ಖಲಿಸ್ತಾನಿ ಉಗ್ರನ ಹತ್ಯೆ ಯತ್ನದ ಹಿಂದೆ ಭಾರತದ ಬೇಹುಗಾರಿಕಾ ಅಧಿಕಾರಿ  ಕೈವಾಡ – ದಾಖಲೆ ಸಮೇತ ಅಮೆರಿಕದ ಆರೋಪ

ಖಲಿಸ್ತಾನಿ ಉಗ್ರನ ಹತ್ಯೆ ಯತ್ನದ ಹಿಂದೆ ಭಾರತದ ಬೇಹುಗಾರಿಕಾ ಅಧಿಕಾರಿ  ಕೈವಾಡ – ದಾಖಲೆ ಸಮೇತ ಅಮೆರಿಕದ ಆರೋಪ

ಖಲಿಸ್ತಾನಿಯರ ಪ್ರತ್ಯೇಕ ರಾಷ್ಟ್ರದ ಕೂಗಿನ ನಡುವೆ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿರುಕು ಹೆಚ್ಚುತ್ತಲೇ ಇದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ತಾರಕಕ್ಕೇರಿದೆ. ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೇರವಾಗಿ ಆರೋಪ ಮಾಡಿದ್ದರು. ಆದ್ರೆ ಆರೋಪವನ್ನ ತಳ್ಳಿ ಹಾಕಿದ್ದ ಭಾರತ  ಸಾಕ್ಷಿ ಕೊಡುವಂತೆ ಸವಾಲು ಹಾಕಿದೆ. ಹೀಗೆ ಎರಡೂ ರಾಷ್ಟ್ರಗಳ ತಿಕ್ಕಾಟದ ನಡುವೆ ಅಮೆರಿಕದಲ್ಲಿ ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಯತ್ನಿಸಲಾಗಿತ್ತು. ಈ ಸಂಚಿನ ಹಿಂದೆ ಭಾರತದ ಕೈವಾಡ ಇದೆ ಎಂದು ಅಮೆರಿಕ ಎಚ್ಚರಿಕೆಯನ್ನೂ ನೀಡಿತ್ತು. ಈ ಜಟಾಪಟಿ ನಡುವೆಯೇ ವಿಶ್ವದ ದೊಡ್ಡಣ್ಣ ಅಮೆರಿಕ ಭಾರತದ ವಿರುದ್ಧ ಬಹುದೊಡ್ಡ ಬಾಂಬ್ ಸಿಡಿಸಿದೆ. ಪನ್ನುನ್ ಹತ್ಯೆಗೆ ಭಾರತೀಯ ಬೇಹುಗಾರಿಕಾ ಅಧಿಕಾರಿಯೇ ಸುಪಾರಿ ಕೊಟ್ಟಿದ್ದಾರೆ ಅಂತಾ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅಮೆರಿಕದ ಈ ಆರೋಪ ಸಂಚಲನ ಮೂಡಿಸಿದೆ.

ಇದನ್ನೂ ಓದಿ : ಚೀನಾವನ್ನು ಕಾಡ್ತಿದೆ ನಿಗೂಢ ನ್ಯುಮೋನಿಯಾ ಮಾದರಿ ವೈರಸ್ – ಶಾಲಾ ಮಕ್ಕಳೇ ಟಾರ್ಗೆಟ್!

