ಬಿಜೆಪಿ ಸೇರ್ಪಡೆಯಾಗಲಿದ್ದಾರಾ ಸುದೀಪ್? – ಕುತೂಹಲ ಮೂಡಿಸಿದ ಕಿಚ್ಚನ ನಡೆ!

ಬಿಜೆಪಿ ಸೇರ್ಪಡೆಯಾಗಲಿದ್ದಾರಾ ಸುದೀಪ್? – ಕುತೂಹಲ ಮೂಡಿಸಿದ ಕಿಚ್ಚನ ನಡೆ!

ಬೆಂಗಳೂರು: ವಿಧಾನಸಭಾ ಚುನಾವಣೆಯ ಕಾವು ಜೋರಾದಂತೆ ಹಲವು ಸೆಲೆಬ್ರಿಟಿಗಳು ರಾಜಕೀಯ ಪಕ್ಷದ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವರು ಚುನಾವಣೆಗೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ರಾಜಕೀಯ ಅಖಾಡಕ್ಕೆ ಧುಮುಕುತ್ತಾರೆ ಅನ್ನೋ ಸುದ್ದಿ ಸಂಚಲನ ಮೂಡಿಸಿದೆ. ಇದೀಗ ಸುದೀಪ್ ಬಿಜೆಪಿ ಜೊತೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್-ಡಿಕೆಶಿ ಭೇಟಿ ನಡುವಿನ ಗುಟ್ಟು ರಟ್ಟು – ‘ಮಾಣಿಕ್ಯ’ನ ರಾಜಕೀಯ ಎಂಟ್ರಿ ಪಕ್ಕಾನಾ..?

ನಟ ಸುದೀಪ್ ರನ್ನ ರಾಜಕೀಯಕ್ಕೆ ಕರೆತರಲು ಹಿಂದಿನಿಂದಲೂ ಸಾಕಷ್ಟು ಪ್ರಯತ್ನಗಳು ನಡೆದಿವೆ. ಅದೇ ರೀತಿ ಸುದೀಪ್ ಅವರು ರಾಜಕೀಯ ಸೇರುತ್ತಾರೆ ಎನ್ನುವ ಮಾತು ಕೇಳಿ ಬಂತು. ಇದಕ್ಕೆ ಸಾಕ್ಷ್ಯ ಎಂಬಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಸುದೀಪ್ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಈ ಬಗ್ಗೆ ಸುದೀಪ್ ಸ್ಪಷ್ಟನೆ ನೀಡಿದ್ದರು. ರಾಜಕೀಯ ಸೇರ್ಪಡೆ ವಿಚಾರವನ್ನು ಅವರು ತಳ್ಳಿ ಹಾಕಿದ್ದರು. ಈಗ ಬಿಜೆಪಿ ಪಾಳಯದ ಜೊತೆ ಸುದೀಪ್ ಗುರುತಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಸಿಎಂ ನೇತೃತ್ವದಲ್ಲಿ ಮಾತುಕತೆ ಆಗಿದೆ. ಒಳ್ಳೆಯ ಫಲಿತಾಂಶದ‌ ನಿರೀಕ್ಷೆ ಪಕ್ಷಕ್ಕಿದೆ. ಹೀಗಾಗಿ ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಬಿಜೆಪಿ ಮೂಲಗಳಿಂದ  ಮಾಹಿತಿ ಲಭ್ಯವಾಗಿದೆ. ಈ ಕುರಿತು ಇಂದು ಮಧ್ಯಾಹ್ನ 1.30 ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಇದರಲ್ಲಿ ಸುದೀಪ್ ಕೂಡ ಭಾಗವಹಿಸಲಿದ್ದಾರೆ.

ಆದರೆ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ಇನ್ನೂ ಅಂತಿಮವಾಗಿಲ್ಲ. ಸುದೀಪ್ ಪಕ್ಷಕ್ಕೆ ಕರೆ ತರಲು ತೆರೆಮರೆಯಲ್ಲಿ ಹಲವು ನಾಯಕರು ಈಗಾಗಲೇ ಚರ್ಚೆ ನಡೆಸಿ, ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು ನಟ ಕಿಚ್ಚ ಸುದೀಪ್ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಅವರು ಸ್ಟಾರ್ ಪ್ರಚಾರಕರಾಗಿ ಬಿಜೆಪಿ ಜೊತೆ ಕೈಜೋಡಿಸಲಿದ್ದಾರಾ ಅಥವಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರಾ ಅನ್ನೋದ್ರ ಬಗ್ಗೆ ಮಧ್ಯಾಹ್ನದ ಸುದ್ದಿಗೋಷ್ಠಿಯಲ್ಲಿ ಉತ್ತರ ಸಿಗಲಿದೆ.

suddiyaana