ಬಡ ಕುಟುಂಬಗಳಿಗೆ ತಿಂಗಳಿಗೆ ₹5 ಸಾವಿರ! – ಹೊಸ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಬಡ ಕುಟುಂಬಗಳಿಗೆ ತಿಂಗಳಿಗೆ ₹5 ಸಾವಿರ! – ಹೊಸ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಗ್ಯಾರಂಟಿ ಯೋಜನೆಗಳ ಮೂಲಕವೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಬಳಿಕ ಐದೂ ಯೋಜನೆಗಳನ್ನ ಜಾರಿಗೊಳಿಸಿದೆ. ಇದೀಗ ಬಡಕುಟುಂಬಗಳಿಗೆ ಪ್ರತೀ ವರ್ಷ 5 ಸಾವಿರ ರೂಪಾಯಿ ನೀಡಲು ಕಾಂಗ್ರೆಸ್ ಮುಂದಾಗಿದೆ. ಹಾಗಾದ್ರೆ ಯಾರೆಲ್ಲಾ ಫಲಾನುಭವಿಗಳು ಆಗಬಹುದು..? ಈ ಯೋಜನೆ ಜಾರಿ ಯಾವಾಗ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..

ಕರ್ನಾಟಕದಲ್ಲಿ ಈಗಾಗ್ಲೇ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮೀ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳು ಜಾರಿಗೊಂಡಿದೆ. ಬಜೆಟ್​ನಲ್ಲಿಯೂ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷ ಅರ್ಹ ಬಡ ಕುಟುಂಬಗಳಿಗೆ ಪ್ರತೀ ತಿಂಗಳು 5 ಸಾವಿರ ರೂಪಾಯಿ ಹಣ ನೀಡುವ ಯೋಜನೆ ಘೋಷಿಸಿದೆ. ಹಾಗಂತ ಈ ಯೋಜನೆ ಕರ್ನಾಟಕದಲ್ಲಿ ಅಲ್ಲ. ಆಂಧ್ರ ಪ್ರದೇಶದಲ್ಲಿ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ವಾಟರ್ ಸ್ಟ್ರೈಕ್! – ನೀರು ನಿಲ್ಲಿಸಿದ್ಯಾಕೆ ಮೋದಿ?

ಕರ್ನಾಟಕ, ತೆಲಂಗಾಣದಲ್ಲಿ ಗ್ಯಾರಂಟಿಗಳ ಯಶಸ್ಸಿನ ನಂತರ ಆಂಧ್ರ ಪ್ರದೇಶದಲ್ಲೂ ಅದೇ ಸ್ಟ್ರಾಟಜಿ ಬಳಸಲು ಕಾಂಗ್ರೆಸ್‌ ಮುಂದಾಗಿದೆ. ಆಂಧ್ರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಪ್ರಚಾರ ಶುರು ಮಾಡಿದೆ. ಅರ್ಹ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದೆ. ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಂತಪುರದಲ್ಲಿ ಹೊಸ ಗ್ಯಾರಂಟಿಯನ್ನು ಘೋಷಿಸಿದ್ದಾರೆ. ಇದು ಗ್ಯಾರಂಟಿ, ಭರವಸೆಯಲ್ಲ. ಭಾರತದ ಯಾವುದೇ ರಾಜ್ಯದಲ್ಲಿರದ ಭರವಸೆಯನ್ನು ಬಡವರಿಗೆ ನಾವು ನೀಡುತ್ತಿದ್ದೇವೆ. ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ 5,000 ರೂಪಾಯಿ ಸಿಗುತ್ತದೆ ಎಂದಿದ್ದಾರೆ.

ಇನ್ನು 175 ಸದಸ್ಯ ಬಲದ ಆಂಧ್ರಪ್ರದೇಶ ಅಸೆಂಬ್ಲಿಯಲ್ಲಿ ಆಡಳಿತಾರೂಢ YSRCP 151 ಶಾಸಕರನ್ನು ಹೊಂದಿದೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ನೇತೃತ್ವದ ಆಂಧ್ರ ಪ್ರದೇಶ ವಿಧಾನಸಭೆಯ ಪ್ರಸ್ತುತ ಅಧಿಕಾರಾವಧಿಯು 2024 ರ ಏಪ್ರಿಲ್ ನಲ್ಲಿ ಮುಕ್ತಾಯಗೊಳ್ಳಲಿದೆ. ಈ ಚುನಾವಣೆಯು ಆಡಳಿತ ಪಕ್ಷಕ್ಕೆ ಮತ್ತು ಪ್ರತಿಪಕ್ಷಗಳಿಗೆ ನಿರ್ಣಾಯಕವಾಗಿದೆ. ಹೀಗಾಗಿ ಕಾಂಗ್ರೆಸ್ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪ್ರಯೋಗಿಸಿದ ಗ್ಯಾರಂಟಿ ಯೋಜನೆಗಳ ಅಸ್ತ್ರವನ್ನೇ ಆಂಧ್ರದಲ್ಲೂ ಅಪ್ಲೈ ಮಾಡಲು ಮುಂದಾಗಿದೆ. ಹಾಗೂ ಈವರೆಗಿನ ಎಲ್ಲಾ ಯೋಜನೆಗಳಿಗಿಂತ ಅತಿದೊಡ್ಡ ಯೋಜನೆ ಇದಾಗಿರಲಿದೆ ಎಂದಿದೆ.

Shwetha M