕ್ ಈಗಾಗಲೇ ಮೊದಲ ಝಲಕ್ನಲ್ಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕತೂಹಲ ಮೂಡಿಸಿದೆ. ಮಾರ್ಕ್ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶಿಸಲಿರುವ ಈ ಸಿನಿಮಾವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಿಸಿದ್ದಾರೆ. ಇದೀಗ ಕಿಚ್ಚ ಸುದೀಪ್ ಫ್ಯಾನ್ಸ್ ಗೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.
ಇದನ್ನೂ ಓದಿ:
ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಲಿದೆ. ಇದ್ರ ಮಧ್ಯೆಯೇ ಕಿಚ್ಚ ಮಾರ್ಕ್ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗ್ತಿದ್ದಾರೆ. ಈಗಾಗಲೇ ಒಂದು ಹಂತದ ಸಿನಿಮಾ ಶೂಟಿಂಗ್ ಮುಗಿದಿದೆ ಎನ್ನಲಾಗ್ತಿದೆ. ಇದೀಗ ಮಾರ್ಕ್ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ಶೀಘ್ರದಲ್ಲೇ ರಿಲೀಸ್ ಆಗಲಿದೆ ಎಂಬ ಸುದ್ದಿಯನ್ನ ಸುದೀಪ್ ಹಂಚಿಕೊಂಡಿದ್ದಾರೆ.
ಕಳೆದ ಸೆ.2ರಂದು ಕಿಚ್ಚನ ಮುಂದಿನ ಚಿತ್ರದ ಟೈಟಲ್ ರಿವೀಲ್ ಆಗಿತ್ತು. ಇದರ ಬೆನ್ನಲ್ಲೇ ಸುದೀಪ್ ಫಸ್ಟ್ ಸಾಂಗ್ ಎಂಟ್ರಿಯ ಸುದ್ದಿ ಘೋಷಿಸಿರುವುದು ಫ್ಯಾನ್ಸ್ ಖುಷಿಯನ್ನ ಹೆಚ್ಚಿಸಿದೆ. ಡಿಸೆಂಬರ್ 25ಕ್ಕೆ ಮಾರ್ಕ್ ಸಿನಿಮಾ ರಿಲೀಸ್ ಆಗಲಿದ್ದು, ಸೆಟ್ಟೇರಿದ ದಿನವೇ ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆಯಾಗಿತ್ತು. ಇಟ್ಟ ಹೆಜ್ಜೆ ಹಿಂದಕ್ಕಿಡದ ಸುದೀಪ್ ಯಾವುದೇ ಸಿನಿಮಾ ಎದುರು ನಿಂತರೂ ಅದೇ ದಿನ ತೆರೆಗೆ ತರೋದಾಗಿ ಮತ್ತೊಮ್ಮೆ ಖಚಿತಪಡಿಸಿದ್ದರು. ಇದೀಗ ಮೊದಲ ಹಾಡನ್ನ ರಿಲೀಸ್ ಮಾಡುವ ಮೂಲಕ ಮಗದೊಮ್ಮೆ ಸಿನಿಮಾ ರೆಡಿ ಎಂಬ ಸಿಗ್ನಲ್ ಕೊಡಲು ಹೊರಟಿದ್ದಾರೆ ಸುದೀಪ್.
ಮಾರ್ಕ್ ಚಿತ್ರದ ಈ ಹಾಡು ಕೆಲವೇ ದಿನಗಳಲ್ಲಿ ಎಂಟ್ರಿ ಕೊಡಲಿದೆ. ಅಜನೀಶ್ ಲೋಕನಾಥ್ ಸಂಗೀತದ ಜೊತೆ ಶೋಭಿನ್ ಮಾಸ್ಟರ್ ಕೋರಿಯೋಗ್ರಫಿಯಲ್ಲಿ ಕಿಚ್ಚನ ಮಾಸ್ ಹೆಜ್ಜೆ ನೋಡಬಹುದು. ಮ್ಯಾಕ್ಸ್ ಚಿತ್ರದ ಸಕ್ಸಸ್ ಜರ್ನಿ ಬಳಿಕ ಅದೇ ರೂಪದಲ್ಲಿ ಬರ್ತಿರುವ ಮಾರ್ಕ್ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ಕಳೆದ ಬಾರಿ ಡಿಸೆಂಬರ್ನಲ್ಲೇ ಮ್ಯಾಕ್ಸ್ ರಿಲೀಸ್ ಆಗಿತ್ತು. ಅದೇ ವೇಳೆಗೆ ಅಂಥದ್ದೇ ಮಾಸ್ ಜಬರ್ದಸ್ತ್ ಸಿನಿಮಾ ಅದೇ ಟೀಮ್ ಜೊತೆಗಿನ ಸಿನಿಮಾ ಮಾರ್ಕ್ ತೆರೆ ಕಾಣಲು ಸಿದ್ಧವಾಗಿದೆ. ಅಧಿಕೃತ ಪ್ರಚಾರವೂ ಶುರುವಾಗಿರೋದ್ರಿಂದ ಕಿಚ್ಚ ಫ್ಯಾನ್ಸ್ಗೆ ಇದು ಹಬ್ಬ ಮಾಡುವ ಸುದ್ದಿ.

ನೋಡಿರಿ

