KHO KHO ವಿಶ್ವವಿಜೇತ ಭಾರತ – ಮೆನ್ಸ್ & ವುಮೆನ್ಸ್ ಡಬಲ್ ಧಮಾಕ
ಜಗತ್ತು ಗೆದ್ದ ಕನ್ನಡತಿ ಚೈತ್ರಾ
ಮೊದಲ ಖೋ ಕೋ ವಿಶ್ವಕಪ್‌ನಲ್ಲೇ ಭಾರತಕ್ಕೆ ಭಾನುವಾರ ಡಬಲ್ ಖುಷಿ ಸಿಕ್ಕಿದೆ. ಮೊದಲು ಮಹಿಳಾ ತಂಡ ವಿಶ್ವಕಪ್ ಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸೋ ಮೂಲಕ ಟ್ರೋಫಿಗೆ ಮುತ್ತಿಕ್ಕಿದ್ರು. ಈ ಸೆಲೆಬ್ರೇಷನ್ನಲ್ಲಿ ಮಿಂದೇಳುವಾಗಲೇ ಭಾರತ ಪುರುಷರ ತಂಡ ಕೂಡ ಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿದೆ.
ಇದನ್ನೂ ಓದಿ : KL.. ಗಿಲ್.. ಶ್ರೇಯಸ್.. ಪಂತ್ ಔಟ್ – ನಾಲ್ವರ ಟಿ-20 ಕೆರಿಯರ್ ಅಂತ್ಯ
ಭಾನುವಾರ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಮಹಿಳೆಯರ ಖೋಖೋ ಫೈನಲ್ ಪಂದ್ಯ ನಡೆಯಿತು. ಗುಂಪು ಹಂತದಲ್ಲಿ ದಕ್ಷಿಣ ಕೊರಿಯಾ, ಇರಾನ್ ಮತ್ತು ಮಲೇಷ್ಯಾ ವಿರುದ್ಧ ಗೆಲುವು ಸಾಧಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮತ್ತು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ಭಾರತ ಮತ್ತು ನೇಪಾಳದ ನಡುವೆ ಹಣಾಹಣಿ ಏರ್ಪಟ್ಟಿತ್ತು. ಟಾಸ್ ಗೆದ್ದ ನೇಪಾಳ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ರಕ್ಷಣೆಯನ್ನ ಆಯ್ಕೆ ಮಾಡಿಕೊಳ್ತು. ಬಟ್ ಭಾರತದ ಆಕ್ರಮಣಕಾರಿ ಆಟದಿಂದಾಗಿ ನೇಪಾಳದ ಈ ಸ್ಟ್ರಾಟಜಿ ವರ್ಕೌಟ್ ಆಗ್ಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಿಯಾಂಕಾ ಇಂಗಲ್ ನೇತೃತ್ವದ ಭಾರತ ತಂಡ 38-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ನೇಪಾಳ ತಂಡ ಉತ್ತಮ ಪ್ರದರ್ಶನ ನೀಡಿ, ಭಾರತದ ಲೀಡ್ ಸ್ವಲ್ಪ ಕಂಟ್ರೋಲ್ ಮಾಡಿತು. ಈ ಮೂಲಕ ಮೊದಲಾರ್ಧದ ಅಂತ್ಯಕ್ಕೆ ಭಾರತ 38-34 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಇನ್ನು ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಆಕ್ರಮಣಕಾರಿ ಆಟದ ಮೂಲಕ 73-24 ಅಂತರದಲ್ಲಿ ಮುನ್ನಡೆ ಸಾಧಿಸಿತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ರಕ್ಷಣಾತ್ಮಕ ಆಟದಿಂದಾಗಿ ನೇಪಾಳ ತಂಡಕ್ಕೆ ಹೆಚ್ಚಿನ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಭಾರತ 78-40 ಅಂತರದಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಚೊಚ್ಚಲ ವಿಶ್ವಕಪ್‌ನಲ್ಲೇ ಮಹಿಳಾ ತಂಡ ಟ್ರೋಫಿಗೆ ಮುತ್ತಿಕ್ಕಿತು. ಕನ್ನಡಿಗರಿಗೆ ಮತ್ತೊಂದು ಖುಷಿಯ ವಿಚಾರ ಅಂದ್ರೆ ಈ ತಂಡದಲ್ಲಿ ಮೈಸೂರಿನ ಯುವತಿ ಕೂಡ ಸ್ಥಾನ ಪಡೆದಿದ್ರು ಅನ್ನೋದು.
