ರಾಗಾಗೆ ಡಿಎನ್‌ಎ ಟೆಸ್ಟ್ ಸವಾಲ್ | ಸುಮಲತಾ ಹೆಚ್‌ಡಿಕೆಗೆ ಕೈ ಕೊಟ್ಟಿದ್ದು ಯಾಕೆ? | ಇಂದಿನ ಪ್ರಮುಖ ಸುದ್ದಿಗಳು

ರಾಗಾಗೆ ಡಿಎನ್‌ಎ ಟೆಸ್ಟ್ ಸವಾಲ್ | ಸುಮಲತಾ ಹೆಚ್‌ಡಿಕೆಗೆ ಕೈ ಕೊಟ್ಟಿದ್ದು ಯಾಕೆ? | ಇಂದಿನ ಪ್ರಮುಖ ಸುದ್ದಿಗಳು

ಇವತ್ತು ಸುಮಲತಾ ಮಂಡ್ಯಕ್ಕೆ ಬರ್ತಾರೆ, ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಪರ ಪ್ರಚಾರ ಮಾಡ್ತಾರೆ ಅಂತಾ ಸುದ್ದಿಯಾಗಿದ್ದಷ್ಟೇ ಬಂತು. ಕಡೆಗೂ ಸುಮಕ್ಕ ಸಕ್ಕರೆನಗರಿಯತ್ತ ಬರಲೇ ಇಲ್ಲ. ಕಡೆ ಗಳಿಗೆಯಲ್ಲೂ ಸುಮ್ಮಕ್ಕ ಕುಮಾರಣ್ಣಂಗೆ ಕೈಕೊಟ್ಟಿದ್ದಾರೆ. ಸುಮಲತಾ ಅವರ ಮಂಡ್ಯ ಪ್ರಚಾರ ಕಡೇ ಕ್ಷಣದಲ್ಲಿ ರದ್ದಾಗಿದೆ. ಮಂಡ್ಯಕ್ಕೆ ತೆರಳದೇ ಬೆಂಗಳೂರಲ್ಲಿ ಸುಮಲತಾ ಅಂಬರೀಶ್ ಉಳಿದಿದ್ದಾರೆ. ಸುಮಲತಾ ಹೆಚ್‌ಡಿಕೆ ಪರ ಪ್ರಚಾರ ನಡೆಸದೇ ಇರುವುದು ಕಾಂಗ್ರೆಸ್‌ಗೆ ಲಾಭ ಆಗೋ ಸಾಧ್ಯತೆ ಇದೆ.

  • ಮದ್ಯ ಜಪ್ತಿಯಲ್ಲಿ ಕರ್ನಾಟಕವೇ ನಂ.1

ಮಾದರಿ‌ ನೀತಿ ಸಂಹಿತೆ ಜಾರಿಯಾದಾಗಿನಿಂದ ಅಕ್ರಮ ಚಟುವಟಿಕೆ ಮೇಲೆ‌ ಹದ್ದಿನ ಕಣ್ಣು ಇಟ್ಟಿರುವ‌ ಚುನಾವಣಾ ಆಯೋಗ ದಾಖಲೆ ಪ್ರಮಾಣದಲ್ಲಿ ದುಡ್ಡು, ಮದ್ಯ ಜಪ್ತಿ ಮಾಡಿದೆ. ಕರ್ನಾಟಕದಾದ್ಯಂತ ಕೇವಲ 38 ದಿನಗಳಲ್ಲಿ 406.73 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇನ್ನು ಮದ್ಯ ಜಪ್ತಿಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 177 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

  •  ರಾಯ್ ಬರೇಲಿಯಲ್ಲಿ ಗಾಂಧಿ ವರ್ಸಸ್ ಗಾಂಧಿ?

ಉತ್ತರ ಪ್ರದೇಶದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ರಾಯ್ ಬರೇಲಿ‌ ಲೋಕಸಭೆ ಕ್ಷೇತ್ರ ಕೂಡ ಒಂದಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಮ್ಮ ಅಭ್ಯರ್ಥಿಗಳನ್ನು ಬಹಿರಂಗಪಡಿಸಿಲ್ಲ. ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿಯಾಗಿ  ನೆಹರು – ಗಾಂಧಿ ಕುಟುಂಬದ ಇನ್ನೊಬ್ಬ ಸದಸ್ಯ ವರುಣ್ ಗಾಂಧಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ರಾಯ್ ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ವರುಣ್ ಗಾಂಧಿಗೆ ಆಫರ್ ನೀಡಿದೆ. ಮೂಲಗಳ ಪ್ರಕಾರ, ಸೋದರ ಸಂಬಂಧಿ ಪ್ರಿಯಾಂಕಾ ಗಾಂಧಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದ ಬಗ್ಗೆ ಯೋಚಿಸಲು ವರುಣ್ ಟೈಮ್‌ ಕೇಳಿದ್ದಾರಂತೆ.

  • ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್‌ಗೆ ಒಳಏಟಿನ ಭೀತಿ

ಒಂದು ಸಮಯದಲ್ಲಿ ಕಾಂಗ್ರೆಸ್​​ ಭದ್ರಕೋಟೆ ಎನಿಸಿಕೊಂಡಿದ್ದ ಕೋಲಾರ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಯಾಗಿರುವ ಕೆ.ವಿ ಗೌತಮ್‌ಗೆ  ಟೆನ್ಶನ್ ಶುರುವಾಗಿದೆ. ಇವತ್ತು ಕೋಲಾರ ಸೇರಿದಂತೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಆದರೆ ಇದುವರೆಗೂ ಕೈ ಅಭ್ಯರ್ಥಿ ಕೆ.ವಿ ಗೌತಮ್ ಪರ ಸಚಿವ ಮುನಿಯಪ್ಪ ಅಂಡ್‌ ಟೀಮ್ ಪ್ರಚಾರ ಮಾಡಿಲ್ಲ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಗೌತಮ್‌ಗೆ ಒಳಏಟಿನ ಭೀತಿ ಶುರುವಾಗಿದೆ. ಗೌತಮ್ ಪರ ಕೇವಲ ರಮೇಶ್‌ ಕುಮಾರ್   ಟೀಂ ಮಾತ್ರ ಪ್ರಚಾರ ಮಾಡುತ್ತಿದೆ. ಮುನಿಯಪ್ಪ ಮುನಿಸು ಇನ್ನು ತಣ್ಣಗಾಗಿಲ್ವಾ ಅಥವಾ ಅಭ್ಯರ್ಥಿ ಕೆವಿ ಗೌತಮ್, ರಮೇಶ್ ಕುಮಾರ್ ಬಣದ ನಾಯಕರೊಟ್ಟಿಗೆ ಪ್ರಚಾರ ನಡೆಸುತ್ತಿರೋದು ಮುನಿಯಪ್ಪ ಬಾರದಿರಲು ಕಾರಣವಾ? ಎಂಬ ಪ್ರಶ್ನೆಯೂ ಕಾಂಗ್ರೆಸ್​ ಕಾರ್ಯಕರ್ತರನ್ನು ಕಾಡುತ್ತಿದೆ.

  • ಕೆ.ಪಿ ನಂಜುಂಡಿ ಕಾಂಗ್ರೆಸ್ ಸೇರ್ಪಡೆ

ವಿಧಾನ ಪರಿಷತ್ ಮತ್ತು ಬಿಜೆಪಿಯ ಪಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಕೆಪಿ ನಂಜುಂಡಿ ಇವತ್ತು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್​​ ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ನಂಜುಂಡಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಬಣದಲ್ಲಿ ಗುರುತಿಸಿಕೊಂಡಿದ್ದರು.

  • ಇಂಡಿಯಾ ಮೈತ್ರಿಕೂಟದ ಶಾಸಕನಿಂದಲೇ ರಾಹುಲ್ ಗಾಂಧಿಯ ’DNA’ ಟೆಸ್ಟಿಗೆ ಒತ್ತಾಯ!

ಇಂಡಿಯಾ ಮೈತ್ರಿಕೂಟಕ್ಕೆ ಮುಜುಗರ ಉಂಟಾಗುವ ವಿದ್ಯಮಾನವೊಂದು  ನಡೆದಿದೆ. ಒಕ್ಕೂಟದ ಸದಸ್ಯರೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಡಿಎನ್ಎ ಟೆಸ್ಟ್ ಆಗಬೇಕೆಂದು ಒತ್ತಾಯಿಸಿ ವಿವಾದವನ್ನು ಹುಟ್ಟುಹಾಕಿದ್ದಾರೆ. ಕೆಲವು ದಿನಗಳಿಂದ ಪಿಣರಾಯಿ ವಿಜಯನ್ ಮತ್ತು ರಾಹುಲ್ ಗಾಂಧಿ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಪಿಣರಾಯಿ ಬಗ್ಗೆ ರಾಹುಲ್ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಪಿಣರಾಯಿ ಬೆಂಬಲಿತ ಪಕ್ಷೇತರ ಶಾಸಕ ಪಿ.ವಿ.ಅನ್ವರ್, ರಾಹುಲ್ ಡಿಎನ್ಎ ಟೆಸ್ಟ್ ನಡೆಸಬೇಕು ಎನ್ನುವ ಹೇಳಿಕೆ ನೀಡಿದ್ದಾರೆ. ಇದು ಈಗ ಕಾಂಗ್ರೆಸ್‌ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

  • ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಬಲ್ ಸೆಕ್ಯೂರಿಟಿ ವ್ಯವಸ್ಥೆ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಯಲ್ಲಿ ಶೇ.100ರಷ್ಟು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇಡೀ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅನ್ವಯವಾಗುವಂತೆ ಡಬಲ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಬರೋಬ್ಬರಿ 7 ಪ್ಯಾರಾ ಮಿಲಿಟರಿ ಕಂಪನಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ಚುನಾವಣಾಧಿಕಾರಿಗಳ  ಕೋರಿಕೆಯಂತೆ ಹೆಚ್ಚು ಭದ್ರತೆ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ ಕುಮಾರ್ ಮೀನಾ ತಿಳಿಸಿದ್ದಾರೆ.

  • ಚುನಾವಣೆ ದಿನ ಖಾಸಗಿ ಕಂಪನಿಗಳಿಗೆ ಕಡ್ಡಾಯ ರಜೆ ಇಲ್ಲ!

ಏಪ್ರಿಲ್ 26, ಶುಕ್ರವಾರದಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ. ಶಾಲಾ ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳಿಗೂ ರಜೆ ಇದೆ. ಬಸ್, ರೈಲು ಇತ್ಯಾದಿ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಸರ್ಕಾರಿ ಕಚೇರಿಗಳಿಗೆ ರಜೆ ಇರುತ್ತದೆ. ಖಾಸಗಿ ಕಂಪನಿಗಳಿಗೆ ಕಡ್ಡಾಯ ರಜೆ ಇಲ್ಲ. ಆದರೆ, ಮತದಾನಕ್ಕೆ ಅರ್ಹ ಇರುವ ಉದ್ಯೋಗಿಗೆ ಮತದಾನಕ್ಕೆ ಅನುಕೂಲ ಮಾಡಿಕೊಡಬೇಕಾಗುತ್ತದೆ.

Shwetha M

Leave a Reply

Your email address will not be published. Required fields are marked *