ಅಮೆರಿಕದಲ್ಲಿ ಇತ್ತೀಚೆಗಷ್ಟೇ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಯತ್ನಿಸಲಾಗಿತ್ತು. ಹತ್ಯೆ ಸಂಚನ್ನ ಅಮೆರಿಕದ ತನಿಖಾ ಸಂಸ್ಥೆಗಳು ವಿಫಲಗೊಳಿಸಿದ್ದವು. ತನ್ನದೇ ನೆಲದಲ್ಲಿ ತನ್ನ ಪ್ರಜೆಯ ಮೇಲೆ ನಡೆದ ದಾಳಿಗೆ ಸಿಟ್ಟಾಗಿದ್ದ ಅಮೆರಿಕ ಇದರಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗವಾಗೇ ಆರೋಪಿಸಿತ್ತು. ಹಾಗೂ ತನ್ನ ನೆಲದಲ್ಲಿ ಇಂತಹ ಕೃತ್ಯವನ್ನ ಸಹಿಸಲ್ಲ ಎಂದು ಎಚ್ಚರಿಕೆಯನ್ನೂ ನೀಡಿತ್ತು. ಇದೀಗ ಭಾರತದ ಹಿರಿಯ ಬೇಹುಗಾರಿಕಾ ಅಧಿಕಾರಿಯೇ ಹತ್ಯೆ ಯತ್ನದ ಸೂತ್ರಧಾರಿ ಎಂದು ಅಮೆರಿಕಾದ ನ್ಯಾಯ ಇಲಾಖೆ ನೇರವಾಗಿಯೇ ಆರೋಪಿಸಿದೆ. ನಿಜ್ಜರ್ ಹತ್ಯೆಗೂ ಈಗ ನಡೆದಿರುವ ಹತ್ಯೆ ಯತ್ನಕ್ಕೂ ಭಾರತದ ನಂಟಿದೆ ಎಂದಿರುವ ಅಮೆರಿಕ ಕೆನಡಾ ಮಾಡಿರುವ ಆರೋಪವನ್ನೇ ಸಾಕ್ಷ್ಯಗಳ ಸಮೇತ ಮುಂದಿಟ್ಟಿದೆ. ಡೀಲ್ ಒಪ್ಪಿಸಿದ್ದೇ ಒಬ್ಬ, ಸುಪಾರಿ ಕೊಟ್ಟಿದ್ದು ಮತ್ತೊಬ್ಬ, ಹತ್ಯೆಗೆ ಸಜ್ಜಾಗಿದ್ದವನು ಇನ್ನೊಬ್ಬ ಎಂದು ದಾಖಲೆ ನೀಡಿದೆ.

