ನಿರ್ಮಾಪಕ ಕುಮಾರ್ ವಿರುದ್ಧ ಕಾನೂನು ಸಮರ ಸಾರಿದ ಕಿಚ್ಚ ಸುದೀಪ್ – 10 ಕೋಟಿ ಮಾನನಷ್ಟ ಮೊಕದ್ದಮೆ!
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್ ಕುಮಾರ್ ಮಾಡಿದ್ದ ಆರೋಪಕ್ಕೆ ಸುದೀಪ್ ಕಾನೂನಿನ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ಕಿಚ್ಚ ಸುದೀಪ್ ನನ್ನಿಂದ ಹಣ ಪಡೆದು 8 ವರ್ಷಗಳಿಂದ ಸಿನಿಮಾ ಮಾಡಿಕೊಡುವೆ ಎಂದು ಸತಾಯಿಸುತ್ತ ಬರುತ್ತಿದ್ದಾರೆ. ಎಷ್ಟೇ ಬಾರಿ ಫೋನ್ ಮಾಡಿದರೂ, ಭೇಟಿಯಾಗಲು ಪ್ರಯತ್ನಪಟ್ಟರೂ ಕೂಡ ಅವರು ಕೈಗೆ ಸಿಗುತ್ತಿಲ್ಲ ಎಂದು ಎಂ.ಎನ್ ಕುಮಾರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಬಂದು ಹೇಳಿದ್ದರು. ಈಗ ಕಿಚ್ಚ ಸುದೀಪ್ ಅವರು ವಕೀಲರ ಮೂಲಕ ಎಂ.ಎನ್ ಕುಮಾರ್ಗೆ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ : ಸಮಂತಾಗೆ ಮತ್ತೆ ಕೈ ಕೊಟ್ಟ ಆರೋಗ್ಯ.. 6 ತಿಂಗಳು ಅಮೆರಿಕದಲ್ಲಿ ಚಿಕಿತ್ಸೆ?
‘ಎಂ ಎನ್ ಕುಮಾರ್ ಮಾಡಿರುವ ಎಲ್ಲ ಆರೋಪಗಳು ಸುಳ್ಳು, ಆಧಾರರಹಿತವಾಗಿವೆ. ನನ್ನ ಮೇಲೆ ಕುಮಾರ್ ಅವರು ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡಿದ್ದಾರೆ. ಕುಮಾರ್ ಅವರು ನನ್ನ ಮೇಲೆ ಮಾಡಿದ ಆರೋಪಗಳನ್ನು ಸಾಬೀತುಪಡಿಸಲಿ. ನೋಟಿಸ್ ಕೈ ಸೇರಿದ ಮೂರು ದಿನಗಳ ಒಳಗೆ ಮಾಧ್ಯಮದ ಮುಂದೆ ಕ್ಷಮೆ ಕೇಳಬೇಕು ಇಲ್ಲವಾದರೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನೋಟಿಸ್ ನೀಡಿದ್ದಾರೆ. ಹಾಗೆಯೇ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಿದ್ದಾರೆ.
ಸುದೀಪ್ ಅವರು ಚಿತ್ರರಂಗದಲ್ಲಿ 20 ವರ್ಷದಿಂದ ನಟಿಸುತ್ತಿರುವ ಪ್ರತಿಭಾನ್ವಿತ ನಟರಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಸಮಾಜ ಸೇವೆಯ ಮೂಲಕವೂ ಜನರಿಗೆ ಮಾದರಿಯಾಗಿದ್ದಾರೆ. ಅವರ ವಿರುದ್ಧ ನೀವು ಮಾಡಿರುವ ಆರೋಪಗಳು ಸುಳ್ಳಾಗಿದ್ದು, ಮಾನಹಾನಿ ಉಂಟು ಮಾಡಿವೆ. ಹಾಗಾಗಿ ನೀವು ಕ್ಷಮೆಯಾಚಿಸಬೇಕು ಹಾಗೂ ಪರಿಹಾರ ಕೊಡಬೇಕು ಎಂದು ಸುದೀಪ್ ಪರ ವಕೀಲರು ಕಳುಹಿಸಿದ ಲೀಗಲ್ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಕಿಚ್ಚ ಕಳುಹಿಸಿದ ನೋಟಿಸ್ನಲ್ಲಿ ‘ನೀವು ನನ್ನ ತಾಳ್ಮೆಯನ್ನ ಪರೀಕ್ಷಿಸಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿದ್ದೀರಿ. ನಾನು ನ್ಯಾಯಾಲಯ ಮತ್ತು ಸಂವಿಧಾನ ನಂಬಿರುವವನು. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡಲು ಕಾಯುತ್ತಿದ್ದೆ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತು ಪಡಿಸಿ. ಇಲ್ಲವಾದಲ್ಲಿ 10 ಕೋಟಿ ಮಾನನಷ್ಟದ ದಂಡ ಕಟ್ಟಿಕೊಡಿ’ ಎಂದು ಹೇಳಿದ್ದಾರೆ.