‘ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ’ -ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ
ಡಿ ಬಾಸ್ ಮೇಲೆ ಚಪ್ಪಲಿ ಎಸೆತ - ಸ್ಯಾಂಡಲ್‌ವುಡ್ ನಟರಿಂದ ತೀವ್ರ ಖಂಡನೆ

‘ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ’ -ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆಡಿ ಬಾಸ್ ಮೇಲೆ ಚಪ್ಪಲಿ ಎಸೆತ - ಸ್ಯಾಂಡಲ್‌ವುಡ್ ನಟರಿಂದ ತೀವ್ರ ಖಂಡನೆ

ಡಿ ಬಾಸ್ ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಘಟನೆಯನ್ನು ಕನ್ನಡ ಚಿತ್ರರಂಗದ ಕಲಾವಿದರು ಖಂಡಿಸಿದ್ದಾರೆ. ವಿಚಾರ ಗೊತ್ತಾಗುತ್ತಿದ್ದಂತೆ ಶಿವರಾಜ್ ಕುಮಾರ್ ಕೂಡಾ ಅಭಿಮಾನಿಗಳು ಹೀಗೆಲ್ಲಾ ಮಾಡಬಾರದು, ಎಲ್ಲಾ ಕಲಾವಿದರೂ ಒಂದೇ. ನನ್ನ ಮನಸಿಗೆ ನೋವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಇದೀಗ ಕಿಚ್ಚ ಸುದೀಪ್ ಕೂಡಾ ಈ ಘಟನೆಿಯಿಂದ ವಿಚಲಿತನಾಗಿದ್ದೇನೆ ಎಂದಿದ್ದಾರೆ. ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರ ಕುರಿತಂತೆ ಪೋಸ್ಟ್ ಮಾಡಿದ್ದು, ಪುನೀತ್ ರಾಜ್‌ಕುಮಾರ್ ಕೂಡಾ ಈ ಘಟನೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ :  ನಟ ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಅಭಿಮಾನಿಗಳು ಗರಂ – ಚಿನ್ನಾ ಪರ್ವಾಗಿಲ್ಲ ಎಂದ ಡಿ ಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದರು ಕೂಡಾ ಈಗ ದೂರಾಗಿದ್ದಾರೆ. ಆದರೆ, ದರ್ಶನ್ ಪರ ಅವರು ಮಾಡಿರುವ ಪೋಸ್ಟ್ ಈಗ ಅಭಿಮಾನಿಗಳ ಮನಗೆದ್ದಿದೆ. ಸುದೀಪ್ ಈ ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, ಮನಸಿಗೆ ಘಾಸಿವುಂಟಾಗಿದೆ ಎಂದಿದ್ದಾರೆ.

“ನಮ್ಮ ನೆಲ, ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವಯುತವಾದದ್ದು. ಪ್ರತಿ ಸಮಸ್ಯೆಗೂ ಇಲ್ಲಿ ಪರಿಹಾರ ಇದೆ. ಹಾಗೆಯೇ ಪ್ರತಿಯೊಂದು ಪರಿಹಾರವು ಹಲವಾರು ಪರಿಹಾರದ ದಾರಿಗಳನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವರ್ತಿಸಲು ಅರ್ಹನಾಗಿದ್ದಾನೆ. ಮತ್ತು ಸಮಸ್ಯೆಯನ್ನು ಆಹ್ಲಾದಕರ, ಶಾಂತ ರೀತಿಯಲ್ಲಿ ಪರಿಹರಿಸಬಹುದು.