ಸಿಸಿ-1 ಎಂದು ಗುರುತಿಸಲ್ಪಡುವ ಹಿರಿಯ ಬೇಹು ಅಧಿಕಾರಿಯೊಬ್ಬರು ನಿಖಿಲ್ ಗುಪ್ತಾ ಎಂಬಾತನ ಮೂಲಕ ಅಮೆರಿಕದ ಸುಪಾರಿ ಹಂತಕನಿಗೆ ಡೀಲ್ ಕೊಟ್ಟಿದ್ದರು. ಮುಂಗಡ ಹಣ ನೀಡಿ ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ನಿಯೋಜನೆ ಮಾಡಿದ್ದರು. ನಿಖಿಲ್ ಗುಪ್ತಾ ಈಗಾಗಲೇ ಹಂತಕನಿಗೆ ಹದಿನೈದು ಸಾವಿರ ಡಾಲರ್ ಹಣವನ್ನ ಅಡ್ವಾನ್ಸ್ ಎಂದು ಪಾವತಿಸಿದ್ದಾನೆ. ಈ ಕೊಲೆ ಮಾಡಿಸಲು ಅನುಕೂಲವಾಗುವಂತೆ ನಿಖಿಲ್ ಗುಪ್ತಾ ವಿರುದ್ಧ ಇದ್ದ ಕ್ರಿಮಿನಲ್ ಕೇಸನ್ನು ಬೇಹು ಅಧಿಕಾರಿಯ ಸೂಚನೆ ಮೇರೆಗೆ ಗುಜರಾತ್ ಪೊಲೀಸರು ಕೈಬಿಟ್ಟಿದ್ದರು ಎಂದೂ ಅಮೆರಿಕ ಆರೋಪಿಸಿದೆ. ಅಲ್ಲದೆ ಜೂನ್ ತಿಂಗಳಲ್ಲಿ ಕೆನಡಾದಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಈಗ ಅಮೆರಿಕಾದಲ್ಲಿ ನಡೆದಿರುವ ಪನ್ನುನ್ ಹತ್ಯಾ ಯತ್ನಕ್ಕೂ ನಂಟಿದೆ ಎಂದೂ ಅಮೆರಿಕ ಹೇಳಿದೆ. ನ್ಯೂಯಾರ್ಕ್ ನ ದಕ್ಷಿಣ ಜಿಲ್ಲೆಯ ಅಟಾರ್ನಿ ಅವರು ಸಲ್ಲಿಸಿರುವ ಈ ದೋಷಾರೋಪಣೆಯಲ್ಲಿ ಪನ್ನುನ್ ಹತ್ಯಾ ಸಂಚಿನ ಸೂತ್ರಧಾರ ಭಾರತೀಯ ಅಧಿಕಾರಿಯೇ.  ಸೀನಿಯರ್ ಫೀಲ್ಡ್ ಆಫೀಸರ್ ಆಗಿದ್ದು, ಸೆಕ್ಯೂರಿಟಿ ಮ್ಯಾನೇಜ್ ಮೆಂಟ್ ಹಾಗೂ ಇಂಟೆಲಿಜೆನ್ಸ್ ಸಂಬಂಧಿತ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಆತ ಪನ್ನುನ್ ಹತ್ಯೆಗೆ ಸಹಕರಿಸುವಂತೆ ಗುಪ್ತಾ ಜೊತೆ 2023ರ ಮೇ ತಿಂಗಳಿನಿಂದ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೇ ಸಿಸಿ 1 ಎಂದೇ ಗುರುತಿಸಲ್ಪಡುವ ಈ ಹಿರಿಯ ಬೇಹು ಅಧಿಕಾರಿ ಭಾರತೀಯ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದು, ಭಾರತದಲ್ಲೇ ಇದ್ದು ಅಲ್ಲಿಂದಲೇ ಈ ಹತ್ಯೆಗೆ ನಿರ್ದೇಶನ ನೀಡುತ್ತಿದ್ದ ಎಂದು ದೋಷಾರೋಪಣೆ ಹೇಳಿದೆ. ಹಾಗೇ ಇದಕ್ಕೆ ಹಲವು ದಾಖಲೆಗಳನ್ನೂ ಒದಗಿಸಿದೆ. ಈ ಸಿಸಿ 1 ಹಾಗೂ ನಿಖಿಲ್ ಗುಪ್ತಾ ನಡುವೆ ಸುಪಾರಿ ಹಂತಕನನ್ನು ನೇಮಿಸುವ, ಆತನಿಗೆ 15 ಸಾವಿರ ಹಣ ಪಾವತಿಸುವ ಹಾಗೂ ಪನ್ನುನ್ ಎಲ್ಲಿ ಸಿಗುತ್ತಾನೆ ಎಂಬ ಬಗ್ಗೆ ಮಾಹಿತಿ ನೀಡಿರುವ ಫೋನ್ ಸಂಭಾಷಣೆಗಳ ದಾಖಲೆಯೂ ಇದೆ. ಅಲ್ಲದೆ ಆದಷ್ಟು ಬೇಗ ಹತ್ಯೆ ನಡೆಯಬೇಕು ಎಂದು ಗುಪ್ತಾನಿಗೆ ಹೇಳಲಾಗಿತ್ತು. ಅದರೆ ಜೂನ್ ನಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭ ಹತ್ತು ದಿನಗಳ ಕಾಲ ಎಲ್ಲ ಚಟುವಟಿಕೆ ತಣ್ಣಗಾಗಿಸುವಂತೆ ಸೂಚನೆ ನೀಡಲಾಗಿತ್ತು ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಹಾಗೂ ಇದೇ ಭಾರತೀಯ ಅಧಿಕಾರಿಗೆ ಕೆನಡಾದಲ್ಲಿ ನಡೆದ ನಿಜ್ಜರ್ ಕೊಲೆಯಲ್ಲೂ ನಂಟಿದೆ ಎಂದು ಅಮೆರಿಕ ತಿಳಿಸಿದೆ. ಹಾಗೂ ಕೆನಡಾದಲ್ಲಿ ನಡೆದ ನಿಜ್ಜರ್ ಕೊಲೆಯ ವಿಡಿಯೋವನ್ನು ಈ ಅಧಿಕಾರಿ ನಿಖಿಲ್ ಗುಪ್ತಾಗೆ ಕಳಿಸಿ ನಿಜ್ಜರ್ ಭಾರತದ ಕಾರ್ಯಾಚರಣೆಯ ಗುರಿಯಲ್ಲಿ ಒಬ್ಬನಾಗಿದ್ದ ಎಂದು ಹೇಳಿರುವ ದಾಖಲೆಯೂ ಇದೆ ಎಂದಿದೆ. ಈ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ ಉನ್ನತ ಮಟ್ಟದ ತನಿಖೆಗೂ ಮುಂದಾಗಿದೆ.

Shantha Kumari