ವಿಶ್ವಕಪ್ ಗೆದ್ದ ತಂಡದಲ್ಲಿ ಮೈಸೂರಿನ ಚೈತ್ರಾ ಕೂಡ ಸ್ಥಾನ ಪಡ್ಕೊಂಡಿದ್ರು. ಮನೆಯಲ್ಲಿನ ಕಷ್ಟಗಳನ್ನೆಲ್ಲಾ ಪಕ್ಕಕ್ಕಿಟ್ಟು ಸವಾಲುಗಳನ್ನೆಲ್ಲಾ ಮೆಟ್ಟಿ ನಿಂತು ಗುರಿ ಮುಟ್ಟಿದ್ದಾರೆ. ಖೋ ಖೋ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಿದ ಮೈಸೂರು ಜಿಲ್ಲೆಯ ಮೊದಲಿಗರು ಹಾಗೇ ರಾಷ್ಟ್ರೀಯ ಮಹಿಳಾ ತಂಡಕ್ಕೆ ಆಯ್ಕೆಯಾದ ದಕ್ಷಿಣ ಭಾರತದಿಂದ ಏಕೈಕ ಆಟಗಾರ್ತಿ ಕೂಡ ಆಗಿದ್ದಾರೆ. ಚೈತ್ರಾ ಅವರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಕುರುಬೂರು ಗ್ರಾಮದವರು. ಗ್ರಾಮದ ರೈತ ದಂಪತಿ ಬಸವಣ್ಣ ಮತ್ತು ನಾಗರತ್ನ ಅವರ ಪುತ್ರಿ. ಖೋಖೋ ಬಗ್ಗೆ ತುಂಬಾನೇ ಇಂಟ್ರೆಸ್ಟ್ ಹೊಂದಿದ್ದ ಚೈತ್ರಾ ಮನೆಯಲ್ಲಿ ಅಷ್ಟೇನು ಸೌಕರ್ಯಗಳಿಲ್ಲ. ಚೈತ್ರಾರ ಕುಟುಂಬ ಅವರ ಸ್ಕೂಲ್ ಫೀಸ್ ಭರಿಸೋವಷ್ಟೂ ಸೌಲಭ್ಯ ಇಲ್ಲ. ಆದ್ರೆ ಚೈತ್ರಾಗಿದ್ದ ಇಂಟ್ರೆಸ್ಟ್, ಬುದ್ಧಿವಂತಿಕೆ, ಆಸಕ್ತಿ ಗಮನಿಸಿ ಅವರನ್ನು ಕುರುಬೂರಿನ ವಿದ್ಯಾದರ್ಶಿನಿ ಶಾಲೆಗೆ ಸೇರಿಸಿದರು. ಈ ವೇಳೆ ಗಣಿತ ಶಿಕ್ಷಕ ಮಂಜುನಾಥ್ ಚೈತ್ರಾಗೆ ಗುರುವಾಗಿದ್ರು. ಚೈತ್ರಾರ ಸಾಮರ್ಥ್ಯವನ್ನು ಗಮನಿಸಿದ ಮಂಜುನಾಥ್ ಆಕೆಗೆ ಸರಿಯಾದ ಮಾರ್ಗದರ್ಶನ ಮಾಡಿದರು. ಸದ್ಯ ಚೈತ್ರಾ ಅವ್ರು ಮಂಡ್ಯ ಜಿಲ್ಲೆಯ ಪಾಂಡವಪುರದ ಶ್ರೀ ಶಂಭುಲಿಂಗೇಶ್ವರ ಕಾಲೇಜಿನಲ್ಲಿ ದೈಹಿಕ ಶಿಕ್ಷಣದಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದಾರೆ. ಇನ್ನು ಚೈತ್ರಾ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಿಂದೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಖೋ ಖೋ ಚಾಂಪಿಯನ್‌ಶಿಪ್ -2022 ರಲ್ಲಿ ಚಿನ್ನದ ಪದಕ ಗೆದ್ದ ಮೈಸೂರು ವಿಶ್ವವಿದ್ಯಾಲಯದ ಮಹಿಳಾ ಖೋ ಖೋ ತಂಡದ ಸದಸ್ಯರಾಗಿದ್ದರು. ಹಾಗೇ ಸಾಕಷ್ಟು ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇಂಟ್ರೆಸ್ಟಿಂಗ್ ಅಂದ್ರೆ ಮಹಿಳೆಯರ ಬಳಿಕ ಪುರುಷರ ತಂಡ ಕೂಡ ವಿಶ್ವಕಪ್ ಫೈನಲ್ ಗೆದ್ದಿದೆ. ಪುರುಷರ ಖೋ-ಖೋ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಈ ಅವಧಿಯಲ್ಲಿ ಭಾರತದ ಪುರುಷರ ತಂಡ ನೇಪಾಳ, ಪೆರು, ಬ್ರೆಜಿಲ್ ಮತ್ತು ಭೂತಾನ್‌ನೊಂದಿಗೆ ಎ ಗುಂಪಿನಲ್ಲಿತ್ತು. ವಿಷ್ಯ ಅಂದ್ರೆ ಪುರುಷರ ತಂಡ ಕೂಡ ನೇಪಾಳ ಪುರುಷರ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ವಾಸ್ತವವಾಗಿ ಈ ಟೂರ್ನಿಯ ಮೊದಲ ಪಂದ್ಯವೂ ಈ ಎರಡು ತಂಡಗಳ ನಡುವೆ ನಡೆದಿತ್ತು. ಆಗಲೂ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಇದೀಗ ನಡೆದ ಫೈನಲ್‌ನಲ್ಲಿಯೂ ಭಾರತ ತಂಡ ನೇಪಾಳವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ. ಮೊದಲನೇ ಟರ್ನ್ನಲ್ಲಿ ದಾಳಿ ನಡೆಸಿದ ಭಾರತ ತಂಡ ಒಟ್ಟು 26 ಅಂಕ ಕಲೆಹಾಕಿತು. ಇತ್ತ ನೇಪಾಳ ತಂಡ 2 ನೇ ಟರ್ನ್ನಲ್ಲಿ 18 ಅಂಕಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಕಾರಣದಿಂದಾಗಿ ಭಾರತ ತಂಡವು 8 ಅಂಕಗಳ ಮುನ್ನಡೆ ಗಳಿಸಿತು. ಇದಾದ ನಂತರ 3ನೇ ಟರ್ನ್ನಲ್ಲಿ ಟೀಂ ಇಂಡಿಯಾ 54 ಅಂಕಗಳನ್ನು ಮುಟ್ಟಿ 26 ಅಂಕಗಳ ಮುನ್ನಡೆ ಸಾಧಿಸಿತು. ಕೊನೆಯ ಟರ್ನ್ನಲ್ಲಿ ನೇಪಾಳ 8 ಅಂಕಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ಅಂತಿಮವಾಗಿ ಭಾರತ ತಂಡವು ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದು ಕೊಳ್ತು. ಇನ್ನು ಚೊಚ್ಚಲ ಆವೃತ್ತಿಯಲ್ಲೇ ಖೋಖೋ ದಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರೂ ಕೂಡ ವಿಶ್ವಚಾಂಪಿಯನ್ ಆಗಿದ್ದಾರೆ.