ಆ ವಿಡಿಯೋವನ್ನು ನೋಡಿ ನಾನು ತುಂಬಾ ವಿಚಲಿತನಾದೆ. ಆ ಸಿನಿಮಾಗೆ ಸಂಬಂಧಪಟ್ಟ ಅನೇಕರು ಮತ್ತು ಸಿನಿಮಾದ ಭಾಗವಾಗಿದ್ದ ಪ್ರಮುಖ ಮಹಿಳೆ ಕೂಡ ಇದ್ದರು. ಅವರೆಲ್ಲ ಆ ಸಿನಿಮಾ ಕಾರ್ಯಕ್ರಮದ ಭಾಗವಾಗಿದ್ದರು. ಆ ಸಮಯದಲ್ಲಿ ಸಂಭವಿಸಿದ ಅಗೌರವದ ಅವಘಡಕ್ಕೆ ಯಾವುದೇ ಸಂಬಂಧವಿರಲಿಲ್ಲ. ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದು, ಈ ಅನ್ಯಾಯದ ಪ್ರತಿಕ್ರಿಯೆಗಳಿಗೆ ನಾವು ಕನ್ನಡಿಗರೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಒಳಗಿರುವ ಆಕ್ರೋಶವನ್ನು ಹೊರಹಾಕುವ ಮಾರ್ಗವೂ ಇದಲ್ಲ. ದರ್ಶನ್ ಮತ್ತು ಪುನೀತ್ ಅಭಿಮಾನಿಗಳಿಗೆ ಕೆಲವೊಂದು ವಿಷಯಗಳಿಗೆ ಅಸಮಾಧಾನವಿದೆ ಎಂಬುದು ನನಗೆ ಗೊತ್ತಿದೆ. ಆದರೆ ಪುನೀತ್‌ರವರು ಕೂಡ ಈ ರೀತಿಯ ಘಟನೆಗಳನ್ನು ಒಪ್ಪುತ್ತಿರಲಿಲ್ಲ ಮತ್ತು ಸಹಕರಿಸುತ್ತಿರಲಿಲ್ಲ. ಏಕೆಂದರೆ ಅವರು ಎಲ್ಲರನ್ನೂ ಗೌರವಿಸುತ್ತಿದ್ದರು. ಯಾವನೋ ಒಬ್ಬ ಗುಂಪಲ್ಲಿ ಮಾಡುವ ಕ್ಷುಲ್ಲಕ ಕೆಲಸಕ್ಕೆ ಇಡೀ ವ್ಯವಸ್ಥೆಯನ್ನು ದೂಷಣೆ ಮಾಡುವುದು ಬೇಡ. ಇಡೀ ವ್ಯವಸ್ಥೆ ಪ್ರೀತಿ, ಘನತೆ, ಗೌರವದಿಂದ ತುಂಬಿದೆ ಎಂಬುದು ಪುನೀತ್ ಅಭಿಮಾನಿಗಳಿಗೆ ಗೊತ್ತಿರಬೇಕು.

ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಮತ್ತು ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು. ನನ್ನ ಮನಸ್ಸಿನಲ್ಲಿರುವುದನ್ನು ನಾನು ಹೇಳಲೇಬೇಕು. ನಿಜಕ್ಕೂ ಈ ಘಟನೆ ನನ್ನನ್ನು ವಿಚಲಿತನನ್ನಾಗಿ ಮಾಡಿದೆ. ಕನ್ನಡ ಚಿತ್ರರಂಗ ಮತ್ತು ಜನ ಕನ್ನಡ ಹಾಗೂ ಕರ್ನಾಟಕಕ್ಕೆ ಹಾಗೂ ಎಲ್ಲರಿಗೂ ಗೌರವ ತಂದುಕೊಡುವ ಕೊಡುವ ಕೆಲಸ ಮಾಡಿದೆ. ಒಳ್ಳೆಯದನ್ನು ನಾವು ಎಲ್ಲೆಡೆ ಹರಡಬೇಕೆ ವಿನಃ ಇಂತಹ ನೀಚ ಕೃತ್ಯಗಳ ಮೂಲಕ ಕೆಟ್ಟ ಸಂದೇಶವನ್ನು ಹರಡಬಾರದು. ನನಗೆ ಗೊತ್ತಿದೆ. ಕೆಲವು ನಟರುಗಳ ನಡುವೆ ಹಾಗೂ ಅಭಿಮಾನಿಗಳ ಮಧ್ಯೆ ಅಸಮಾಧಾನವಿದೆ; ಭಿನ್ನಾಭಿಪ್ರಾಯವಿದೆ. ನಾನೂ ದರ್ಶನ್ ಮತ್ತು ಪುನೀತ್ ಇಬ್ಬರನ್ನೂ ಹತ್ತಿರದಿಂದ ಬಲ್ಲವನಾಗಿದ್ದೇನೆ. ಇಬ್ಬರ ಜೀವನವನ್ನು ನೋಡಿದ್ದೇನೆ. ಆ ಸಲುಗೆಯಿಂದ ನನ್ನ ಮನದ ಮಾತುಗಳನ್ನು ಹೇಳುತ್ತಿದ್ದೇನೆ. ನಾನು 27 ವರ್ಷ ಸಿನಿಮಾರಂಗದಲ್ಲಿ ಜೀವಿಸಿದ್ದೇನೆ. ಎಲ್ಲ ರೀತಿಯ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ; ನೋಡಿದ್ದೇನೆ. ನಾವು ಪ್ರೀತಿ ಮತ್ತು ಗೌರವವನ್ನು ಹಂಚಬೇಕು. ಇದೇ ನಮಗೆ ಪ್ರತಿಯಾಗಿ ಸಿಗುವುದು ಕೂಡ. ಇದೊಂದೇ ದಾರಿ ಪ್ರತಿಯೊಂದು ಸಂದರ್ಭ ಮತ್ತು ಎಲ್ಲರನ್ನು ಗೆಲ್ಲಲು,

ನಿಮ್ಮ ಕಿಚ್ಚ

ಈ ಟ್ವೀಟ್ ನ್ನು ಸುದೀಪ್ ಪೋಸ್ಟ್ ಮಾಡಿದ್ದು, ದರ್ಶನ್ ಪರ ನಿಂತಿದ್ದಾರೆ. ಈಗಾಗಲೇ ಸ್ಯಾಂಡಲ್‌ವುಡ್ ದಿಗ್ಗಜರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ನೆನಪಿರಲಿ ಪ್ರೇಮ್ ಸೇರಿದಂತೆ ಅನೇಕ ನಟರು ಈ ಘಟನೆಯನ್ನು ಖಂಡಿಸಿದ್ದಾರೆ.

ಡಿಸೆಂಬರ್ 18 ಶನಿವಾರ ಚಿತ್ರತಂಡ ಹೊಸಪೇಟೆಯಲ್ಲಿ ‘ಕ್ರಾಂತಿ’ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆಯನ್ನು ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳ ಸಮ್ಮುಖದಲ್ಲಿ ವೇದಿಕೆಯೇರಿದ ದರ್ಶನ್ ಮತ್ತು ರಚಿತಾ ರಾಮ್ ಹಾಗೂ ಚಿತ್ರತಂಡ ಹಾಡು ಬಿಡುಗಡೆ ಮಾಡಿದ್ದಾರೆ. ಇದಾದ ನಂತರ ರಚಿತಾ ರಾಮ್ ಮೈಕ್ ಹಿಡಿದು ಮಾತನಾಡಲು ಆರಂಭಿಸಿದ್ದಾರೆ. ಆಗ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾನೆ.  ಆಗ ದರ್ಶನ್ ಅಭಿಮಾನಿಗಳು ರೊಚ್ಚಿಗೇಳುತ್ತಿದ್ದಂತೆ, ಡಿ ಬಾಸ್ ತಪ್ಪೇನಿಲ್ಲ ಚಿನ್ನಾ, ಪರ್ವಾಗಿಲ್ಲ ಅಂತಾ ದರ್ಶನ್ ಹೇಳುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

suddiyaana