ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ.. ಇಬ್ಬರಿಗೂ ತಿಳುವಳಿಕೆ ಇದೆ.. – ಹುಟ್ಟುಹಬ್ಬದಂದೇ ದರ್ಶನ್ ಮುನಿಸು ಬಗ್ಗೆ ಮಾತನಾಡಿದ ಕಿಚ್ಚ!
ಸ್ಯಾಂಡಲ್‍ವುಡ್ ಬಾದ್ ಷಾ ಕಿಚ್ಚ ಸುದೀಪ್‍ಗೆ ಇಂದು (ಶನಿವಾರ) 50ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಕಿಸುದೀಪ್ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಸುದೀಪ್ ಪತ್ನಿ ಪ್ರಿಯಾ, ಪುತ್ರಿ ಸೇರಿದಂತೆ ಕುಟುಂಬಸ್ಥರು, ಸ್ಯಾಂಡಲ್ ವುಡ್ ಗಣ್ಯರು, ಸ್ನೇಹಿತರು ಭಾಗಿಯಾಗಿ ಕೇಕ್ ತಿನ್ನಿಸಿ, ಶುಭಕೋರಿದ್ರು. ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದಂದು, ಅಭಿಮಾನಿಗಳ ಪ್ರೀತಿ, ಸಿನಿಮಾ ಮೇಲಿನ ಹುಚ್ಚು ಹಾಗೂ ನಟ ದರ್ಶನ ಸ್ನೇಹದ ಬಗ್ಗೆ ಮಾತನಾಡುವ ಮೂಲಕ ಹಲವರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಮಾಧ್ಯಮದ ನಡುವಿನ ವಿವಾದ ಸುಖಾಂತ್ಯ – ಪತ್ರ ಬರೆದು ಕ್ಷಮೆಕೋರಿದ ನಟ ದರ್ಶನ್
ಕಿಚ್ಚ ಸುದೀಪ್ ಮತ್ತು ದರ್ಶನ್ ಸ್ನೇಹದ ವಿಚಾರವಾಗಿ ಹಲವು ವರ್ಷಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇಬ್ಬರೂ ದೂರವಾಗಿರುವ ವಿಚಾರ ಗುಟ್ಟಿನದ್ದೇನಲ್ಲ. ಆದರೂ, ಇಬ್ಬರು ಮತ್ತೆ ಒಂದಾಗುತ್ತಾರೆ, ಮತ್ತೆ ಮೊದಲಿನಂತೆ ಸ್ನೇಹಿತರಾಗಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕಾಯುವಿಕೆ ಇಬ್ಬರ ಅಭಿಮಾನಿಗಳಲ್ಲೂ ಇದೆ. ಮೊನ್ನೆ ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತು. ಆದರೂ, ಇಬ್ಬರೂ ಮಾತಾಡಲಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇತ್ತು. ಇದೀಗ ನಟ ಕಿಚ್ಚಸುದೀಪ್ ಅವರು ತಮ್ಮ ಹುಟ್ಟುಹಬ್ಬದಂದೇ ತಮ್ಮ ಹಾಗೂ ದರ್ಶನ್ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.
ದರ್ಶನ್ ಕುರಿತಾಗಿ ಮಾತನಾಡಿದ ಕಿಚ್ಚ, ‘ನಾನು ಸುಮಲತಾ ಅವರ ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದ್ದೆ. ಮುಂಚೆನೇ ದರ್ಶನ್ ಇರ್ತಾರೆ ಅಂತ ನಂಗೂ ಗೊತ್ತಿತ್ತು. ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನೋದು ಕಲ್ಪನೆ. ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು. ನನ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ. ಪ್ರಶ್ನೆಗಳು ಬರ್ತಾವೆ, ಒಳ್ಳೇದು, ಕೆಟ್ಟದು ಇರ್ತಾವೆ. ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ. ಇಬ್ಬರಿಗೂ ತಿಳುವಳಿಕೆ ಇದೆ. ಎಲ್ಲವೂ ಸರಿ ಹೋಗ್ಬೇಕು, ಅಂದಾಗ ಸರಿ ಹೋಗುತ್ತೆ’ ಎಂದು ಹೇಳಿದ್ದಾರೆ.
ಸುದೀಪ್ ಮತ್ತು ದರ್ಶನ್ ಯಾವ ಕಾರಣಕ್ಕೆ ದೂರವಾದರು ಎನ್ನುವುದು ಈಗಲೂ ಯಕ್ಷ ಪ್ರಶ್ನೆ. ಆದರೂ, ದರ್ಶನ್ ಬಗ್ಗೆ ಸುದೀಪ್ ಅವರಿಗೆ ಈಗಲೂ ಅದೇ ಸ್ನೇಹವಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಫೋಟೋವಿದೆ. ಸುದೀಪ್ ಮತ್ತು ದರ್ಶನ್ ಆದಷ್ಟು ಬೇಗ ಒಂದಾಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.